ಉತ್ತರಾಖಂಡ SIR: ಮುಸ್ಲಿಂ ಮತದಾರರ ಹೆಸರು ಅಳಿಸಲು ಸಾಮೂಹಿಕ ಅರ್ಜಿಗಳ ಆರೋಪ

ಡೆಹ್ರಾಡೂನ್: ಉತ್ತರಾಖಂಡದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಇದೀಗ ವಿವಾದಕ್ಕೆ ಕಾರಣವಾಗಿದೆ. ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಕೆಲವೇ ವ್ಯಕ್ತಿಗಳು ನೂರಾರು, ಸಾವಿರಾರು ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸಿರುವುದು ಬೆಳಕಿಗೆ ಬಂದಿದ್ದು, ಈ ಅರ್ಜಿಗಳಲ್ಲಿ ಗುರಿಯಾಗಿರುವ ಬಹುತೇಕ ಹೆಸರುಗಳು ಮುಸ್ಲಿಂ ಮತದಾರರದ್ದೇ ಎಂದು ವರದಿಯಾಗಿದೆ. ಈ ಕುರಿತು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿ, ಪರಿಶೀಲನೆ ಇಲ್ಲದೆ ಸಾಮೂಹಿಕ ಅರ್ಜಿಗಳನ್ನು ಸ್ವೀಕರಿಸಿ ಪ್ರಕ್ರಿಯೆಗೊಳಿಸಲಾಗುತ್ತಿದೆ ಎಂದು ಆರೋಪಿಸಿದೆ. SIR

ನ್ಯೂಸ್‌ಲಾಂಡ್ರಿ ನಡೆಸಿದ ವಿಶ್ಲೇಷಣೆಯ ಪ್ರಕಾರ, ಉತ್ತರಾಖಂಡದ 70 ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಐವರು ವ್ಯಕ್ತಿಗಳು ಒಟ್ಟು ಸುಮಾರು 6,500 ಮತದಾರರ ವಿರುದ್ಧ ಹೆಸರು ಅಳಿಸುವಂತೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಐವರನ್ನೂ  ಬಿಜೆಪಿ ಕಾರ್ಯಕರ್ತರು ಅಥವಾ ಪಕ್ಷದ ಬೂತ್ ಮಟ್ಟದ ಚುನಾವಣಾ ಪ್ರತಿನಿಧಿಗಳೊಂದಿಗೆ ಸಂಪರ್ಕ ಹೊಂದಿರುವವರು ಎಂದು ಗುರುತಿಸಿಲಾಗಿದೆ. ಅವರಿಂದ ಸಲ್ಲಿಸಲಾದ ಅರ್ಜಿಗಳ ಸಂಖ್ಯೆ 230ರಿಂದ 4,855ರವರೆಗೆ ಇದೆ.

ಒಂದೇ ವ್ಯಕ್ತಿಯಿಂದ 4,855 ಅರ್ಜಿಗಳು

ಉಧಮ್ ಸಿಂಗ್ ನಗರ ಜಿಲ್ಲೆಯ ಕಿಚ್ಚಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4,857 ಹೆಸರುಗಳ ವಿರುದ್ಧ ಆಕ್ಷೇಪಣೆ ಸಲ್ಲಿಕೆಯಾಗಿದ್ದು, ಈ ಪೈಕಿ 4,855 ಅರ್ಜಿಗಳನ್ನು ಒಬ್ಬರೇ ಸಲ್ಲಿಸಿರುವುದು ವರದಿಯಾಗಿದೆ. ಬಹುತೇಕ ಅರ್ಜಿಗಳಲ್ಲಿ ಮತದಾರರು ಈಗಾಗಲೇ ಮತ್ತೊಂದು ಕಡೆ ನೋಂದಾಯಿತರಾಗಿದ್ದಾರೆ ಎಂಬ ಕಾರಣ ನೀಡಲಾಗಿದೆ.

