ಪ್ರೊ.ಪ್ರಭಾತ್ ಪಟ್ನಾಯಕ್
ಹಣವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜಾಗತಿಕವಾಗಿ ಕೊಂಡೊಯ್ಯುವವರ, ಅಂದರೆ ಅಂತರಾಷ್ಟ್ರೀಯ ಸಟ್ಟಾ ವ್ಯವಹಾರಗಳಲ್ಲಿ ತೊಡಗಿರುವವರ ‘ನಿರೀಕ್ಷೆ’ ಗಳು ಕರೆನ್ಸಿಯ ಮೌಲ್ಯ ಕುಸಿಯಲು ಒಂದು ಕಾರಣ. ಇಲ್ಲೊಂದು ಗಮನಾರ್ಹವಾದ ವಿದ್ಯಮಾನವಿದೆ: ತೈಲದ ಎದುರು ಡಾಲರ್ ಮೌಲ್ಯದ ಕುಸಿತವು ಇತರ ಕರೆನ್ಸಿಗಳ ಮೌಲ್ಯವು, ಅದರಲ್ಲೂ ವಿಶೇಷವಾಗಿ ರೂಪಾಯಿತಂತಹ ಜಾಗತಿಕ ದಕ್ಷಿಣದ ಕರೆನ್ಸಿಗಳ ಮೌಲ್ಯವು ಅದೇ ಡಾಲರ್ ಎದುರೇ ಕುಸಿಯಲು ಕಾರಣವಾಗುತ್ತದೆ. ಯುದ್ಧಕ್ಕೂ ಮುನ್ನವೇ ಡಾಲರ್‌ಗೆ ಎದುರಾಗಿ ಅದಾಗಲೇ ಇದ್ದ ಸಟ್ಟಾಕೋರ ಚಲನೆಯಿಂದಾಗಿ ಕುಸಿಯಲಾರಂಭಿಸಿದ್ದ ರೂಪಾಯಿಯ ಮೌಲ್ಯ ಯುದ್ಧದ ಕಾರಣದಿಂದಾಗಿ ಆದ ತೈಲ ಬೆಲೆ ಏರಿಕೆ ಮತ್ತು ಅದರ ಪರಿಣಾಮವಾಗಿ “ಸುರಕ್ಷತೆ”ಗಾಗಿ ಡಾಲರ್ ಪಲಾಯನದಿಂದಾಗಿ ಮತ್ತಷ್ಟು ಹೆಚ್ಚಿತು. ಈ ಕುಸಿತವು ಇದೇ ವೇಗದಲ್ಲಿ ಮುಂದುವರಿಯಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ನಿರೀಕ್ಷಿಸುತ್ತಾರೆ. ಅಂದರೆ ಭಾರತದಲ್ಲಿ ನಾವೀಗ ಉದಾರವಾದಿ ಅರ್ಥವ್ಯವಸ್ಥೆಯ ಹಾನಿಕಾರಕ ಪರಿಣಾಮಗಳನ್ನು ರೂಪಾಯಿ ಮೌಲ್ಯದ ಕುಸಿತದ ರೂಪದಲ್ಲಿ ಕಾಣುತ್ತಿದ್ದೇವೆ. ಆದರೆ ಈ ಪರಿಸ್ಥಿತಿಯು ನವ-ಉದಾರವಾದಿ ಆಳ್ವಿಕೆಯಿಂದ ದೂರ ಸರಿಯುವ ಒಂದು ಬಹು ದೊಡ್ಡ ಅವಕಾಶವನ್ನು ಕೂಡ ತೆರೆದಿಟ್ಟಿದೆ. ಆದರೇನು ಮಾಡೋಣ, ಮೋದಿ ಸರ್ಕಾರ ಅನುಸರಿಸುತ್ತಿರುವ ಮಾರ್ಗವು ಸಂಪೂರ್ಣವಾಗಿ ಭಿನ್ನವಾಗಿದೆ.
