ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರಾಜ್ಯದ ಮತದಾರರ ಪಟ್ಟಿಯಲ್ಲಿನ ದೊಡ್ಡ ಪ್ರಮಾಣದ ಬದಲಾವಣೆ ಮತ್ತು ತಿದ್ದುಪಡಿಯ ಅಗತ್ಯವನ್ನು ಹೊರಗೆಡವಿದೆ. ಒಟ್ಟು 5.54 ಕೋಟಿ ಮತದಾರರ ಪೈಕಿ 1.07 ಕೋಟಿ ಮಂದಿಯನ್ನು ವಿವಿಧ ಕಾರಣಗಳಡಿ ಎಎಸ್‌ಡಿಡಿಒ ವರ್ಗದಲ್ಲಿ ಗುರುತಿಸಿರುವುದು ಗಮನ ಸೆಳೆದಿದ್ದರೆ, ಇದೇ ಅವಧಿಯಲ್ಲಿ ಹೊಸ ಸೇರ್ಪಡೆ, ಹೆಸರು ಅಳಿಸುವಿಕೆ ಮತ್ತು ತಿದ್ದುಪಡಿಗಾಗಿ 14.67 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ವಿಶೇಷವಾಗಿ 9.23 ಲಕ್ಷ ಮಂದಿ ತಮ್ಮ ಮತದಾರರ ವಿವರಗಳ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿರುವುದು, ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವ ಮುನ್ನ ಇನ್ನೂ ದೊಡ್ಡ ಮಟ್ಟದ ಪರಿಶೀಲನೆ ಮತ್ತು ಬದಲಾವಣೆಯ ಪ್ರಕ್ರಿಯೆ ನಡೆಯಬೇಕಿರುವುದನ್ನು ಸೂಚಿಸಿದೆ. ಎಸ್‌ಐಆರ್
ಗುರುರಾಜ ದೇಸಾಯಿ
ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಮಹತ್ವದ ಹಂತಕ್ಕೆ ತಲುಪಿದೆ. ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಮನೆಮನೆಗೆ ತೆರಳಿ ನಡೆಸಿದ ಪರಿಶೀಲನೆ, ಮತದಾರರ ವಿವರಗಳ ಡಿಜಿಟಲೀಕರಣ ಮತ್ತು ನಂತರದ ಅರ್ಜಿ ಪ್ರಕ್ರಿಯೆಯ ಅಂಕಿಅಂಶಗಳು ರಾಜ್ಯದ ಮತದಾರರ ಪಟ್ಟಿಯ ಸ್ಥಿತಿಗತಿಯನ್ನು ತೆರೆದಿಟ್ಟಿವೆ.
ಜೂನ್ 16ರ ವೇಳೆಗೆ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದರು. ಎಸ್‌ಐಆರ್ ಪ್ರಕ್ರಿಯೆಯಡಿ ಮನೆಮನೆಗೆ ತೆರಳಿ ಪರಿಶೀಲನೆ ನಡೆಸಿದ ಬಳಿಕ 4,46,35,975 ಮತದಾರರ ಎನ್ಯೂಮರೇಷನ್ ಫಾರ್ಮ್‌ಗಳ ವಿವರಗಳನ್ನು ಡಿಜಿಟಲೀಕರಿಸಲಾಗಿದೆ. ಇದು ಒಟ್ಟು ಮತದಾರರ ಶೇ.80.52ರಷ್ಟಾಗಿದೆ.
ಉಳಿದ 1,07,96,339 ಮತದಾರರನ್ನು ವಿವಿಧ ಕಾರಣಗಳಡಿ ಎಎಸ್‌ಡಿಡಿಒ ವರ್ಗದಲ್ಲಿ ಗುರುತಿಸಲಾಗಿದೆ. ಇದು ರಾಜ್ಯದ ಒಟ್ಟು ಮತದಾರರ ಶೇ.19.48ರಷ್ಟಾಗಿದೆ. ಈ ಸಂಖ್ಯೆ ದೊಡ್ಡದಾಗಿದ್ದರೂ, ಎಎಸ್‌ಡಿಡಿಒ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿರುವ ಎಲ್ಲ ಮತದಾರರ ಹೆಸರನ್ನೂ ಅಂತಿಮವಾಗಿ ಮತದಾರರ ಪಟ್ಟಿಯಿಂದ ಅಳಿಸಲಾಗುತ್ತದೆ ಎಂದು ಅರ್ಥವಲ್ಲ. ಕರಡು ಪಟ್ಟಿಯ ಪ್ರಕಟಣೆ ಬಳಿಕ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಪ್ರತ್ಯೇಕ ಅವಕಾಶ ನೀಡಲಾಗಿದೆ.

