- ವಸಂತರಾಜ ಎನ್.ಕೆ
ಎಪ್ರಿಲ್ 10 ರಾತ್ರಿ 9 ಗಂಟೆ ಭಾರತೀಯ ಸಮಯ) : ಯು.ಎಸ್-ಇಸ್ರೇಲ್ ಇರಾನ್ ಮೇಲೆ ಹೂಡಿದ ಭೀಕರ ಯುದ್ಧದ 40 ದಿನಗಳ ನಂತರ 15 ದಿನಗಳ ಕದನ ವಿರಾಮಕ್ಕೆ ಪಾಕಿಸ್ತಾನದ ಮಧ್ಯಸ್ತಿಕೆಯಲ್ಲಿ ಯು.ಎಸ್ ಮತ್ತು ಇರಾನ್ ಒಪ್ಪಿಕೊಂಡಿವೆ. ಮಾತುಕತೆಗಳು ಇನ್ನೇನೂ ಆರಂಭವಾಗಲಿವೆ. ಇದು ಹಲವು ಪ್ರಶ್ನೆಗಳನ್ನು ಎಬ್ಬಿಸಿವೆ. ಅವುಗಳನ್ನು ಉತ್ತರಿಸುವ ಪ್ರಯತ್ನ.
1. ಮಾತುಕತೆ ಆರಂಭವಾಗುವ ಮೊದಲೇ ಹಲವು ಅಡೆತಡೆಗಳು ಎದುರಾಗಿದ್ದು ಎರಡು ವಾರಗಳ ಕದನ ವಿರಾಮ ಜಾರಿಯಾಗುವುದೇ?
ಯು.ಎಸ್ ಮತ್ತು ಇರಾನ್ ನಡುವೆ ಪಾಕಿಸ್ತಾನದ ಮೂಲಕ ವಿನಿಮಯ ಮಾಡಿಕೊಂಡ ಅಂಶಗಳ ಆಧಾರದ ಮೇಲೆ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಂದವಾಗಿತ್ತು. ಯು.ಎಸ್ ಸಲ್ಲಿಸಿದ 15 ಅಂಶಗಳನ್ನು ಇರಾನ್ ನಿರಾಕರಿಸಿತ್ತು. ಕೊನೆಗೂ ಇರಾನ್ ಸಲ್ಲಿಸಿದ 10 ಅಂಶಗಳು ಮಾತುಕತೆಗೆ ಆಧಾರವಾಗಿರುತ್ತವೆ ಎಂದು ಯು.ಎಸ್ ಒಪ್ಪಿತ್ತು. ಆ 10 ಅಂಶಗಳು ಹೀಗಿವೆ:
- ತಾತ್ಕಾಲಿಕ ಕದನ ವಿರಾಮವಲ್ಲ, ಯುದ್ಧಕ್ಕೆ ಶಾಶ್ವತ ಅಂತ್ಯ
- ಇರಾನ್ ಮೇಲೆ ಮತ್ತೆ ದಾಳಿ ನಡೆಯುವುದಿಲ್ಲ ಎಂಬ ಖಾತರಿ
- ಲೆಬನಾನ್‌ನಲ್ಲಿ ಹಿಜ್ಬೊಲ್ಲಾ ವಿರುದ್ಧ ಇಸ್ರೇಲಿ ದಾಳಿಗಳನ್ನು ಕೊನೆಗೊಳಿಸುವುದು
- ಇರಾನ್ ವಿರುದ್ಧ ಮಾತ್ರವಲ್ಲದೆ ಇರಾನ್‌ನಿಂದಲೂ ಎಲ್ಲಾ ಪ್ರಾದೇಶಿಕ ದಾಳಿಗಳ ನಿಲುಗಡೆ
- ಇರಾನ್ ಮೇಲಿನ ಎಲ್ಲಾ ಯುಎಸ್ ಮತ್ತು ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದು
- ಪ್ರತಿಯಾಗಿ, ಇರಾನ್ ತನ್ನ ದಿಗ್ಬಂಧನವನ್ನು ತೆಗೆದುಹಾಕುತ್ತದೆ ಮತ್ತು ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುತ್ತದೆ
- ಹೊರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಸಾಗಣೆಗೆ ಶಿಷ್ಟಾಚಾರ ಸಂಹಿತೆ
- ಇರಾನ್ ಪ್ರತಿ ಹಡಗಿಗೆ $2 ಮಿಲಿಯನ್ ಸಾಗಣೆ ಶುಲ್ಕವನ್ನು ವಿಧಿಸುತ್ತದೆ.
