ಕೇರಳದ ಅಭಿವೃದ್ಧಿಗೆ ಎಲ್‌ಡಿಎಫ್ ಪುನರಾಯ್ಕೆ ಅನಿವಾರ್ಯ: ಡಾ. ವಿ. ಸಿವದಾಸನ್

ಬೆಂಗಳೂರು :’ಕೇರಳ ನಾಡಿನ ಒಳಿತಿಗಾಗಿ, ಅಭಿವೃದ್ಧಿಯ ಮುಂದುವರಿಕೆಗಾಗಿ ಕೇರಳದಲ್ಲಿ ಎಲ್‌ಡಿಎಫ್ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಅನಿವಾರ್ಯ’ ಎಂದು ಸಿಪಿಎಂ ರಾಜ್ಯಸಭಾ ಸದಸ್ಯ ಡಾ. ವಿ. ಸಿವದಾಸನ್ ಅಭಿಪ್ರಾಯಪಟ್ಟರು. ಕೇರಳ

ಭಾನುವಾರ ಬೆಂಗಳೂರಿನ ಮಡಿವಾಳದಲ್ಲಿ ನಡೆದ ಎಲ್‌ಡಿಎಫ್ (LDF) ಚುನಾವಣಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಕೇರಳದ ಎಲ್‌ಡಿಎಫ್ ಸರ್ಕಾರವು ಯಾವುದೇ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ವಿಶಿಷ್ಟ ಸಾಧನೆ ಎಂದು ಅವರು ಹೇಳಿದರು. COVID-19 ಮಹಾಮಾರಿಯನ್ನು ಎದುರಿಸುವಲ್ಲಿ ಕೇರಳದ ಕ್ರಮಗಳು ಇಡೀ ದೇಶಕ್ಕೆ ಮಾದರಿಯಾಗಿದ್ದು, ಎಲ್ ಡಿ ಎಫ್ ಸರ್ಕಾರದ ಈ ಕ್ರಮಗಳನ್ನು ವಿಶ್ವ ಸಂಸ್ಥೆಯೂ ಶ್ಲಾಘಸಿದೆ ಎಂದರು.

ಕೇರಳದ ಪ್ರವಾಹ ಸಂದರ್ಭದಲ್ಲೂ ಸರ್ಕಾರ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿ, ಮುಖ್ಯಮಂತ್ರಿ ಪರಿಹಾರ ನಿಧಿ (CMDRF) ಮೂಲಕ ಪಾರದರ್ಶಕತೆ ಕಾಯ್ದುಕೊಂಡಿದೆ, ಆದರೆ ಇದೇ ವೇಳೆ, ಪಿ. ಎಂ.ಕೇರ್ಸ್ ನಿಧಿಯ ಬಳಕೆಯಲ್ಲಿ ಯಾವುದೇ ಪಾರದರ್ಶಕತೆ ಕಾಪಾಡಿಕೊಳ್ಳದಿರುವ ಮತ್ತು ನಿಧಿಯನ್ನು ದುರ್ಬಳಕೆ ಮಾಡಿಕೊಂಡಿರುವವರು ಕೇರಳದ ಎಲ್ ಡಿ ಎಫ್ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ : ಚರ್ಚ್ಗಳಲ್ಲಿ ಧರ್ಮಾಧ್ಯಕ್ಷರಾಗಲು ಕನ್ನಡ ಕಲಿತು ಬರಬೇಕು: ಡಾ.ಎಲ್.ಹನುಮಂತಯ್ಯ

ಸಾರ್ವಜನಿಕ ಮೂಲಸೌಕರ್ಯಗಳಲ್ಲಿ, ವಿಶೇಷವಾಗಿ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆದ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, 2016 ರಿಂದ 2026ರವರೆಗೆ ನಡೆದ ಹೂಡಿಕೆಗಳು 1956 ರಿಂದ 2016ರವರೆಗೆ ಆದ ಒಟ್ಟು ಹೂಡಿಕೆಗಿಂತ ಹೆಚ್ಚಾಗಿದೆ. ಈ ಅವಧಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಂಡುಬಂದ ಅಭಿವೃದ್ಧಿಯು ಅಪೂರ್ವವಾಗಿವೆ ಎಂದು ಅಭಿಪ್ರಾಯಪಟ್ಟರು. ಇತರೆ ಯಾವುದೇ ರಾಜ್ಯಗಳಿಗಿಂತ ಹೆಚ್ಚಿನ ಪಿಂಚಣಿ ಯೋಜನೆಗಳು, ಭೂ ಹಂಚಿಕೆ ಕಾರ್ಯಕ್ರಮಗಳು, ದಲಿತರು ಮತ್ತು ಮೀನುಗಾರರಿಗೆ ವಿಶೇಷ ಕಲ್ಯಾಣ ಯೋಜನೆಗಳನ್ನು ತರಲಾಗಿದೆ.

