ಕೇರಳ ಚುನಾವಣೆಯ ಹೊತ್ತಿನಲ್ಲಿ ಎಲ್ಡಿಎಫ್ ಮತ್ತು ಯುಡಿಎಫ್ ಘೋಷಣಾಪತ್ರಗಳು ಜನರ ಮುಂದೆ ಎರಡು ವಿಭಿನ್ನ ಆಡಳಿತ ಮಾದರಿಗಳನ್ನು ಇಡುತ್ತವೆ. ‘ನವ ಕೇರಳಂ’ ದೃಷ್ಟಿಯಲ್ಲಿ ಕಲ್ಯಾಣ ಮತ್ತು ಅಭಿವೃದ್ಧಿಯನ್ನು ಒಟ್ಟಿಗೆ ಸಾಗಿಸುವ ಪ್ರಯತ್ನ ಎಲ್ಡಿಎಫ್ ಪ್ರಣಾಳಿಕೆಯಲ್ಲಿ ಕಾಣುತ್ತಿದ್ದರೆ, ಯುಡಿಎಫ್ ಪ್ರಣಾಳಿಕೆಯು ತಕ್ಷಣದ ಆರ್ಥಿಕ ನೆರವನ್ನು ಒದಗಿಸುವ “ಗ್ಯಾರಂಟಿಗಳು” ಮೂಲಕ ಜನರನ್ನು ಸೆಳೆಯಲು ಯತ್ನಿಸುತ್ತಿದೆ. ಮೇಲ್ನೋಟಕ್ಕೆ ಎರಡೂ ಜನಪರ ಭರವಸೆಗಳಂತೆಯೇ ಕಾಣಬಹುದು. ಆದರೆ ಅವುಗಳ ಸ್ವರೂಪ ಮತ್ತು ಪರಿಣಾಮಗಳಲ್ಲಿ ಮೂಲಭೂತ ವ್ಯತ್ಯಾಸವಿದೆ.
– ಗುರುರಾಜ ದೇಸಾಯಿ
ಯುಡಿಎಫ್ ಘೋಷಿಸಿರುವ ಹಲವು ಗ್ಯಾರಂಟಿಗಳು ಜನರಿಗೆ ತಕ್ಷಣದ ಹಣಕಾಸು ನೆರವನ್ನು ನೀಡುವ ಉದ್ದೇಶ ಹೊಂದಿವೆ. ಈ ಯೋಜನೆಗಳು ಬಡ ಕುಟುಂಬಗಳಿಗೆ ತಿಂಗಳಿಗೆ ಹಣ ನೀಡುವುದಾಗಿ ಹೇಳುತ್ತವೆ. ಆದರೆ ಈ ಗ್ಯಾರಂಟಿಗಳ ಪ್ರಮುಖ ದುರ್ಬಲತೆ ಎಂದರೆ, ಅವು ಕಾನೂನುಬದ್ಧ ಹಕ್ಕುಗಳಲ್ಲ. ಅವು ಚುನಾವಣಾ ಘೋಷಣೆಗಳಾಗಿ ಮಾತ್ರ ಉಳಿಯುವ ಸಾಧ್ಯತೆ ಇದೆ. ಸರ್ಕಾರ ಬದಲಾದರೆ ಅಥವಾ ಆರ್ಥಿಕ ಪರಿಸ್ಥಿತಿ ಬದಲಾದರೆ, ಇಂತಹ ಭರವಸೆಗಳನ್ನು ಕಡಿತಗೊಳಿಸುವುದು ಅಥವಾ ಸಂಪೂರ್ಣವಾಗಿ ರದ್ದು ಮಾಡುವುದೂ ಸಾಧ್ಯ. ಹೀಗಾಗಿ, ಗ್ಯಾರಂಟಿಗಳು ತಾತ್ಕಾಲಿಕವಾಗಿ ಸಹಾಯ ಮಾಡಬಹುದು, ಆದರೆ ಶಾಶ್ವತ ಭದ್ರತೆ ನೀಡುವುದಿಲ್ಲ.