- ಈ ಶುಲ್ಕವನ್ನು ಒಮಾನ್‌ನೊಂದಿಗೆ ಹಂಚಿಕೊಳ್ಳಲಾಗುವುದು
- ಯುಎಸ್ ಮತ್ತು ಇಸ್ರೇಲ್ ನಾಶಪಡಿಸಿದ ಮೂಲರಚನೆಗಳ ಪುನರ್ನಿರ್ಮಾಣ
ಆದರೆ ಮೊದಲ ದಿನದಿಂದಲೇ ಎಂದಿನಂತೆ ಇಸ್ರೇಲ್ ಈ ಕದನ ವಿರಾಮ ಒಪ್ಪಿಕೊಳ್ಳದೆ ಲೆಬನಾನ್ ಮೇಲೆ ಭೀಕರ ದಾಳಿ ಮುಂದುವರೆಸಿದೆ. ಕದನವಿರಾಮ ಆರಂಭವಾದ ನಂತರ ಈ ದಾಳಿಗಳಿಂದ 100 ಕ್ಕೂ ಹೆಚ್ಚು ಜನ ಸತ್ತಿದ್ದಾರೆ. 1000 ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಕದನವಿರಾಮ ಲೆಬನಾನ್ ಗೆ ಅನ್ವಯಿಸುವುದಿಲ್ಲವೆಂದು ಇಸ್ರೇಲ್ ಘೋಷಿಸಿದೆ. ಮೊದಲು ಈ ಕುರಿತು ಯು.ಎಸ್ ಮೌನವಾಗಿದ್ದು, ಇಸ್ರೇಲ್ ಮೇಲೆ ದಾಳಿ ನಿಲ್ಲಿಸಲು ಒತ್ತಡ ಹಾಕುತ್ತಿದೆ ಎಂದು ವರದಿಯಾಗಿದ್ದರೂ, ಆ ಮೇಲೆ ಉಪಾಧ್ಯಕ್ಷ ವಾನ್ಸ್ ಸಹ ಲೆಬನಾನ್ ಗೆ ಕದನ ವಿರಾಮ ಅನ್ವಯವಾಗುವುದಿಲ್ಲ ಎಂದಿದ್ದಾರೆ.

ಕಾರ್ಟೂನ್ ಕೃಪೆ : ಸತೀಶ ಆಚಾರ್ಯ
ಇರಾನ್ ಇದನ್ನು ತೀವ್ರವಾಗಿ ಪ್ರತಿಭಟಿಸಿದ್ದು, ಹಾಗಿದ್ದಲ್ಲಿ ಹೊರ್ಮುಝ್ ಜಲಸಂದಿಯನ್ನು ತೆರೆಯುವುದಿಲ್ಲ ಮತ್ತು ಮಾತುಕತೆಗೆ ಅರ್ಥವಿಲ್ಲವೆಂದಿದೆ. ತನ್ನ ಹಿತಾಸಕ್ತಿಗೆ ವಿರುದ್ಧವಾಗಿದ್ದರೂ ತನ್ನ ವಿದೇಶ ನೀತಿಯನ್ನು ಜೈಲಿಗೆ ಹೋಗುವ ಭಯದಲ್ಲಿ ಯುದ್ಧ ಹೂಡುತ್ತಿರುವ ನೇತನ್ಯಾಹುಗೆ ಒತ್ತೆ ಇಡುವುದನ್ನು ಮುಂದುವರೆಸುವುದು ಯು.ಎಸ್ ನ ಆಯ್ಕೆಯಾದರೆ, ಅದರ ಜತೆಗೆ ಮಾತುಕತೆಗೆ ಅರ್ಥವಿರುವುದಿಲ್ಲವೆಂದೂ ಇರಾನ್ ಹೇಳಿದೆ.
