ಹಾಸನ: ದೆಹಲಿಯಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್, ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ಬಲವಂತವಾಗಿ ವಶಕ್ಕೆ ಪಡೆದಿರುವುದನ್ನು ಖಂಡಿಸಿ ಹಾಗೂ ನೀಟ್-ಯುಜಿ (NEET UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನ್ಯಾಯಸಮ್ಮತ ತನಿಖೆಗೆ ಆಗ್ರಹಿಸಿ, ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ಎಫ್ಐ) ಹಾಸನ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ನಗರದ ಬಾಲಕರ ಪದವಿಪೂರ್ವ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್, ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ಮೇ 3ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನಡೆಸಿದ್ದ ನೀಟ್-ಯುಜಿ 2026 ಪರೀಕ್ಷೆಯನ್ನು ಸುಮಾರು 22 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು. ಆದರೆ ರಾಜಸ್ಥಾನದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರಿಂದ ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ನಡೆಸಬೇಕಾಯಿತು. ಈ ಬೆಳವಣಿಗೆಯಿಂದ ದೇಶಾದ್ಯಂತ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಎನ್ಟಿಎ ಆರಂಭದಿಂದಲೂ ಪರೀಕ್ಷೆಗಳ ನಿರ್ವಹಣೆಯಲ್ಲಿ ವಿಫಲವಾಗುತ್ತಿದ್ದು, ಇದುವರೆಗೆ 89 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಹಾಗೂ 48 ಮರುಪರೀಕ್ಷೆಗಳು ನಡೆದಿವೆ ಎಂದು ಹೇಳಿದ ಅವರು, ಇಂತಹ ಅಸಮರ್ಥ ಸಂಸ್ಥೆಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ: 30 ಸಾವಿರ ಜನರಿಗೆ ಕೇವಲ ಒಂದು ಶೌಚಾಲಯ! ಬಿ.ಪ್ಯಾಕ್ ಅಧ್ಯಯನದಲ್ಲಿ ಆತಂಕಕಾರಿ

ಸೋನಂ ವಾಂಗ್ಚುಕ್ ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ 24 ದಿನಗಳಿಂದ ಶಾಂತಿಯುತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ, ಅವರೊಂದಿಗೆ ಸಂವಾದ ನಡೆಸುವ ಬದಲು ಬಲವಂತವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿದರು. ಶಾಂತಿಯುತ ಪ್ರತಿಭಟನೆಯ ಮೇಲಿನ ಈ ಕ್ರಮ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ನಡೆದ ದಾಳಿಯಾಗಿದೆ ಎಂದು ಅವರು ಹೇಳಿದರು.
‘ಸಂಸತ್ ಚಲೋ’ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಅಶ್ರುವಾಯು ಹಾಗೂ ರಬ್ಬರ್ ಬುಲೆಟ್ಗಳನ್ನು ಬಳಸಿರುವುದನ್ನು ಎಸ್ಎಫ್ಐ ತೀವ್ರವಾಗಿ ಖಂಡಿಸಿತು. ಬಂಧನಕ್ಕೊಳಗಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಯಿತು.
ಕೇಂದ್ರ ಸರ್ಕಾರವು ಭಿನ್ನಾಭಿಪ್ರಾಯಗಳನ್ನು ಪ್ರಜಾಸತ್ತಾತ್ಮಕ ಸಂವಾದದ ಮೂಲಕ ಪರಿಹರಿಸುವ ಬದಲು ಪೊಲೀಸ್ ಬಲವನ್ನು ಬಳಸುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪರೀಕ್ಷಾ ವ್ಯವಸ್ಥೆಯ ಮೇಲಿನ ವಿದ್ಯಾರ್ಥಿಗಳ ವಿಶ್ವಾಸವನ್ನು ಮರುಸ್ಥಾಪಿಸಲು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಮತ್ತಷ್ಟು ತೀವ್ರ ಹೋರಾಟ ನಡೆಸುವುದಾಗಿ ಎಸ್ಎಫ್ಐ ಮುಖಂಡರು ಎಚ್ಚರಿಕೆ ನೀಡಿದರು.
ಪ್ರಮುಖ ಬೇಡಿಕೆಗಳು
- ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು.
- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ)ಯನ್ನು ರದ್ದುಗೊಳಿಸಬೇಕು.
- ನೀಟ್ ಪರೀಕ್ಷಾ ವ್ಯವಸ್ಥೆಯನ್ನು ರದ್ದುಗೊಳಿಸಬೇಕು.
- ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು.
- ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು.
- ಪರೀಕ್ಷೆಗಳ ಕೇಂದ್ರೀಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು.
- ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು.
ಪ್ರತಿಭಟನೆಯಲ್ಲಿ ಎಸ್ಎಫ್ಐ ಜಿಲ್ಲಾ ಮುಖಂಡರಾದ ವಿವೇಕ್, ಅಹರ್ನಿಶಿ, ಡಿವೈಎಫ್ಐ ಮುಖಂಡ ಪೃಥ್ವಿ ಎಂ.ಜಿ., ರೈತ ಮುಖಂಡರಾದ ಎಚ್.ಆರ್. ನವೀನ್ ಕುಮಾರ್, ಧರ್ಮೇಶ್, ಕೃಷ್ಣದಾಸ್, ಪರಮಶಿವಯ್ಯ, ಹರೀಶ್, ಕಟ್ಟೆಬೆಳಗುಲಿ ಶಶಿ, ರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದನ್ನೂ ನೋಡಿ : ನೀಟ್ ಹಗರಣ | ವಿದ್ಯಾರ್ಥಿಗಳೇ ಎದ್ದೇಳಿ! ಹೋರಾಟಕ್ಕೆ ಜೊತೆಯಾಗಿ — ನಟ ಕಿಶೋರ್ ಮನವಿ Janashakthi Media
