ಹದಿಮೂರು ವರ್ಷಗಳ ನಂತರವೂ “ನಮ್ಮ ಕರೆನ್ಸಿ ಮರಣಶಯ್ಯೆಯಲ್ಲಿದೆ” !

ಮೇ 20, ರಂದು ಅಮೆರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ96.83ಕ್ಕೆ  ಕುಸಿದು ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದೆ.   2014ರ ಏಪ್ರಿಲ್ ನಲ್ಲಿ 60 ರೂ.ಗೆ ಒಂದು ಡಾಲರ್ ಸಿಗುತ್ತಿತ್ತು. ಇಂದು ಒಂದು ಡಾಲರ್ ಕೊಳ್ಳಬೇಕಾದರೆ 96 ರೂ ಕೊಡಬೇಕು. ಅಂದರೆ, ಶೇ. 60ರಷ್ಟು ಹೆಚ್ಚು ರೂಪಾಯಿ ಕೊಡಬೇಕಾಗಿದೆ ಏಕೆ? ಡಾಲರ್‌ ಎದುರು ಮಾತ್ರವಲ್ಲ, ಪಾಕಿಸ್ತಾನದ ಮತ್ತು ಬಾಂಗ್ಲಾದೇಶದ ಕರೆನ್ಸಿ ಎದುರೂ ರೂಪಾಯಿ ಮೌಲ್ಯ ಕಳಕೊಂಡಿದೆ ಏಕೆ? ಈ ಪ್ರಶ್ನೆಯನ್ನು 13ವ ರ್ಷಗಳ ಹಿಂದೆ ರೂಪಾಯಿ ಮೌಲ್ಯ ಇಳಿಕೆಯ ಬಗ್ಗೆ ತರಹೇವಾರಿ ಟಿಪ್ಪಣಿ ಮಾಡಿದ್ದ ಈಗಿನ ಪ್ರಧಾನಿಗಳೂ ಸೇರಿದಂತೆ ಆಳುವ ಕೂಟದ ಮುಖಂಡರನ್ನು ಕೇಳಬೇಕಾಗಿದೆ. ಹದಿಮೂರು

ಸಿ.ಸಿದ್ದಯ್ಯ

ಅಮೆರಿಕನ್‌ ಡಾಲರ್‌ (USD) ಎದುರು ರೂಪಾಯಿ ಮೌಲ್ಯ 96.83ಕ್ಕೆ (2026ರ ಮೇ 20) ಕುಸಿದಿದೆ. ಇದು ಸದ್ಯಕ್ಕೆ ಹೊಚ್ಚ ಹೊಸ ದಾಖಲೆ. ನೀವು ಇದನ್ನು ಓದುವಷ್ಟರಲ್ಲಿ ಇನ್ನೊಂದು ದಾಖಲೆ ಸೃಷ್ಟಿಯಾಗಿರಬಹುದು.

“ಭಾರತೀಯ ರೂಪಾಯಿ ಬಹಳಷ್ಟು ಸದ್ದು ಮಾಡುತ್ತಿದ್ದ ಸಮಯವಿತ್ತು. ಆದರೆ ಇಂದು ಅದು ತನ್ನ ಧ್ವನಿಯನ್ನು ಕಳೆದುಕೊಂಡಿದೆ. ಅದೇ ರೀತಿ ನಮ್ಮ ಪ್ರಧಾನಿಯ ಧ್ವನಿಯನ್ನು ನಾವು ಕೇಳಲು ಸಾಧ್ಯವಾಗುತ್ತಿಲ್ಲ. ಇಬ್ಬರೂ ಮೂಕರಾಗಿದ್ದಾರೆ. ಇಂದು ನಮ್ಮ ಕರೆನ್ಸಿ ಮರಣಶಯ್ಯೆಯಲ್ಲಿದೆ. ಇದು ಟರ್ಮಿನಲ್ ಹಂತದಲ್ಲಿದೆ ಮತ್ತು ತುರ್ತಾಗಿ ವೈದ್ಯರ ಗಮನ ಬೇಕಿದೆ. ಪ್ರಸ್ತುತ ರೂಪಾಯಿ ಮತ್ತು ಯುಪಿಎ ಸರ್ಕಾರಗಳೆರಡೂ ಮೌಲ್ಯ ಕಳೆದುಕೊಂಡಿವೆ. ನಮ್ಮ ದೇಶವನ್ನು ವಿನಾಶದಿಂದ ತಡೆಯುವ ಸಮಯ ಬಂದಿದೆ. ಕೇಂದ್ರ ಸರ್ಕಾರವು ದೇಶವನ್ನು ದಾರಿ ತಪ್ಪಿಸುತ್ತಿದೆ. ನಮ್ಮ ದೇಶ ಏಕೆ ವಿನಾಶದತ್ತ ಸಾಗುತ್ತಿದೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು”