ಎಎಸ್‌ಡಿಡಿಒ ಪಟ್ಟಿಯಲ್ಲಿ 65.45 ಲಕ್ಷ ಸ್ಥಳಾಂತರಗೊಂಡವರು
ಎಎಸ್‌ಡಿಡಿಒ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿರುವ 1,07,96,339 ಮತದಾರರ ಪೈಕಿ ಅತಿ ಹೆಚ್ಚಿನ ಸಂಖ್ಯೆಯವರು ಶಾಶ್ವತವಾಗಿ ಸ್ಥಳಾಂತರಗೊಂಡವರು. 65,45,679 ಮಂದಿಯನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರು ಎಂದು ಗುರುತಿಸಲಾಗಿದೆ.
16,39,864 ಮಂದಿ ಮೃತಪಟ್ಟವರು ಎಂದು ದಾಖಲಿಸಲಾಗಿದೆ. ತಮ್ಮ ದಾಖಲಾದ ವಿಳಾಸದಲ್ಲಿ ಪತ್ತೆಯಾಗದ 15,17,042 ಮಂದಿಯೂ ಈ ಪಟ್ಟಿಯಲ್ಲಿದ್ದಾರೆ. ಈಗಾಗಲೇ ಮತ್ತೊಂದು ಕಡೆ ಮತದಾರರಾಗಿ ನೋಂದಣಿಯಾಗಿರುವ 7,09,870 ಮಂದಿಯನ್ನು ಗುರುತಿಸಲಾಗಿದೆ. ಇತರ ಕಾರಣಗಳಡಿ 3,83,884 ಮಂದಿಯನ್ನು ಎಎಸ್‌ಡಿಡಿಒ ವರ್ಗಕ್ಕೆ ಸೇರಿಸಲಾಗಿದೆ.
ಅಂದರೆ, ಎಎಸ್‌ಡಿಡಿಒ ಪಟ್ಟಿಯಲ್ಲಿರುವ ಎಲ್ಲ ಮತದಾರರ ಪರಿಸ್ಥಿತಿಯೂ ಒಂದೇ ರೀತಿಯಲ್ಲ. ಮೃತಪಟ್ಟವರು, ಮತ್ತೊಂದು ಕಡೆ ನೋಂದಣಿಯಾಗಿರುವವರು, ಸ್ಥಳಾಂತರಗೊಂಡವರು ಹಾಗೂ ವಿಳಾಸದಲ್ಲಿ ಪತ್ತೆಯಾಗದವರು ಎಂಬ ಪ್ರತ್ಯೇಕ ಕಾರಣಗಳಡಿ ಅವರನ್ನು ಗುರುತಿಸಲಾಗಿದೆ. ಎಸ್‌ಐಆರ್
ಕಲಬುರಗಿಯಲ್ಲಿ 5.21 ಲಕ್ಷಕ್ಕೂ ಹೆಚ್ಚು ಮಂದಿ
ಜಿಲ್ಲಾವಾರು ಎಎಸ್‌ಡಿಡಿಒ ಅಂಕಿಅಂಶಗಳಲ್ಲೂ ಸಾಕಷ್ಟು ವ್ಯತ್ಯಾಸವಿದೆ. ಕಲಬುರಗಿ ಜಿಲ್ಲೆಯಲ್ಲಿ 5,21,957 ಮತದಾರರನ್ನು ಎಎಸ್‌ಡಿಡಿಒ ವರ್ಗದಲ್ಲಿ ಗುರುತಿಸಲಾಗಿದೆ. ಇದು ಜಿಲ್ಲೆಯ ಒಟ್ಟು ಮತದಾರರ ಶೇ.22.01ರಷ್ಟಾಗಿದೆ.
ರಾಯಚೂರಿನಲ್ಲಿ ಶೇ.18.75ರಷ್ಟು ಮತದಾರರು ಈ ವರ್ಗದಲ್ಲಿದ್ದಾರೆ. ಯಾದಗಿರಿಯಲ್ಲಿ ಶೇ.17.97, ಬೀದರ್‌ನಲ್ಲಿ ಶೇ.16.49 ಹಾಗೂ ವಿಜಯಪುರದಲ್ಲಿ ಶೇ.14.99ರಷ್ಟು ಮತದಾರರನ್ನು ಎಎಸ್‌ಡಿಡಿಒ ವರ್ಗದಲ್ಲಿ ಗುರುತಿಸಲಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಈ ಪ್ರಮಾಣ ಬೇರೆ ಬೇರೆ ಆಗಿರುವುದು ಸ್ಥಳೀಯವಾಗಿ ಮತದಾರರ ಸ್ಥಳಾಂತರ, ವಿಳಾಸ ಬದಲಾವಣೆ ಹಾಗೂ ಮತದಾರರ ವಿವರಗಳನ್ನು ನವೀಕರಿಸದಿರುವುದು ಸೇರಿದಂತೆ ಹಲವು ಕಾರಣಗಳಿಗೆ ಸಂಬಂಧಿಸಿದೆ.
