ವಿಕಸಿತ ಭಾರತದ ಹಿಮ್ಮುಖ ಚಲನೆಯಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಶಿಖರಕ್ರೇರುತ್ತಿದೆ
ನವ ಭಾರತವನ್ನು 2047ರ ವೇಳೆಗೆ ʻವಿಕಸಿತ ಭಾರತʼ ಆಗಿಸುವ ಕನಸು ಹೊತ್ತು ಡಿಜಿಟಲ್ ಯುಗದ ಯುವ ಜನಾಂಗ ಮುನ್ನಡೆಯುತ್ತಿದೆ. ಹೀಗೆಂದು ನಮ್ಮನ್ನಾಳುವ ಪ್ರಜಾಪ್ರಭುತ್ವದ ವಾರಸುದಾರರು ನಂಬಿಸುತ್ತಿದ್ದಾರೆ. ಪ್ರಜಾತಂತ್ರದ ಸ್ತಂಭಗಳು ಒಂದೊಂದಾಗಿ ಕುಸಿಯುತ್ತಿರುವಾಗಲೂ, ಸಾಂವಿಧಾನಿಕ ಸಂಸ್ಥೆಗಳು ಸತ್ವಹೀನವಾಗುತ್ತಿರುವಾಗಲೂ , ಭ್ರಮಾಧೀನ ಸಮಾಜವೊಂದು ʻವಿಕಾಸ ʼದ ಕನಸು ಹೊತ್ತು ನಡೆಯುತ್ತಿದೆ. ಆರ್ಥಿಕ ಪ್ರಗತಿ, ಭೌಗೋಳಿಕ ಅಖಂಡತೆ, ಸಾಮಾಜಿಕ ಸುಸ್ಥಿರತೆ ಮತ್ತು ವೈಜ್ಞಾನಿಕ ಮುನ್ನಡೆ ಇವೆಲ್ಲವೂ ಈ ವಿಕಾಸವನ್ನು ನಿರ್ವಚಿಸುವ ಮಾಪಕಗಳಾಗಿ ಕಾಣುತ್ತವೆ. ಇವೆಲ್ಲವನ್ನೂ ದಾಟಿ “ದೇ಼ಶ ಎಂದರೆ ಮಣ್ಣಲ್ಲವೋ ಮನುಷ್ಯರು ” ಎಂಬ ಉದಾತ್ತ ಕವಿಕಲ್ಪನೆಯಲ್ಲಿ ಚಲಿಸುವಾಗ, ಭಾರತದ ಸಂಭಾವ್ಯ ವಿಕಾಸ ಭ್ರಮೆ ಎಂದು ಭಾಸವಾಗುತ್ತದೆ. ಕ್ರೌರ್ಯ
– ನಾ ದಿವಾಕರ
ಇಷ್ಟು ದೊಡ್ಡ ದೇಶದಲ್ಲಿ ಯಾವುದೋ ಮೂಲೆಯಲ್ಲಿ ನಡೆಯುವ ಒಂದೆರಡು ಘಟನೆಗಳು ನಮ್ಮ ಈ ಹತಾಶೆಗೆ ಆಧಾರವಾಗಬೇಕೇ ? ಖಂಡಿತವಾಗಿಯೂ ಹೌದು. ಏಕೆಂದರೆ, ಕೆಲವು ಘಟನೆಗಳು ಪ್ರಜ್ಞೆ ಜೀವಂತವಾಗಿರುವ ಯಾವುದೇ ವ್ಯಕ್ತಿಯನ್ನಾದರೂ ನೈತಿಕವಾಗಿ ಅಲುಗಾಡಿಸಿಬಿಡುತ್ತವೆ. ನಾಗರಿಕತೆ (Civilisation) ಮತ್ತು ಬೌದ್ಧಿಕ ಪ್ರಗತಿ (Intellectual Progress) ವ್ಯಕ್ತವಾಗುವುದು ತಳಮಟ್ಟದ ಸಾಮಾಜಿಕ ಬದುಕಿನ ಚಿತ್ರಣಗಳಿಂದಲೇ ಹೊರತು, ಮೆಟ್ರೋ ನಗರಗಳ ಐಷಾರಾಮಿ ದೃಶ್ಯಗಳಿಂದಲ್ಲ. ಕಾರಣವೇನೆಂದರೆ ನಾವು ಸಾಮಾನ್ಯವಾಗಿ ಪರಿಭಾವಿಸುವ ಸಾಂಸ್ಕೃತಿಕ ಜೀವನದ ಮೌಲ್ಯಗಳು ಮತ್ತು ಅವುಗಳ ಪರಿಪಾಲನೆ ಕೆಳಸ್ತರದ ಸಾಮಾಜಿಕ ಬದುಕಿನಲ್ಲೇ ಅಸ್ತಿತ್ವ ಕಂಡುಕೊಳ್ಳುತ್ತವೆ. ಅತಿ ಹೆಚ್ಚು ದೌರ್ಜನ್ಯಗಳು, ವಿಶೇಷವಾಗಿ ಮಹಿಳೆಯರ ಮೇಲೆ, ನಡೆಯುವುದೇ ಈ ಕೆಳಸ್ತರದ ಸಮಾಜದಲ್ಲಿ.
