ಲಾತೂರ್: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಔಸಾ ತಾಲ್ಲೂಕಿನ ಸರ್ಕಾರಿ ಶಾಲೆಯೊಂದಕ್ಕೆ ಅನುಮತಿ ಇಲ್ಲದೆ ಪ್ರವೇಶಿಸಿ ಶಿಕ್ಷಕರಿಗೆ ಬೆದರಿಕೆ ಹಾಕಿದ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ‘ಕಾಕ್‌ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಎಫ್‌ಐಆರ್ ಸುದ್ದಿಗೆ ಪ್ರತಿಕ್ರಿಯಿಸಿರುವ ದಿಪ್ಕೆ, ಸಾಮಾಜಿಕ ಜಾಲತಾಣದಲ್ಲಿ ಹಿರಿಯ ಗಾಯಕ ಕಿಶೋರ್ ಕುಮಾರ್ ಅವರ ‘ಯೇ ಜೀವನ ಹೈ’ ಹಾಡಿನ ತುಣುಕನ್ನು ಹಂಚಿಕೊಂಡಿದ್ದಾರೆ. ಜೀವನದ ಏರಿಳಿತಗಳನ್ನು ಪ್ರತಿಬಿಂಬಿಸುವ ಹಾಡಿನ ಮೂಲಕ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ತಮ್ಮ ನಿಲುವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲೂ ಎಫ್‌ಐಆರ್ ಕುರಿತ ಸುದ್ದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ‘ಓ ಮೈ ಗಾಡ್’ ಎಂಬ ಮೀಮ್‌ನೊಂದಿಗೆ ಹಂಚಿಕೊಂಡಿದ್ದಾರೆ.
ಏನಿದು ಪ್ರಕರಣ?
ಲಾತೂರ್ ಜಿಲ್ಲೆಯ ಔಸಾ ಸಮೀಪದ ಜವಳಿ ಪ್ರದೇಶದಲ್ಲಿರುವ ಜಿಲ್ಲಾ ಪಂಚಾಯಿತಿ ಉರ್ದು ಶಾಲೆಗೆ ದಿಪ್ಕೆ ಹಾಗೂ ಸಿಜೆಪಿಯ ಅಜಿಂಕ್ಯ ಶಿಂಧೆ ಸೇರಿದಂತೆ ಕೆಲವರು ಅನುಮತಿ ಇಲ್ಲದೆ ಪ್ರವೇಶಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಶಾಲೆಯ ಶಿಕ್ಷಕಿ ಸಯ್ಯದ್ ಶಮ್ಶದ್‌ಬಾನೋ ಖೈರಾತಲಿ ನೀಡಿದ ದೂರಿನ ಆಧಾರದ ಮೇಲೆ ಔಸಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅನುಮತಿಯಿಲ್ಲದೆ ಶಾಲಾ ಆವರಣಕ್ಕೆ ಪ್ರವೇಶಿಸಿ ತರಗತಿಗಳಿಗೆ ಅಡ್ಡಿಪಡಿಸಿದರು ಹಾಗೂ ಶಿಕ್ಷಕರಿಗೆ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದಿಪ್ಕೆ ಮತ್ತು ಅವರ ಸಹಚರರು ಶಾಲೆಯ ವಿದ್ಯಾರ್ಥಿಗಳೊಂದಿಗೆ ಕುಳಿತು ಶಾಲೆಯ ಸ್ಥಿತಿ-ಗತಿಗಳ ಕುರಿತು ಪ್ರಶ್ನೆಗಳನ್ನು ಕೇಳಿದ್ದರು ಎಂದು ವರದಿಯಾಗಿದೆ. ಈ ಸಂದರ್ಭದಲ್ಲಿ ಸರ್ಕಾರಿ ಹಾಗೂ ಶೈಕ್ಷಣಿಕ ಕಾರ್ಯಕ್ಕೆ ಅಡ್ಡಿಯಾಯಿತು ಎಂಬುದು ದೂರುದಾರರ ಆರೋಪವಾಗಿದೆ. ಆರೋಪಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕರ್ನಾಟಕದಲ್ಲಿ ಡೈರಿ ಅಲ್ಲದ ಪನೀರ್‌ಗೆ ಒಂದು ವರ್ಷ ನಿಷೇಧ
‘ಶಾಲೆ ಸರಿಪಡಿಸಿ’ ಅಭಿಯಾನ
ಸರ್ಕಾರಿ ಶಾಲೆಗಳ ಮೂಲಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟದ ಬಗ್ಗೆ ಗಮನ ಸೆಳೆಯಲು ದಿಪ್ಕೆ ನೇತೃತ್ವದಲ್ಲಿ ‘ಸ್ಕೂಲ್ ಠಿಕ್ ಕರೋ’ ಅಭಿಯಾನ ಆರಂಭಿಸಲಾಗಿದೆ. ಆಗಸ್ಟ್ 15ರಂದು ಮಹಾರಾಷ್ಟ್ರದ ಹಿಂಗೋಳಿ ಜಿಲ್ಲೆಯ ತಮ್ಮ ಸ್ವಗ್ರಾಮದಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು.