ಅನು: ಕೆ ಎಂ ನಾಗರಾಜ್
ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಆರಂಭವಾದಾಗಿನಿಂದ ಏಷ್ಯಾದ ಬಹತೇಕ ಕರೆನ್ಸಿಗಳು ಯುಎಸ್ ಡಾಲರ್ ಎದುರು ಒಂದು ಗಮನಾರ್ಹ ಮಟ್ಟದಲ್ಲಿ ಕುಸಿದಿವೆ. ಇವುಗಳಲ್ಲಿ ಅತಿ ಕೆಟ್ಟ ಸಾಧನೆ ಬಹುಶಃ ರೂಪಾಯಿಯದ್ದೇ ಎಂದು ತೋರುತ್ತದೆ. ಯುದ್ಧ ಆರಂಭವಾಗುವ ಹಿಂದಿನ ದಿನ (ಫೆಬ್ರವರಿ 27) ಡಾಲರ್ ಎದುರು ರೂಪಾಯಿಯು 91.01 ಮಟ್ಟದಿಂದ ಮಾರ್ಚ್ 20ರ ವೇಳೆಗೆ 93.73 ಮಟ್ಟಕ್ಕೆ ಇಳಿದಿತ್ತು. ಕುಸಿತದ ಹಿಂದಿರುವ ತಕ್ಷಣದ ಕಾರಣ: ಭಾರತವು ತೈಲ ಮತ್ತು ಅನಿಲದ ದೊಡ್ಡ ಆಮದುದಾರ ದೇಶ. ಈ ತೈಲ ಮತ್ತು ಅನಿಲದ ಹೆಚ್ಚಿನ ಭಾಗವು ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತದೆ. ಹಾರ್ಮುಜ್ ಮುಚ್ಚಿದ ಕಾರಣದಿಂದಾಗಿ ಭಾರತದಲ್ಲಿ ಈ ಸರಕುಗಳ ಲಭ್ಯತೆ ಕಡಿಮೆಯಾಗುವುದಲ್ಲದೆ, ಭಾರತದ ಪಾವತಿ ಶೇಷದ (balance of payments – ಆಮದು ಮತ್ತು ರಫ್ತುಗಳ ವ್ಯತ್ಯಾಸ) ಮೇಲೆ ಮತ್ತು ಅದರಿಂದ ರೂಪಾಯಿ ಮೌಲ್ಯದ ಮೇಲೆ ಒತ್ತಡ ಬೀಳುತ್ತದೆ. ಇದರ ಜತೆಗೆ ಅಧಿಕವಾಗಿ ಇತರ ಅಂಶಗಳು ಸೇರಿಕೊಳ್ಳುತ್ತವೆ. ಉದಾಹರಣೆಗೆ ನಮ್ಮ ಪಾವತಿ ಶೇಷವನ್ನು ಚುಕ್ತಾ ಮಾಡುವ ಪ್ರಮುಖ ಮೂಲವಾಗಿದ್ದ ಹಣ ರವಾನೆಯ ಒಳಹರಿವು ನಿಂತಿದೆ.

ನಮ್ಮ ಚಾಲ್ತಿ ಖಾತೆಯ ಶಿಲ್ಕು ಇದ್ದಕ್ಕಿದ್ದಂತೆ ದುಃಸ್ಥಿತಿಗೆ ತಿರುಗಿದೆ ಎಂದೇನೂ ಅಲ್ಲ: ಕೇವಲ ಮೂರು ವಾರಗಳ ಯುದ್ಧವು ನಮ್ಮ ಚಾಲ್ತಿ ಖಾತೆಯ ಶಿಲ್ಕು ಪರಿಸ್ಥಿತಿಯನ್ನು ಹಠಾತ್ತಾಗಿ ದುಃಸ್ಥಿತಿಗೆ ತಿರುಗಿಸುವುದಿಲ್ಲ. ಆದರೆ, ಚಾಲ್ತಿ ಖಾತೆಯ ಶಿಲ್ಕು ಹದಗೆಡುತ್ತದೆ ಎಂಬ ‘ನಿರೀಕ್ಷೆಯ’ ಕಾರಣದಿಂದಾಗಿಯೇ ಭಾರತದಿಂದ ಹಣ (ಅಂದರೆ, ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯಾದ ವಿದೇಶಿ ಬಂಡವಾಳ) ಹೊರ ಹೋಗುತ್ತದೆ ಮತ್ತು ಅದರಿಂದಾಗಿ ರೂಪಾಯಿಯ ಮೌಲ್ಯ ಕುಸಿಯುತ್ತದೆ. ನಾವಿಲ್ಲಿ ಮಾತನಾಡುತ್ತಿರುವುದು ಹಣವನ್ನು (ಬಂಡವಾಳವನ್ನು) ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜಾಗತಿಕವಾಗಿ ಕೊಂಡೊಯ್ಯುವವರ ‘ನಿರೀಕ್ಷೆಗಳ’ ಬಗ್ಗೆ. ಅಮೆರಿಕವೇ ಸ್ವತಃ ಯುದ್ಧ ಹೂಡಿದೆ ಮತ್ತು ಈ ಯದ್ಧಕ್ಕೆ ಮೊದಲಿಗೆ ಅಮೆರಿಕದ ಯುದ್ಧೋನ್ಮಾದವೇ ಕಾರಣವಾಗಿದ್ದರೂ ಸಹ, ಡಾಲರ್‌ನ “ಸುರಕ್ಷತೆ”ಯ ಕಾರಣದಿಂದ ದಿಕ್ಕೆಟ್ಟವರಂತೆ ಅಮೆರಿಕದತ್ತ ಅವರು ಓಟ ಕಿತ್ತಿರುವುದು ವಿಪರ್ಯಾಸಕರವಾಗಿ ತೋರುತ್ತದೆ. ಇಲ್ಲೊಂದು ಗಮನಾರ್ಹವಾದ ವಿದ್ಯಮಾನವಿದೆ: ತೈಲದ ಎದುರು ಡಾಲರ್ ಮೌಲ್ಯದ ಕುಸಿತವು ಇತರ ಕರೆನ್ಸಿಗಳ, ಅದರಲ್ಲೂ ವಿಶೇಷವಾಗಿ ಜಾಗತಿಕ ದಕ್ಷಿಣದ ಕರೆನ್ಸಿಗಳ, ಮೌಲ್ಯದ ಕುಸಿತಕ್ಕೆ ಕಾರಣವಾಗುತ್ತದೆ, ಅದೇ ಡಾಲರ್ ಎದುರಿಗೆ!