ಬೆಂಗಳೂರು ಘಟಕಗಳಲ್ಲಿ ಹೆಚ್ಚಿನ ಪ್ರಮಾಣ
ಬೆಂಗಳೂರು ನಗರ ಮತ್ತು ಬಿಬಿಎಂಪಿಯ ಮೂರು ಘಟಕಗಳಲ್ಲಿ ಎಎಸ್‌ಡಿಡಿಒ ಪ್ರಮಾಣ ಗಮನಾರ್ಹವಾಗಿದೆ. ಬೆಂಗಳೂರು ನಗರದಲ್ಲಿ ಶೇ.42.71ರಷ್ಟು ಮತದಾರರನ್ನು ಈ ವರ್ಗದಲ್ಲಿ ಗುರುತಿಸಲಾಗಿದೆ. ಬಿಬಿಎಂಪಿ ಉತ್ತರದಲ್ಲಿ ಶೇ.45.12, ಬಿಬಿಎಂಪಿ ಕೇಂದ್ರದಲ್ಲಿ ಶೇ.45.54 ಹಾಗೂ ಬಿಬಿಎಂಪಿ ದಕ್ಷಿಣದಲ್ಲಿ ಶೇ.49.33ರಷ್ಟು ಮತದಾರರು ಎಎಸ್‌ಡಿಡಿಒ ಪಟ್ಟಿಯಲ್ಲಿದ್ದಾರೆ.
ನಗರ ಪ್ರದೇಶಗಳಲ್ಲಿ ಉದ್ಯೋಗ, ಶಿಕ್ಷಣ ಮತ್ತು ಇತರ ಕಾರಣಗಳಿಗಾಗಿ ವಿಳಾಸ ಬದಲಾಯಿಸುವವರ ಸಂಖ್ಯೆ ಹೆಚ್ಚಿರುವುದು ಮತದಾರರ ಪಟ್ಟಿಯ ನಿರಂತರ ಪರಿಷ್ಕರಣೆಯ ಅಗತ್ಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಬಾಡಿಗೆ ಮನೆಗಳಲ್ಲಿ ವಾಸಿಸುವವರು ಹಾಗೂ ಕೆಲಸದ ಕಾರಣದಿಂದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುವವರ ಮಾಹಿತಿಯನ್ನು ಮತದಾರರ ಪಟ್ಟಿಯಲ್ಲಿ ನವೀಕರಿಸುವುದು ಪ್ರಮುಖ ವಿಚಾರವಾಗಿದೆ.
14.67 ಲಕ್ಷ ಅರ್ಜಿಗಳು
ಎಸ್‌ಐಆರ್ ಪ್ರಕ್ರಿಯೆಯ ಮತ್ತೊಂದು ಪ್ರಮುಖ ಭಾಗವೆಂದರೆ ಮತದಾರರಿಂದ ಸಲ್ಲಿಕೆಯಾಗಿರುವ ಅರ್ಜಿಗಳು. ಜೂನ್ 16ರಿಂದ ಆಗಸ್ಟ್ 23ರವರೆಗೆ ಫಾರ್ಮ್ 6, ಫಾರ್ಮ್ 7 ಮತ್ತು ಫಾರ್ಮ್ 8 ಮೂಲಕ ಒಟ್ಟು 14,67,915 ಅರ್ಜಿಗಳು ಸಲ್ಲಿಕೆಯಾಗಿವೆ.
ಇದರಲ್ಲಿ 9,23,386 ಅರ್ಜಿಗಳು ಫಾರ್ಮ್ 8 ಆಗಿವೆ. ಹೊಸ ಮತದಾರರ ಸೇರ್ಪಡೆಗೆ ಸಂಬಂಧಿಸಿದ ಫಾರ್ಮ್ 6ರ 4,73,342 ಅರ್ಜಿಗಳು ಸಲ್ಲಿಕೆಯಾಗಿವೆ. ಹೆಸರು ಅಳಿಸುವಿಕೆ ಅಥವಾ ಮತದಾರರ ಸೇರ್ಪಡೆಗೆ ಆಕ್ಷೇಪಣೆ ಸಲ್ಲಿಸಲು ಬಳಸುವ ಫಾರ್ಮ್ 7ರ 67,307 ಅರ್ಜಿಗಳು ದಾಖಲಾಗಿವೆ.
ವಿದೇಶಿ ಮತದಾರರ ನೋಂದಣಿಗೆ ಸಂಬಂಧಿಸಿದ ಫಾರ್ಮ್ 6ಎಯ 3,880 ಅರ್ಜಿಗಳೂ ಬಂದಿವೆ.
ತಿದ್ದುಪಡಿಗೇ ಅತಿ ಹೆಚ್ಚು ಅರ್ಜಿ
ಒಟ್ಟು 14.67 ಲಕ್ಷ ಅರ್ಜಿಗಳ ಪೈಕಿ ಫಾರ್ಮ್ 8 ಅರ್ಜಿಗಳ ಸಂಖ್ಯೆ 9.23 ಲಕ್ಷ. ಅಂದರೆ ಒಟ್ಟು ಅರ್ಜಿಗಳಲ್ಲಿ ಶೇ.62.90ರಷ್ಟು ಅರ್ಜಿಗಳು ತಿದ್ದುಪಡಿಗೆ ಸಂಬಂಧಿಸಿದವು.