ಹೀಗೆಂದಿರುವವರು ಲೋಕಸಭೆಯಲ್ಲಿ ವಿಪಕ್ಷ ಮುಖಂಡ ರಾಹುಲ್‌ ಗಾಂಧಿಯಲ್ಲ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿಯವರಂತೂ ಅಲ್ಲವೇ ಅಲ್ಲ, ಅಥವ ಇದು ಬೇರೆ ಯಾವುದೇ ವಿಪಕ್ಷಗಳ ಮುಖಂಡರ ಅಥವ ವಕ್ತಾರರ ಟಿಪ್ಪಣಿ ಅಲ್ಲ.

ಇದು ಡಾಲರ್‌ ಎದುರು ರೂಪಾಯಿ ಮೌಲ್ಯ 96.83 ಕ್ಕೆ ಇಳಿದಿರುವಾಗ ವ್ಯಕ್ತಗೊಂಡ ಟಿಪ್ಪಣಿಯಲ್ಲ. ಅದಿನ್ನೂ 60 ದಾಟಿರದಿದ್ದಾಗ, 2013ರ ಆಗಸ್ಟ್ 23 ರಂದು ನರೇಂದ್ರ ಮೋದಿಯವರು ಸೌರಾಷ್ಟ್ರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತ ಹೇಳಿದ ಮಾತು. ಆಗಿನ್ನೂ ಅವರು ಪ್ರಧಾನ ಮಂತ್ರಿಗಳಾಗಿರಲಿಲ್ಲ, ಗುಜರಾತಿನ ಮುಖ್ಯಮಂತ್ರಿಯಾಗಿದ್ದರು, ಆದರೆ  ಹಿಂದುತ್ವವಾದಿಗಳು ಹಾಗೂ ಕಾರ್ಪೊರೇಟ್ ಕುಳಗಳ ಬೆಂಬಲಿತ ಪ್ರಧಾನಿ ಹುದ್ದೆಯ ಅಭ್ಯರ್ಥಿಯೂ ಆಗಿದ್ದರು.

ಇದಕ್ಕೆ ತುಸು ಮೊದಲು, ಆಗಸ್ಟ್ 20, 2013 ರಂದು, ಮೋದಿ ವರದಿಗಾರರಿಗೆ ಹೀಗೆ ಹೇಳಿದ್ದರು: “ಬಿಕ್ಕಟ್ಟುಗಳು ಬರುತ್ತವೆ, ಆದರೆ ಬಿಕ್ಕಟ್ಟಿನ ಸಮಯದಲ್ಲಿ ನಾಯಕತ್ವವು ದಿಕ್ಕಿಲ್ಲದಿದ್ದರೆ, ಹತಾಶವಾಗಿದ್ದರೆ, ಬಿಕ್ಕಟ್ಟು ತುಂಬಾ ಗಂಭೀರವಾಗುತ್ತದೆ. ದೆಹಲಿಯಲ್ಲಿರುವ ಆಡಳಿತಗಾರರು ದೇಶದ ರಕ್ಷಣೆಯ ಬಗ್ಗೆಯಾಗಲಿ ಅಥವಾ ರೂಪಾಯಿಯ ಮೌಲ್ಯ ಕುಸಿಯುವ ಬಗ್ಗೆಯಾಗಲಿ ಚಿಂತಿಸದಿರುವುದು ನಮ್ಮ ದೇಶದ ದುರದೃಷ್ಟಕರ.” ಹದಿಮೂರು

2014ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ , ಫೆಬ್ರವರಿ 28, 2014 ರಂದು ಹುಬ್ಬಳ್ಳಿಯಲ್ಲಿ ನಡೆದ ರ್ಯಾಲಿಯಲ್ಲಿ ಮೋದಿ ಹೀಗೆ ಹೇಳಿದ್ದರು: “ನಮ್ಮ ದೇಶದ ರೂಪಾಯಿ ಮೌಲ್ಯ ಕುಸಿಯುತ್ತಿದೆ. ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. ಅಟಲ್ ಜಿ ಅವರ ಸರ್ಕಾರದ ಅವಧಿಯಲ್ಲಿ, ರೂಪಾಯಿ 40-45 [ಪ್ರತಿ ಡಾಲರ್‌ಗೆ] ಇತ್ತು. ಈ ಸರ್ಕಾರದ ಅಡಿಯಲ್ಲಿ ರೂಪಾಯಿ 62, 65, 70 ರಷ್ಟು ಕುಸಿಯುತ್ತಲೇ ಇದೆ. ಆಮದು ಹೆಚ್ಚುತ್ತಲೇ ಇದೆ, ರಫ್ತು ಕಡಿಮೆಯಾಗುತ್ತಲೇ ಇದೆ. ಒಂದು ಸಂವೇದನಾಶೀಲ ಸರ್ಕಾರದ ಕೆಲಸವೆಂದರೆ ರಫ್ತು ಹೆಚ್ಚಿಸುವುದು ಮತ್ತು ಆಮದು ಕಡಿಮೆ ಮಾಡುವುದು.”