ಇದು ಮುಖ್ಯವಾದ ಒಂದು ತೊಡಕಿನ ಸೂಚನೆಯೇ ಸರಿ. ಕರೆನ್ಸಿಯ ಯಾವುದೇ ಮೌಲ್ಯ ಇಳಿಕೆಯು ದುಡಿಯುವ ಜನರ ಹಣ ವರಮಾನಗಳ ಹೋಲಿಕೆಯಲ್ಲಿ ಆಮದು ವೆಚ್ಚಗಳನ್ನು ಹೆಚ್ಚಿಸುವ ಮೂಲಕ ಹಣದುಬ್ಬರ ದರವನ್ನು ಏರಿಸುತ್ತದೆ (ಈ ಹಣ ವರಮಾನಗಳು ಅದೇ ಸಮಯದಲ್ಲಿ ಒಂದು ವೇಳೆ ಏರಿಕೆಯಾದರೆ, ಕರೆನ್ಸಿಯ ಅಪಮೌಲ್ಯದಿಂದ ಪ್ರೇರಿತವಾದ ಹಣದುಬ್ಬರವು ಕೊನೆಗೊಳ್ಳುವುದೇ ಇಲ್ಲ), ನಂತರ ಅದು “ರವಾನಿಸಲ್ಪಡುತ್ತದೆ”. ಈ ರೀತಿಯಲ್ಲಿ ಜಾಗತಿಕ ದಕ್ಷಿಣದ ದೇಶಗಳು, ಡಾಲರ್ ಕರೆನ್ಸಿಯಲ್ಲಿ ನಮೂದಿತವಾಗಿರುವ ತೈಲ ಬೆಲೆಗಳು ಏರಿಕೆಯಾದ ಎಲ್ಲ ಸಂದರ್ಭಗಳಲ್ಲೂ ಎರಡು ಮೂಲಗಳಿಂದ ಹಣದುಬ್ಬರವನ್ನು ಎದುರಿಸುತ್ತವೆ: ಮೊದಲನೆಯದು, ಈ ದೇಶಗಳ ಕರೆನ್ಸಿಗಳ ವಿನಿಮಯ ದರಗಳು ಡಾಲರ್ ಎದುರಿಗೆ ಅಪಮೌಲ್ಯವಾಗುವುದಿಲ್ಲ ಎಂಬ ನೆಲೆಯಲ್ಲಿಯೂ ಸಹ, ಡಾಲರ್ ಕರೆನ್ಸಿಯಲ್ಲಿರುವ ತೈಲ ಬೆಲೆಯ ನೇರ ಏರಿಕೆಯಿಂದ ಉಂಟಾಗುವ ಹಣದುಬ್ಬರ; ಎರಡನೆಯದು, ಡಾಲರ್‌ಗೆ ಎದುರಾಗಿ ಈ ಕರೆನ್ಸಿಗಳ ವಿನಿಮಯ ದರಗಳ ಅಪಮೌಲ್ಯದಿಂದ ಉದ್ಭವವಾಗುವ ಹಣದುಬ್ಬರವು ಆಮದು ಮಾಡಿಕೊಂಡ ಇತರ ಎಲ್ಲ ಲಾಗುವಾಡುಗಳ (ಇವುಗಳ ವಿಶ್ವ ಬೆಲೆಗಳು ಡಾಲರ್ ಕರೆನ್ಸಿಯಲ್ಲಿರುತ್ತವೆ) ವೆಚ್ಚಗಳನ್ನು ಹೆಚ್ಚಿಸುತ್ತದೆ, ಮತ್ತು ಇದು ತೈಲದ ಆಮದು ವೆಚ್ಚವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಉದಾಹರಣೆಗೆ, ಡಾಲರ್ ಕರೆನ್ಸಿಯಲ್ಲಿ ನಮೂದಿತವಾಗಿರುವ ತೈಲ ಬೆಲೆಗಳು ಶೇ. 10ರಷ್ಟು ಏರಿಕೆಯಾಗಿದ್ದರೆ, ಆಗ ಸಾಮಾನ್ಯವಾಗಿ ಅಮೆರಿಕದ ಬೆಲೆಗಳಲ್ಲಿ ಶೇ. 5ರ ಏರಿಕೆಗೆ ಕಾರಣವಾಗಬಹುದು; ಆದರೆ ಅದು ಪರಿಧಿಯ ದೇಶಗಳಲ್ಲಿ ಸಾಮಾನ್ಯ ಬೆಲೆ ಮಟ್ಟದ ಶೇ. 5ಕ್ಕಿಂತ ಹೆಚ್ಚಿನ ಏರಿಕೆಗೆ ಕಾರಣವಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮುಂದುವರೆದ ದೇಶಗಳಲ್ಲಿ ಉಂಟಾಗುವ ಈ ರೀತಿಯ ಹಣದುಬ್ಬರವು ಪರಿಧಿಯ ದೇಶಗಳಲ್ಲಿ “ಹಣದುಬ್ಬರ ಗುಣಕ”(inflation multiplier)ದಿಂದಾಗಿ ಇನ್ನೂ ಹೆಚ್ಚಿನ ಪ್ರಮಾಣದ ಹಣದುಬ್ಬರವನ್ನು ಉಂಟುಮಾಡುತ್ತದೆ.