ಫಾರ್ಮ್ 6 ಅರ್ಜಿಗಳ ಪಾಲು ಶೇ.32.25ರಷ್ಟಿದೆ. ಫಾರ್ಮ್ 7 ಅರ್ಜಿಗಳ ಪಾಲು ಶೇ.4.59ರಷ್ಟಾಗಿದೆ.
ಹೊಸ ಮತದಾರರ ಸೇರ್ಪಡೆಗೆ ಬಂದಿರುವ ಫಾರ್ಮ್ 6 ಅರ್ಜಿಗಳಿಗಿಂತ ತಿದ್ದುಪಡಿಗೆ ಬಂದಿರುವ ಫಾರ್ಮ್ 8 ಅರ್ಜಿಗಳ ಸಂಖ್ಯೆ ಸುಮಾರು ಎರಡು ಪಟ್ಟು ಹೆಚ್ಚಿದೆ. ಮತದಾರರ ಹೆಸರು, ವಿಳಾಸ ಮತ್ತು ಇತರ ವಿವರಗಳ ತಿದ್ದುಪಡಿಗೆ ದೊಡ್ಡ ಸಂಖ್ಯೆಯಲ್ಲಿ ಅರ್ಜಿಗಳು ಬಂದಿರುವುದು ಈ ಪ್ರಕ್ರಿಯೆಯ ಒಂದು ಪ್ರಮುಖ ಅಂಶವಾಗಿದೆ. ಎಸ್‌ಐಆರ್
ಇದನ್ನೂ ಓದಿ : 1 ಕೋಟಿ ಮತದಾರರ ಮೇಲೆ SIR ತೂಗುಕತ್ತಿ: Form-8 ಬದಲು Form-6 ಏಕೆ?
ಜಿಲ್ಲಾವಾರು ಫಾರ್ಮ್ 6, 7, 8 ಅರ್ಜಿಗಳ ಸಂಪೂರ್ಣ ಮಾಹಿತಿ
| ಜಿಲ್ಲೆ/ಘಟಕ | ಫಾರ್ಮ್ 6 | ಫಾರ್ಮ್ 7 | ಫಾರ್ಮ್ 8 | ಒಟ್ಟು |
|---|---|---|---|---|
| ಬಿಬಿಎಂಪಿ ಕೇಂದ್ರ | 24,094 | 1,298 | 49,206 | 74,909* |
| ಬಿಬಿಎಂಪಿ ಉತ್ತರ | 37,721 | 1,924 | 65,961 | 1,06,241 |
| ಬಿಬಿಎಂಪಿ ದಕ್ಷಿಣ | 23,019 | 1,333 | 55,029 | 79,680 |
| ಬಾಗಲಕೋಟೆ | 7,625 | 4,325 | 16,997 | 28,953 |
| ಬೆಂಗಳೂರು ಗ್ರಾಮಾಂತರ | 7,293 | 3,061 | 13,915 | 24,294 |
| ಬೆಂಗಳೂರು ನಗರ | 71,459 | 2,893 | 1,18,356 | 1,93,869 |
| ಬೆಳಗಾವಿ | 26,129 | 7,618 | 45,451 | 79,246 |
| ಬಳ್ಳಾರಿ | 7,482 | 654 | 16,764 | 24,925 |
| ಬೀದರ್ | 15,347 | 2,800 | 19,672 | 37,830 |
| ವಿಜಯಪುರ | 13,392 | 1,769 | 19,427 | 34,599 |
| ಚಾಮರಾಜನಗರ | 4,079 | 391 | 11,287 | 15,758 |
| ಚಿಕ್ಕಬಳ್ಳಾಪುರ | 5,829 | 779 | 10,808 | 17,429 |
| ಚಿಕ್ಕಮಗಳೂರು | 6,253 | 3,455 | 14,015 | 23,760 |
| ಚಿತ್ರದುರ್ಗ | 7,183 | 1,151 | 13,370 | 21,709 |
| ದಕ್ಷಿಣ ಕನ್ನಡ | 14,666 | 2,444 | 46,919 | 64,500 |
| ದಾವಣಗೆರೆ | 10,565 | 3,697 | 17,950 | 32,231 |
| ಧಾರವಾಡ | 15,596 | 1,158 | 29,313 | 46,131 |
| ಗದಗ | 4,116 | 495 | 8,972 | 13,589 |
| ಕಲಬುರಗಿ | 27,625 | 1,066 | 37,391 | 66,136 |
| ಹಾಸನ | 11,873 | 2,064 | 19,428 | 33,391 |
| ಹಾವೇರಿ | 5,671 | 1,645 | 12,588 | 19,913 |
| ಕೊಡಗು | 3,035 | 253 | 15,044 | 18,353 |
| ಕೋಲಾರ | 10,416 | 1,313 | 17,659 | 29,395 |
| ಕೊಪ್ಪಳ | 4,888 | 472 | 10,011 | 15,372 |
| ಮಂಡ್ಯ | 8,043 | 1,025 | 18,144 | 27,220 |
| ಮೈಸೂರು | 24,068 | 2,552 | 55,813 | 82,568 |
| ರಾಯಚೂರು | 12,679 | 5,267 | 16,367 | 34,318 |
| ರಾಮನಗರ | 7,294 | 740 | 14,018 | 22,072 |
| ಶಿವಮೊಗ್ಗ | 11,384 | 4,105 | 23,081 | 38,617 |
| ತುಮಕೂರು | 13,246 | 2,392 | 25,402 | 41,070 |
| ಉಡುಪಿ | 8,854 | 1,127 | 32,130 | 42,415 |
| ಉತ್ತರ ಕನ್ನಡ | 6,256 | 844 | 12,376 | 19,532 |
| ವಿಜಯನಗರ | 6,600 | 779 | 29,499 | 36,885 |
| ಯಾದಗಿರಿ | 9,562 | 418 | 11,023 | 21,005 |
| ಕರ್ನಾಟಕ ಒಟ್ಟು | 4,73,342 | 67,307 | 9,23,386 | 14,67,915 |
ಬೆಂಗಳೂರು ನಗರದಲ್ಲಿ 1.18 ಲಕ್ಷ ಫಾರ್ಮ್ 8
ಫಾರ್ಮ್ 8 ಅರ್ಜಿಗಳಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಇಲ್ಲಿ 1,18,356 ಅರ್ಜಿಗಳು ಸಲ್ಲಿಕೆಯಾಗಿವೆ.
