ಅನಧಿಕೃತ ಶುಲ್ಕ ವಸೂಲಿ: ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಎಓಸಿ ಎಚ್ಚರಿಕೆ

ಬೆಂಗಳೂರು: ಪದವಿ ಹಾಗೂ ಸ್ನಾತಕೋತ್ತರ ಪ್ರವೇಶ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಾಗೂ ಅನಧಿಕೃತ ಶುಲ್ಕ ವಸೂಲಿ ಮಾಡಬಾರದು ಎಂದು ಕರ್ನಾಟಕದ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಮೇಲ್ವಿಚಾರಣಾ ಸಮಿತಿ (AOC) ಎಚ್ಚರಿಕೆ ನೀಡಿದೆ.

ನಿವೃತ್ತ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರ ಅಧ್ಯಕ್ಷತೆಯಲ್ಲಿರುವ ಈ ಸಮಿತಿಯು ಮಂಗಳವಾರ ಹೊರಡಿಸಿದ ಪ್ರಕಟಣೆಯಲ್ಲಿ, ಕೆಲವು ವೈದ್ಯಕೀಯ ಕಾಲೇಜುಗಳು ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (RGUHS) ಜಮಾ ಮಾಡಲಾಗಿರುವ ವಿಶ್ವವಿದ್ಯಾಲಯ ಶುಲ್ಕವನ್ನು ವಿದ್ಯಾರ್ಥಿಗಳಿಂದ ಮತ್ತೊಮ್ಮೆ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದು ತಿಳಿಸಿದೆ.

ಇದನ್ನೂ ಓದಿ: ಮಹಿಳಾ ವಕೀಲರಿಗೆ 30% ಮೀಸಲಾತಿ ಬೇಡಿಕೆ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

ಇದೇ ವೇಳೆ, ರಾಜ್ಯ ಸರ್ಕಾರ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ನಡುವೆ ಮಾಡಿಕೊಂಡಿರುವ ಒಪ್ಪಂದಕ್ಕೆ ವಿರುದ್ಧವಾಗಿ ‘ಕಾಷನ್ ಡೆಪಾಸಿಟ್’ ಹಾಗೂ ಇತರೆ ಅನಧಿಕೃತ ಶುಲ್ಕಗಳನ್ನು ಸಂಗ್ರಹಿಸುತ್ತಿರುವ ಕುರಿತು ಸಹ ದೂರುಗಳು ಬಂದಿವೆ ಎಂದು ಸಮಿತಿ ತಿಳಿಸಿದೆ.

ನಿಯಮಾನುಸಾರ, ಈ ಕಾಲೇಜುಗಳು ಕೇವಲ ಕೌಶಲ್ಯ ಪ್ರಯೋಗಾಲಯ (ಸ್ಕಿಲ್ ಲ್ಯಾಬ್) ಶುಲ್ಕ ರೂ.30,000 ಹಾಗೂ ವಿವಿಧ ಶುಲ್ಕ ರೂ.15,000 ಮಾತ್ರ ವಸೂಲಿ ಮಾಡಲು ಅನುಮತಿಸಲಾಗಿದೆ.

ಈ ಕುರಿತು ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳು, ಪ್ರವೇಶ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಸಂಪರ್ಕಕ್ಕಾಗಿ: KEA ಕಟ್ಟಡ, 18ನೇ ಕ್ರಾಸ್, ಸಂಪಿಗೆ ರಸ್ತೆ, ಬೆಂಗಳೂರು-12. ದೂರವಾಣಿ: 080-23466844, ಇಮೇಲ್: [email protected].

ಇದನ್ನೂ ನೋಡಿ: ಕೋಗಿಲು ಲೇಔಟ್ ನಿವಾಸಿಗಳ ಹೋರಾಟ ತೀವ್ರ | “ಮನೆ ಕೊಡಿ ಅಥವಾ ಜೈಲಿಗಾದರೂ ಕಳುಹಿಸಿ” Janashakthi Media

Donate Janashakthi Media

Leave a Reply

Your email address will not be published. Required fields are marked *