ಅಭಿಯಾನದ ಭಾಗವಾಗಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯ, ವಿದ್ಯಾರ್ಥಿಗಳ ಸಂಖ್ಯೆ, ಶಾಲಾ ಕಟ್ಟಡ ಹಾಗೂ ಇತರ ಸಮಸ್ಯೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸಿಜೆಪಿ ಹೇಳಿಕೊಂಡಿದೆ. ಲಾತೂರ್‌ನ ಶಾಲೆಯ ಭೇಟಿಯ ವೇಳೆ ಶಾಲೆಯಲ್ಲಿ ನೋಂದಾಯಿತರಲ್ಲದ ವಿದ್ಯಾರ್ಥಿಗಳು ತರಗತಿಯಲ್ಲಿ ಇದ್ದರು ಹಾಗೂ ಆವರಣದಲ್ಲಿ ಮದ್ಯದ ಬಾಟಲಿಗಳು ಕಂಡುಬಂದವು ಎಂದು ದಿಪ್ಕೆ ಆರೋಪಿಸಿದ್ದರು.
ಆದರೆ ಶಾಲೆಗಳಿಗೆ ಭೇಟಿ ನೀಡಲು ಪೂರ್ವಾನುಮತಿ ಪಡೆಯಬೇಕು ಎಂದು ಸರ್ಕಾರ ಮತ್ತು ಸ್ಥಳೀಯ ಆಡಳಿತ ಸ್ಪಷ್ಟಪಡಿಸಿದ್ದು, ಅನುಮತಿಯಿಲ್ಲದೆ ಶಾಲೆ ಪ್ರವೇಶಿಸುವ ಸಿಜೆಪಿ ಕಾರ್ಯಕರ್ತರ ಕ್ರಮಕ್ಕೆ ಕೆಲವು ಕಡೆಗಳಲ್ಲಿ ತಡೆ ಎದುರಾಗಿದೆ.
ಮುಂಬೈಯಲ್ಲಿಯೂ ಸಿಜೆಪಿ ಕಾರ್ಯಕರ್ತರಿಗೆ ಅನುಮತಿಯಿಲ್ಲದೆ ಮಹಾನಗರ ಪಾಲಿಕೆ ಶಾಲೆಗಳಿಗೆ ಪ್ರವೇಶಿಸಲು ಶಿಕ್ಷಣ ಇಲಾಖೆ ನಿರ್ಬಂಧ ವಿಧಿಸಿದೆ. ಮತ್ತೊಂದೆಡೆ, ರಾಜಸ್ಥಾನದಲ್ಲಿ ಇದೇ ಅಭಿಯಾನದ ವೇಳೆ ಸಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವುದಾಗಿ ವರದಿಯಾಗಿದೆ.
ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಪ್ರಶ್ನಿಸುವುದು ತಮ್ಮ ಅಭಿಯಾನದ ಉದ್ದೇಶ ಎಂದು ದಿಪ್ಕೆ ಹೇಳಿಕೊಂಡಿದ್ದು, ಗ್ರಾಮೀಣ ಪ್ರದೇಶದ ಶಾಲೆಗಳ ಮೂಲಸೌಕರ್ಯ ಮತ್ತು ವಿದ್ಯಾರ್ಥಿಗಳ ಶಿಕ್ಷಣದ ಕುರಿತು ಸಾಮಾಜಿಕ ಪರಿಶೀಲನೆ ನಡೆಸುವಂತೆ ಪೋಷಕರು ಹಾಗೂ ಗ್ರಾಮ ಪಂಚಾಯಿತಿ ಮುಖಂಡರಿಗೆ ಕರೆ ನೀಡಿದ್ದಾರೆ.
ಇದನ್ನೂ ನೋಡಿ : ಇಸ್ರೋ ವಿಜ್ಞಾನಿಗಳ ರಾಜೀನಾಮೆ: ಭವಿಷ್ಯದ ಬಾಹ್ಯಾಕಾಶ ಕನಸುಗಳಿಗೆ ಎಚ್ಚರಿಕೆಯ ಗಂಟೆ? Janashakthi Media