ಇಸ್ರೇಲ್ ನ ಈ ಧೋರಣೆಯನ್ನು ಯುರೋ ಕೂಟದ ದೇಶಗಳು ಸಹ ವಿರೋಧಿಸಿವೆ. ಈ ವಿರೋಧದ ನಂತರ ಇಸ್ರೇಲ್ ಲೆಬನಾನ್ ಸರಕಾರದ ಜತೆ ಹೆಜಬೊಲ್ಲಾ ವನ್ನು ನಿಶ್ಶಸ್ತ್ರಗೊಳಿಸುವ ಕುರಿತು ಪ್ರತ್ಯೇಕ ಶಾಂತಿ ಮಾತುಕತೆ ನಡೆಸುವುದು. ಆದರೆ ಹೆಜಬೊಲ್ಲಾ ನಿಶ್ಶಸ್ತ್ರಗೊಳ್ಳುವ ವರೆಗೆ ದಾಳಿ ಮುಂದುವರೆಯುವುದು ನೇತನ್ಯಾಹು ಹೇಳಿದ್ದಾರೆ. ಇಸ್ಲಾಮಾಬಾದ್ ನಲ್ಲಿ ನಡೆಯುವ ಮಾತುಕತೆಗೆ ತೆರಳಬೇಕಾಗಿದ್ದ ಇರಾನ್ ತಂಡ ಇನ್ನೂ ಹೊರಟಿಲ್ಲವೆಂದು ವರದಿಯಾಗಿದೆ. ಈ ನಡುವೆ ಪ್ರತಿ ದಿನ 15 ಹಡಗುಗಳನ್ನು ಮಾತ್ರ ಬಿಡಲಾಗುವುದು ಎಂದು ಇರಾನ್ ಹೇಳಿದೆ. ಪ್ರತಿ ಹಡಗಿಗೆ ಇರಾನ್ ಶುಲ್ಕ ವಿಧಿಸುವುದು ಆರಂಭವಾಗಿದೆ ಎಂದೂ ವರದಿಯಾಗಿದೆ.
ಈ ಅಡೆತಡೆಗಳ ನಂತರವೂ ಮಾತುಕತೆಗಳು ನಡೆಯಬಹುದು. ಈ ಕ್ರಮಗಳು ಮಾತುಕತೆಯಲ್ಲಿ ಮೇಲುಗೈ ಸಾಧಿಸಲು ತಂತ್ರವಿರಬಹುದು ಎನ್ನಲಾಗಿದೆ.
2. ಅಧ್ಯಕ್ಷ ಟ್ರಂಪ್ ಅವರ ಅಬ್ಬರದ ಎಚ್ಚರಿಕೆಯ ನಂತರ ಕದನ ವಿರಾಮಕ್ಕೆ ಒಪ್ಪಲು ಕಾರಣವೇನು ?
ಕದನವಿರಾಮ ಏರ್ಪಟ್ಟ ಹಿಂದಿನ ದಿನವೇ, ಹೊರ್ಮುಝ್ ಜಲಸಂಧಿ ಮುಕ್ತಸಾಗಾಣಿಕೆಗೆ ತೆರೆಯದಿದ್ದರೆ – ಇರಾನನ್ನು “ಬಾಂಬ್ ದಾಳಿ ಮೂಲಕ ಶಿಲಾಯುಗಕ್ಕೆ ಅಟ್ಟಲಾಗುವುದು”, “ಒಂದು ನಾಗರಿಕತೆಯನ್ನು ನಾಶ ಮಾಡಲಾಗುವುದು”, “ಎಲ್ಲ ಸೇತುವೆ ಮತ್ತು ವಿದ್ಯುತ್ ಘಟಕಗಳು ಒಂದೇ ದಿನದಲ್ಲಿ ನಾಶವಾಗುವುವು” – ಎಂಬ ಅಧ್ಯಕ್ಷ ಟ್ರಂಪ್ ಅವರ ಅಬ್ಬರದ ಘೋಷಣೆಯ ನಂತರ – ಸೇತುವೆ ಮತ್ತು ವಿದ್ಯುತ್ ಘಟಕಗಳ ಮೇಲೆ ದಾಳಿ ಅಥವಾ ಸಂಸ್ಕರಿತ ಯುರೇನಿಯಂ ಅಥವಾ ಖರ್ಗ್ ದ್ವೀಪ ವಶಪಡಿಸಿಕೊಳ್ಳಲು ಭೂಸೈನ್ಯ ಇಳಿಸಲಾಗುವುದು – ಎಂದು ನಿರೀಕ್ಷಿಸಲಾಗಿತ್ತು. ಆದರೆ ಏಕಾಏಕಿ ಈ ಒಪ್ಪಂದ ಏರ್ಪಟ್ಟಿದ್ದು ಹೇಗೆ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಇದಕ್ಕೆ ಹಲವು ಕಾರಣಗಳು ಇವೆ ಎನ್ನಲಾಗಿದೆ.