ಜುಲೈ 30, 2013 ರಂದು ನಡೆದ ಒಂದು ಕಾರ್ಯಕ್ರಮದಲ್ಲಿ ಮೋದಿ ಹೀಗೆ ಹೇಳಿದ್ದರು: “ಇಂದು, ರೂಪಾಯಿ ಮೌಲ್ಯ ಕುಸಿಯುತ್ತಿರುವ ವೇಗವನ್ನು ನೋಡಿದರೆ, ಕೆಲವೊಮ್ಮೆ ದೆಹಲಿ ಸರ್ಕಾರ ಮತ್ತು ಅದರ ಮೌಲ್ಯ ವೇಗವಾಗಿ ಕುಸಿಯುತ್ತಿರುವ ರೂಪಾಯಿ ನಡುವೆ ಸ್ಪರ್ಧೆ ನಡೆಯುತ್ತಿರುವಂತೆ ತೋರುತ್ತದೆ.

ಬಿಜೆಪಿ ಮುಖಂಡರ ತರಹೇವಾರಿ ಟಿಪ್ಪಣಿಗಳು ಅಂದು

ಯುಪಿಎ ಸರ್ಕಾರದ ಆರ್ಥಿಕ ನೀತಿಗಳನ್ನು “ನೀತಿ ಪಾರ್ಶ್ವವಾಯು” (Policy Paralysis) ಎಂದು ಅಂದಿನ ಪ್ರಮುಖ ವಿರೋಧ ಪಕ್ಷವಾಗಿದ್ದ ಬಿಜೆಪಿ ಕಠಿಣವಾಗಿ ಟೀಕಿಸಿತ್ತು.

ಪಕ್ಷದ ನಾಯಕಿ ಸುಷ್ಮಾ ಸ್ವರಾಜ್‌ ಟ್ವಿಟರ್‌ ನಲ್ಲಿ “ರೂಪಾಯಿ ಮೌಲ್ಯ ಕಳೆದುಕೊಂಡಿದೆ. ಪ್ರಧಾನಿ ಕೃಪೆ ಕಳೆದುಕೊಂಡಿದ್ದಾರೆ” ಎಂದು ಹೇಳಿದ್ದರು.

“ದೇಶವು ಇಂತಹ ಪಾರ್ಶ್ವವಾಯು ಪೀಡಿತ ಸರ್ಕಾರವನ್ನು ಸಹಿಸಲು ಸಾಧ್ಯವಿಲ್ಲ, ತಕ್ಷಣವೇ ಚುನಾವಣೆ ನಡೆಸುವುದು ಒಳಿತು” ಎಂದು ಮುಂದೆ ಲೋಕಸಭಾ ಅಧ್ಯಕ್ಷರಾದ ವೆಂಕಯ್ಯ ನಾಯ್ಡು ಅಂದು ಹೇಳಿದ್ದರು.

“…2011 ರ ಆರಂಭದಿಂದಲೂ ಭಾರತೀಯ ರೂಪಾಯಿ US ಡಾಲರ್ ವಿರುದ್ಧ 50 ರೂ.ಗಳನ್ನು ಮೀರಿದೆ, ರೂಪಾಯಿಯ ಮೌಲ್ಯವು ಹೆಚ್ಚಿನ ಕಳವಳಕಾರಿ ವಿಷಯವಾಗಿದೆ. ಇದು ನಮ್ಮ ಆರ್ಥಿಕತೆಯ ಕಳಪೆ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ….”   ಇಂದಿನ ಹಣಕಾಸು ಮಂತ್ರಿ ಬಿಜೆಪಿಯ ಅಂದಿನ ರಾಷ್ಟ್ರೀಯ ವಕ್ತಾರೆ ಶ್ರೀಮತಿ ನಿರ್ಮಲಾ ಸೀತಾರಾಮನ್ ವಿಶ್ಲೇಷಿಸಿದ್ದರು! ಹದಿಮೂರು