ಸಟ್ಟಾ ಮಂದಿಯ ‘ನಿರೀಕ್ಷೆ’ ಮತ್ತು ಕರೆನ್ಸಿ ಮೌಲ್ಯ
ರೂಪಾಯಿಯ ವಿರುದ್ಧ ಉಂಟಾಗಿರುವ ಸಟ್ಟಾಕೋರ ಭಾವನೆ ರಿಸರ್ವ್ ಬ್ಯಾಂಕಿನ ಗಣನೀಯ ಮಧ್ಯಪ್ರವೇಶದ ಹೊರತಾಗಿಯೂ ರೂಪಾಯಿಯ ಕುಸಿತ ಸಂಭವಿಸುವಷ್ಟು ಪ್ರಬಲವಾಗಿದೆ. ರೂಪಾಯಿಯ ಮೌಲ್ಯವನ್ನು ಸ್ಥಿರಗೊಳಿಸಲು ಇರಾನ್ ವಿರುದ್ಧ ಯುದ್ಧ ಆರಂಭವಾದಾಗಿನಿAದ ಆರ್‌ಬಿಐ 20 ಬಿಲಿಯನ್ ಮೊತ್ತದ ಡಾಲರ್ ಕರೆನ್ಸಿಯನ್ನು ಭಾರತದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ ಎಂದು ವರದಿಯಾಗಿದೆ. ಅಷ್ಟಾಗಿಯೂ ರೂಪಾಯಿಯ ಈ ಮಟ್ಟದ ಕುಸಿತವನ್ನು ತಡೆಯಲಾಗಿಲ್ಲ. ಖಚಿತವಾಗಿ ಹೇಳುವುದಾದರೆ, ಅಂತಹ ಒಂದು ಹಸ್ತಕ್ಷೇಪ ಇಲ್ಲದಿದ್ದರೆ ರೂಪಾಯಿಯ ಕುಸಿತವು ಇನ್ನೂ ಹೆಚ್ಚು ತೀವ್ರವಾಗಿರುತ್ತಿತ್ತು. ಮಧ್ಯಪ್ರವೇಶದ ನಂತರವೂ ಈ ಪರಿಯ ಕುಸಿತ ಸಂಭವಿಸಿರುವ ಅಂಶವು ರೂಪಾಯಿ ವಿರುದ್ಧದ ಸಟ್ಟಾ ಭಾವನೆ ಅದೆಷ್ಟು ಪ್ರಬಲವಾಗಿದೆ ಎಂಬುದನ್ನು ಸೂಚಿಸುತ್ತದೆ.