ಕಿಚ್ಚಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಪ್ರಮಾಣ ರಾಜ್ಯದ ಸರಾಸರಿಗಿಂತ ಹೆಚ್ಚಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ 2022ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಮತದಾರರ ಹೆಸರು ಅಳಿಸುವ ಅರ್ಜಿಗಳ ರಾಜಕೀಯ ಪರಿಣಾಮದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ಗದರ್ಪುರ ಕ್ಷೇತ್ರದಲ್ಲಿ 1,370 ಹೆಸರುಗಳ ಅಳಿಸುವಿಕೆಗಾಗಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 670 ಅರ್ಜಿಗಳನ್ನು ಒಬ್ಬ ವ್ಯಕ್ತಿಯೇ ಸಲ್ಲಿಸಿದ್ದಾರೆ. ವರದಿಯ ಪ್ರಕಾರ, ಗುರಿಯಾಗಿರುವ ಎಲ್ಲ ಹೆಸರುಗಳೂ ಮುಸ್ಲಿಂ ಮತದಾರರದ್ದಾಗಿವೆ. ಅರ್ಜಿ ಸಲ್ಲಿಸಿದ ವ್ಯಕ್ತಿ ತಾನು ಬಿಜೆಪಿ ಬೂತ್ ಮಟ್ಟದ ಏಜೆಂಟ್ ಎಂದು ಹೇಳಿಕೊಂಡಿದ್ದು, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಎರಡೂ ಕಡೆ ಮತದಾರರಾಗಿ ನೋಂದಾಯಿಸಿಕೊಂಡಿರುವವರ ಹೆಸರುಗಳನ್ನು ಅಳಿಸಲು ಕ್ರಮ ಕೈಗೊಂಡಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ. SIR

ಖತೀಮಾ, ನಾನಕ್‌ಮತ್ತಾದಲ್ಲೂ ಇದೇ ಮಾದರಿ

ಖತೀಮಾ ಕ್ಷೇತ್ರದಲ್ಲಿ ಸಲ್ಲಿಕೆಯಾದ 394 ಹೆಸರು ಅಳಿಸುವ ಅರ್ಜಿಗಳ ಪೈಕಿ 392 ಅರ್ಜಿಗಳನ್ನು ಒಬ್ಬ ವ್ಯಕ್ತಿಯೇ ಸಲ್ಲಿಸಿದ್ದಾರೆ. ಅವರು ಬಿಜೆಪಿಯ ಜಿಲ್ಲಾ ಮಟ್ಟದ ಪದಾಧಿಕಾರಿ ಹಾಗೂ ಬೂತ್ ಮಟ್ಟದ ಏಜೆಂಟ್ ಎಂದು ವರದಿ ತಿಳಿಸಿದೆ.

ನಾನಕ್‌ಮತ್ತಾದಲ್ಲಿ 391 ಅರ್ಜಿಗಳ ಪೈಕಿ 353 ಅರ್ಜಿಗಳು ಒಬ್ಬ ವ್ಯಕ್ತಿಯಿಂದಲೇ ಸಲ್ಲಿಕೆಯಾಗಿವೆ. ಈ ಅರ್ಜಿಗಳಲ್ಲಿ 351ಕ್ಕೆ ಒಂದೇ ಕಾರಣ ‘ಸ್ಥಳಾಂತರಗೊಂಡಿದ್ದಾರೆ’—ಎಂದು ನಮೂದಿಸಲಾಗಿದೆ. ಆದರೆ, ಕೆಲವು ಗುರಿಯಾಗಿರುವ ಮತದಾರರು ತಾವು ಹಲವು ವರ್ಷಗಳಿಂದ ಅಲ್ಲಿಯೇ ವಾಸಿಸುತ್ತಿದ್ದು, ಹಿಂದಿನ ಚುನಾವಣೆಯಲ್ಲಿಯೂ ಮತ ಚಲಾಯಿಸಿರುವುದಾಗಿ ಹೇಳಿದ್ದಾರೆ. ತಮ್ಮ ಹೆಸರು ಅಳಿಸುವ ಪ್ರಕ್ರಿಯೆ ಆರಂಭವಾಗಿದೆ ಎಂಬುದು ಚುನಾವಣಾ ಅಧಿಕಾರಿಗಳಿಂದ ಯಾವುದೇ ನೋಟಿಸ್ ಬಂದ ನಂತರವೇ ತಿಳಿಯಿತು ಎಂದು ಕೆಲವರು ತಿಳಿಸಿದ್ದಾರೆ.

ರುದ್ರಪುರದಲ್ಲಿಯೂ 2,818 ಹೆಸರುಗಳ ವಿರುದ್ಧ ಅಳಿಸುವಿಕೆ ಅರ್ಜಿಗಳು ಸಲ್ಲಿಕೆಯಾಗಿದ್ದು, ಒಬ್ಬ ವ್ಯಕ್ತಿ 230 ಹೆಸರುಗಳನ್ನು ಒಳಗೊಂಡ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳಲ್ಲಿಯೂ ಗುರಿಯಾಗಿರುವ ಹೆಸರುಗಳು ಮುಸ್ಲಿಂ ಮತದಾರರದ್ದೇ ಎಂದು ವರದಿ ಹೇಳಿದೆ. SIR

ಇದನ್ನೂ ಓದಿ : ಜೈಪುರ ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ: 49 ಅಭ್ಯರ್ಥಿಗಳಿಗೆ ಮರುಪರೀಕ್ಷೆ

ನಿಯಮಗಳಲ್ಲಿ ಬದಲಾವಣೆ ಏಕೆ?