ಶೋಷಣೆ-ಸಬಲೀಕರಣದ ದ್ವಂದ್ವ
ಈ ದುರ್ಭರ ಬದುಕಿನ ಹಾದಿಗಳಲ್ಲೇ ನಮಗೆ “ಶೋಷಿತರ, ನೊಂದವರ, ಅವಕಾಶವಂಚಿತರ, ಅಂಚಿನಲ್ಲಿರುವವರ ಹಾಗೂ ನಿರ್ಲಕ್ಷಿತರ ” ಜೀವನ ಸಂಕಟಗಳು ಗೋಚರಿಸಲು ಸಾಧ್ಯ. ಈ ಐದೂ ಗುಣಲಕ್ಷಣಗಳನ್ನು ಒಂದೇ ನೆಲೆಯಲ್ಲಿ ಗುರುತಿಸಬೇಕಾದರೆ ಭಾರತದ ಹೆಣ್ಣು ಮಕ್ಕಳ ಸ್ಥಿತಿಗತಿಗಳ ಕಡೆಗೆ ಗಮನಹರಿಸಬೇಕು. ಸರ್ಕಾರಗಳು ಈ ಜನಸಂಖ್ಯೆಯನ್ನು ʻದುರ್ಬಲ ವರ್ಗಗಳುʼ ಎಂದು ವರ್ಗೀಕರಿಸಿ ಸಬಲೀಕರಣದ ಕ್ರಮಗಳನ್ನು ಜಾರಿಗೊಳಿಸುತ್ತವೆ.” ಬೇಟಿ ಪಢಾವೋ ಬೇಟಿ ಬಚಾವೋ ” ಇತ್ಯಾದಿ ಕಾರ್ಯಕ್ರಮಗಳು ಮತ್ತು ಪ್ರತಿವರ್ಷ ದಾಖಲಾಗುವ ಲಕ್ಷಾಂತರ ಮಹಿಳಾ ದೌರ್ಜನ್ಯಗಳು ಇವೆರಡನ್ನೂ ತಕ್ಕಡಿಯಲ್ಲಿಟ್ಟು ತೂಗಿದಾಗ ʻಸಬಲೀಕರಣʼ ಎಂದರೇನು ಎಂಬ ಪ್ರಶ್ನೆ ಮೂಡುತ್ತದೆ. ಆರ್ಥಿಕ ಮೇಲ್ ಚಲನೆ, ಸಾಮಾಜಿಕ ಮುಂಚಲನೆ ಮತ್ತು ಇಂದಿಗೂ ಕೈಗೂಡದ ಸಮಾನ ಪ್ರಾತಿನಿಧ್ಯ, ಈ ಮೂರನ್ನೂ ದಾಟಿ ನೋಡಿದಾಗ, ಭಾರತೀಯ ಸಮಾಜದಲ್ಲಿ ಹೆಣ್ಣು ಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಈ ಪ್ರಶ್ನೆಗೆ ಖಚಿತವಾಗಿ ಹೌದು ಎನ್ನಲು ಭಂಡತನ ಬೇಕು. ಏಕೆಂದರೆ ವರ್ಗ ಭೇದ, ಜಾತಿ-ಧರ್ಮದ ಬೇಲಿಗಳಿಂದಾಚೆ, ನಗರ-ಹಳ್ಳಿಯ ಅಂತರವನ್ನೂ ಮೀರಿ ನಿರಂತರ ದೌರ್ಜನ್ಯಕ್ಕೊಳಗಾಗುತ್ತಿರುವ ಜೀವಗಳೆಂದರೆ ಈ ದೇಶದ ಹೆಣ್ಣು ಮಕ್ಕಳು. ಮಾರುಕಟ್ಟೆ-ಆಡಳಿತ ಸೂಚ್ಯಂಕಗಳಲ್ಲಿ ಕಾಣುವ ವಿಕಾಸದ ಸುಂದರ ಪ್ರಪಂಚವನ್ನು ನೊಂದ ಹೆಣ್ಣು ಜೀವಗಳ ದುರಂತ ಕಥನಗಳು ಮಸುಕಾಗಿಸುತ್ತವೆ. ಇದೇನು ನವ ಭಾರತದ ವೈಶಿಷ್ಟ್ಯವೋ ಅಥವಾ ಮೂಲ ಲಕ್ಷಣವೋ? ಅಥವಾ ನಾವು ಬೆಳೆದುಬಂದಿರುವ ಸಮಾಜದ ಗರ್ಭದಲ್ಲೇ ಅಡಗಿರುವ ಸಾಮಾಜಿಕ ಬ್ಯಾಕ್ಟೀರಿಯಾಗಳ, ವೈರಾಣುಗಳ ಪ್ರಯೋಗಶಾಲೆಯೋ ? ರಾಜಸ್ಥಾನದಿಂದ ಮೈಸೂರಿನವರೆಗಿನ ಪಯಣದಲ್ಲಿ ನಮಗೆ ಕಾಣುವ ಅಮಾನುಷ ಲಕ್ಷಣಗಳು ಈ ಪ್ರಶ್ನೆಗಳನ್ನು ಪ್ರಚೋದಿಸದಿದ್ದರೆ, ನಾವು ಅಸೂಕ್ಷ್ಮಮತಿಗಳಾಗಿದ್ದೇವೆ ಎಂದೇ ಭಾವಿಸಬೇಕಾಗುತ್ತದೆ. ಕ್ರೌರ್ಯ
ಇದನ್ನೂ ಓದಿ: ಎಕ್ಕೂರು, ಪಡೀಲು ನಗರ ಆರೋಗ್ಯ ಕೇಂದ್ರಗಳಿಗೆ ಸಿಪಿಎಂ ಬಜಾಲ್ ವಿಭಾಗ ಸಮಿತಿ ನಿಯೋಗ ಭೇಟಿ
ನಮ್ಮೊಳಗಿನ ಹುಳುಕನ್ನು ಅಥವಾ ಕೊಳೆತುಹೋದ ದೇಹಭಾಗವನ್ನು ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಲು ನಾವು ಹಿಂಜರಿಯುವುದಿಲ್ಲ. ಆದರೆ ಸಮಾಜವನ್ನೂ ವ್ಯಕ್ತಿಯ ನೆಲೆಯಲ್ಲಿ ನಿಲ್ಲಿಸಿ, ಅದರೊಳಗಿನ ಕ್ಯಾನ್ಸರ್ ಗಡ್ಡೆಗಳನ್ನು, ಗ್ಯಾಂಗ್ರೀನ್ ವ್ರಣಗಳನ್ನು ಹೊರಜಗತ್ತಿಗೆ ತೋರಿಸುವಾಗ ಮಾತ್ರ ನಮಗೆ ದೇಶದ ಗೌರವ, ಘನತೆ ಎಲ್ಲವೂ ಮುಖ್ಯವಾಗಿಬಿಡುತ್ತದೆ. ಈ ಮನೋಭಾವದ ಫಲವೇ ಹೆಣ್ಣು ಮಕ್ಕಳ ಮೇಲೆ ನಡೆಯುವ ಸಾವಿರಾರು ದೌರ್ಜನ್ಯ, ಅತ್ಯಾಚಾರಗಳು ಸಾರ್ವಜನಿಕ ಸಂಕಥನದಲ್ಲಿ ಕಾಣುವುದೇ ಇಲ್ಲ. ಆದರೆ ಈ ಕೊನೆಗಾಣದ ದೌರ್ಜನ್ಯಗಳಿಗೆ ಅಂತ್ಯ ಹಾಡಬೇಕಾದರೆ, ಒಂದು ಸಣ್ಣ ಘಟನೆಯಾದರೂ ಸರಿ , ಅದು ಚರ್ಚೆಯಾಗಬೇಕು. ಮಥುರಾದಿಂದ ಇತ್ತೀಚಿನ ರಾಜಸ್ಥಾನದ ಘಟನೆಯವರೆಗೆ ನಾವು ಸಾಗಿಬಂದ ದಾರಿಯನ್ನು ಗಮನಿಸಿದಾಗ ಇದು ಅರ್ಥವಾಗುತ್ತದೆ. ಕಠಿಣ ಕಾನೂನುಗಳು, ಸಬಲೀಕರಣದ ಯೋಜನೆಗಳು ಯಾವುದೂ ಸಹ ಹೆಣ್ಣನ್ನು ದೌರ್ಜನ್ಯದ ಸಂಕೋಲೆಗಳಿಂದ ಮುಕ್ತಗೊಳಿಸಲು ಸಾಧ್ಯವಾಗದಿರುವುದು ನಮ್ಮ ನೈತಿಕತೆಯ ಪಾತಾಳ ಕುಸಿತಕ್ಕೆ ಕನ್ನಡಿ ಹಿಡಿದಂತಿದೆ. ಕ್ರೌರ್ಯ
ಕ್ರೌರ್ಯ-ಹಿಂಸೆಯ ಪರಾಕಾಷ್ಠೆ
ಮೂರೂವರೆ ದಶಕಗಳ ಹಿಂದೆ ಭಾವರಿ ದೇವಿ ಎಂಬ ನತದೃಷ್ಟ ಮಹಿಳೆಗೆ ನಮ್ಮ ದೇಶದ ನ್ಯಾಯ ವ್ಯವಸ್ಥೆ ಅಂತಿಮ ನ್ಯಾಯ ಒದಗಿಸದ್ದಲ್ಲಿ ಇಂದು 13 ವರ್ಷದ ಬಾಲಕಿಯನ್ನು 30ಕ್ಕೂ ಹೆಚ್ಚು ಕಿರಾತಕರು ಐದು ದಿನಗಳ ಕಾಲ ಬಂಧಿಸಿಟ್ಟು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ನಡೆಯುತ್ತಿರಲಿಲ್ಲವೇ ? ಕಠಿಣ ಶಿಕ್ಷೆ ಅಪರಾಧಗಳನ್ನು ನಿಯಂತ್ರಿಸುತ್ತದೆ ಎಂಬ ವಾದ ಮಂಡಿಸುವ ಬೌದ್ಧಿಕ ವಲಯ ಇದಕ್ಕೆ ಉತ್ತರಿಸಬೇಕು. ಏಕೆಂದರೆ 15 ವರ್ಷಗಳ ಹಿಂದಿನ ನಿರ್ಭಯ ಕಠಿಣ ಕಾನೂನಿಗೆ ಎಡೆಮಾಡಿಕೊಟ್ಟರೂ ಅತ್ಯಾಚಾರಗಳೇನೂ ಕಡಿಮೆಯಾಗಿಲ್ಲ. ಹೆಣ್ಣು ಅತ್ಯಾಚಾರಕ್ಕೊಳಗಾದಾಗ ಅಪರಾಧಿಗಳನ್ನು ವರ್ಗೀಕರಿಸಿ ಗುರುತಿಸುವ ಒಂದು ವಿಕೃತಿಗೆ ನವಭಾರತ ಒಗ್ಗಿಹೋಗಿದೆ. ಮೇಲ್ವರ್ಗದ ಅಪರಾಧಿಗಳು ಸನ್ಮಾನಿಸಲ್ಪಡುತ್ತಾರೆ. ಸಂತ್ರಸ್ತೆ ಇಲ್ಲಿ ಅಪ್ರಸ್ತುತವಾಗಿಬಿಡುತ್ತಾಳೆ. ಕರ್ನಾಟಕದ ಸೌಜನ್ಯ ಒಂದು ಉತ್ತಮ ನಿದರ್ಶನ. ಕ್ರೌರ್ಯ
ಇಂತಹ ಒಂದು ವಿಕಾರ ಪರಿಸ್ಥಿತಿಯಲ್ಲೇ ಮೂರು ಘಟನೆಗಳು ಸಮಾಜದ (ಜೀವಂತ) ಅಂತರ್ ಪ್ರಜ್ಞೆಯನ್ನು ಮತ್ತೊಮ್ಮೆ ಕದಡಿಬಿಟ್ಟಿವೆ. ಕ್ರೌರ್ಯ

ಜೂನ್ ತಿಂಗಳ ಕೊನೆಯ ವಾರದಲ್ಲಿ ರಾಜಸ್ಥಾನದಲ್ಲಿ ನಡೆದ ಘಟನೆ ಮಹಿಳಾ ದೌರ್ಜನ್ಯದ ಪರಾಕಾಷ್ಠೆಯ ಸಂಕೇತವಾಗಿದೆ. ರಾಜ್ಯದ ಶ್ರೀಗಂಗಾನಗರದಲ್ಲಿ 13 ವರ್ಷದ ಬಾಲೆಯೊಬ್ಬಳನ್ನು ಅಪಹರಿಸಿದ ಕೆಲವು ದುಷ್ಕರ್ಮಿಗಳು ಆ ಬಾಲಕಿಯನ್ನು ಐದು ದಿನಗಳ ಕಾಲ ಅಡಗಿಸಿಟ್ಟು, 30 ಕ್ಕೂ ಹೆಚ್ಚು ದುಷ್ಟರು ಆ ಬಾಲೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದು ವರದಿಯಾಗಿದೆ. ಜೂನ್ 18 ರಿಂದ 23ರವರೆಗೆ ವಿವಿಧ ಲಾಡ್ಜ್ಗಳಲ್ಲಿ ಆ ಬಾಲಕಿಯನ್ನು ಕೂಡಿಹಾಕಿ, ಪಾನಮತ್ತಳನ್ನಾಗಿ ಮಾಡಿ, ಪ್ರಪಂಚಕ್ಕೆ ಕಣ್ತೆರೆಯದ ಬಾಲಕಿಯ ಮೇಲೆ ಅಮಾನುಷ ರೀತಿಯಲ್ಲಿ ದೌರ್ಜನ್ಯ ನಡೆಸಲಾಗಿದೆ. ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಬಿಜೆಪಿ ಸರ್ಕಾರ ಕೂಡಲೇ ವಿಶೇಷ ತನಿಖಾ ದಳ (SIT) ರಚಿಸಿದ್ದು, 14 ಆರೋಪಿಗಳನ್ನು ಬಂಧಿಸಲಾಗಿದೆ. ಈ ಕಾನೂನಾತ್ಮಕ ಪ್ರಕ್ರಿಯೆಗಳ ಅಂತಿಮ ಫಲಿತಾಂಶವನ್ನೇ ಅನುಮಾನಿಸುವ ರೀತಿಯಲ್ಲಿ ದೇಶಾದ್ಯಂತ ಮಹಿಳಾ ದೌರ್ಜನ್ಯಗಳು ನಡೆಯುತ್ತಿರುವುದರಿಂದ, ನಮ್ಮ ಆಲೋಚನೆ ಇದರಿಂದಾಚೆಗೆ ವಿಸ್ತರಿಸಬೇಕಿದೆ. ಕ್ರೌರ್ಯ
