ಬಂಡವಾಳಶಾಹಿಯ ಅಳಿಗಾಲ ಸಮೀಪಿಸುತ್ತಿದೆ – ಪ್ರೊ. ಪ್ರಭಾತ್‌ ಪಟ್ನಾಯಕ್‌

ಬಂಡವಾಳಶಾಹೀ ವ್ಯವಸ್ಥೆ ಮತ್ತೊಮ್ಮೆ ಸಾವಿನ ಅಂಚಿನಲ್ಲಿದೆ. ಈ ಹಿಂದೆ ತನ್ನನ್ನು ʼಸುಧಾರಿಸಿಕೊಳ್ಳುವʼ ಮೂಲಕ ಅದು ಪಾರಾಗಿತ್ತು, ಆದರೆ ಈ ಬಾರಿ ನವ-ಉದಾರವಾದ ಅದಕ್ಕೂ ಅವಕಾಶವಿಲ್ಲದಂತೆ ಮಾಡಿದೆ. ಅದೀಗ ನವ-ಫ್ಯಾಸಿಸಂ ಮೂಲಕವಾಗಲೀ, ಪ್ರಜಾಪ್ರಭುತ್ವವನ್ನು ಹಾಳುಗೆಡಹುವ ಮೂಲಕವಾಗಲೀ,  ಮತ್ತು ವಸಾಹತುಶಾಹಿ ಪದ್ಧತಿಗೆ ಮರಳುವ ಮೂಲಕವಾಗಲೀ  ತನ್ನನ್ನು ರಕ್ಷಿಸಿಕೊಳ್ಳುವುದು ಸಾಧ್ಯವಿಲ್ಲ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲಿ ಆಕ್ರಮಣದ ಗತಿ ಇಂದು ಏನಾಗುತ್ತಿದೆ ಎಂಬುದು ಇದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತದೆ. ಬಂಡವಾಳಶಾಹಿ
ಅನು:ಕೆ.ಎಂ.ನಾಗರಾಜ್

ಬಂಡವಾಳಶಾಹಿಯು ಅವನತಿ ಹೊಂದುತ್ತಿರುವ ಮತ್ತು ಜರ್ಝರಿತವಾಗಿರುವ ಲಕ್ಷಣಗಳು ಕಾಣಿಸುತ್ತಿವೆ. ಅದೀಗ ಅಳಿವಿನ ಅಂಚಿನಲ್ಲಿದೆ ಎಂದು ಈ ಲಕ್ಷಣಗಳು ಸೂಚಿಸುತ್ತಿವೆ. ನಿಜ, ಈ ವ್ಯವಸ್ಥೆಯು ಅಂತಹ ಲಕ್ಷಣಗಳನ್ನು ತೋರಿಸುತ್ತಿರುವುದು ಇದೇ ಮೊದಲಲ್ಲ; 1914 ಮತ್ತು 1945ರ ನಡುವಿನ ಅವಧಿಯಲ್ಲೂ ಇವು ಕಾಣಬಂದಿದ್ದು, ಬಂಡವಾಳಶಾಹಿಯು ಒಂದು ಮರಣಾಸನ್ನ ವ್ಯವಸ್ಥೆ ಎಂಬುದಾಗಿ ಲೆನಿನ್ ಕೊಟ್ಟಿದ್ದ ಮುನ್ಸೂಚನೆಯನ್ನು ದೃಢಪಡಿಸಿದ್ದವೂ. ಅಂದಿಗೂ ಮತ್ತು ಇಂದಿಗೂ  ವ್ಯತ್ಯಾಸವು ಇರುವುದು ವ್ಯವಸ್ಥೆಯನ್ನು ಆವರಿಸಿರುವ ಬಿಕ್ಕಟ್ಟಿಗೆ ವ್ಯವಸ್ಥೆಯ ಯಾವ ರೀತಿಯಲ್ಲಿ ಸ್ಪಂದನೆ ಯಾವ ರೀತಿಯಲ್ಲಿದೆ ಎಂಬುದರಲ್ಲಿ.