ಬಿಬಿಎಂಪಿ ಉತ್ತರದಲ್ಲಿ 65,961 ಫಾರ್ಮ್ 8 ಅರ್ಜಿಗಳು ದಾಖಲಾಗಿವೆ. ಮೈಸೂರಿನಲ್ಲಿ 55,813, ಬಿಬಿಎಂಪಿ ದಕ್ಷಿಣದಲ್ಲಿ 55,029 ಹಾಗೂ ಬಿಬಿಎಂಪಿ ಕೇಂದ್ರದಲ್ಲಿ 49,206 ಅರ್ಜಿಗಳು ಸಲ್ಲಿಕೆಯಾಗಿವೆ.
ದಕ್ಷಿಣ ಕನ್ನಡದಲ್ಲಿಯೂ 46,919 ಫಾರ್ಮ್ 8 ಅರ್ಜಿಗಳು ಬಂದಿವೆ. ಬೆಳಗಾವಿಯಲ್ಲಿ 45,451 ಹಾಗೂ ಕಲಬುರಗಿಯಲ್ಲಿ 37,391 ಅರ್ಜಿಗಳು ದಾಖಲಾಗಿವೆ.

ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ? ಹೀಗೆ ಚೆಕ್ ಮಾಡಿ
Voter Service Portal ಎಂಬ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ನಿಮ್ಮ EPIC Number ಅಥವಾ ಅಗತ್ಯ ವೈಯಕ್ತಿಕ ವಿವರಗಳನ್ನು ನಮೂದಿಸಿ.
Electoral Roll / Voter Listನಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿ.
ಹೊಸ ಮತದಾರರ ಸೇರ್ಪಡೆಯಲ್ಲಿ ಬೆಂಗಳೂರು ಮೊದಲ ಸ್ಥಾನ
ರಾಜ್ಯದಲ್ಲಿ ಒಟ್ಟು 4,73,342 ಫಾರ್ಮ್ 6 ಅರ್ಜಿಗಳು ಸಲ್ಲಿಕೆಯಾಗಿವೆ. ಹೊಸ ಮತದಾರರ ಸೇರ್ಪಡೆಗೆ ಸಂಬಂಧಿಸಿದ ಈ ಅರ್ಜಿಗಳಲ್ಲಿ ಬೆಂಗಳೂರು ನಗರ 71,459 ಅರ್ಜಿಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
ಬಿಬಿಎಂಪಿ ಉತ್ತರದಲ್ಲಿ 37,721 ಅರ್ಜಿಗಳು ಸಲ್ಲಿಕೆಯಾಗಿವೆ. ಕಲಬುರಗಿಯಲ್ಲಿ 27,625, ಬೆಳಗಾವಿಯಲ್ಲಿ 26,129, ಬಿಬಿಎಂಪಿ ಕೇಂದ್ರದಲ್ಲಿ 24,094, ಮೈಸೂರಿನಲ್ಲಿ 24,068 ಹಾಗೂ ಬಿಬಿಎಂಪಿ ದಕ್ಷಿಣದಲ್ಲಿ 23,019 ಫಾರ್ಮ್ 6 ಅರ್ಜಿಗಳು ದಾಖಲಾಗಿವೆ.
ಬೀದರ್‌ನಲ್ಲಿ 15,347, ಧಾರವಾಡದಲ್ಲಿ 15,596, ದಕ್ಷಿಣ ಕನ್ನಡದಲ್ಲಿ 14,666 ಹಾಗೂ ವಿಜಯಪುರದಲ್ಲಿ 13,392 ಹೊಸ ಮತದಾರರ ಸೇರ್ಪಡೆ ಅರ್ಜಿಗಳು ಬಂದಿವೆ.
ಫಾರ್ಮ್ 7 ಅರ್ಜಿಗಳಲ್ಲಿ ಬೆಳಗಾವಿ ಮೊದಲ ಸ್ಥಾನ
ಹೆಸರು ಅಳಿಸುವಿಕೆ ಅಥವಾ ಸೇರ್ಪಡೆಗೆ ಆಕ್ಷೇಪಣೆ ಸಲ್ಲಿಸಲು ಬಳಸುವ ಫಾರ್ಮ್ 7 ಅರ್ಜಿಗಳಲ್ಲಿ ಬೆಳಗಾವಿ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 7,618 ಅರ್ಜಿಗಳು ಸಲ್ಲಿಕೆಯಾಗಿವೆ.
ರಾಯಚೂರಿನಲ್ಲಿ 5,267 ಫಾರ್ಮ್ 7 ಅರ್ಜಿಗಳು ದಾಖಲಾಗಿವೆ. ಬಾಗಲಕೋಟೆಯಲ್ಲಿ 4,325, ಶಿವಮೊಗ್ಗದಲ್ಲಿ 4,105, ದಾವಣಗೆರೆಯಲ್ಲಿ 3,697, ಚಿಕ್ಕಮಗಳೂರಿನಲ್ಲಿ 3,455 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 3,061 ಅರ್ಜಿಗಳು ಬಂದಿವೆ.
ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೆಲವು ಜಿಲ್ಲೆಗಳಲ್ಲಿ ಫಾರ್ಮ್ 7 ಅರ್ಜಿಗಳ ಸಂಖ್ಯೆ ಹೆಚ್ಚಿರುವುದು ಗಮನ ಸೆಳೆಯುತ್ತದೆ. ಎಸ್‌ಐಆರ್
ಬೆಂಗಳೂರಿನ ನಾಲ್ಕು ಘಟಕಗಳಲ್ಲಿ ಹೆಚ್ಚಿನ ಅರ್ಜಿಗಳು
ಬೆಂಗಳೂರು ನಗರ, ಬಿಬಿಎಂಪಿ ಕೇಂದ್ರ, ಬಿಬಿಎಂಪಿ ಉತ್ತರ ಮತ್ತು ಬಿಬಿಎಂಪಿ ದಕ್ಷಿಣವನ್ನು ವರದಿಯಲ್ಲಿ ಪ್ರತ್ಯೇಕ ಘಟಕಗಳಾಗಿ ಪರಿಗಣಿಸಲಾಗಿದೆ.
ಬೆಂಗಳೂರು ನಗರದಲ್ಲಿ ಫಾರ್ಮ್ 6, 7 ಮತ್ತು 8 ಸೇರಿ ಒಟ್ಟು 1,93,869 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 71,459 ಫಾರ್ಮ್ 6, 2,893 ಫಾರ್ಮ್ 7 ಹಾಗೂ 1,18,356 ಫಾರ್ಮ್ 8 ಅರ್ಜಿಗಳಿವೆ.
ಬಿಬಿಎಂಪಿ ಉತ್ತರದಲ್ಲಿ ಒಟ್ಟು 1,06,241 ಅರ್ಜಿಗಳು ದಾಖಲಾಗಿವೆ. ಇದರಲ್ಲಿ 37,721 ಫಾರ್ಮ್ 6, 1,924 ಫಾರ್ಮ್ 7 ಹಾಗೂ 65,961 ಫಾರ್ಮ್ 8 ಅರ್ಜಿಗಳಿವೆ.
ಬಿಬಿಎಂಪಿ ದಕ್ಷಿಣದಲ್ಲಿ ಒಟ್ಟು 79,680 ಅರ್ಜಿಗಳು ಸಲ್ಲಿಕೆಯಾಗಿವೆ. 23,019 ಫಾರ್ಮ್ 6, 1,333 ಫಾರ್ಮ್ 7 ಹಾಗೂ 55,029 ಫಾರ್ಮ್ 8 ಅರ್ಜಿಗಳು ದಾಖಲಾಗಿವೆ.
ಬಿಬಿಎಂಪಿ ಕೇಂದ್ರದಲ್ಲಿ 24,094 ಫಾರ್ಮ್ 6, 1,298 ಫಾರ್ಮ್ 7 ಹಾಗೂ 49,206 ಫಾರ್ಮ್ 8 ಅರ್ಜಿಗಳು ಸಲ್ಲಿಕೆಯಾಗಿವೆ.
ಜಿಲ್ಲಾವಾರು ಅರ್ಜಿಗಳ ಚಿತ್ರ
ಮೈಸೂರು ಜಿಲ್ಲೆಯಲ್ಲಿ ಒಟ್ಟು 82,568 ಫಾರ್ಮ್ 6, 7 ಮತ್ತು 8 ಅರ್ಜಿಗಳು ಸಲ್ಲಿಕೆಯಾಗಿವೆ. ಬೆಳಗಾವಿಯಲ್ಲಿ 79,246, ಬಿಬಿಎಂಪಿ ದಕ್ಷಿಣದಲ್ಲಿ 79,680 ಹಾಗೂ ಬಿಬಿಎಂಪಿ ಕೇಂದ್ರದಲ್ಲಿ 74,909 ಅರ್ಜಿಗಳು ದಾಖಲಾಗಿವೆ.