ಸಾವಿಗೂ ಸ್ಪಂದಿಸದ ನೋವಿಗೂ ಸ್ಪಂದಿಸದ ಒಂದು ಆಡಳಿತ ವ್ಯವಸ್ಥೆಯಲ್ಲಿ ನವ ಭಾರತ ವಿಕಾಸದ ಹಾದಿಯಲ್ಲಿ ಸಾಗಿದೆ. ಜೀವ ಸಂವೇದನೆಯನ್ನು ಕಳೆದುಕೊಂಡ ಸಮಾಜದಲ್ಲಿ ಮಾತ್ರ ಇದು ಸಾಧ್ಯ. ಹೆಣ್ಣಿನ ಸ್ಥಾನಮಾನ, ಘನತೆ, ಭದ್ರತೆ ಇವೆಲ್ಲವೂ ಸಹ ಚುನಾವಣಾ ರಾಜಕಾರಣದ ಬತ್ತಳಿಕೆಯಲ್ಲಿರುವುದರಿಂದ “ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹೆಣ್ಣು ಮಕ್ಕಳು ರಾತ್ರಿ ವೇಳೆಯೂ ನಿರ್ಭೀತಿಯಿಂದ ಓಡಾಡುವಂತಹ ವಾತಾವರಣ ಸೃಷ್ಟಿಸುತ್ತೇವೆ, ಕಠಿಣ ಕಾನೂನುಗಳನ್ನು ಪ್ರಯೋಗಿಸಿ ಮಹಿಳಾ ದೌರ್ಜನ್ಯಗಳನ್ನು ಇಲ್ಲವಾಗಿಸುತ್ತೇವೆ ,,,, ” ಇತ್ಯಾದಿ ಘೋಷಣೆಗಳು ಮಾರುಕಟ್ಟೆಯ ಜಾಹೀರಾತುಗಳಂತೆ ಕಾಣತೊಡಗಿವೆ. ಸರ್ಕಾರಗಳು ರಚಿಸುವ ಮಹಿಳಾ ಸುರಕ್ಷತಾ ಸೆಲ್ಗಳು ಈ ಜಾಹೀರಾತುಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಇದಕ್ಕೆ ರಾಜಸ್ಥಾನ , ಕರ್ನಾಟಕ, ಬಂಗಾಲ ಎಂಬ ಭೇದ ಇರುವುದಿಲ್ಲ. ಕ್ರೌರ್ಯ
ಮಹಿಳಾ ದೌರ್ಜನ್ಯಗಳ ಸಾರ್ವತ್ರಿಕ ರೂಪ
ಇದನ್ನು ಸಾಕ್ಷೀಕರಿಸುವಂತೆ ಪಶ್ಚಿಮ ಬಂಗಾಲದಲ್ಲಿ ಜುಲೈ 5ರಂದು ಪಶ್ಚಿಮ ಬಂಗಾಳದಲ್ಲಿ ಗುರುತಿಸಲ್ಪಟ್ಟ ಒಂದು ಘಟನೆಯಲ್ಲಿ 11 ವರ್ಷದ ಶಾಲಾ ಬಾಲಕಿಯೊಬ್ಬಳ ಛಿದ್ರಗೊಂಡ ದೇಹವನ್ನು ಚೀಲದಲ್ಲಿ ಕಟ್ಟಿ ಸುರ್ಜ್ಯಾಪುರದ ನೀರಿನ ಕೊಳವೊಂದರಲ್ಲಿ ಎಸೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಎರಡು ವರ್ಷಗಳ ಹಿಂದೆ ನಡೆದ ಆರ್ಜಿ ಕಾರ್ ಆಸ್ಪತ್ರೆಯ ಅಭಯ ಪ್ರಕರಣವನ್ನೇ ತನ್ನ ಬತ್ತಳಿಕೆಯಲ್ಲಿಟ್ಟುಕೊಂಡು, ಮಮತಾ ಸರ್ಕಾರವನ್ನು ಸೋಲಿಸಿದ ಬಿಜೆಪಿ ಸರ್ಕಾರ ಆರಂಭದಲ್ಲೇ ಮತ್ತೊಂದು ಆಘಾತ ಎದುರಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಲೈಂಗಿಕ ದೌರ್ಜನ್ಯಗಳ ಎಂಟು ಪ್ರಕರಣಗಳು ವರದಿಯಾಗಿವೆ. ಮರಣೋತ್ತರ ಪರೀಕ್ಷೆಯಲ್ಲಿ ಗುರುತಿಸಿರುವಂತೆ ಈ ಬಾಲಕಿಯ ಮೇಲೆ ಆಕ್ರಮಣಕಾರಿ ಲೈಂಗಿಕ ದೌರ್ಜನ್ಯ ನಡೆದಿದ್ದು, ತಲೆಗೂ ತೀವ್ರ ಪೆಟ್ಟಾಗಿರುವುದಾಗಿ ಹೇಳಲಾಗಿದೆ. ಕ್ರೌರ್ಯ
ಬಾಲಕಿಯ ಕುಟುಂಬಕ್ಕೆ ಪರಿಚಯಸ್ಥ ವ್ಯಕ್ತಿಯೇ ಆಕೆಯನ್ನು ಅಪಹರಿಸಿದ್ದು ಅತ್ಯಾಚಾರ ಎಸಗಿ ಮೃತ ದೇಹವನ್ನು ಕೊಳದಲ್ಲಿ ಬಿಸಾಡಿರುವುದು ನಮ್ಮ ಸಾಮಾಜಿಕ ಸಂರಚನೆಯಲ್ಲೇ ಇರುವ ದೋಷವನ್ನು ಎತ್ತಿ ತೋರಿಸುತ್ತದೆ. ಗ್ರಾಮಸ್ಥರೇ ರಹಸ್ಯ ಕ್ಯಾಮರಾ ಚಿತ್ರಣವನ್ನು ನೋಡಿ, ಒಬ್ಬ ಆರೊಪಿ ಪ್ರಭಾಸ್ ಮೊಂಡಲ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತಾನು ಎಸಗಿದ ಕೃತ್ಯವನ್ನು ಒಪ್ಪಿಕೊಂಡಿರುವ ಮೊಂಡಲ್ ಈ ಸಾಮಾಜಿಕ ವ್ಯಾಧಿಯ ಒಂದು ಜೀವಂತ ಸಾಕ್ಷಿಯಾಗಿ ಕಾಣುತ್ತಾನೆ. ಕ್ರೌರ್ಯ