ಚುನಾವಣಾ ಅವಧಿಯಲ್ಲಿ ಆರೋಪಗಳು ಸಾಮಾನ್ಯವಾಗಿದ್ದರೂ, ನಂತರ ಅವು ಮರೆಯಾಗುತ್ತವೆ, ನಾವು ಮಾಡಿದ ಕೆಲಸ, ಸಾಧನೆಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು.

ಬಿಜೆಪಿ ಪಕ್ಷವು ದೊಡ್ಡ ಬಂಡವಾಳದಾರರಿಂದ ಚುನಾವಣಾ ಬಾಂಡ್‌ಗಳ ಮೂಲಕ ಸಾವಿರಾರು ಕೋಟಿ ರೂಪಾಯಿ ಪಡೆದು, ಚುನಾವಣೆಯಲ್ಲಿ ಚಲ್ಲುತ್ತಿದೆ, ಆದರೆ ಎಡಪಕ್ಷಗಳು ಸಾರ್ವಜನಿಕರಿಂದ ಹುಂಡಿ ಸಂಗ್ರಹದ ಮೂಲಕ ಚುನಾವಣೆ ನಡೆಸುತ್ತಿವೆ. ಇದೇ ಬಿಜೆಪಿಗೂ ಕಮ್ಯುನಿಸ್ಟ್ ಪಕ್ಷಗಳಿಗೂ ಇರುವ ವ್ಯತ್ಯಾಸ ಎಂದರು.

ಸಿಪಿಎಂ ಮುಖಂಡ ಸತೀಶ್ ಕುಮಾರ್ ಸಮಾವೇಶದ ಅಧ್ಯಕ್ಷತೆ ವಹಿಸಿ, ಕೇರಳದ ಗೌರವ ಮತ್ತು ಅಭಿವೃದ್ಧಿಯನ್ನು ಉಳಿಸಿಕೊಳ್ಳಲು ಎಲ್‌ಡಿಎಫ್ ಪರ ಮತ ಹಾಕುವಂತೆ ಕರೆ ನೀಡಿದರು.

ಸಮಾವೇಶದಲ್ಲಿ ಐಎನ್‌ಎಲ್ ನಾಯಕ ತಸ್ನೀಮ್ ಸುಲೈಮಾನ್ ಸೆಟ್ಟು ಮಾತನಾಡಿ, ಪ್ರಸ್ತುತ ಎಲ್‌ಡಿಎಫ್ ಆಡಳಿತಾವಧಿಯಲ್ಲಿ ಯಾವುದೇ ಜಾತಿ – ಕೋಮು ಸಂಘರ್ಷಗಳು ಸಂಭವಿಸಿಲ್ಲ ಮತ್ತು ಮೂಲಸೌಕರ್ಯ ಅಭಿವೃದ್ಧಿ ಗಮನಾರ್ಹವಾಗಿದೆ, ಆದ್ದರಿಂದ ಸರ್ಕಾರದ ಮುಂದುವರಿಕೆ ಅಗತ್ಯವೆಂದು ಅವರು ಒತ್ತಿಹೇಳಿದರು.

ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ, ಬಿ. ಎನ್. ಮಂಜುನಾಥ್ ಮಾತನಾಡಿ ‘ವಿಭಜನಾ ರಾಜಕೀಯಕ್ಕೆ ತಡೆ ನೀಡುವುದು ಮತ್ತು ಧರ್ಮನಿರಪೇಕ್ಷ ಮೌಲ್ಯಗಳನ್ನು ಉಳಿಸಿಕೊಳ್ಳಲು ಎಲ್‌ಡಿಎಫ್ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಸಿಪಿಎಂ ಬೊಮ್ಮನಹಳ್ಳಿ ಶಾಖಾ ಕಾರ್ಯದರ್ಶಿ ಅಬ್ದುಲ್ ಗಫೂರ್ ಮತ್ತು ಸಿಪಿಎಂ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಸದಸ್ಯ ಪಿ. ಕೆ. ನಿದಿನ್ ಮಾತನಾಡಿದರು.
ಅನಿಶ್ ವಂದನಾರ್ಪಣೆ ಮಾಡಿದರು. ಸಿಪಿಎಂ ಬೆಂಗಳೂರು ದಕ್ಷಿಣ ಸಮಿತಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಲಿಂಗರಾಜು ಮಳವಳ್ಳಿ, ಸಿಪಿಎಂ ಮಡಿವಾಳ ವಲಯ ಸಮಿತಿ ಕಾರ್ಯದರ್ಶಿ ಎನ್. ದಯಾನಂದ ಇತರರು ಇದ್ದರು.

ಇದನ್ನೂ ನೋಡಿ : ಐವತ್ತೈದು ವಯಸ್ಸು, ಯುವಕನ ಉತ್ಸಾಹ: ಒಂಟಿ ಕಣ್ಣಿನ ಕೃಷ್ಣಮೂರ್ತಿ ಸಾಧನೆಯ ಪಯಣ Janashakthi Media

Donate Janashakthi Media

Leave a Reply

Your email address will not be published. Required fields are marked *