ಇದಕ್ಕೆ ವಿರುದ್ಧವಾಗಿ, ಎಲ್ಡಿಎಫ್ ಮಾದರಿಯ ಯೋಜನೆಗಳು ಕೇವಲ ಘೋಷಣೆಗಳಲ್ಲ; ಅವು ಆಡಳಿತ ವ್ಯವಸ್ಥೆಯ ಭಾಗವಾಗಿ ರೂಪುಗೊಂಡಿವೆ. ತಿಂಗಳಿಗೆ ₹3,000 ಸಾಮಾಜಿಕ ಭದ್ರತಾ ಪಿಂಚಣಿ, ಅಮಿತ ವೈದ್ಯಕೀಯ ನೆರವು, ಹಿರಿಯರ ಆರೈಕೆ ಯೋಜನೆ, ಹಾಸಿಗೆ ಹಿಡಿದ ರೋಗಿಗಳಿಗೆ ರಕ್ಷಣೆ, ಸಂಪೂರ್ಣ ಕುಡಿಯುವ ನೀರು ಸರಬರಾಜು, ಎಲ್ಲರಿಗೂ ವಸತಿ, ಶೇಕಡಾ 50 ರಷ್ಟು ಮಹಿಳೆಯರಿಗೆ ಉದ್ಯೋಗ, ಶಾಲಾ ವಿದ್ಯಾರ್ಥಿಗಳಿಗೆ ಅಪಘಾತ ವಿಮೆ, ಉದ್ಯೋಗ ಖಾತರಿ ಯೋಜನೆಗೆ ಹೆಚ್ಚುವರಿ ಹಣಕಾಸು. ಐಟಿವಲಯದಲ್ಲಿ 5 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿ, ನವೋದ್ಯಮಗಳಿಗೆ ₹20,000 ಕೋಟಿ ಹೂಡಿಕೆ, ಎಐ ನಗರ ಸ್ಥಾಪನೆ, ಹೈ- ಸ್ಪೀಡ್ ರೈಲ್ವೆ ಕಾರಿಡಾರ್, ಬಹಳಷ್ಟು ನಗರಗಳಿಗೆ ಮೆಟ್ರೋ ವಿಸ್ತರಣೆ ಸೇರಿದಂತೆ 900 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಿದೆ.
ಇದನ್ನೂ ಓದಿ: ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು – ಭಾಗ 4
ಎಲ್ಡಿಎಫ್ ಪ್ರಣಾಳಿಕೆಯನ್ನು ಆರು ಪ್ರಮುಖ ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ:

1. ಜ್ಞಾನ ಆರ್ಥಿಕತೆಗೆ ಪರಿವರ್ತನೆ:
ಪ್ರಣಾಳಿಕೆಯು ಉದಯೋನ್ಮುಖ ಕೈಗಾರಿಕಾ ವಲಯಗಳಲ್ಲಿ ₹2 ಲಕ್ಷ ಕೋಟಿಗೂ ಹೆಚ್ಚು ಮತ್ತು ಮೂಲಸೌಕರ್ಯದಲ್ಲಿ ₹3 ಲಕ್ಷ ಕೋಟಿ ಹೂಡಿಕೆಗಳನ್ನು ನಿರೀಕ್ಷಿಸುತ್ತದೆ. ಇದು ಉನ್ನತ ಶಿಕ್ಷಣದಲ್ಲಿ ಸಮಗ್ರ ಸುಧಾರಣೆಗಳು ಮತ್ತು ವಿದ್ಯಾರ್ಥಿಗಳು ಮತ್ತು ಅಧ್ಯಯನವನ್ನು ಪೂರ್ಣಗೊಳಿಸಿದವರಿಗೆ ವಿವರವಾದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಸ್ತಾಪಿಸುತ್ತದೆ. ಈ ಉಪಕ್ರಮಗಳ ಕುರಿತು ನಾವು ಕೇರಳ ಮತ್ತು ವಿದೇಶಗಳಲ್ಲಿರುವ ಮಲಯಾಳಿ ವೃತ್ತಿಪರರೊಂದಿಗೆ ಕೆಲಸ ಮಾಡುತ್ತೇವೆ. ಈ ಹಂತಗಳ ಆಧಾರದ ಮೇಲೆ, ಕೇರಳವು ಜ್ಞಾನ ಆರ್ಥಿಕತೆಯಾಗಿ ರೂಪಾಂತರಗೊಳ್ಳುತ್ತದೆ. ಜ್ಞಾನ ಆರ್ಥಿಕತೆಗಾಗಿ ಅಭಿವೃದ್ಧಿ ಸೂಚ್ಯಂಕವನ್ನು ಸಹ ರಚಿಸಲಾಗುವುದು.
