– ಆರ್ ಜಿ ಹಳ್ಳಿ ನಾಗರಾಜ
ಷರ ಬರೆದಿವೆ ಯುದ್ಧಗಳಿಲ್ಲಿ ಮನು ಕುಲದ ನಾಶಕ್ಕೆ
ಕಿಲಕಿಲ ನಕ್ಕ ಹಾಲುಗಲ್ಲದ ಕಂದಮ್ಮಗಳು
ಅಮ್ಮನ ಎದೆಹಾಲು ಕುಡಿದು ಪುಳಕಗೊಂಡಾಗ
ಕೈ ತುತ್ತು ತಿನ್ನುವಾಗ ಬಂದೆರಗಿದ ಕ್ಷಿಪಣಿಯ
ಬೆಂಕಿಯುಂಡೆಗೆ ಜೀವಶವವಾಗಿವೆ. ಯುದ್ಧ
ಸೇಡು ದ್ವೇಷ ಅಹಂ ಮದ ಮತ್ಸರ ಹಠಮಾರಿತನದಲ್ಲಿ
ಮನುಷ್ಯ ಬದುಕಿಗೆಲ್ಲಿದೆ ಬೆಲೆ?
ಧರ್ಮದ ಮದ ಒಬ್ಬನಿಗೆ
ದೊಡ್ಡಪ್ಪನೆಂಬ ಠೀಂಕಾರ ಮತ್ತೊಬ್ಬನಿಗೆ
ಭೂಮಂಡಲದಧಿಪತಿಯ ಕನಸು ಇನ್ನೊಬ್ಬನಿಗೆ
ಆಧುನಿಕ ಭಸ್ಮಾಸುರರೆ ಇಲ್ಲಿ ಎಲ್ಲ. ಯುದ್ಧ
ವ್ಯಾಪಾರ ವ್ಯವಹಾರಗಳೆಲ್ಲಕ್ಕೂ ಗಣಿತ ಕಾಗುಣಿತ
ಮಾತುಗಳಿಗೂ ತೂಕದ ಬೊಟ್ಟುಗಳಲ್ಲಿ ಲೆಕ್ಕಾಚಾರ
ತಾವೆ ಕಟ್ಟೆಕಟ್ಟಿಕೊಂಡ ಜಗದೊಳಗೆ ಒಪ್ಪಂದದಾಟ
ಕುಣಿವ ಡಾಲರಿನದ್ದೆ ಇಲ್ಲಿ ರಾಕ್ಷಸದೋಟ
ಹಾವು ಏಣಿಯಾಟವಾಡುವ ದೊಡ್ಡಣ್ಣನಿಲ್ಲಿ ಸೂತ್ರದಾರ!
ಇದನ್ನೂ ಓದಿ: ಕರ್ನಾಟಕದಲ್ಲಿ ಆಟೋ LPG ಬಿಕ್ಕಟ್ಟು: ಚಾಲಕರ ಸಂಕಷ್ಟ, ಸರ್ಕಾರದ ಪ್ರತಿಕ್ರಿಯೆ ಏನು?
ಕಾಕ್ ಟೈಲ್ ಪಾರ್ಟಿಯಲ್ಲಿ ಕೃತಕ ಬುದ್ದಿಮತ್ತೆಯಾಟ
ಮಾತು ಹಸ್ತಲಾಘವ ; ಅರ್ಥವಾಗದ ಭಾಷೆಗೊಂದು ನಗು!
ದೇಶ ಅಡ ಇಟ್ಟವನದ್ದೆ ಹೆಜ್ಜೆಗುರುತು!
ಪಡೆದವನ್ಯಾರೋ ಕೊಟ್ಟವನ್ಯಾರೋ
ಲೆಕ್ಕ ಬರೆದಿಟ್ಟವನು ಮತ್ತಿನ್ಯಾರೋ
ಮದ್ದುಗಂಡಿನ ಮಾರಾಟ ಮಳಿಗೆಯಲ್ಲಿ ಮನುಷ್ಯರನ್ನು
ಕೊಳ್ಳುಬಾಕ ಸಂಸ್ಕೃತಿಯಲ್ಲಿ ಹರಾಜಿಗಿಟ್ಟ
ಹಡಬೆಗಳದ್ದೆ ದರ್ಬಾರು
ನಾಗಾಲೋಟದ ಕುದುರೆಗಳ ಲಗಾಮು ಹಿಡಿದ
ಸರದಾರಿಕೆಯ ಯಜಮಾನರು!