ಸಂಜೆ ಆಟ ಆಡಲು ಮನೆಯಿಂದ ಹೊರಟ ಮಗು ಕಾಣೆಯಾದರೆ ಆ ಕುಟುಂಬದ ಸದಸ್ಯರು ಅನುಭವಿಸುವ ಆತಂಕ, ವೇದನೆ ಮತ್ತು ಭೀತಿಯನ್ನು ಕಾನೂನು ಪುಸ್ತಕಗಳು ವಿವರಿಸುವುದಿಲ್ಲ. ನೀರಲ್ಲಿ ಬಿಸಾಡಿದ ಕ್ಷಣದಲ್ಲಿ ಆ ಮಗು ಇನ್ನೂ ಉಸಿರಾಡುತ್ತಿತ್ತು ಎಂದೂ ವೈದ್ಯಕೀಯ ವರದಿಗಳು ಹೇಳುತ್ತವೆ. ಪ್ರಪಂಚವನ್ನೇ ಅರಿಯದ ಆ ಕೂಸು ತನ್ನ ಮೇಲೆ ಏನು ನಡೆಯುತ್ತಿದೆ, ಏಕೆ ನಡೆಯುತ್ತಿದೆ ಎಂಬ ಅರಿವೂ ಇಲ್ಲದೆ ಜೀವ ಕಳೆದುಕೊಳ್ಳುವಾಗ, ಆ ಮಗುವಿನ ಎಳೆ ಮನಸ್ಸಿನಲ್ಲಿ ಉಂಟಾಗಿರುವ ಕಂಪನಗಳನ್ನು, ನೋವು-ಯಾತನೆಗಳನ್ನು ನ್ಯಾಯಶಾಸ್ತ್ರದ ಗ್ರಂಥಗಳಲ್ಲಿ ಗುರುತಿಸಲೂ ಸಾಧ್ಯವಿಲ್ಲ. ಕ್ರೌರ್ಯ
ಜುಲೈ 5ರಂದು ಪೊಲೀಸರು ಮೋಂಡಲ್ ಅಲ್ಲದೆ ಅವನ ಸಹಚರರಾದ ಆನಂದ ಸರ್ದಾರ್ ಮತ್ತು ಇಂದ್ರಜಿತ್ ತಾತಿ ಎಂಬ ಇನ್ನಿಬ್ಬರು ಆರೋಪಿಗಳನ್ನೂ ಬಂಧಿಸಿದ್ದಾರೆ. ಆನಂದ್ ಸರ್ದಾರ್ ಪ್ರಮುಖ ಆರೋಪಿ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಆ ಬಾಲಕಿಯನ್ನು ಅಪಹರಿಸಲು ಆರೋಪಿಗಳು ಬಳಸಿದ ಆಟೋ ರಿಕ್ಷಾ ಚಾಲಕನನ್ನು ಉದ್ರಿಕ್ತ ಗುಂಪು ಮನಬಂದಂತೆ ಥಳಿಸಿದೆ. ಈ ಥಳಿತಕ್ಕೆ ಆತ ಮೃತಪಟ್ಟಿದ್ದಾನೆ. ಈ ಹತ್ಯೆಗೆ ಕಾರಣರಾದ 18 ಜನರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ 20 ವರ್ಷದ ಕಬೀರ್ ಮೊಲ್ಲಾನನ್ನು ಸಹ ಬಂಧಿಸಲಾಗಿದೆ. ಈ ಹಿಂಸಾತ್ಮಕ ಸನ್ನಿವೇಶದಲ್ಲೂ ಪೊಲೀಸರು ಮೂವರು ಆರೋಪಿಗಳನ್ನು ಬಿಡುಗಡೆ ಮಾಡಿರುವುದು ಸಾರ್ವಜನಿಕರನ್ನು ಮತ್ತಷ್ಟು ಕೆರಳಿಸಿದ್ದು, ಬಿಜೆಪಿ ನಾಯಕ ಶಾಂತನು ಮಂಡಲ್ ಅವರ ಮನೆಯ ಮೇಲೆ ದಾಳಿ ನಡೆದಿದೆ. ರಾಜಕೀಯ ಆರೋಪ ಪ್ರತ್ಯಾರೋಪಗಳು ಏನೇ ಇದ್ದರೂ ಈ ಘಟನೆಯಲ್ಲಿ ಎರಡು ಅಮಾಯಕ ಜೀವಗಳ ಹತ್ಯೆಯಾಗಿರುವುದು ನಮ್ಮ ಸಾಮಾಜಿಕ ಚೌಕಟ್ಟಿನ ವಿಕೃತಿಗಳನ್ನು ಬಿಂಬಿಸುತ್ತದೆ. ಕ್ರೌರ್ಯ
ಸಾಂಸ್ಕೃತಿಕ ನಗರಿಯ ವಿಕೃತ ಚಿತ್ರ
ಉತ್ತರದ ರಾಜಸ್ಥಾನ, ಪೂರ್ವದ ಪಶ್ಚಿಮ ಬಂಗಾಲದ ಈ ಅಮಾನುಷ ಘಟನೆಗಳು ಹಸಿಯಾಗಿರುವಾಗಲೇ, ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. 9ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿ, ತನ್ನ ದುಷ್ಟತನವನ್ನು ಚಿತ್ರೀಕರಿಸಿರುವ ಆರೋಪಿಯು, ಆ ಬಾಲಕಿಯ ಸ್ನೇಹಿತೆಯರನ್ನೂ ಅಲ್ಲಿಗೆ ಬರುವಂತೆ ಮಾಡಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ವರದಿಯಾಗಿದೆ. (ಆಂದೋಲನ 10-07-2026). ಒಡನಾಡಿ ಸಂಸ್ಥೆಯ ಸಹಕಾರದಿಂದ ಆರೋಪಿಯನ್ನು ಬಂಧಿಸಲಾಗಿದ್ದು, ನೊಂದ ಬಾಲಕಿಯರಿಗೆ ಅಲ್ಲಿ ಆಶ್ರಯ ನೀಡಲಾಗಿದೆ. ಕ್ರೌರ್ಯ