ಇನ್ನೊಬ್ಬ ಬಿಜೆಪಿ ನಾಯಕ, ಮುಂದೆ “ಅಚ್ಛೇ ದಿನ್‌”ಗಳಲ್ಲಿ ಮಂತ್ರಿಯೂ ಆದ  ರವಿಶಂಕರ್ ಪ್ರಸಾದ್ ಅವರು 11 ಜುಲೈ 2013 ರಂದು “ಯುಪಿಎ ಅಧಿಕಾರಕ್ಕೆ ಬಂದಾಗ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ರಾಹುಲ್ ಗಾಂಧಿಯವರ ವಯಸ್ಸಿಗೆ ಸಮನಾಗಿತ್ತು. ಇಂದು ಅದು ಸೋನಿಯಾ ಗಾಂಧಿ ಅವರ ವಯಸ್ಸಿಗೆ ಸಮಾನವಾಗಿದೆ ಮತ್ತು ಶೀಘ್ರದಲ್ಲೇ ಅದು ಮನಮೋಹನ್ ಸಿಂಗ್ ಅವರ ವಯಸ್ಸನ್ನು ಮುಟ್ಟಲಿದೆ” ಎಂದು ಹೇಳಿದ್ದರು. ಅಂದು ರಾಹುಲ್ ಗಾಂಧಿ ಅವರಿಗೆ 41 ವರ್ಷ, ಸೋನಿಯಾ ಗಾಂಧಿ ಅವರಿಗೆ 67 ವರ್ಷ ಮತ್ತು ಮನಮೋಹನ್ ಸಿಂಗ್ ಅವರಿಗೆ 80 ವರ್ಷ ವಯಸ್ಸಾಗಿತ್ತು. “ಒಟ್ಟು ಆರ್ಥಿಕ ದುರ್ಬಲ ನಿರ್ವಹಣೆಯ ನೇರ ಫಲಿತಾಂಶ ಇದು” ಎಂದು ಅವರು ಕರೆದಿದ್ದರು.

“ತೀಕ್ಷ್ಣವಾದ ಕುಸಿತದ ನಂತರ US ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ 60.15 ಆಗಿದೆ, ಮೇ ಮತ್ತು ಜುಲೈ 9ರ ನಡುವೆ 53 ರೂ.ನಿಂದ 60.15 ರೂ.ಗೆ ಕುಸಿದಿದೆ. ರಾಷ್ಟ್ರೀಯ ಹೆಮ್ಮೆಯನ್ನು ಗಂಭೀರವಾಗಿ ಘಾಸಿಗೊಳಿಸುವುದರ ಹೊರತಾಗಿ, ಈ ತೀವ್ರ ಕುಸಿತವು ಪ್ರಸ್ತುತ ಯುಪಿಎ ಸರ್ಕಾರದ ಭಾರತೀಯ ಆರ್ಥಿಕತೆಯ ಅಸಮರ್ಪಕ ನಿರ್ವಹಣೆಗೆ ನೇರವಾಗಿ ಸಂಬಂಧಿಸಿದೆ.” ಎಂದು ರವಿಶಂಕರ್ ಪ್ರಸಾದ್ ಹೇಳಿದ್ದರು.

ಇದನ್ನೂ ಓದಿ : ಎಥನಾಲ್ ಮಿಶ್ರಿತ ಇಂಧನಕ್ಕೆ ಹೊಸ ಮಾನದಂಡ: E30 ದತ್ತ ಮುಂದುವರಿದ ಕೇಂದ್ರ ಸರ್ಕಾರ

ಸಂಪೂರ್ಣ ಹುಸಿಯಾದ ಗುರೂಜಿ ವಾಣಿ

ಹೌದು, ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ ಯುಪಿಎ 2 ರ ಸರ್ಕಾರದ ಅವಧಿಯ 2013ರಲ್ಲಿ 60 ಕ್ಕೆ ಕುಸಿದಿತ್ತು. ಅದು ಅದುವರೆಗಿನ ಐತಿಹಾಸಿಕ ಕುಸಿತವಾಗಿತ್ತು. ಅದಕ್ಕೆ ಯುಪಿಎ-೨ ಸರಕಾರದ ಆರ್ಥಿಕ ನೀತಿಗಳು ಕಾರಣ ಎಂಬುದು ಕೂಡ ನಿಜವೇ. “ನಮಗೆ 60 ತಿಂಗಳು ಅಧಿಕಾರ ಕೊಡಿ, ಅಚ್ಛೇ ದಿನಗಳು ಬರುತ್ತವೆ, ವಿದೇಶಗಳಲ್ಲಿರುವ ಕಪ್ಪುಹಣವನ್ನು ತರುತ್ತೇವೆ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ…. “ ಎಂದೆಲ್ಲ ಹೇಳಿ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇ 16, 2014 ರಂದು, ರೂಪಾಯಿ ಬೆಲೆ ಪ್ರತಿ USD ಗೆ 58.58 ರೂಪಾಯಿ ಇತ್ತು.