ಯಾಜಮಾನ್ಯದ ಹುಸಿನಗೆಕೋರನದ್ದೆ ಕ್ಷಣಕ್ಷಣದ ಲೆಕ್ಕ
ದುಷ್ಡ ಬುದ್ದಿಯನ ಕುಮ್ಮಕ್ಕಿನ ಆದೇಶ
ತನ್ನೊಡಲಲ್ಲಡಗಿದ ಮದ್ದುಗುಂಡುಗಳದ್ದೆ
ಸದ್ದು ಆರ್ಭಟ ಬೆಂಕಿಯುಂಡೆ
ಸಮವಸ್ತ್ರ ಪುಸ್ತಕ ಪೆನ್ನು ಪೆನ್ಸಿಲ್ಲುಗಳ ಸಂಗದಲ್ಲಿ
ಅಕ್ಷರ ಆಟೋಟದ ಕಲಿಕೆಯಲ್ಲಿ ನಲಿವ ಚಿಲಿಪಿಲಿ ಮಕ್ಕಳ
ದೇಗುಲಕ್ಕೆ ಗುರಿಯಿಟ್ಟ ಬಾಂಬು, ಕ್ಷಿಪಣಿ – ಕ್ಷಣಾರ್ಧದಲ್ಲಿ
ಸುಟ್ಟು ಕರಕಲಾದ ಮಕ್ಕಳ ಹೆಣರಾಶಿ, ಕತ್ತರಿಸಿದ ಕೈಕಾಲು
ರುಂಡ – ಮುಂಡಗಳ ಹುಡುಕಿ ಎದೆಗವಚಿ
ಆಕ್ರಂಧನಗೈವ ಅಮ್ಮಂದಿರ ಕಣ್ಣೀರಧಾರೆ
ನೂರಾರು ಕನಸುಗಣ್ಣಿನ ಮಕ್ಕಳ ಬಲಿ ಪಡೆದ
ರಾಕ್ಷಸ ಸಂತಾನಕ್ಕೆ ಕ್ಷಮೆ ಉಂಟೆ?
ಕಿವಿಗಡಚುಕ್ಕುವ ವಿಮಾನಗಳ ಶಬ್ದಾಡಂಬರದಲ್ಲಿ
ದ್ರೋಣ್ ಕ್ಷಿಪಣಿ ರಾಕೇಟ್ಟುಗಳ ದರ್ಬಾರಿನಲ್ಲಿ
ಉರುಳಿದ ಕಟ್ಟಡಗಳವಶೇಷದಲ್ಲಿ
ರಕ್ತದ ಜೀವದುಸಿರು – ಹೆಪ್ಪುಗಟ್ಟಿದ ನೆತ್ತರಿಗೆ
ಬೆಲೆ ಕಟ್ಟುವವರಾರು?
ಸಿಕ್ಕ ಶವಗಳಿಗೆ ಬಿಳಿಬಟ್ಟೆ ಸುತ್ತಿ ಲೆಕ್ಕ ಇಟ್ಟವರಾರು?
ಬತ್ತಿಹೋದ ಕಣ್ಣೀರಲ್ಲಿ ಅಳಲೂ ಜನರಿಲ್ಲದ
ಬಿಕೋ ಅನ್ನುವ ರಸ್ತೆಗಳಲ್ಲಿ
ಹಸಿದ ನಾಯಿಯೊಂದು ಹಸುಗೂಸ ಮಾಂಸ ಕಿತ್ತು ತಿನ್ನುವಾಗ
ಎಲ್ಲಿ ಅಡಗಿ ಕೂತಿರುವೆ ಮಾನವೀಯತೆಯೆ?
ಹೇಳಿಹೋಗು ನನಗಿಷ್ಟು ಉತ್ತರವ?
ಹೇಳಿ ಹೋಗು ಪ್ರಭುವೆ, ಹೇಳಿಹೋಗು ಉತ್ತರವ…
“ಗೆದ್ದವರ, ಸೋತವರ ಪಾಳಯದಲ್ಲೂ
‘ಸತ್ತವರು’ ಸಾಮಾನ್ಯ ಜನರೇ…”– ಬ್ರೆಕ್ಟ್
ಇದನ್ನೂ ನೋಡಿ: 1 ಲಕ್ಷ ಶಿಕ್ಷಕರು ಜನಗಣತಿಗೆ: ಶಿಕ್ಷಣ ವ್ಯವಸ್ಥೆಗೆ ದೊಡ್ಡ ಹೊಡೆತ? Janashakthi Media