ಮೊದಲನೆಯದಾಗಿ ಇರಾನ್ ಸಹ ಟ್ರಂಪ್ ಬೆದರಿಕೆ ಕಾರ್ಯಗತ ಮಾಡಿದರೆ ಕೊಲ್ಲಿ ದೇಶಗಳಲ್ಲಿ ಗುರುತಿಸಿದ ಸೇತುವೆ, ವಿದ್ಯುತ್ ನೀರು ಶುದ್ಧೀಕರಣ ಘಟಕಗಳ ಮೇಲೆ ದಾಳಿ ಮಾಡುವುದು ಹೇಳಿತ್ತು. ಇದು ಕೊಲ್ಲಿ ದೇಶಗಳಲ್ಲಿ ಸಂಚಲನ ಮೂಡಿಸಿತ್ತು. ಯು.ಎ.ಇ ಬಿಟ್ಟು ಇತರ ಎಲ್ಲಾ ಕೊಲ್ಲಿ ದೇಶಗಳು ಟ್ರಂಪ್ ಬೆದರಿಕೆಯನ್ನು ಕಾರ್ಯಗತಗೊಳಿಸುವುದನ್ನು ವಿರೋಧಿಸಿದ್ದವು. ಕಟಾರ್ ಮತ್ತು ಒಮನ್ ಯುದ್ಧದ ನಂತರ ಯು.ಎಸ್ ನೆಲಗಳನ್ನು ಖಾಲಿ ಮಾಡಬೇಕು ಎಂದು ಸೂಚಿಸಿವೆ ದಾಳಿ ಮುಂದುವರೆದರೆ ಯು.ಎಸ್ ನಲ್ಲಿ ಹೂಡಿಕೆ ಹಿಂತೆಗೆಯುವದಾಗಿ ಕೆಲವು ದೇಶಗಳು ಹೇಳಿವೆ ಎಂದೂ ಹೇಳಲಾಗಿದೆ. ಟ್ರಂಫ್ ಅವರ ಬೆದರಿಕೆಯ ಹೇಳಿಕೆಗಳು ಅಂತರರಾಷ್ಟ್ರೀಯ ಕಾನೂನುಗಳ ಪ್ರಕಾರ ನರಮೇಧಧ “ಯುದ್ಧಾಪರಾಧ” ವೆಂದು ಪರಿಗಣಿತವಾಗಬಹುದು ಎಂದು ಹೇಳಲಾಗಿದೆ.

ಇದರ ಮೊದಲ ಕೆಲವು ದಿನಗಳಲ್ಲಿ ಇರಾನ್ ಮೇಲೆ ದಾಳಿ ನಡೆಸಲು ಹೋದ ಹಲವು ವಿಮಾನಗಳನ್ನು ಹೊಡೆದು ಉರುಳಿಸಲಾಗಿತ್ತು. ಎಫ್-15ಇ ವಿಮಾನವನ್ನು ಹೊಡೆದುರುಳಿಸಲಾಗಿದ್ದು, ಅದರ ಒಬ್ಬ ಪೈಲಟ್ ಇರಾನಿನಲ್ಲಿ ಇಳಿದಿದ್ದ. ಅವನನ್ನು ಪತ್ತೆ ಹಚ್ಚಿ ರಕ್ಷಿಸಲು ಒಂದು ದೊಡ್ಡ ಪಡೆ ಕಳಿಸಿ ಅದು ಅಭೂತಪೂರ್ವ, ಆಶ್ಚರ್ಯಕರ ರೀತಿಯಲ್ಲಿ ಅವನನ್ನು ರಕ್ಷಿಸಲಾಯಿತು ಎಂದು ಆದ್ಯಕ್ಷ ಟ್ರಂಪ್ ಮತ್ತು ಅವರ ತಂಡ ಪತ್ರಿಕಾ ಗೋಷ್ಟಿ ಮಾಡಿ ತಾನೇ ಬೆನ್ನು ತಟ್ಟಿಕೊಂಡಿತು. ಆದರೆ ಇದು ನಿಜವಲ್ಲ. ಪೈಲಟ್ ರಕ್ಷಣೆಯ ನೆಪದಲ್ಲಿ ಯು.