ರೂಪಾಯಿಯ ವಿರುದ್ಧ ಪ್ರಸ್ತುತ ಬಲವಾಗಿ ಕಂಡುಬರುವ ಈ ಸಟ್ಟಾಕೋರ ಭಾವನೆಯ ಒಂದು ಕಾರಣವೆಂದರೆ, ಈ ಭಾವನೆಯು ಇರಾನ್ ಯುದ್ಧಕ್ಕೂ ಮುಂಚೆಯೇ ಆರಂಭವಾಗಿತ್ತು ಎಂಬ ಅಂಶವೇ. ಯುದ್ಧಕ್ಕೂ ಮುನ್ನವೇ ಡಾಲರ್‌ಗೆ ಎದುರಾಗಿ ರೂಪಾಯಿಯ ಮೌಲ್ಯ ಕುಸಿಯಲಾರಂಭಿಸಿತ್ತು: ಕೇವಲ ಎರಡು ತಿಂಗಳ ಅವಧಿಯಲ್ಲಿ, ಜನವರಿ 1, 2026 ರಂದು 89.94 ಮಟ್ಟದಲ್ಲಿದ್ದ ರೂಪಾಯಿಯು ಫೆಬ್ರವರಿ 27, 2026 ರಂದು 91.01 ಮಟ್ಟಕ್ಕೆ ಇಳಿದಿತ್ತು. ಫೆಬ್ರವರಿ 28 ರಂದು ಇರಾನ್ ಯುದ್ಧ ಆರಂಭವಾಯಿತು. ಯುದ್ಧದ ಕಾರಣದಿಂದಾಗಿ ಆದ ತೈಲ ಬೆಲೆ ಏರಿಕೆ ಮತ್ತು ಅದರ ಪರಿಣಾಮವಾಗಿ “ಸುರಕ್ಷತೆ”ಗಾಗಿ ಡಾಲರ್ ಪಲಾಯನ ಅದಾಗಲೇ ಇದ್ದ ಸಟ್ಟಾಕೋರ ಚಲನೆಯಿಂದಾಗಿ ಆಗುತ್ತಿದ್ದ ರೂಪಾಯಿ ಕುಸಿತವನ್ನು ಮತ್ತಷ್ಟು ಹೆಚ್ಚಿಸಿತು. ಈ ಕುಸಿತವು ಇದೇ ವೇಗದಲ್ಲಿ ಮುಂದುವರಿಯಲಿದೆ ಮತ್ತು ಮುಂದಿನ ದಿನಗಳಲ್ಲಿ ಡಾಲರ್ ಎದುರು ರೂಪಾಯಿಯು 95ರ ಕೆಳಗೆ ಇಳಿಯಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ನಿರೀಕ್ಷಿಸುತ್ತಾರೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸ್ತುತ ಸುಮಾರು $700 ಬಿಲಿಯನ್ ವಿದೇಶಿ ವಿನಿಮಯ ಮೀಸಲುಗಳನ್ನು ಹೊಂದಿದ್ದರೂ ಕೂಡ ಇದು ಸಂಭವಿಸದೆ ಇರಲಾರದು.
ರೂಪಾಯಿಯ ಕುಸಿತವು ನಮ್ಮನ್ನು ಅತ್ಯಂತ ಕುತೂಹಲಕಾರಿಯಾದ ಒಂದು ಅಂಶದತ್ತ ಕೊಂಡೊಯ್ಯುತ್ತದೆ. ಅಂದರೆ, ಸಟ್ಟಾಕೋರರು ಕರೆನ್ಸಿಯ ವಿರುದ್ಧ ತಿರುಗಿಬಿದ್ದಾಗ ಅದರ ಮೌಲ್ಯದ ಕುಸಿತವನ್ನು ತಡೆಯುವಲ್ಲಿ ದೇಶವು ಹೊಂದಿರುವ ಬೃಹತ್ ಗಾತ್ರದ ವಿದೇಶಿ ವಿನಿಮಯ ಮೀಸಲುಗಳು ಕೂಡ ಅಸಮರ್ಥವಾಗುತ್ತವೆ ಎಂಬ ಸಂಗತಿ.. ಕರೆನ್ಸಿಯ ಮೌಲ್ಯದ ಕುಸಿತವನ್ನು ಒಂದು ವೇಳೆ ಅವರು ನಿರೀಕ್ಷಿಸುತ್ತಿದ್ದರೆ ಮತ್ತು ದೇಶದಿಂದ ಹಣವನ್ನು ಕೊಂಡೊಯ್ಯಲು ಅವರು ಪ್ರಾರಂಭಿಸಿದರೆ ಅಥವಾ ಬೇರೆ ಯಾವುದೇ ಕಾರಣದ ಮೇಲೆ ಅವರು ಹಾಗೆ ಮಾಡಿದರೂ ಸಹ, ಆಗ ಅದನ್ನು ತಡೆಯುವುದಕ್ಕಾಗಿ ದೇಶದ ವಿದೇಶಿ ವಿನಿಮಯ ಮೀಸಲುಗಳನ್ನು ಬಳಸುವ ಕ್ರಮವು ಕರೆನ್ಸಿಯ ಮೌಲ್ಯದಲ್ಲಿ ಮತ್ತಷ್ಟು ಕುಸಿತದ ನಿರೀಕ್ಷೆಯನ್ನು ಮತ್ತಷ್ಟು ಬಲಪಡಿಸಬಹುದಷ್ಟೇ. ಇದನ್ನು ಅರಿತುಕೊಂಡು, ಸಟ್ಟಾಕೋರರ “ಮನೋಭಾವ” ಕರೆನ್ಸಿಯ ವಿರುದ್ಧವಾಗಿದ್ದಾಗ ಕರೆನ್ಸಿಯ ಮೌಲ್ಯವನ್ನು ಕಾಪಾಡಿಕೊಳ್ಳಲು ಕೇಂದ್ರ ಬ್ಯಾಂಕ್ ತನ್ನ ವಿದೇಶಿ ವಿನಿಮಯ ಮೀಸಲುಗಳನ್ನು ಬಳಸಿಕೊಳ್ಳುವಲ್ಲಿ ಹೆಚ್ಚು ಜಾಗರೂಕವಾಗಿಯೇ ಇರುತ್ತದೆ. ಆದ್ದರಿಂದ, ಒಂದು ದೇಶವು ಬೃಹತ್ ಪ್ರಮಾಣದ ವಿದೇಶಿ ವಿನಿಮಯ ಮೀಸಲುಗಳನ್ನು ಹೊಂದಿದ್ದರೂ ಸಹ, ಅದರ ಕರೆನ್ಸಿಯ ಮೌಲ್ಯವು ಕುಸಿಯುತ್ತಲೇ ಹೋಗಬಹುದು. ಹೊರಗಿನ ಸಾಲ ತೀರಿಸುವುದಕ್ಕಾಗಿ ಅಥವಾ ಪಾವತಿ ಶೇಷವನ್ನು ಚುಕ್ತಾ ಮಾಡುವುದಕ್ಕಾಗಿ (ವಾಸ್ತವವಾಗಿ ಪಾವತಿಸಲು), ಅಂದರೆ, ಅರ್ಥವ್ಯವಸ್ಥೆಯಲ್ಲಿ ದ್ರವ್ಯತೆಗಾಗಿ (ಹಣದ ಲಭ್ಯತೆಗಾಗಿ) ವಿದೇಶಿ ವಿನಿಮಯ ಮೀಸಲುಗಳು ಉಪಯೋಗಕ್ಕೆ ಬರುತ್ತವೆ. ಆದರೆ, ಕುಸಿತಕ್ಕೆ ಕಾರಣವಾಗುವಂಥಹ ಒಂದು “ಮನೋಭಾವ” ಮಾರುಕಟ್ಟೆಯಲ್ಲಿ ನೆಲೆಸಿದ್ದರೆ, ಕರೆನ್ಸಿಯ ಮೌಲ್ಯದ ಕುಸಿತವನ್ನು ತಡೆಯುವಲ್ಲಿ ಮೀಸಲುಗಳು ಹೆಚ್ಚು ಉಪಯೋಗವಾಗುವುದಿಲ್ಲ.
“ಅಗ್ಗದ ಸಾಲ ನೀಡಲು ದುಬಾರಿ ಸಾಲ ಪಡೆದಂತೆ’
ಇದಲ್ಲದೆ, ವಿದೇಶಿ ವಿನಿಮಯ ಮೀಸಲುಗಳು ದೇಶದ ಚಾಲ್ತಿ ಖಾತೆಯ ಸ್ವಂತ ಮಿಗುತಾಯದ ಬದಲು ವಿದೇಶಿ ಹೂಡಿಕೆದಾರರ ಹಣಕಾಸಿನ ಒಳಹರಿವಿನಿಂದ ನಿರ್ಮಿಸಲ್ಪಟ್ಟಿವೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ, ಈ ಮೀಸಲುಗಳ ಮೇಲೆ ದೇಶವು ಸಾಮಾನ್ಯವಾಗಿ ಗಳಿಸುವ ಬಡ್ಡಿ ದರವು ಈ ಹಣಕಾಸು ತಂದವರಿಗೆ ದೇಶವು ಪಾವತಿಸುವ ದರಕ್ಕೆ ಹೋಲಿಸಿದರೆ, ತೀರಾ ಕೆಳಮಟ್ಟದಲ್ಲಿರುವುದು ಕಂಡುಬರುತ್ತದೆ. ಆಗ ದೊಡ್ಡ ಸಾಲ ಆಧಾರಿತ ವಿದೇಶಿ ವಿನಿಮಯ ಮೀಸಲುಗಳನ್ನು ಹೊಂದುವುದು ಇನ್ನೂ ಹೆಚ್ಚು ಪ್ರಶ್ನಾರ್ಹವಾಗುತ್ತದೆ. ಉದಾಹರಣೆಗೆ, ಭಾರತದಲ್ಲಿ ಆರ್‌ಬಿಐ ಹೊಂದಿರುವ ವಿದೇಶಿ ವಿನಿಮಯ ಮೀಸಲುಗಳ ಮೇಲೆ ಗಳಿಸಿದ ಸರಾಸರಿ ದರವು ಶೇ. 1.5 ರಷ್ಟನ್ನೂ ಮೀರುವುದಿಲ್ಲ. ಆದರೆ ಹೊರಗಿನಿಂದ ಹಣಕಾಸು ತಂದ ಬಂಡವಾಳಗಾರರಿಗೆ ಪಾವತಿಸುವ ಸರಾಸರಿ ದರವು (ಬಂಡವಾಳ ಮೌಲ್ಯವರ್ಧನೆಯೂ ಸೇರಿದಂತೆ) ಕನಿಷ್ಠ ಶೇ. 7 ರಿಂದ ಶೇ. 8 ರವರೆಗೂ ಇದೆ. ಆದ್ದರಿಂದ ಹಣಕಾಸಿನ ಒಳಹರಿವಿನ ಮೂಲಕ ಸಂಗ್ರಹಿಸಿದ ವಿದೇಶಿ ವಿನಿಮಯ ಮೀಸಲಿನ ಪ್ರತಿ ಯೂನಿಟ್ “ಅಗ್ಗದ ಸಾಲ ನೀಡಲು ದುಬಾರಿ ಸಾಲ” ಪಡೆದಂಥಾಗುತ್ತದೆ. ಮತ್ತು, ಈ ಮೀಸಲಿನ ಪ್ರಮಾಣವು ದೊಡ್ಡದಾದಷ್ಟೂ, ದೇಶದ ಮೇಲೆ ಆಗುವ “ಸೋರಿಕೆ”ಯ ಪ್ರಮಾಣವೂ ದೊಡ್ಡದೇ ಇರುತ್ತದೆ.