“ಮೋದಿ ಅಧಿಕಾರಕ್ಕೆ ಬಂದರೆ ರೂಪಾಯಿ ಮೌಲ್ಯ 40 ಕ್ಕೆ ವೃದ್ಧಿಸುತ್ತದೆ” ಎಂದು ಶ್ರೀ ರವಿ ಶಂಕರ್ ಗುರೂಜಿ 2014ರ ಚುನಾವಣೆಯ ಸಂದರ್ಭದಲ್ಲಿ ಟ್ವಿಟ್ ಭವಿಷ್ಯ ನುಡಿದಿದ್ದರು.  ಆದರೆ ಹಾಗಾಗಲೇ ಇಲ್ಲ. ಅಂದಿನಿಂದಲೂ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಲೇ ಇದೆ. ಈಗಂತೂ ಪತ್ರಿದಿನ ಹೊಸ-ಹೊಸ ದಾಖಲೆ ನಿರ್ಮಿಸುತ್ತಿದೆ. 2026 ಮೇ 20ರಂದು 96.83ಕ್ಕೆ ಕುಸಿದಿದೆ.

ಅಂದು- “ಇವರನ್ನು ನನ್ನ ಆಸ್ಪತ್ರೆಗೆ ಶಿಫ್ಟ್‌ ಮಾಡಿ”
ಇಂದು- “ ಎಲ್ಲವೂ ಚೆನ್ನಾಗಿದೆ-ಆತಂಕ ಬೇಡ…”
ವ್ಯಂಗ್ಯಚಿತ್ರ ಕೃಪೆ: ಮಂಜುಲ್‌ @ ಫೇಸ್‌ ಬುಕ್
                                                               

ಸುಷ್ಮಾ ಸ್ವರಾಜ್‌ ಇಂದು ಇದ್ದಿದ್ದರೆ ಹಾಲಿ ಪ್ರಧಾನಿ ಬಗ್ಗೆ ಏನು ಹೇಳುತ್ತಿದ್ದರೋ? ಉಳಿದ ಮುಖಂಡರುಗಳು  ಅರ್ಥಹೀನ ಸಬೂಬುಗಳನ್ನು ಕೊಡುತ್ತಿದ್ದಾರೆ, ಅದೂ ಸಾಧ್ಯವಾಗದಿದ್ದಾಗ ಬಾಯಿ ಮುಚ್ಚಿಕೊಂಡಿದ್ದಾರೆ.

ಅದಕ್ಕೆ ಎರಡು ವರ್ಷಗಳ ಮೊದಲು  ಅಗ ಬಿಜೆಪಿ ಅಧ್ಯಕ್ಷರಾಗಿದ್ದ ನಿತಿನ್‌ ಗಡ್ಕರಿ ಮೇ 2012ರಲ್ಲಿ ಆಗಿನ ಯುಪಿಎ-2 ಸರ್ಕಾರದ ಸಮರ್ಥನೆಗಳನ್ನು ತಳ್ಳಿಹಾಕುತ್ತ “ಸಮಸ್ಯೆ ಇರುವುದು ಯೂರೋ ವಲಯದಲ್ಲಲ್ಲ (Eurozone), ಇರುವುದು ಯುಪಿಎ ವಲಯದಲ್ಲಿ (UPA-zone)” ಎಂದು ಹೇಳುವ ಮೂಲಕ ಜಾಗತಿಕ ಕಾರಣಗಳಿಗಿಂತ ಸರ್ಕಾರದ ಆಂತರಿಕ ವಿಫಲತೆಯೇ ರೂಪಾಯಿ ಕುಸಿತಕ್ಕೆ ಕಾರಣ ಎಂದಿದ್ದರು. ಆಂತರಿಕ ವಿಫಲತೆ, ಅಂದರೆ ಆರ್ಥಿಕ ಧೋರಣೆಗಳು ಎಂದು ಅರ್ಥೈಸುವುದಾದರೆ, ಅದು ಆಗಲೂ ನಿಜ, ಅವೇ ಆರ್ಥಿಕ ನೀತಿಗಳನ್ನು ಇನ್ನಷ್ಟು ರಭಸದಿಂದ ಮುಂದುವರೆಸಿದ ಮೋದಿ ನೇತೃತ್ವದ ಸರಕಾರಕ್ಕೆ ಅಂದಿಗಿಂತಲೂ ಹೆಚ್ಚಾಗಿ  ಅದು ಈಗ ಅನ್ವಯಿಸುತ್ತದೆ. ಹದಿಮೂರು 