ಎಸ್ ಸಂಸ್ಕರಿತ ಯುರೇನಿಯಂ ವಶಪಡಿಸಿಕೊಳ್ಳಲು ಒಂದು ಕಾರ್ಯಪಡೆ ಕಳಿಸಿತ್ತು. ಅದರ ಭಾಗವಾಗಿದ್ದ 3-4 ವಿಮಾನಗಳನ್ನು ಹೊಡೆದುರುಳಿಸಲಾಯಿತು ಎಂದು ಇರಾನ್ ಹೇಳಿದೆ. ಪೈಲಟ್ ರಕ್ಷಣೆಯ ಯು.ಎಸ್ ಕಥನದಲ್ಲಿ ಹಲವು ಹುಳುಕುಗಳಿದ್ದವು. ಈ ಕಾರ್ಯಪಡೆಯ ಭಾಗವಾಗಿದ್ದ 1-2 ವಿಮಾನಗಳನ್ನು ರಕ್ಷಣಾ ದೃಷ್ಟಿಯಿಂದ ಹಿಂದೆ ಬಿಟ್ಟು ನಾಶ ಮಾಡಬೇಕಾಯಿತು ಎಂದು ಯು.ಎಸ್ ಹೇಳಿತ್ತು. ಹಲವು ಸ್ವತಂತ್ರ ಮಿಲಿಟರಿ ವಿಶ್ಲೇಷಕರು ಸಹ ಯು.ಎಸ್ ಕಥನದ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಇವೆಲ್ಲಕ್ಕಿಂತ ಹೆಚ್ಚಾಗಿ ಇರಾನ್ ಇತ್ತೀಚೆಗೆ ಹಲವು ಯು.ಎಸ್-ಇಸ್ರೇಲಿ ವಿಮಾನಗಳನ್ನು ಹೊಡೆದುರುಳಿಸಿದ್ದು, ವಿಮಾನ-ನಿರೋಧಕ ವ್ಯವಸ್ಥೆಯನ್ನು ಮತ್ತೆ ಇರಾನ್ ಪುನಃ ಸ್ಥಾಪಿಸಿದೆ ಅಥವಾ ಪುನಶ್ಚೇತನಗೊಳಿಸಿದೆ ಎಂಬ ಭೀತಿ ವ್ಯಾಪಕವಾಗಿತ್ತು.
ಇದಲ್ಲದೆ ಕೊಲ್ಲಿ ದೇಶಗಳ ಮತ್ತು ಇಸ್ರೇಲಿನ ವಾಯುದಾಳಿ-ನಿರೋಧಕ ವ್ಯವಸ್ಥೆಯ ಹಲವು ಭಾಗಗಳು ನಷ್ಟವಾಗಿದ್ದು, ವಾಯುದಾಳಿ-ನಿರೋಧಕ ಕ್ಷಿಪಣಿಗಳ ಮತ್ತು ಒಟ್ಟಾರೆ ಮದ್ದುಗುಂಡು ಆಕ್ರಾಮಕ ಕ್ಷಿಪಣಿಗಳ ಕೊರತೆ ಯುದ್ಧ ಮುಂದುವರೆದರೆ ಮಾರಕವಾಗಬಹುದು ಎಂಬ ಭೀತಿಯಿತ್ತು. ಇಂತಹ ಸಾವಿರಾರು ಹೊಸ ಕ್ಷಿಪಣಿಗಳನ್ನು ಮತ್ತು ಮದ್ದುಗುಂಡುಗಳನ್ನು ಹೊತ್ತು ತಂದ ಯು.ಎಸ್ ಹಡಗವನ್ನು ದಾರಿಯಲ್ಲೇ ಮುಳುಗಿಸಲಾಗಿದ್ದು ಸುದ್ದಿಯಾಗದಿದ್ದರೂ, ಕೊರತೆಯನ್ನು ಇನ್ನಷ್ಟು ತೀವ್ರವಾಗಿಸಿತ್ತು. ಇರಾನ್ ಕ್ಷಿಪಣಿ/ಡ್ರೋನ್ ಮತ್ತು ಅದರ ಉತ್ಪಾದನಾ ವ್ಯವಸ್ಥೆಯ ಬಹುಪಾಲು ನಾಶವಾಗಿರುವ ವರದಿಗಳು