2. ಒಳಗೊಳ್ಳುವ ಅಭಿವೃದ್ಧಿ:
ಪ್ರತಿಯೊಬ್ಬ ನಾಗರಿಕನು/ಳು ಅಭಿವೃದ್ಧಿಯಿಂದ ಪ್ರಯೋಜನ ಪಡೆಯುವುದನ್ನು ಖಚಿತಪಡಿಸುವುದು ಇದರ ಉದ್ದೇಶ. ಈ ಕ್ಷೇತ್ರದಲ್ಲಿ ನಾಲ್ಕು ಪ್ರಮುಖ ಪ್ರಸ್ತಾವಗಳೆಂದರೆ: ಸಂಪೂರ್ಣ ಬಡತನ ನಿರ್ಮೂಲನೆ, ಮಹಿಳೆಯರಿಗೆ ಶೇ. 50 ರಷ್ಟು ಉದ್ಯೋಗ ಭಾಗವಹಿಸುವಿಕೆಯನ್ನು ಖಚಿತಪಡಿಸುವುದು, ವೃದ್ಧರಿಗೆ ಸಂಪೂರ್ಣ ರಕ್ಷಣೆ ಒದಗಿಸುವುದು ಮತ್ತು ಕೃಷಿಯಂತಹ ಜೀವನೋಪಾಯ ವಲಯಗಳನ್ನು ಬಲಪಡಿಸುವುದು. ಈ ಉಪಕ್ರಮಗಳಲ್ಲಿ ಹಲವನ್ನು ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳ ಮೂಲಕ ಜಾರಿಗೆ ತರಲಾಗುವುದು.
ಅಧಿಕಾರವನ್ನು ಮತ್ತಷ್ಟು ವಿಕೇಂದ್ರೀಕರಿಸಲು ʼನವ ಕೇರಳ ಜನತಾ ಯೋಜನೆ ಅಭಿಯಾನʼದ ಹೊಸ ಹಂತವನ್ನು ಪ್ರಾರಂಭಿಸಲಾಗುವುದು. ಈ ಅಭಿವೃದ್ಧಿ ಚಟುವಟಿಕೆಗಳಿಗೆ ದೊಡ್ಡ ಪ್ರಮಾಣದ ಸ್ವಯಂಸೇವೀ ಭಾಗವಹಿಸುವಿಕೆ ಅತ್ಯಗತ್ಯವಾಗಿರುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ಸ್ವಯಂಸೇವಕರಿಗೆ ಸಾಮಾಜಿಕ ಮನ್ನಣೆ ನೀಡಲು ಸ್ವಯಂಸೇವಾ ಸೇವಾ ಪತ್ತಿನ ಬ್ಯಾಂಕ್ ಅನ್ನು ಸ್ಥಾಪಿಸಲಾಗುವುದು.