ಕಾಂಗ್ರೆಸ್ ಆಡಳಿತದ ವಿರುದ್ದ ಇಷ್ಟೆಲ್ಲಾ ಟೀಕೆ ಮಾಡಿ, ಅದರ ಬಲದಿಂದಲೇ ಶೇ. 31ರಷ್ಟು ಮತ ಪಡೆದು, ಎನ್‌ಡಿಎ ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ, ರೂಪಾಯಿ ಮೌಲ್ಯ ವೃದ್ಧಿಗೆ ಅಥವಾ ಅದರ ಮೌಲ್ಯ ಮತ್ತಷ್ಟು ಕುಸಿಯದಂತೆ ತಡೆಯಲು ತೆಗೆದುಕೊಂಡ ಕ್ರಮಗಳೇನು ಎಂಬ ಪ್ರಶ್ನೆಯನ್ನು ನಾವಿಂದು ಕೇಳಬೇಕಿದೆ. 2014ರ ಏಪ್ರಿಲ್ ನಲ್ಲಿ 60 ರೂ.ಗೆ ಒಂದು ಡಾಲರ್ ಸಿಗುತ್ತಿತ್ತು. ಇಂದು ಒಂದು ಡಾಲರ್ ಕೊಳ್ಳಬೇಕಾದರೆ 96 ರೂ ಕೊಡಬೇಕು. ಅಂದರೆ, 36 ರೂ ಹೆಚ್ಚು. ಅಥವಾ ಶೇ. 60ರಷ್ಟು ಹೆಚ್ಚು ರೂಪಾಯಿ ಕೊಡಬೇಕು.

ಜನಸಾಮಾನ್ಯರ ಮೇಲೆ ನೇರ ಪರಿಣಾಮ

ರೂಪಾಯಿ ಮೌಲ್ಯ ಕುಸಿತ ಮೇಲ್ನೋಟಕ್ಕೆ ಅಂತರರಾಷ್ಟ್ರೀಯ ವ್ಯವಹಾರಕ್ಕೆ ಸಂಬಂಧಿಸಿದ್ದು ಎನಿಸಿದರೂ, ಇದರ ನೇರ ಪರಿಣಾಮ ಜನಸಾಮಾನ್ಯರ ಮೇಲೆ ಬೀರಲಿದೆ. ವಿದೇಶದಿಂದ ಆಮದು ಮಾಡಿಕೊಳ್ಳುವ ಎಲ್ಲ ಸರಕುಗಳೂ ಜನಸಾಮಾನ್ಯರಿಗೆ ದುಬಾರಿಯಾಗಲಿದೆ. ಭಾರತವು ಲೋಹಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು ಇತ್ಯಾದಿಗಳ ಆಮದಿನ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ ಮತ್ತು US ಡಾಲರ್‌ ಗಳಲ್ಲಿ ಪಾವತಿಯನ್ನು ಮಾಡುತ್ತದೆ. ರೂಪಾಯಿ ಮೌಲ್ಯದ ಕುಸಿತದೊಂದಿಗೆ, ದೇಶವು ಅದೇ ವಸ್ತುವಿಗೆ ಮೊದಲಿಗಿಂತ ಹೆಚ್ಚು ಪಾವತಿಸಬೇಕಾಗುತ್ತದೆ. ಈ ವಿದ್ಯಮಾನವು ಕಚ್ಚಾ ವಸ್ತು ಮತ್ತು ಉತ್ಪಾದನಾ ವೆಚ್ಚಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅದು ಅಂತಿಮವಾಗಿ ಗ್ರಾಹಕರಿಗೆ ವರ್ಗಾಯಿಸುತ್ತದೆ. ಅನಿಲ, ಪೆಟ್ರೋಲ್‌, ಡೀಸೆಲ್‌ ಸೇರಿದಂತ ಪೆಟ್ರೋಲಿಯಂ ಪದಾರ್ಥಗಳು, ಅಡುಗೆ ಎಣ್ಣೆ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ರಸಗೊಬ್ಬರದ ದರವೂ ಹೆಚ್ಚಾಗುತ್ತದೆ. ಭಾರತ ತನಗೆ ಅಗತ್ಯವಿರುವ ಒಟ್ಟು ಕಚ್ಚಾ ತೈಲದಲ್ಲಿ ಶೇ. 85ಕ್ಕೂ ಹೆಚ್ಚಿನ ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. (ಭಾರತದಲ್ಲೇ ಹೊರತೆಗೆಯುವ ಪೆಟ್ರೋಲಿಯಂ ಗೆ ಅಂತರಾಷ್ಟ್ರೀಯ ಮಾರುಕಟ್ಟೆ ದರ ನಿಗದಿ ಮಾಡಿ ಮಾರುತ್ತಿದ್ದಾರೆ ಮತ್ತು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಂಡು, ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ, ತೈಲ ಕಂಪನಿಗಳು ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿವೆ. ಇದರಲ್ಲಿ ರಿಲಯನ್ಸ್‌, ನಯಾರಾ ದಂತಹ ಖಾಸಗಿ ತೈಲ ಕಂಪನಿಗಳು ಪ್ರಮುಖವಾದವುಗಳು.)