ಸಾಲದ ಹಣದಿಂದ ಸಂಗ್ರಹಿಸಿದ ಬೃಹತ್ ಮೀಸಲುಗಳು ತಮ್ಮದೇ ಆದ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಆದ್ದರಿಂದ, ಇಲ್ಲಿ ಮುಖ್ಯವಾದ ವಿಷಯವೆಂದರೆ, ಸುಂಕಗಳು ಮತ್ತು ಪರಿಮಾಣಾತ್ಮಕ ವ್ಯಾಪಾರ ನಿರ್ಬಂಧಗಳನ್ನು ತ್ಯಜಿಸುವ, ದೇಶದ ಒಳಕ್ಕೆ ಮತ್ತು ಹೊರಗೆ ಹಣಕಾಸು ಮುಕ್ತವಾಗಿ ಹರಿಯಲು ಅವಕಾಶ ನೀಡುವ, ಮತ್ತು, ವಿನಿಮಯ ದರ ಮತ್ತು ಅದರಿಂದ ಲಕ್ಷಾಂತರ ದುಡಿಯುವ ಜನರ ಜೀವನ ಪರಿಸ್ಥಿತಿಗಳು ಅಂತಾರಾಷ್ಟ್ರೀಯ ಸಟ್ಟಾ ಮಂದಿಯ ತೀಟೆಗೆ ಒಳಪಟ್ಟಿರುವ “ಉದಾರ” ವ್ಯಾಪಾರ ಮತ್ತು ಬಂಡವಾಳ ಖಾತೆಯನ್ನು ಒಳಗೊಂಡ ಒಂದು ವ್ಯವಸ್ಥೆಯ ನ್ಯೂನತೆಗಳನ್ನು ಇಲ್ಲಿ ಒತ್ತಿಹೇಳಭೇಕಾಗುತ್ತದೆ. ಈ ನ್ಯೂನತೆಗಳು ನವ-ಉದಾರವಾದಿ ಅರ್ಥವ್ಯವಸ್ಥೆಯ ಲಕ್ಷಣಗಳೂ ಹೌದು. ಆದ್ದರಿಂದ, ಭಾರತದಲ್ಲಿ ನಾವೀಗ ಉದಾರವಾದಿ ಅರ್ಥವ್ಯವಸ್ಥೆಯ ಹಾನಿಕಾರಕ ಪರಿಣಾಮಗಳನ್ನು ರೂಪಾಯಿ ಮೌಲ್ಯದ ಕುಸಿತದ ರೂಪದಲ್ಲಿ ಕಾಣುತ್ತಿದ್ದೇವೆ.