3. ಅಭಿವೃದ್ಧಿಯಲ್ಲಿ ಲಿಂಗ ಸಮಾನತೆ:
ದುಡಿಮೆಗಾರರ ಪಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದಕ್ಕೆ ಅತ್ಯಂತ ಪ್ರಮುಖ ಗಮನ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಅಪರಾಧ ನಕ್ಷೆ, ಮಹಿಳಾ ಘಟಕ ಯೋಜನೆಗಳ ಆಧುನೀಕರಣ ಮತ್ತು ಕುಟುಂಬಶ್ರೀ ಮಿಷನ್ನ ನವೀಕರಣವು ಇತರ ಪ್ರಮುಖ ಕ್ರಮಗಳಲ್ಲಿ ಸೇರಿವೆ.
4. ಪರಿಸರ ಸ್ನೇಹಿ ಕೇರಳ:
ಸಂಪೂರ್ಣ ನೈರ್ಮಲ್ಯವನ್ನು ಸಾಧಿಸುವುದು, ಅರಣ್ಯ ಸಂರಕ್ಷಣೆ, ಹಸಿರು ಕೇರಳ ಉಪಕ್ರಮ, ವಿಪತ್ತು ನಿರ್ವಹಣೆ, ಜಲಮೂಲಗಳ ಪುನಃಸ್ಥಾಪನೆ ಮತ್ತು ಜಲಾನಯನ ಯೋಜನೆ ಮುಂತಾದ ಹಲವಾರು ಪರಿಸರ ಕಾರ್ಯಕ್ರಮಗಳನ್ನು ಪ್ರಣಾಳಿಕೆ ಒಳಗೊಂಡಿದೆ.
5. ಜಾತ್ಯತೀತತೆ ಮತ್ತು ಪ್ರಗತಿಪರ ಸಂಸ್ಕೃತಿ:
ಸಾಂಸ್ಕೃತಿಕ ಮತ್ತು ಕ್ರೀಡಾ ಸೌಲಭ್ಯಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ವಿಸ್ತರಿಸಲಾಗುವುದು. ಪ್ರಣಾಳಿಕೆ ಭ್ರಷ್ಟಾಚಾರ ಮುಕ್ತ ಮತ್ತು ಉತ್ತಮ ಆಡಳಿತವನ್ನು ಖಚಿತಪಡಿಸುವುದಾಗಿಯೂ ಭರವಸೆ ನೀಡುತ್ತದೆ.
6. ಸಂಪನ್ಮೂಲ ಕ್ರೋಢೀಕರಣ:
ಸಾಮಾಜಿಕ ಕಲ್ಯಾಣ ಯೋಜನೆಗಳ ವೆಚ್ಚಗಳನ್ನು ಪೂರೈಸಲು ರೆವಿನ್ಯೂ ಆದಾಯವನ್ನು ಹೆಚ್ಚಿಸಲಾಗುವುದು. ಮೂಲಸೌಕರ್ಯಕ್ಕಾಗಿ ಬಂಡವಾಳ ವೆಚ್ಚಕ್ಕೆ ಬಜೆಟ್ನ ಹೊರಗೆ ಸಾಲಗಳ ಮೂಲಕ ಹಣಕಾಸು ಒದಗಿಸಲಾಗುವುದು. ಸಂಪನ್ಮೂಲ ಕ್ರೋಢೀಕರಣದಲ್ಲಿ ಕೇಂದ್ರವು ಸೃಷ್ಟಿಸುವ ಅಡೆತಡೆಗಳನ್ನು ನಿವಾರಿಸಲಾಗುವುದು ಮತ್ತು ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ (KIIFB) ಅನ್ನು ಮುಂದಕ್ಕೆ ಒಯ್ಯಲಾಗುವುದು. ಇದು ಅಭಿವೃದ್ಧಿ ಕಾರ್ಯತಂತ್ರದ ಸಾರವಾಗಿದೆ.