ಕಲಬುರಗಿಯಲ್ಲಿ ಒಟ್ಟು 66,136 ಅರ್ಜಿಗಳು ಸಲ್ಲಿಕೆಯಾಗಿವೆ. ದಕ್ಷಿಣ ಕನ್ನಡದಲ್ಲಿ 64,500, ಧಾರವಾಡದಲ್ಲಿ 46,131 ಹಾಗೂ ಉಡುಪಿಯಲ್ಲಿ 42,415 ಅರ್ಜಿಗಳು ದಾಖಲಾಗಿವೆ.
ಶಿವಮೊಗ್ಗದಲ್ಲಿ 38,617, ಬೀದರ್‌ನಲ್ಲಿ 37,830, ವಿಜಯನಗರದಲ್ಲಿ 36,885, ವಿಜಯಪುರದಲ್ಲಿ 34,599 ಹಾಗೂ ರಾಯಚೂರಿನಲ್ಲಿ 34,318 ಅರ್ಜಿಗಳು ಸಲ್ಲಿಕೆಯಾಗಿವೆ.
ಹಾಸನದಲ್ಲಿ 33,391, ದಾವಣಗೆರೆಯಲ್ಲಿ 32,231, ಕೋಲಾರದಲ್ಲಿ 29,395, ಬಾಗಲಕೋಟೆಯಲ್ಲಿ 28,953 ಹಾಗೂ ಮಂಡ್ಯದಲ್ಲಿ 27,220 ಅರ್ಜಿಗಳು ದಾಖಲಾಗಿವೆ.
ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆ
ಕರಡು ಮತದಾರರ ಪಟ್ಟಿಯ ಪ್ರಕಟಣೆಯ ಬಳಿಕ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕರಡು ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರು ಹೆಸರು ಸೇರಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಮತದಾರರ ಪಟ್ಟಿಯಲ್ಲಿನ ಹೆಸರು, ವಿಳಾಸ ಅಥವಾ ಇತರ ವಿವರಗಳಲ್ಲಿ ತಪ್ಪಿದ್ದರೆ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಬಹುದು. ನಿಯಮಾನುಸಾರ ಹೆಸರು ಅಳಿಸುವಿಕೆ ಅಥವಾ ಸೇರ್ಪಡೆಗೆ ಆಕ್ಷೇಪಣೆಯನ್ನೂ ಸಲ್ಲಿಸಲು ಅವಕಾಶವಿದೆ.
ಕರಡು ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದ ಎಎಸ್‌ಡಿಡಿಒ ಮತದಾರರ ಬೂತ್‌ವಾರು ಪಟ್ಟಿಗಳನ್ನು ಚುನಾವಣಾಧಿಕಾರಿಗಳ ಕಚೇರಿಗಳ ನೋಟಿಸ್ ಬೋರ್ಡ್‌ಗಳಲ್ಲಿ ಪ್ರಕಟಿಸಲಾಗಿದೆ. ಹೆಸರು ಸೇರಿಸದಿರುವ ಕಾರಣದ ಮಾಹಿತಿಯನ್ನೂ ನೀಡಲಾಗಿದೆ.
ಅರ್ಜಿಗಳ ಪರಿಶೀಲನೆಗೆ ಅಧಿಕಾರಿಗಳ ನಿಯೋಜನೆ
ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಅರ್ಜಿಗಳು ಮತ್ತು ಆಕ್ಷೇಪಣೆಗಳ ಪರಿಶೀಲನೆಗಾಗಿ 224 ಚುನಾವಣಾ ನೋಂದಣಿ ಅಧಿಕಾರಿಗಳು ಹಾಗೂ 336 ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಹಕ್ಕು ಮತ್ತು ಆಕ್ಷೇಪಣೆಗಳ ಅವಧಿ ಮುಗಿದ ಬಳಿಕ ಅರ್ಜಿಗಳ ಪರಿಶೀಲನೆ ನಡೆಯಲಿದೆ. ಅಗತ್ಯವಿರುವ ಪ್ರಕರಣಗಳಲ್ಲಿ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತದೆ. ಬಳಿಕ ನಿಯಮಾನುಸಾರ ಅರ್ಜಿಗಳ ವಿಲೇವಾರಿ ನಡೆಯಲಿದೆ.
ಅಕ್ಟೋಬರ್ 27ರಂದು ಅಂತಿಮ ಪಟ್ಟಿ
ಕರ್ನಾಟಕದಲ್ಲಿ ಎಸ್‌ಐಆರ್‌ನ ಮನೆಮನೆ ಪರಿಶೀಲನಾ ಹಂತ ಜೂನ್ 30ರಿಂದ ಆಗಸ್ಟ್ 17ರವರೆಗೆ ನಡೆದಿತ್ತು. ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ.