“ರೂಪಾಯಿ ಮೌಲ್ಯ ಕುಸಿತವಲ್ಲ, ಡಾಲರ್ ಮೌಲ್ಯ ಹೆಚ್ಚಾಗಿದೆಯಷ್ಟೆ” ಎಂದು ಬಿಜೆಪಿ ನಾಯಕರು ಮತ್ತು ಆಳುವ ವರ್ಗದ ಆರ್ಥಿಕ ತಜ್ಞರು ಹೇಳತೊಡಗಿದ್ದಾರೆ. ಒಮ್ಮೆ ಕೊರೋನಾ ಬಿಕ್ಕಟ್ಟು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎಂದಿದ್ದರು. ಮತ್ತೊಮ್ಮೆ ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದ ನಂತರದ ಜಗತ್ತಿನ ಪರಿಸ್ಥಿತಿ ಇದಕ್ಕೆ ಕಾರಣ ಎಂದಿದ್ದರು. ಇಂದು, ಜಾಗತಿಕ ಯುದ್ಧದ ಸನ್ನಿವೇಶಗಳು, ಕಚ್ಚಾ ತೈಲ ಬೆಲೆಗಳು ಮತ್ತು ಅಮೆರಿಕದ ಫೆಡರಲ್ ರಿಸರ್ವ್‌ನ ನೀತಿಗಳೇ ಇಂದಿನ ರೂಪಾಯಿ ಕುಸಿತಕ್ಕೆ ಕಾರಣವಾಗಿದ್ದು, ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು (Fundamentals) ಇಂದಿಗೂ ಬಲಿಷ್ಠವಾಗಿವೆ ಎಂದು “ರೂಪಾಯಿಯ ಮೌಲ್ಯವು ಹೆಚ್ಚಿನ ಕಳವಳಕಾರಿ ವಿಷಯವಾಗಿದೆ. ಇದು ನಮ್ಮ ಆರ್ಥಿಕತೆಯ ಕಳಪೆ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ….”   ಎಂದು ಒಂದು ದಶಕದ ಹಿಂದೆ ಬಿಜೆಪಿಯ ವಕ್ತಾರರಾಗಿ ವಿಶ್ಲೇಷಿಸಿದ್ದ ಈಗಿನ ಹಣಕಾಸು ಮಂತ್ರಿಗಳು  ಯಾವುದೇ ಮುಜುಗರವಿಲ್ಲದೆ ಹೇಳುತ್ತಿದ್ದಾರೆ! ಮತ್ತು ಸರಕಾರೀ ಆರ್ಥಿಕ ತಜ್ಞರು ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ!!