ನಿಜವಲ್ಲ. ಇರಾನ್ ಕ್ಷಿಪಣಿ/ಡ್ರೋನ್ ಆಕ್ರಾಮಕ ಕ್ಷಮತೆ ಗಮನಾರ್ಹವಾಗಿ ಕಡಿಮೆಯಾಗಿಲ್ಲ. ಬದಲಿಗೆ ತನ್ನ ಭೂಗತ ದಾಸ್ತಾನಗಳಿಂದ ಅತ್ಯಂತ ಮಾರಕ ಹೊಸ ಕ್ಷಿಪಣಿ ಮತ್ತು ವಾಯುದಾಳಿ-ನಿರೋಧಕ ವ್ಯವಸ್ಥೆಯನ್ನು ಸಜ್ಜುಗೊಳಿಸುತ್ತಿದೆ. ಬರಿಯ ವಿಮಾನದಾಳಿಯಿಂದ ಇರಾನನ್ನು ಮಣಿಸುವುದು ಸಾಧ್ಯವಿಲ್ಲ. ದೀರ್ಘ ಯುದ್ಧಕ್ಕೆ ಇರಾನ್ ಗೆ ಸಿದ್ಧತೆ ಇದ್ದಷ್ಟು ತಮ್ಮ ಕಡೆ ಸಿದ್ಧತೆಯಿಲ್ಲವೆಂಬ ವಾಸ್ತವ ಯು.ಎಸ್ ಗೆ ಅರಿವಾಗಲು ಆರಂಭವಾಗಿತ್ತು.
ಹಾಗಾಗಿ ಟ್ರಂಪ್ ಬೆದರಿಕೆ ಹಾಕಿದ್ದ ಕ್ರಮಗಳ ಸಾಧ್ಯತೆ ಮಾತ್ರ ಉಳಿದಿತ್ತು. ಆ ಕ್ರಮಗಳಿಗೆ – ವಿಶೇಷವಾಗಿ ಭೂ ಸೈನ್ಯ ಇಳಿಸುವ ಕ್ರಮಕ್ಕೆ ಹಿರಿಯ ಮಿಲಿಟರಿ ಅಧಿಕಾರಿಗಳು ಮತ್ತು ಉಪಾಧ್ಯಕ್ಷ ವಾನ್ಸ್ ಸೇರಿದಂತೆ ಟ್ರಂಪ್ ಸಚಿವ ಸಂಪುಟದ ಹಲವರು ಬಲವಾಗಿ ವಿರೋಧಿಸಿದರು. ಈ ಜಟಾಪಟಿಯ ಫಲವಾಗಿಯೇ ಹಲವು ಹಿರಿಯ ಮಿಲಿಟರಿ ಅಧಿಕಾರಿಗಳು ರಾಜಿನಾಮೆ ಕೊಡಬೇಕಾಯಿತು. ಇದಲ್ಲದೆ ನಾಟೋ ಮತ್ತು ನಾಟೋ+ ಸಹಚರ ದೇಶಗಳು (ಜಪಾನ್, ದ.ಕೊರಿಯಾ, ಆಸ್ಟ್ರೇಲಿಯ) ಸಹ ಈ ಕ್ರಮಗಳನ್ನು ವಿರೋಧಿಸಿದರು.
ಹೊರ್ಮುಝ್ ಜಲಸಂಧಿಯನ್ನು ಮುಚ್ಚಿದ್ದು ತೈಲ ಬೆಲೆಗಳು ಅಪಾಯಕಾರಿಯಾಗಿ ಏರುತ್ತಿದ್ದು, ಇತರ ಹಲವು ಸರಕುಗಳ ಕೊರತೆ ಬೆಲೆಏರಿಕೆ ಮತ್ತು ಅದರ ಪರಿಣಾಮವಾಗಿ ಶೇರು ಮಾರುಕಟ್ಟೆ ಮತ್ತು ಆರ್ಥಿಕ ಬಿಕ್ಕಟ್ಟು ತೀವ್ರವಾಗುವ ಲಕ್ಷಣಗಳಿದ್ದವು. ಇದು ಇಡೀ ಜಗತ್ತನ್ನು ಮಾತ್ರವಲ್ಲದೆ, ಯು.ಎಸ್ ನ ನಾಟೋ, ನಾಟೋ+ ಸಹಚರರನ್ನು ತೀವ್ರವಾಗಿ ಬಾಧಿಸುತ್ತಿದ್ದವು.