ಇನ್ನೊಂದು ಪ್ರಮುಖ ಅಂಶವೆಂದರೆ, ಗ್ಯಾರಂಟಿಗಳು ಸಾಮಾನ್ಯವಾಗಿ ಸಮಸ್ಯೆಯ ಲಕ್ಷಣಗಳನ್ನು ಮಾತ್ರ ತಾತ್ಕಾಲಿಕವಾಗಿ ತಗ್ಗಿಸುತ್ತವೆ. ಆದರೆ ಎಲ್ಡಿಎಫ್ ಯೋಜನೆಗಳು ಸಮಸ್ಯೆಯ ಮೂಲ ಕಾರಣಗಳತ್ತ ಗಮನ ಹರಿಸುತ್ತವೆ. ಉದ್ಯೋಗ ಸೃಷ್ಟಿ, ಕೈಗಾರಿಕಾ ಹೂಡಿಕೆ, ಮಹಿಳಾ ಸಬಲೀಕರಣ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿ — ಇವುಗಳ ಮೂಲಕ ದೀರ್ಘಕಾಲಿಕ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯನ್ನು ತರಲು ಪ್ರಯತ್ನಿಸಲಾಗುತ್ತಿದೆ. ಅಂದರೆ, ಇದು ಕೇವಲ ಹಣ ಹಂಚುವ ರಾಜಕೀಯವಲ್ಲ; ಬದಲಾಗಿ ವ್ಯವಸ್ಥೆಯನ್ನು ಬಲಪಡಿಸುವ ದೃಷ್ಟಿಕೋನವಾಗಿದೆ.
ಅಂತಿಮವಾಗಿ, ಈ ಚುನಾವಣೆಯಲ್ಲಿ ಜನರ ಮುಂದೆ ಇರುವ ಆಯ್ಕೆ ಸ್ಪಷ್ಟವಾಗಿದೆ: ತಕ್ಷಣದ ನೆರವು ನೀಡುವ ಆದರೆ ಅಸ್ಥಿರವಾಗಿರುವ ಗ್ಯಾರಂಟಿಗಳೇ ಮುಖ್ಯವೇ, ಅಥವಾ ನಿಧಾನವಾದರೂ ಶಾಶ್ವತ ಪರಿಹಾರ ಮತ್ತು ಅಭಿವೃದ್ಧಿಯನ್ನು ನೀಡುವ ಕಾನೂನುಬದ್ಧ ಯೋಜನೆಗಳೇ ಮುಖ್ಯವೇ? ಕ್ಷಣಿಕ ಲಾಭಕ್ಕಿಂತ ದೀರ್ಘಕಾಲಿಕ ಭದ್ರತೆಯನ್ನು ಆಯ್ಕೆ ಮಾಡುವುದೇ ಜನರ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಅಂಶವಾಗಲಿದೆ.

ಇದೇ ವೇಳೆ, ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಮತ್ತು ಪ್ರವಾಹದ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ದೇಶಾಭಿಮಾನಿ, ದಿ ಹಿಂದು ಮತ್ತು ನ್ಯೂಸ್ ಮಿನಿಟ್ ಪತ್ರಿಕೆಗಳು ಈ ಕುರಿತು ಸರಣಿ ವರದಿಗಳನ್ನು ಪ್ರಕಟಿಸಿವೆ. ಕಾಂಗ್ರೆಸ್ ಪಕ್ಷ ಮನೆ ನಿರ್ಮಾಣದ ಉದ್ದೇಶದಿಂದ ದೊಡ್ಡ ಮಟ್ಟದಲ್ಲಿ ನಿಧಿ ಸಂಗ್ರಹಣೆ ನಡೆಸಿದರೂ, ಅದರ ಹಣಕಾಸು ನಿರ್ವಹಣೆ ಕುರಿತು ಗಂಭೀರ ಪ್ರಶ್ನೆಗಳು ಎದುರಾಗಿವೆ. ಒಂದು ಬ್ಯಾಂಕ್ ಖಾತೆಯ ಮಾಹಿತಿಯನ್ನು ಮಾತ್ರ ಬಹಿರಂಗಪಡಿಸಲಾಗಿದ್ದು, ಮತ್ತೊಂದು ಖಾತೆಯನ್ನು ಮರೆಮಾಚಿದ ಆರೋಪ ಕೇಳಿಬಂದಿದೆ.