ಚುನಾವಣಾ ಆಯೋಗದ 2023ರ ಮತದಾರರ ಪಟ್ಟಿ ಕೈಪಿಡಿಯಲ್ಲಿ ಸಾಮೂಹಿಕ ಅರ್ಜಿಗಳಿಗೆ ಕೆಲವು ಮಿತಿಗಳನ್ನು ನಿಗದಿಪಡಿಸಲಾಗಿತ್ತು. ಬೂತ್ ಮಟ್ಟದ ಏಜೆಂಟ್‌ಗಳು ದಿನಕ್ಕೆ 10ಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಬಾರದು ಎಂಬ ನಿಯಮವಿತ್ತು. ನಂತರ ಕೆಲವು ಪರಿಷ್ಕರಣೆಗಳಲ್ಲಿ ಈ ಮಿತಿಯನ್ನು 50ಕ್ಕೆ ಹೆಚ್ಚಿಸಲಾಗಿತ್ತು. ಈ ವರ್ಷದ ಜನವರಿಯಲ್ಲಿ ಪಶ್ಚಿಮ ಬಂಗಾಳದ ಪರಿಷ್ಕರಣೆಗೆ ಸಂಬಂಧಿಸಿದ ಪತ್ರದಲ್ಲಿ ಅರ್ಜಿಗಳ ಸಂಖ್ಯೆಯ ಮೇಲಿನ ಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಒಬ್ಬ ವ್ಯಕ್ತಿಯಿಂದ ಐದಕ್ಕಿಂತ ಹೆಚ್ಚು ಅರ್ಜಿಗಳು ಬಂದರೆ ಕಡ್ಡಾಯ ಪರಿಶೀಲನೆ ನಡೆಸುವ ಸೂಚನೆ ನೀಡಲಾಗಿತ್ತು ಎಂದು ನ್ಯೂಸ್‌ಲಾಂಡ್ರಿ ವರದಿ ಮಾಡಿದೆ. ಇದೇ ಸ್ಪಷ್ಟೀಕರಣವನ್ನು ಉತ್ತರಾಖಂಡದ ಕೆಲವು ಚುನಾವಣಾ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ಆದರೆ, ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಕೇವಲ ಆಕ್ಷೇಪಣೆ ಸಲ್ಲಿಸಿದ ಮಾತ್ರಕ್ಕೆ ಮತದಾರರ ಹೆಸರು ತಕ್ಷಣ ಅಳಿಸಲಾಗುವುದಿಲ್ಲ. ಆಕ್ಷೇಪಣೆಗೊಳಗಾದ ಮತದಾರರಿಗೆ ನೋಟಿಸ್ ನೀಡಿ, ದಾಖಲೆ ಸಲ್ಲಿಸಲು ಹಾಗೂ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕು. ಹೆಸರು ಅಳಿಸುವ ಕಾರಣವನ್ನು ಸಾಬೀತುಪಡಿಸುವ ಹೊಣೆ ಅರ್ಜಿ ಸಲ್ಲಿಸಿದ ವ್ಯಕ್ತಿಯ ಮೇಲೆಯೇ ಇರುತ್ತದೆ. SIR

ಬಿಜೆಪಿ ಆರೋಪ ತಳ್ಳಿಹಾಕಿದೆ

ಮತದಾರರ ಹೆಸರು ಅಳಿಸುವ ಆಕ್ಷೇಪಣೆಗಳು ಸಾಮಾನ್ಯ ಚುನಾವಣಾ ಪ್ರಕ್ರಿಯೆಯ ಭಾಗವಾಗಿದ್ದು, ಯಾವುದೇ ಮಾನ್ಯ ಮತದಾರನ ಹೆಸರನ್ನು ಪರಿಶೀಲನೆ ಇಲ್ಲದೆ ಅಳಿಸಲಾಗುವುದಿಲ್ಲ ಎಂದು ಉತ್ತರಾಖಂಡ ಬಿಜೆಪಿ ವಕ್ತಾರ ವಿನೋದ್ ಚಾಮೋಲಿ ಹೇಳಿದ್ದಾರೆ.

ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಎರಡೂ ಕಡೆ ನೋಂದಾಯಿತರಾಗಿರುವವರಂತಹ ನಕಲಿ ಅಥವಾ ದ್ವಂದ್ವ ನೋಂದಣಿಗಳನ್ನು ಪತ್ತೆಹಚ್ಚುವ ಪ್ರಕ್ರಿಯೆ ನಡೆಯುತ್ತಿದೆ. ಅಂತಿಮವಾಗಿ ಪರಿಶೀಲನೆಯ ನಂತರ ಅನರ್ಹ ಅಥವಾ ನಕಲಿ ಹೆಸರುಗಳನ್ನು ಮಾತ್ರ ತೆಗೆದುಹಾಕಲಾಗುವುದು ಎಂದು ಅವರು ಹೇಳಿದ್ದಾರೆ. ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡು ಬಿಜೆಪಿ ಯಾವುದೇ ನೀತಿ ಅನುಸರಿಸುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಚುನಾವಣಾ ಅಧಿಕಾರಿಗಳೂ ಸಹ ಇದೇ ನಿಲುವು ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದಿರುವ ಪ್ರಕರಣಗಳಲ್ಲಿ ವೈಯಕ್ತಿಕ ಪರಿಶೀಲನೆ, ನೋಟಿಸ್ ಮತ್ತು ವಿಚಾರಣೆ ನಡೆಸಲಾಗುವುದು. ಅಗತ್ಯ ಪ್ರಕ್ರಿಯೆ ಪೂರ್ಣಗೊಳ್ಳದೆ ಯಾವುದೇ ಮತದಾರರ ಹೆಸರನ್ನು ಅಳಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತಿಮ ಪಟ್ಟಿ ಪ್ರಕಟವಾಗುವ ಮುನ್ನವೇ ವಿವಾದ

ಉತ್ತರಾಖಂಡದಲ್ಲಿ ಜುಲೈ 14ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 71.3 ಲಕ್ಷ ಮತದಾರರಿದ್ದರು. ಹಿಂದಿನ ಪಟ್ಟಿಯಲ್ಲಿ ಈ ಸಂಖ್ಯೆ 79.6 ಲಕ್ಷವಾಗಿತ್ತು. ಆಕ್ಷೇಪಣೆ ಮತ್ತು ಹಕ್ಕುಗಳ ಸಲ್ಲಿಕೆ ಪ್ರಕ್ರಿಯೆ ಆಗಸ್ಟ್ 13ರಂದು ಮುಕ್ತಾಯಗೊಂಡಿದ್ದು, ಸೆಪ್ಟೆಂಬರ್ 11ರವರೆಗೆ ನೋಟಿಸ್ ಹಾಗೂ ಪರಿಶೀಲನಾ ಪ್ರಕ್ರಿಯೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 15ರಂದು ಪ್ರಕಟಿಸಲು ನಿಗದಿಪಡಿಸಲಾಗಿದೆ.

ಈ ನಡುವೆ, ಸಾಮೂಹಿಕ ಆಕ್ಷೇಪಣೆಗಳ ಮೂಲಕ ನಿರ್ದಿಷ್ಟ ಸಮುದಾಯದ ಮತದಾರರನ್ನೇ ಹೆಚ್ಚಿನ ಪ್ರಮಾಣದಲ್ಲಿ ಗುರಿಯಾಗಿಸಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪವು ಚುನಾವಣಾ ಪಟ್ಟಿಯ ಪರಿಷ್ಕರಣೆಯ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತದ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಕಾಂಗ್ರೆಸ್ ನಿಯೋಗವು ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಆರೋಪಗಳ ಬಗ್ಗೆ ದಾಖಲೆಗಳನ್ನು ನೀಡುವಂತೆ ರಾಜ್ಯ ಕಾಂಗ್ರೆಸ್‌ಗೆ ಚುನಾವಣಾ ಅಧಿಕಾರಿಗಳು ಆಹ್ವಾನಿಸಿದ್ದಾರೆ. SIR

ಇದನ್ನೂ ಓದಿ : RSS ಕಚೇರಿಯಲ್ಲಿ ‘ನಮಸ್ತೆ ಸದಾ ವತ್ಸಲೆ’ ಬದಲು ‘ವಂದೇ ಮಾತರಂ’ ಹಾಡಿ! ಪ್ರಿಯಾಂಕ್ ಖರ್ಗೆ ಸವಾಲು Janashakthi Media

Donate Janashakthi Media

Leave a Reply

Your email address will not be published. Required fields are marked *