ಮಾತ್ರವಲ್ಲದೆ, ಹಿಂದಿನ ಭಾನುವಾರ ದೇಶದಾದ್ಯಮತ 3 ಸಾವಿರ ಸ್ಥಳಗಳಲ್ಲಿ 80 ಲಕ್ಷಕ್ಕೂ ಹೆಚ್ಚು ಜನ ಪಾಲುಗೊಂಡ ‘ನೋ ಕಿಂಗ್ಸ್’ ಪ್ರದರ್ಶನ ಜನತೆಯ ಯುದ್ಧ-ವಿರೋಧಿ ಆಕ್ರೋಶ ತೋರಿಸಿತ್ತು. ಟ್ರಂಪ್ ಅವರ ಬೆಂಬಲಿಗ ‘ಮಗ’ (ಮೇಕ್ ಅಮೆರಿಕ ಗ್ರೇಟ್ ಅಗೈನ್) ಚಳುವಳಿ ಮತ್ತು ರಿಪಬ್ಲಿಕನ್ ಪಕ್ಷದ ಒಂದು ವಿಭಾಗ ಸಹ ಯುದ್ಧವನ್ನು, ಯು.ಎಸ್ ಹಿತಾಸಕ್ತಿಗೆ ಸಂಭಂಧವಿಲ್ಲದ ಇಸ್ರೇಲಿ ಹಿತಾಸಕ್ತಿಗೆ ಮಣಿಯುವ ಯುದ್ಧವೆಂದು ವಿರೋಧಿಸಿತ್ತು. ಯುದ್ಧ ಘೋಷಿಸುವ ಅಧ್ಯಕ್ಷರ ಅಧಿಕಾರಕ್ಕೆ ಕಡಿವಾಣ ಹಾಕುವ ಸೆನೆಟ್ ನಿರ್ಣಯವನ್ನು ಮತ್ತೆ ತರುವ ಬೆದರಿಕೆಯನ್ನು ವಿರೋಧಿ ಡೆಮೊಕ್ರಾಟಿಕ್ ಪಕ್ಷದ ನಾಯಕರು ಹಾಕಿದ್ದರು. ಈ ಬಾರಿ ಹಲವು ರಿಪಬ್ಲಿಕನ್ ಪಕ್ಷದವರು ಬೆಂಬಲಸಿ ಅದು ಪಾಸಾಗಬಹುದು ಎಂಬ ಆತಂಕ ಟ್ರಂಪ್ ಗೆ ಎದುರಾಗಿತ್ತು.
ಈ ಎಲ್ಲ ಕಾರಣಗಳಿಂದ ಯು.ಎಸ್ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಳ್ಳಬೇಕಾಯಿತು.
3. ಶಾಂತಿ ಮಾತುಕತೆಗಳಲ್ಲಿ ಯಾವ ರೀತಿಯ ಒಪ್ಪಂದದ ಸಾಧ್ಯತೆಯಿದೆ?
ಲೆಬನಾನ್ ನ ಮೇಲೆ ದಾಳಿಯ ಕುರಿತು ಇಸ್ರೇಲಿ ಹಠಮಾರಿತನ ಮುಂದುವರೆದರೆ ಶಾಂತಿ ಮಾತುಕತೆಗಳು ಆರಂಭವಾಗದೇ ಹೋಗುವ ಸಾಧ್ಯತೆ ಸಹ ಇದೆ. ಬಹುಪಾಲು ಯು.ಎಸ್ ಮತ್ತು ಯುರೋ ಕೂಟದ ದೇಶಗಳು ಇಸ್ರೇಲ್ ಮೇಲೆ ದಾಳಿ ನಿಲ್ಲಿಸಲು ಒತ್ತಡ ಹೇರಬಹುದು ಎಂದು ನಿರೀಕ್ಷಿಸಬಹುದು. ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ ಡಬ್ಲ್ಯೂ.ಎಚ್.ಒ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆ ಯುನಿಸೆಫ್ ಮತ್ತು ವಿಶ್ವ ಆಹಾರ ಕಾರ್ಯಕ್ರಮ ಸಂಸ್ಥೆಗಳು ಲೆಬನಾನ್ ದಾಳಿ ಸೃಷ್ಟಿಸಿದ ಬೀಕರ ಸ್ಥಿತಿ ಬಗ್ಗೆ ಕಳವಳ ವ್ಯಕ್ತ ಪಡಿಸಿವೆ. ಇರಾನ್ ಸಹ ಒತ್ತಡ ಮುಂದುವರೆಸುತ್ತಲೇ ಲೆಬನಾನ್ ಕಾರಣಕ್ಕೆ ಮಾತುಕತೆ ಮುರಿದು ಬೀಳದಂತೆ ಎಚ್ಚರವಹಿಸಬಹುದು.