ಸಂಗ್ರಹಿಸಿದ ಕೋಟ್ಯಂತರ ರೂಪಾಯಿಗಳಲ್ಲಿ ಎಲ್ಲಾ ಹಣವೂ ಅಧಿಕೃತ ಖಾತೆಗೆ ಜಮೆಯಾಗಿಲ್ಲ ಎಂಬ ಅನುಮಾನ ವ್ಯಕ್ತವಾಗಿದ್ದು, ಕೆಲವು ಮೊತ್ತಗಳನ್ನು ತಿಳಿಯದ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬ ಮಾಹಿತಿಗಳು ಹೊರಬಿದ್ದಿವೆ. ಇದರಿಂದ ಪಾರದರ್ಶಕತೆ ಬಗ್ಗೆ ಸಂದೇಹಗಳು ಹೆಚ್ಚಾಗಿವೆ. ಜೊತೆಗೆ, ನೆಲಮಟ್ಟದಲ್ಲಿ ಮನೆ ನಿರ್ಮಾಣದ ಸ್ಪಷ್ಟ ಸಾಧನೆ ಗೋಚರಿಸದಿರುವುದೂ ಗಮನಾರ್ಹವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿದ್ದರೂ, ಅದು ಇನ್ನೂ ಭರವಸೆಯಾಗಿಯೇ ಉಳಿದಿದೆ.
ಇದರ ವಿರುದ್ಧವಾಗಿ, ಎಲ್ಡಿಎಫ್ ಸರ್ಕಾರ ವಯನಾಡು ದುರಂತದ ಪೀಡಿತರಿಗೆ ನೇರವಾಗಿ ಮನೆ ನಿರ್ಮಾಣ ಮತ್ತು ಪುನರ್ವಸತಿ ಕಾರ್ಯಗಳನ್ನು ಕೈಗೊಂಡಿದೆ. ಈಗಾಗಲೇ ಮೊದಲ ಹಂತದಲ್ಲಿ 178 ಮನೆಗಳನ್ನು ಪೀಡಿತರಿಗೆ ಹಸ್ತಾಂತರಿಸಲಾಗಿದೆ ಮತ್ತು 400ಕ್ಕೂ ಹೆಚ್ಚು ಮನೆಗಳು ನಿರ್ಮಾಣ ಹಂತದಲ್ಲಿವೆ. ಡಿವೈಎಫ್ಐ ಸಂಘಟನೆ ಶ್ರಮದಾನ ಮತ್ತು ಜನಸಹಭಾಗಿತ್ವದ ಮೂಲಕ ₹20 ಕೋಟಿ ಸಂಗ್ರಹಿಸಿ, ಅದನ್ನು ಸಂಪೂರ್ಣವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಲ್ಲಿಸಿರುವುದು ಪಾರದರ್ಶಕತೆಗೆ ಉದಾಹರಣೆಯಾಗಿದೆ.