ನಿಜ ಹೇಳಬೇಕೆಂದರೆ ರೂಪಾಯಿ ಮೌಲ್ಯ ಡಾಲರ್‌ ಎದುರು ಮಾತ್ರವಲ್ಲ, ನಮ್ಮ ನೆರೆ ದೇಶಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಣಗಳ ಮೌಲ್ಯಗಳ ಹೋಲಿಕೆಯಲ್ಲೂ ಇಳಿದಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಆರ್ಥಿಕ ಪರಿಸ್ಥಿತಿ ಅತ್ಯಂತ ಬಿಗಡಾಯಿಸಿ ಈಗ ಐಎಂಎಫ್‌ ಸಾಲಕ್ಕೆ ಮೊರೆಹೋಗಿ ಅದರ “ಪಥ್ಯ”ವನ್ನು ಅನುಸರಿಸುತ್ತಿರುವ ಪಾಕಿಸ್ತಾನದ ರೂಪಾಯಿಗೆ ಹೋಲಿಸಿದರೂ, ಭಾರತದ ರೂಪಾಯಿ ಕಳೆದ 12 ತಿಂಗಳಲ್ಲಿ (ಅಂದರೆ, ಆಪರೇಷನ್‌ ಸಿಂಧೂರ್‌ ನಂತರ ಎಂಬುದನ್ನು ಗಮನಿಸಿ) ೧೧.೮೬%ದಷ್ಟು ಮೌಲ್ಯ ಇಳಿಕೆ ಕಂಡಿದೆ. ಮೇ 15,2025 ರಂದು 3.2913 ಪಾಕಿಸ್ತಾನೀ ರೂಪಾಯಿಗೆ ಒಂದು ಭಾರತೀಯ ರೂಪಾಯಿ  ಸಿಗುತ್ತಿತ್ತು. ಈಗ ಮೇ 18, 2026ರಂದು 2.9010 ಪಾಕಿಸ್ತಾನೀ ರೂಪಾಯಿಗೇ ಒಂದು ಭಾರತೀಯ ರೂಪಾಯಿ ಸಿಗುತ್ತದೆ. ( ದಿ ವೈರ್‌ ವಿಶ್ಲೇಷಣೆ, ಮೇ 19)

ಬಾಂಗ್ಲಾದೇಶದ  ಕರೆನ್ಸಿ ಟಕಾ ಕ್ಕೆ ಹೋಲಿಸಿದಾಗಲೂ ಭಾರತದ ರೂಪಾಯಿ ಮೌಲ್ಯ 10%ದಷ್ಟು ಇಳಿದಿದೆ. ಒಂದು ರೂಪಾಯಿಗೆ 1.42 ಟಕಾ ಇದ್ದದ್ದು, 1.28 ಟಕಾಕ್ಕೆ ಇಳಿದಿದೆ. ವಾಸ್ತವವಾಗಿ, 2025 ರಲ್ಲಿ ರೂಪಾಯಿ ಏಷ್ಯಾದ ಅತ್ಯಂತ ದುರ್ಬಲ ಕರೆನ್ಸಿಯಾಗಿತ್ತು. ಈ ವರ್ಷವೂ ಅದು ಹಾಗೆಯೇ  ಮುಂದುವರೆದಿದೆ.

ಆದ್ದರಿಂದ ರೂಪಾಯಿ ಮೌಲ್ಯ ಇಳಿಕೆಗೆ ಹೊರಗಿನ ಕಾರಣಗಳಂತೆ, ಬಹುಶಃ ಅದಕ್ಕಿಂತ ಹೆಚ್ಚಾಗಿ, ಒಳಗಿನ ಕಾರಣಗಳೂ ಖಂಡಿತಾ ಇವೆ, ಅವು ಮುಖ್ಯವಾಗಿ ಮೋದಿ ನೇತೃತ್ವದ ಸರಕಾರ ಹಿಂದಿನ ಕಾಂಗ್ರೆಸ್‌/ ಯುಪಿಎ ಸರಕಾರಗಳಿಗಿಂತ ಹೆಚ್ಚು ಉಗ್ರವಾಗಿ  ಅನುಸರಿಸುತ್ತಿರುವ ನವ-ಉದಾರವಾದಿ ಆರ್ಥಿಕ ನೀತಿಗಳು.

. “ಆಮದು ಹೆಚ್ಚುತ್ತಲೇ ಇದೆ, ರಫ್ತು ಕಡಿಮೆಯಾಗುತ್ತಲೇ ಇದೆ. ಒಂದು ಸಂವೇದನಾಶೀಲ ಸರ್ಕಾರದ ಕೆಲಸವೆಂದರೆ ರಫ್ತು ಹೆಚ್ಚಿಸುವುದು ಮತ್ತು ಆಮದು ಕಡಿಮೆ ಮಾಡುವುದು.” ಎಂಬ ಮೋದಿಯವರ ಅಂದಿನ ಮಾತುಗಳನ್ನು ಅವರೂ ಸೇರಿದಂತೆ ಇಂದಿನ ಆಳುವವರಿಗೆ ನೆನಪಿಸಬೇಕಿದೆ. ಹದಿಮೂರು 

ಇದನ್ನೂ ನೋಡಿ : ಯುವಜನರನ್ನು “ಕಾಕ್ರೋಚ್” ಎಂದವರ ವಿರುದ್ಧ ಡಿಜಿಟಲ್‌ ಚಳವಳಿ! – ಕಾಕ್ರೋಚ್ ಜನತಾ ಪಾರ್ಟಿ Janashakthi Media

Donate Janashakthi Media

Leave a Reply

Your email address will not be published. Required fields are marked *