ದೊಡ್ಡ ಅವಕಾಶ ಕೂಡ ತೆರೆದಿದೆ
ಆದರೆ ಈ ಪರಿಸ್ಥಿತಿಯು ನವ-ಉದಾರವಾದಿ ಆಳ್ವಿಕೆಯಿಂದ ದೂರ ಸರಿಯುವ ಒಂದು ಬಹು ದೊಡ್ಡ ಅವಕಾಶವನ್ನು ಕೂಡ ತೆರೆದಿಟ್ಟಿದೆ. ಡೊನಾಲ್ಡ್ ಟ್ರಂಪ್ ಅವರ ಸುಂಕ ದಾಳಿಯು ಭಾರತವೂ ಸೇರಿದಂತೆ ಇತರ ದೇಶಗಳು ತಮ್ಮ ಚಾಲ್ತಿ ಖಾತೆ ಬಾಕಿಯನ್ನು ತೀರಿಸಲು ತಮ್ಮದೇ ಸುಂಕಗಳನ್ನು ವಿಧಿಸುವ ಹಾದಿಯನ್ನು ತೆರೆಯುತ್ತದೆ. ಅದೇ ರೀತಿಯಲ್ಲಿ, ಅಮೆರಿಕವು ಪ್ರಸ್ತುತ ವಿಧಿಸುತ್ತಿರುವ ನಿರ್ಬಂಧಗಳನ್ನು ಎದುರಿಸುತ್ತಿರುವ ಬಹಳಷ್ಟು ಸಂಖ್ಯೆಯ ದೇಶಗಳು ಒಟ್ಟಿಗೆ ಸೇರುವ ಮತ್ತು ಭಾರತದಂತಹ ಇತರ ದೇಶಗಳೊಂದಿಗೆ ತಮ್ಮ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಗಳನ್ನು ರೂಪಿಸಿಕೊಳ್ಳುವ ಒಂದು ಅವಕಾಶವನ್ನು ಒದಗಿಸಿದೆ. ತಮ್ಮ ವಹಿವಾಟುಗಳನ್ನು ಇತ್ಯರ್ಥಪಡಿಸಿಕೊಳ್ಳುವ ಸಾಧನವಾಗಿ ಮತ್ತು ತಮ್ಮ ಪಾವತಿ ಶೇಷವನ್ನು ಇತ್ಯರ್ಥಪಡಿಸಿಕೊಳ್ಳುವ ಸಾಧನವಾಗಿ ಅಮೆರಿಕದ ಡಾಲರ್ ಬಳಕೆಯನ್ನು ತೊರೆಯುವುದು ಈ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಗಳ ಒಂದು ವಿಶಿಷ್ಟ ಲಕ್ಷಣವಾಗಿರಬೇಕು. ತಮ್ಮ ವಹಿವಾಟುಗಳನ್ನು ಡಾಲರ್ ಬದಲಿಗೆ ಪರಸ್ಪರರ ಕರೆನ್ಸಿಗಳ ಮೂಲಕವೇ ನಡೆಸಬೇಕು (ಅವುಗಳ ವಿನಿಮಯ ದರಗಳು ನಿಗದಿತವಾಗಿ ಮತ್ತು ಸ್ಥಿರವಾಗಿ ಇರಬೇಕು) ಮತ್ತು ಸರಕುಗಳನ್ನು ಪರಸ್ಪರ ಖರೀದಿಸುವ ಮೂಲಕ ಮತ್ತು ಪರಸ್ಪರ ಒಪ್ಪಂದಗಳ ಮೂಲಕ ಇತ್ಯರ್ಥಪಡಿಸಿಕೊಳ್ಳುವ ವರೆಗೆ ಶಿಲ್ಕುಗಳನ್ನು ಮುಂದಿನ ವರ್ಷಕ್ಕೆ ಕೊಂಡೊಯ್ಯುವAತಿರಬೇಕು. ಇದು ಡಾಲರ್‌ಗಳ ಅಗತ್ಯವನ್ನು ನಿವಾರಿಸುತ್ತದೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವನ್ನು ಆಕರ್ಷಿಸುವ ಮತ್ತು ದೇಶ-ದೇಶಗಳ ಅರ್ಥವ್ಯವಸ್ಥೆಗಳನ್ನು ಸಾಮ್ರಾಜ್ಯಶಾಹಿಗೆ ಅಧೀನಪಡುವ ಅಗತ್ಯವನ್ನು ನಿವಾರಿಸುತ್ತದೆ.
ಆದರೇನು ಮಾಡೋಣ, ಮೋದಿ ಸರ್ಕಾರ ಅನುಸರಿಸುತ್ತಿರುವ ಮಾರ್ಗವು ಸಂಪೂರ್ಣವಾಗಿ ಭಿನ್ನವಾಗಿದೆ. ಅದು ವಿಶ್ವದ ವಿವಿಧ ದೇಶಗಳೊಂದಿಗೆ ಹಲವಾರು ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುತ್ತಿದೆ. ಈ ಒಪ್ಪಂದಗಳು ಹೆಚ್ಚೆಂದರೆ ಭಾರತದ ವ್ಯಾಪಾರದ ಗಾತ್ರವನ್ನು ಹೆಚ್ಚಿಸಬಹುದೇ ವಿನಃ, ನಿವ್ವಳ ರಫ್ತುಗಳನ್ನು ಹೆಚ್ಚಿಸುವುದಿಲ್ಲ ಮತ್ತು ಅದರಿಂದ ದೇಶದೊಳಗೆ ಉದ್ಯೋಗದ ಪ್ರಮಾಣವೂ ಹೆಚ್ಚುವುದಿಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ, ಈ ಮುಕ್ತ ವ್ಯಾಪಾರ ಒಪ್ಪಂದಗಳು ಜಾಗತೀಕರಣಗೊಂಡ ಹಣಕಾಸು ಬಂಡವಾಳದ ಪ್ರಾಬಲ್ಯಕ್ಕೆ ಅಧೀನವಾಗಿರುವ ಅರ್ಥವ್ಯವಸ್ಥೆಯ ದಾಸ್ಯವನ್ನು ತಪ್ಪಿಸುವುದಿಲ್ಲ.