ಮೈಸೂರಿನಲ್ಲಿ ಇಂತಹ ಘಟನೆಗಳು ನಿರಂತರವಾಗಿ ಸಂಭವಿಸುತ್ತಲೇ ಇದ್ದು, ಹರೆಯದ ಬಾಲಕಿಯರನ್ನು ವೇಶ್ಯಾವಾಟಿಕೆಗೆ ದೂಡುವ ಬೃಹತ್ ಜಾಲವೇ ಇಲ್ಲಿ ಹರಡಿಕೊಂಡಿದೆ. ಇದಕ್ಕೆ ಪೂರಕವಾಗಿ ಮಾದಕ ವಸ್ತುಗಳನ್ನು ಪೂರೈಸುವ ಜಾಲವೂ ವಿಸ್ತರಿಸುತ್ತಿದ್ದು, ಜಿಲ್ಲಾಡಳಿತದ ಉಪಕ್ರಮಗಳ (?) ಹೊರತಾಗಿಯೂ, ಹೆಚ್ಚುಹೆಚ್ಚು ಯುವಕ ಯುವತಿಯರು ಮಾದಕ ವಸ್ತುಗಳ ಸೇವನೆಗೆ ಬಲಿಯಾಗುತ್ತಿರುವುದು ವರದಿಯಾಗುತ್ತಿದೆ. ಈ ದುರ್ವ್ಯಸನಗಳನ್ನು ಪ್ರಚೋದಿಸುವ ಒಂದು ಸಂಘಟಿತ ಗುಂಪು ಸಾಂಸ್ಕೃತಿಕ ನಗರಿಯಲ್ಲಿ ಸಕ್ರಿಯವಾಗಿರುವುದು ಹಲವಾರು ಘಟನೆಗಳಿಂದ ತಿಳಿದುಬರುತ್ತದೆ. ಮಾದಕ ದ್ರವ್ಯ ಸೇವನೆ, ಮದ್ಯಪಾನ ಮತ್ತಿತರ ದುಶ್ಚಟಗಳಿಗೆ ಬಲಿಯಾಗುತ್ತಿರುವರಲ್ಲಿ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.
ಮಹಿಳಾ ದೌರ್ಜನ್ಯಗಳ ರಾಷ್ಟ್ರೀಯ ಚಿತ್ರಣ
ಆದರೆ ಚುನಾಯಿತ ಸರ್ಕಾರಗಳಿಗೆ ಇದು ಕಳವಳ ಉಂಟುಮಾಡುವುದಿಲ್ಲ. ಆಡಳಿತ ಪಕ್ಷ ಯಾವುದೇ ಇರಲಿ ಹೆಣ್ಣು ದೌರ್ಜನ್ಯಕ್ಕೊಳಗಾಗುವುದನ್ನು ತಪ್ಪಿಸಲಾಗುತ್ತಿಲ್ಲ ಎಂಬ ಕಟುವಾಸ್ತವವನ್ನು ಈ ಮೂರು ಘಟನೆಗಳು ನಿರೂಪಿಸುತ್ತವೆ. ಈ ದೃಷ್ಟಿಯಿಂದಲೇ ಸರ್ಕಾರಗಳ ಸಬಲೀಕರಣದ ಕ್ರಮಗಳನ್ನು ಪುನರ್ ನಿರ್ವಚಿಸಬೇಕಿದೆ. 2025ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಅನುಸಾರ ಒಂದು ವರ್ಷದಲ್ಲಿ 4.5 ಲಕ್ಷ ಮಹಿಳಾ ದೌರ್ಜನ್ಯಗಳು ದಾಖಲಾಗಿವೆ. ಅಂದರೆ ಒಂದು ಲಕ್ಷ ಮಹಿಳಾ ಜನಸಂಖ್ಯೆಗೆ 66.2 ಪ್ರಕರಣಗಳು, ಪ್ರತಿ ಗಂಟೆಗೆ 51 ಎಫ್ಐಆರ್ಗಳು ದಾಖಲಾಗುತ್ತಿವೆ. ಶಿಕ್ಷೆಯ ಪ್ರಮಾಣ ಮಾತ್ರ ಅತ್ಯಲ್ಪ. ಇದೇ ವರದಿಯಲ್ಲಿ ಹೇಳುವಂತೆ ಬಹುತೇಕ ದೌರ್ಜನ್ಯಗಳು ಗಂಡಂದಿರಿಂದ, ಸಂಬಂಧಿಕರಿಂದ, ನಿಕಟವರ್ತಿಗಳಿಂದಲೇ ನಡೆಯುತ್ತಿದೆ. ಈ ವರದಿಯಲ್ಲೇ 29.536 ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ. (NCRB ವರದಿ 2025)

ಗಮನಾರ್ಹ ಸಂಗತಿ ಎಂದರೆ ಉತ್ತರ ಪ್ರದೇಶ ಅತಿ ಹೆಚ್ಚು ದೌರ್ಜನ್ಯ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳಿವೆ. ಈ ಶ್ರೇಣೀಕರಣ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದ್ದು. ಕರ್ನಾಟಕವೇನೂ ಕೆಳ ಶ್ರೇಣಿ ಪಡೆದು ಬೀಗಬೇಕಿಲ್ಲ. ಧರ್ಮಸ್ಥಳದ ಸೌಜನ್ಯ ಮತ್ತೆ ಮತ್ತೆ ನಮ್ಮ (ಜೀವಂತ) ಅಂತರ್ ಪ್ರಜ್ಞೆಯನ್ನು ಕುಟುಕುತ್ತಲೇ ಇದ್ದಾಳೆ. ಅತ್ಯಾಚಾರ-ಹತ್ಯೆಗೀಡಾದ 9 ವರ್ಷದ ಬಲೂನು ಮಾರುವ ಹುಡುಗಿಯ ನಡುರಾತ್ರಿಯ ಆಕ್ರಂದನ ಕಿವಿಗಪ್ಪಳಿಸುತ್ತಲೇ ಇರುತ್ತದೆ. ಇತ್ತೀಚಿನ ಘಟನೆಯನ್ನು ಗಮನಿಸಿದರೆ ಸಾಂಸ್ಕೃತಿಕ ನಗರಿಯ ಸಂಸ್ಕೃತಿಯೇ ಪ್ರಶ್ನಾರ್ಹವಾಗುತ್ತದೆ. ಮೂಲತಃ ಇದು ರಾಜ್ಯಾವಾರು ಸಮಸ್ಯೆಯಲ್ಲ, ನಮ್ಮ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳ ಪ್ರಶ್ನೆ.