ಒಟ್ಟಾರೆ, ಒಂದು ಕಡೆ ದೊಡ್ಡ ಪ್ರಮಾಣದ ನಿಧಿ ಸಂಗ್ರಹಣೆ ನಡೆದಿದ್ದರೂ ಅದರ ಬಳಕೆಯ ಬಗ್ಗೆ ಅನುಮಾನಗಳು ಹುಟ್ಟಿರುವ ಸ್ಥಿತಿ ಕಂಡುಬರುತ್ತದೆ; ಮತ್ತೊಂದೆಡೆ ಸರ್ಕಾರದ ಮೇಲ್ವಿಚಾರಣೆಯಲ್ಲಿ ನೇರವಾಗಿ ಮನೆ ನಿರ್ಮಾಣ ಮತ್ತು ಪುನರ್ವಸತಿ ಕಾರ್ಯಗಳು ನಡೆದು, ಪೀಡಿತರಿಗೆ ಸ್ಪಷ್ಟ ಪ್ರಯೋಜನ ತಲುಪುತ್ತಿರುವುದು ಗೋಚರಿಸುತ್ತದೆ. ಈ ಹೋಲಿಕೆ ವಯನಾಡಿನ ಪುನರ್ವಸತಿ ಕಾರ್ಯಗಳಲ್ಲಿ ಯಾರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂಬ ಪ್ರಶ್ನೆಗೆ ಸ್ಪಷ್ಟ ದಿಕ್ಕು ನೀಡುತ್ತದೆ. ಇದೇ ಸಂದರ್ಭದಲ್ಲಿ, ಕೇರಳದ ಎಡರಂಗ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೇರಳದ ಜನರಿಂದ ಟ್ರೋಲ್ಗೆ ಒಳಗಾಗಿದ್ದಾರೆ. ಎಲ್ಡಿಎಫ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಭರವಸೆಗಳಲ್ಲಿಯೇ ಸುಮಾರು 97% ಅನ್ನು ಈಡೇರಿಸಿದೆ ಎಂಬ ಮಾತು ಕೇಳಿಬರುತ್ತಿದ್ದು, “ನಿಮ್ಮ ರಾಜ್ಯದಲ್ಲಿ ಘೋಷಿಸಿದ ಗ್ಯಾರಂಟಿಗಳು ತಲುಪಿವೆಯೇ?” ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಇನ್ನೂ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬರುತ್ತಿವೆ. ಎಲ್ಡಿಎಫ್ ಮತ್ತು ಯುಡಿಎಫ್ ನಡುವೆ ನೆಕ್-ಟು-ನೆಕ್ ಸ್ಪರ್ಧೆ ಇದೆ ಎಂದು ಹೇಳಲಾಗುತ್ತಿದೆ. ಕೆಲವು ಸಮೀಕ್ಷೆಗಳ ಪ್ರಕಾರ ಎಲ್ಡಿಎಫ್ ಮುನ್ನಡೆಯಲ್ಲಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ, ಚುನಾವಣಾ ಪೂರ್ವ ಸಮೀಕ್ಷೆಗಳು ಸದಾ ವಿಶ್ವಾಸಾರ್ಹವಾಗಿರವುದಿಲ್ಲ. ಅಲ್ಪ ಸಂಖ್ಯೆಯ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ದೊಡ್ಡ ಪ್ರವೃತ್ತಿಯಂತೆ ಬಿಂಬಿಸುವ ಸಂದರ್ಭಗಳು ಹೆಚ್ಚಾಗಿವೆ.