ಕರಡು ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸೆಪ್ಟೆಂಬರ್ 23ರವರೆಗೆ ಸಲ್ಲಿಸಬಹುದು. ಬಳಿಕ ಅರ್ಜಿಗಳ ಪರಿಶೀಲನೆ, ನೋಟಿಸ್ ಮತ್ತು ವಿಲೇವಾರಿ ಪ್ರಕ್ರಿಯೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲು ವೇಳಾಪಟ್ಟಿ ನಿಗದಿಯಾಗಿದೆ.
ಅಂತಿಮ ಪಟ್ಟಿಯ ನಂತರವೇ ಪೂರ್ಣ ಚಿತ್ರ
ಪ್ರಸ್ತುತ ಲಭ್ಯವಿರುವ ಅಂಕಿಅಂಶಗಳಲ್ಲಿ ಎರಡು ವಿಚಾರಗಳು ಪ್ರಮುಖವಾಗಿವೆ. ಒಂದು ಕಡೆ 1.07 ಕೋಟಿ ಮತದಾರರನ್ನು ಎಎಸ್‌ಡಿಡಿಒ ವರ್ಗದಲ್ಲಿ ಗುರುತಿಸಲಾಗಿದೆ. ಇನ್ನೊಂದು ಕಡೆ ಈಗಾಗಲೇ 14.67 ಲಕ್ಷ ಅರ್ಜಿಗಳು ಮತದಾರರ ಸೇರ್ಪಡೆ, ತಿದ್ದುಪಡಿ ಮತ್ತು ಆಕ್ಷೇಪಣೆಗೆ ಸಂಬಂಧಿಸಿ ಸಲ್ಲಿಕೆಯಾಗಿವೆ.
ಇವುಗಳಲ್ಲಿ ತಿದ್ದುಪಡಿಗೆ ಸಂಬಂಧಿಸಿದ ಫಾರ್ಮ್ 8 ಅರ್ಜಿಗಳ ಸಂಖ್ಯೆ 9.23 ಲಕ್ಷ ಇರುವುದು ಗಮನಾರ್ಹ. ಹೊಸ ಸೇರ್ಪಡೆಗೆ 4.73 ಲಕ್ಷ ಅರ್ಜಿಗಳು ಬಂದಿದ್ದು, 67 ಸಾವಿರಕ್ಕೂ ಹೆಚ್ಚು ಫಾರ್ಮ್ 7 ಅರ್ಜಿಗಳು ದಾಖಲಾಗಿವೆ.
ಆದರೆ ಈ ಅರ್ಜಿಗಳಲ್ಲಿ ಎಷ್ಟು ಅರ್ಜಿಗಳು ಅಂಗೀಕಾರವಾಗುತ್ತವೆ, ಎಷ್ಟು ತಿರಸ್ಕೃತವಾಗುತ್ತವೆ, ಎಷ್ಟು ಮತದಾರರ ವಿವರಗಳನ್ನು ತಿದ್ದುಪಡಿ ಮಾಡಲಾಗುತ್ತದೆ ಮತ್ತು ಎಎಸ್‌ಡಿಡಿಒ ಪಟ್ಟಿಯಲ್ಲಿರುವ ಎಷ್ಟು ಅರ್ಹ ಮತದಾರರ ಹೆಸರು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತದೆ ಎಂಬುದು ಮುಂದಿನ ಪ್ರಕ್ರಿಯೆಯ ಬಳಿಕವೇ ತಿಳಿಯಲಿದೆ.
ಎಸ್‌ಐಆರ್‌ನ ಅಂತಿಮ ಪರಿಣಾಮವನ್ನು ತಿಳಿಯಬೇಕಾದರೆ ಕರಡು ಪಟ್ಟಿಯಲ್ಲಿರುವ 1.07 ಕೋಟಿ ಎಎಸ್‌ಡಿಡಿಒ ಮತದಾರರ ಸಂಖ್ಯೆಯನ್ನು ಮಾತ್ರ ನೋಡುವುದು ಸಾಕಾಗುವುದಿಲ್ಲ. ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಬರುವ ಅರ್ಜಿಗಳು, ಅವುಗಳ ಪರಿಶೀಲನೆ ಹಾಗೂ ಅಕ್ಟೋಬರ್ 27ರಂದು ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯ ಅಂಕಿಅಂಶಗಳೇ ಪೂರ್ಣ ಚಿತ್ರವನ್ನು ನೀಡಲಿವೆ. ಎಸ್‌ಐಆರ್
ಇದನ್ನೂ ನೋಡಿ : 1 ಕೋಟಿ ಮತದಾರರ ಮೇಲೆ SIR ತೂಗುಕತ್ತಿ: Form-8 ಬದಲು Form-6 ಏಕೆ? ವಿಶ್ಲೇಷಣೆ : ಗುರುರಾಜ ದೇಸಾಯಿ