ಸಬಲೀಕರಣ ಮತ್ತು ರಕ್ಷಣೆಯ ಜವಾಬ್ದಾರಿ
ಮಹಿಳೆಯರ ಸಬಲೀಕರಣ ಆಡಳಿತ ವ್ಯವಸ್ಥೆಯ ಆದ್ಯತೆಯಾಗಿ ಕಂಡರೂ, ಮಹಿಳಾ ದೌರ್ಜನ್ಯಗಳನ್ನು ತಡೆಗಟ್ಟುವುದು ಆದ್ಯತೆಯಾಗಿಲ್ಲ. ಅದು ಕೇವಲ ಕಾನೂನುಗಳ ಚೌಕಟ್ಟಿನಲ್ಲಿ ನಿಯಂತ್ರಿಸುವ ಅಥವಾ ನಿರ್ವಹಿಸುವ ವಿದ್ಯಮಾನವಾಗಿ ಮಾತ್ರ ಉಳಿದಿದೆ. ಮಹಿಳಾ ಸಂಘಟನೆಗಳ ಮತ್ತು ಎಡಪಂಥೀಯ ಪ್ರಗತಿಪರರ ಕ್ರಿಯಾಶೀಲ ಹೋರಾಟಗಳು ಮತ್ತು ಹಕ್ಕೊತ್ತಾಯಗಳು ಆರೋಪಿಗಳ ಬಂಧನ ಹಾಗೂ ಅಲ್ಪ ಪ್ರಮಾಣದ ಶಿಕ್ಷೆಗೆ ಕಾರಣವಾಗುತ್ತಿವೆ. ಪಕ್ಷ ರಾಜಕೀಯದಿಂದಾಚೆ ನೋಡಿದಾಗ, ಎಳೆಯ ಮಕ್ಕಳನ್ನೂ ಒಳಗೊಂಡಂತೆ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ, ಹತ್ಯೆ, ದೌರ್ಜನ್ಯಗಳು ನಮ್ಮ ಸಮಾಜದಲ್ಲಿ ಆಳಕ್ಕಿಳಿದಿರುವ ಸಾಮಾಜಿಕ ವ್ಯಾಧಿಯಂತೆ ಕಾಣುತ್ತದೆ. ಇದನ್ನು ತಡೆಗಟ್ಟುವ ಬಗೆ ಹೇಗೆ ? ಈ ಜವಾಬ್ದಾರಿಯನ್ನು ಹೊರುವವರು ಯಾರು ?

ಮಹಿಳಾ ಸಂಘಟನೆಗಳು ಯುವ ಜನಾಂಗದಲ್ಲಿ, ವಿದ್ಯಾರ್ಥಿ ಸಮೂಹದ ನಡುವೆ ಲಿಂಗ ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಬೆಳೆಸುವ ಕ್ರಿಯಾಶೀಲ ಕಾರ್ಯಕ್ರಮಗಳನ್ನು ನಡೆಸುತ್ತಲೇ ಬಂದಿವೆ. ಎಳೆಯ ಗಂಡುಮಕ್ಕಳಲ್ಲಿ ಪಾರಂಪರಿಕವಾಗಿ ಇರಬಹುದಾದ ಪಿತೃಪ್ರಧಾನ ಮೌಲ್ಯಗಳನ್ನು ಹೋಗಲಾಡಿಸುವ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಆದರೆ ಇದಕ್ಕೆ ಸಮಾನಾಂತರವಾಗಿ ಪುರುಷಾಳ್ವಿಕೆಯ ಸಂಘ- ಸಂಸ್ಥೆಗಳು ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಇದು ಕಟು ಟೀಕೆ ಎನಿಸಿದರೂ ವಾಸ್ತವ. ಕಾರ್ಮಿಕ ಸಂಘಗಳು, ಸಾಹಿತ್ಯ-ಸಾಂಸ್ಕೃತಿಕ ಸಂಘ-ಸಂಸ್ಥೆಗಳು, ಜನಪರ ಹೋರಾಟದ ಗುಂಪುಗಳು, ರಾಜಕೀಯ ಪಕ್ಷಗಳು ತಳಮಟ್ಟದಿಂದಲೇ ಈ ಪ್ರಯತ್ನಗಳಿಗೆ ತೆರೆದುಕೊಳ್ಳಬೇಕಿದೆ.