ಕಾರ್ಟೂನ್ ಕೃಪೆ : ಸತೀಶ ಆಚಾರ್ಯ
ಇರಾನ್ ನ 10 ಅಂಶಗಳು ಮಾತುಕತೆಯ ಆಧಾರವಾಗಿರುವುದೇ ಅದಕ್ಕೆ ದೊಡ್ಡ ವಿಜಯವೆನ್ನಬೇಕು. ಇವುಗಳಲ್ಲಿ ಅರ್ಧದಷ್ಟು ಅಂಶಗಳನ್ನು ಯು.ಎಸ್ ಒಪ್ಪಿಕೊಂಡರೂ ಇರಾನ್ ಗೆ ವಿಜಯವೇ. ಇವುಗಳಲ್ಲಿ – ಒಮನ್ ಜತೆ ಹೊರ್ಮುಝ್ ಜಲಸಂಧಿಯ ಮೂಲಕ ಸಾಗಾಣಿಕೆಯ ಇರಾನ್ ನಿರ್ವಹಣೆ, ಎಲ್ಲ ಯು.ಎಸ್ ಮತ್ತು ಅಂತರಾಷ್ಟ್ರೀಯ ದಿಗ್ಬಂಧನದ ಕ್ರಮಗಳನ್ನು ತೆಗೆದು ಹಾಕುವುದು, ಇರಾನ್ ಮೇಲೆ ದಾಳಿ ನಡೆಯದಂತೆ ಖಾತರಿ, ಲೆಬನಾನ್ ಮೇಲೆ ಇಸ್ರೇಲಿ ದಾಳಿ ನಿಲುಗಡೆ – ಈ ಅಂಶಗಳ ಕುರಿತು ಇರಾನ್ ಖಂಡಿತ ಪಟ್ಟು ಹಿಡಿಯುವುದು ಎಂದು ನಿರೀಕ್ಷಿಸಬಹುದು. ಯುರೇನಿಯಂ ಸಂಸ್ಕರಣದ ಮೇಲೆ ನಿರ್ಬಂಧ ಮತ್ತಿತರ ಅಂಶಗಳ ಬಗ್ಗೆ ಇರಾನ್ ಸಮಜಾಯಿಷಿ ಮಾಡಬಹುದು.
ಹೊರ್ಮುಝ್ ಜಲಸಂಧಿಯ ಮೇಲೆ ಇರಾನ್ ಸಾಧಿಸಿರುವ ನಿಯಂತ್ರಣ ಮತ್ತು ಅದರ ಜಾಗತಿಕ ಆರ್ಥಿಕಕ್ಕೆ ಅದರ ನಿರ್ಣಾಯಕ ಮಹತ್ವದಿಂದಾಗಿ ಶಾಂತಿ ಒಪ್ಪಂದ ಅದರ ಪರವಾಗಿ ಇರುವ ಸಾಧ್ಯತೆಯಿದೆ.
ಶಾಂತಿ ಮಾತುಕತೆ ನಡೆಯದೆ ಅಥವಾ ವಿಫಲವಾಗಿ, ಯುದ್ಧ ಮತ್ತೆ ತೀವ್ರವಾಗುವ ಅಪಾಯವಂತೂ ಇದ್ದೇ ಇದೆ. ಆದರೆ ಕದನ ವಿರಾಮಕ್ಕೆ ಮೇಲೆ ಹೇಳಿದ ಕಾರಣಗಳು ಮತ್ತೂ ತೀವ್ರವಾಗುವ ಸಾಧ್ಯತೆಯೂ ಇದೆ.
******************