ಮುಸ್ಲಿಂ ಮತದಾರರು ಯುಡಿಎಫ್ ಜೊತೆ ನಿಲ್ಲುವ ಸಾಧ್ಯತೆ ಇದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಮತ್ತೊಂದೆಡೆ, ಪ್ರಗತಿಪರ ಮತ್ತು ಅಭಿವೃದ್ಧಿ ಬಯಸುವ ಜನರ ದೊಡ್ಡ ಗುಂಪು ಎಲ್ಡಿಎಫ್ಗೆ ಬೆಂಬಲ ನೀಡುತ್ತಿದೆ ಎಂಬ ಅಭಿಪ್ರಾಯವೂ ಇದೆ. ಹಿಂದು ಮತಗಳನ್ನು ಪಡೆಯಬಹುದು ಎಂದು ನಿರೀಕ್ಷಿಸಿದ್ದ ಬಿಜೆಪಿಗೆ ಆ ಮಟ್ಟದ ಬೆಂಬಲ ಸಿಗುತ್ತಿಲ್ಲ ಎಂಬ ಮಾತುಗಳೂ ಹರಿದಾಡುತ್ತಿವೆ. ಈ ಬಾರಿ ಕೇರಳದಲ್ಲಿ ಮತ್ತೆ ಎಡರಂಗ ಸರ್ಕಾರ ಬರಬೇಕು ಎಂದು ಜನ ಬಯಸುತ್ತಿರುವುದಕ್ಕೆ ಹಲವು ಕಾರಣಗಳಿವೆ. ಎಲ್ಡಿಎಫ್ (Left Democratic Front) ಜನಪರ ಆಡಳಿತದ ಸಂಕೇತವಾಗಿ ಹೊರಹೊಮ್ಮಿದೆ. ಕಲ್ಯಾಣ, ಸಾಮಾಜಿಕ ನ್ಯಾಯ ಮತ್ತು ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ, ಒಂದು ರಾಜ್ಯ ಸರ್ಕಾರದ ಮಿತಿಗಳೊಳಗೂ ಜನರಿಗೆ ಸ್ಪಷ್ಟ ನೆರವು ಹಾಗೂ ಪ್ರಗತಿಪರ ನೀತಿಗಳನ್ನು ಜಾರಿಗೊಳಿಸುವುದು ಸಾಧ್ಯವೆಂಬುದನ್ನು ಇದು ತೋರಿಸಿದೆ.
ಇಂದಿನ ಭಾರತದಲ್ಲಿ ನವಉದಾರವಾದಿ ನೀತಿಗಳ ಪರಿಣಾಮವಾಗಿ ಉದ್ಯೋಗ ಕೊರತೆ, ಖಾಸಗೀಕರಣ ಮತ್ತು ಹೆಚ್ಚುತ್ತಿರುವ ಅಸಮಾನತೆಗಳಿಂದ ಕಾರ್ಮಿಕ ವರ್ಗ ಗಂಭೀರ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಕೇರಳದ ಎಲ್ಡಿಎಫ್ ಆಡಳಿತವು ಪ್ರತಿರೋಧ ಮತ್ತು ಸ್ಥೈರ್ಯದ ಮಾದರಿಯಾಗಿ ನಿಂತಿದೆ.
ದೇಶದಾದ್ಯಂತ ಅನೇಕ ಜನರಿಗೆ, ವಿಶೇಷವಾಗಿ ಕಾರ್ಮಿಕ ವರ್ಗಕ್ಕೆ, ಎಲ್ಡಿಎಫ್ ಆಶೆ ಮತ್ತು ಶಕ್ತಿಯ ಪ್ರತೀಕವಾಗಿದೆ. ಜನರ ಅವಶ್ಯಕತೆಗಳನ್ನು ಕೇಂದ್ರದಲ್ಲಿಟ್ಟುಕೊಂಡು, ಕಾರ್ಪೊರೇಟ್ ಹಿತಾಸಕ್ತಿಗಳ ಬದಲು ಮಾನವಕೇಂದ್ರಿತ ಅಭಿವೃದ್ಧಿಯ ದಾರಿಗೆ ನಡೆದು ತೋರಿಸಿರುವುದು ಇದರ ಮಹತ್ವ.
ಹೀಗಾಗಿ, ಕೇರಳದಲ್ಲಿ ಏನಾಗಬಹುದು? ಮೇ 04 ರವರೆಗೆ ಕಾದು ನೋಡಬೇಕಿದೆ.
ಇದನ್ನೂ ನೋಡಿ: ಕೇರಳ ಚುನಾವಣೆ | ಎಲ್ಡಿಎಫ್ vs ಯುಡಿಎಫ್ – ಜನ ಒಪ್ಪುವ ಪ್ರಣಾಳಿಕೆ ಯಾರದ್ದು? Janashakthi Media