ಅಲ್ಲಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿದ್ದರೂ, ಪರಿಣಾಮಕಾರಿಯಾದ ಸಾಮಾಜಿಕ ಬದಲಾವಣೆಯ ಕಾರ್ಯಯೋಜನೆಗಳು ಕಾಣುತ್ತಿಲ್ಲ. ಬಹುಶಃ ಸಾಮಾಜಿಕ ಸಂಘಟನೆಗಳೂ, ಚಳುವಳಿಗಳೂ ಸಹ ವಿವಿಧ ರಾಜಕೀಯ ಪಕ್ಷಗಳ ಪ್ರಭಾವಕ್ಕೊಳಗಾಗಿರುವುದು ಈ ಹಿನ್ನಡೆಗೆ ಕಾರಣ ಇರಬಹುದು. ಇಂದು ನಾವು ಎದುರಿಸುತ್ತಿರುವ ಮಹಿಳಾ ದೌರ್ಜನ್ಯಗಳ ಪ್ರಮಾಣ, ಅದರ ಕ್ರೌರ್ಯ ಮತ್ತು ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಹಿಂಸೆಯನ್ನು ಗಮನಿಸಿದಾಗ ಪುರುಷಾಳ್ವಿಕೆಯ ಸಾಂಸ್ಥಿಕ-ಸಾಂಘಿಕ ನೆಲೆಗಳು ಸಾಂಪ್ರದಾಯಿಕ ಆಲೋಚನಾ ಕ್ರಮದಿಂದ ಆಚೆ ಬರಬೇಕಿದೆ. ಹೀಗೆ ನಮ್ಮ ಕಣ್ಣೋಟವನ್ನು ಹೊರಚಾಚಿದಾಗ ಮಾತ್ರ ಮಹಿಳಾ ಸಬಲೀಕರಣ ಅರ್ಥಪೂರ್ಣವಾಗುತ್ತದೆ.
ಸಮಾಜವೇ ರಕ್ಷಾ ಕವಚವಾಗಬೇಕು
ಹೆಣ್ಣು ಮಕ್ಕಳು ರಕ್ಷಾ ಕವಚಗಳನ್ನು ತೊಟ್ಟು ಹೊರಗೆ ಓಡಾಡಲಾಗುವುದಿಲ್ಲ. ಹೆಣ್ಣಿನ ರಕ್ಷಣೆ ಇಡೀ ಸಮಾಜದ ಜವಾಬ್ದಾರಿ ಎನ್ನುವುದನ್ನು ನಾಗರಿಕತೆಯನ್ನು ಒಪ್ಪುವ ಎಲ್ಲರೂ ಒಪ್ಪಲೇಬೇಕಲ್ಲವೇ ? ನಮ್ಮ ಸಂವಿಧಾನ, ಕಾನೂನು, ನ್ಯಾಯ ವ್ಯವಸ್ಥೆ, ಪೊಲೀಸ್ ವ್ಯವಸ್ಥೆ ಇದಾವುದೂ ಹೆಣ್ಣು ಮಕ್ಕಳ ನಿತ್ಯ ಬದುಕಿನಲ್ಲಿ ರಕ್ಷಾ ಕವಚಗಳಾಗುವುದಿಲ್ಲ. ಈ ಕವಚಗಳು ಅಡಗಿರುವುದು ಸಮಾಜದ ಒಳಗೆ. ಇಲ್ಲಿ ಗುರುತಿಸಬಹುದಾದ ಪುರುಷಾಧಿಪತ್ಯದ ಕಾಮತೃಷೆ ಮತ್ತು ಹೆಣ್ಣನ್ನು ಅಧೀನಳನ್ನಾಗಿ, ಭೋಗದ ವಸ್ತುವನ್ನಾಗಿ ನೋಡುವ ಪ್ರಾಚೀನ ದೃಷ್ಟಿಕೋನವನ್ನು ಬುಡಮಟ್ಟ ನಿರ್ಮೂಲ ಮಾಡುವುದು ಇಂತಹ ರಕ್ಷಾ ಕವಚಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಕ್ರೌರ್ಯ
ಸಮಾಜವನ್ನು, ವಿಶೇಷವಾಗಿ ಪುರುಷ ಸಮಾಜವನ್ನು ಸಂವೇದನೆಗೊಳಿಸುವ ( Sensitisation) ನೈತಿಕ ಜವಾಬ್ದಾರಿ ಇಡೀ ಸಮಾಜದ ಮೇಲಿದೆ, ಹೆಚ್ಚಿನದಾಗಿ ಪುರುಷ ಸಮಾಜದ ಮೇಲಿದೆ. ಈ ಜವಾಬ್ದಾರಿಯನ್ನರಿತು ಪುರುಷ ಕೇಂದ್ರಿತ ಅಥವಾ ಪುರುಷಾಧಿಪತ್ಯದ ಸಾಂಸ್ಥಿಕ ನೆಲೆಗಳು ಹೆಚ್ಚು ಕ್ರಿಯಾಶೀಲವಾಗಿ ಮುಂದುವರೆಯಬೇಕಿದೆ. ಅನುಸರಿಸುವ ಹಾದಿ, ವಿಧಾನ, ಮಾದರಿ ಯಾವುದೇ ಇರಲಿ, ಅಂತಿಮಗುರಿ ವಿಶಾಲ ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವುದೇ ಆಗಬೇಕಿದೆ. ಈ ಹಾದಿಯಲ್ಲಿ ರಾಜಕೀಯ ಪಕ್ಷಗಳು ನಿರುಪಯುಕ್ತವಾಗುತ್ತವೆ ಎಂಬ ಅರಿವು ಮೂಡಿಸಿಕೊಂಡು, ಸಮಾಜದ ಔನ್ನತ್ಯಕ್ಕಾಗಿ ಶ್ರಮಿಸುವುದು ʼಸರ್ವ ಜನಾಂಗದ ಶಾಂತಿಯ ತೋಟʼ ಬಯಸುವ ಸಮ ಸಮಾಜದ ಪ್ರವರ್ತಕರ ಆದ್ಯತೆಯಾಗಬೇಕಿದೆ. ಚರಿತ್ರೆ ನಮ್ಮನ್ನು ದಾಖಲಿಸುವಾಗ ಇದನ್ನೇ ನೋಡುತ್ತದೆ ಎಂಬ ಪರಿವೆ ನಮ್ಮೊಳಗಿದ್ದರೆ ಸಾಕು. ಕ್ರೌರ್ಯ
ಇದನ್ನೂ ನೋಡಿ: SIR ಕರ್ತವ್ಯದಲ್ಲಿ ಮತ್ತೊಂದು ಆಘಾತ! ಬಿಎಲ್ಒಗೆ ಜಾತಿ ನಿಂದನೆ; ಎಫ್ಐಆರ್ ದಾಖಲು Janashakthi Media