ಆ ಸಮಯದಲ್ಲಿ, ಒಂದು ಯೋಜನೆಯ ಪ್ರಕಾರವೊ ಅಥವಾ ಒಂದು ಒತ್ತಡದ ಅಡಿಯಲ್ಲೊ, ವ್ಯವಸ್ಥೆಯು ಕನಿಷ್ಠ ಮೂರು ವಿಭಿನ್ನ ರೀತಿಗಳಲ್ಲಿ ತನ್ನನ್ನು ತಾನೇ “ಸುಧಾರಣೆ”ಗೆ ಒಳಪಡಿಸಿಕೊಳ್ಳುವ ಮೂಲಕ ಸ್ಪಂದಿಸಿತ್ತು: ಮೊದಲನೆಯದು, ವಸಾಹತುಶಾಹಿ ಪದ್ಧತಿಯನ್ನು ರಾಜಕೀಯವಾಗಿ ಕೊನೆಗೊಳಿಸುವ (ಇದನ್ನು ವಿನ್ಸ್ಟನ್‌ ಚರ್ಚಿಲ್‌ರಂತಹ ಬೂರ್ಜ್ವಾ ನಾಯಕರು ಆ ಸಮಯದಲ್ಲಿ  ತೀವ್ರವಾಗಿ ವಿರೋಧಿಸಿದ್ದರು) ಮತ್ತು  ಮೂರನೇ ಜಗತ್ತಿನ ಸಂಪನ್ಮೂಲಗಳನ್ನು ಅನ್ಯ ಸಾಧನಗಳ ಮಾರ್ಗವಾಗಿ ನಿಯಂತ್ರಿಸುವ ಪ್ರಯತ್ನದ ಮೂಲಕ; ಎರಡನೆಯದು, ವಿಶ್ವದ ಪ್ರಮುಖ ಬಂಡವಾಳಶಾಹಿ ದೇಶಗಳಲ್ಲಿ ಒಬ್ಬ ವ್ಯಕ್ತಿ-ಒಂದು ಮತದ ಮೂಲಕ ಚುನಾವಣಾ ಪ್ರಜಾಪ್ರಭುತ್ವವನ್ನು ವ್ಯಾಪಕವಾಗಿ ಪರಿಚಯಿಸುವ ಮೂಲಕ; ಮತ್ತು ಮೂರನೆಯದು ನಿರುದ್ಯೋಗದ ಇಳಿಕೆಗಾಗಿ ಒಟ್ಟು ಬೇಡಿಕೆಯನ್ನು ಉತ್ತೇಜಿಸಲು ಪ್ರಭುತ್ವ ಮಧ್ಯಪ್ರವೇಶದ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ – ಯುರೋಪಿನಲ್ಲಿ ಈ ಕ್ರಮಗಳು ಬೃಹತ್‌ ಕಲ್ಯಾಣ ವೆಚ್ಚಗಳನ್ನು ಒಳಗೊಂಡಿದ್ದವು, ಆದರೆ ಯುಎಸ್‌ನಲ್ಲಿ ಈ ಕ್ರಮಗಳು, ಪಾಲ್‌ ಬರನ್ ಮತ್ತು ಪಾಲ್‌ ಸ್ವೀಜಿ ಅವರುಗಳು ತೋರಿಸಿದಂತೆ, ಬೃಹತ್‌ ಮಿಲಿಟರಿ ವೆಚ್ಚದ ರೂಪವನ್ನು ಪಡೆದುಕೊಂಡವು. ನಿರ್ದಿಷ್ಟವಾಗಿ ಮೂರನೆಯದು ಬಹಳ ಮುಖ್ಯವಾಗಿತ್ತು ಏಕೆಂದರೆ, ಅದು ಮೊದಲ ಎರಡು ಸುಧಾರಣೆಗಳು ವ್ಯವಸ್ಥೆಗೆ ಒಡ್ಡಬಹುದಾದ ಬೆದರಿಕೆಯನ್ನು ಎದುರಿಸಿ ನಿಲ್ಲುವ ಮೂಲಕ ಬದುಕಿ ಉಳಿಯುವ ಅವಕಾಶವನ್ನು ವ್ಯವಸ್ಥೆಗೆ ಕಲ್ಪಿಸಿಕೊಟ್ಟಿತು. ಬಂಡವಾಳಶಾಹಿ

 ಬಂಡವಾಳಶಾಹಿಯು ಹಲವಾರು ದೇಶಗಳ ನಾಯಕರ ಹತ್ಯೆ ಮತ್ತು ಹಲವಾರು ಸಂದರ್ಭಗಳಲ್ಲಿ ಯಾವುದಕ್ಕೂ ಹೇಸದ  ಕೃತ್ಯಗಳ ಹೊರತಾಗಿಯೂ, ತನ್ನ ಹೊಸ ಇಮೇಜನ್ನು ಜಗತ್ತಿಗೆ ಮನವರಿಕೆ ಮಾಡಿಕೊಡುವಲ್ಲಿ ಒಂದು ಗಮನಾರ್ಹ ಮಟ್ಟದಲ್ಲಿ  ಯಶಸ್ವಿಯಾಯಿತು, ತನ್ನ ಅಸ್ತಿತ್ವಕ್ಕೆ ಬಂದ ಬಿಕ್ಕಟ್ಟನ್ನು “ಬಂಡವಾಳಶಾಹಿಯ ಸುವರ್ಣಯುಗ” ಎಂದು ಕರೆಯಲ್ಪಡುವ ಒಂದು ಹಂತವನ್ನು ಆರಂಭಿಸುವ ಮೂಲಕ ನಿವಾರಿಸಿಕೊಂಡಿತು

ಸಂಕ್ಷಿಪ್ತವಾಗಿ ಹೇಳುವುದಾದರೆ, ಬಂಡವಾಳಶಾಹಿಯು ತನ್ನ ಅಸ್ತಿತ್ವಕ್ಕೆ ಸಂಬಂಧಿಸಿದ ಬಿಕ್ಕಟ್ಟನ್ನು ಮೀರಿ ನಿಂತಿತು. ಪೂರ್ಣ ಉದ್ಯೋಗ ಸನ್ನಿವೇಶಕ್ಕೆ ತೀರ ಹತ್ತಿರ ಬಂದಿರುವ, ಮತ್ತು ಮಾನವ ಹಕ್ಕುಗಳ ವಿಷಯದಲ್ಲಿ ತನ್ನ ದಾಖಲೆಯು ಸಮಾಜವಾದಕ್ಕಿಂತ ಶ್ರೇಷ್ಠವಾಗಿರುವ ಒಂದು ಹೆಚ್ಚು “ಮಾನವೀಯ” ಮತ್ತು ಹೆಚ್ಚು “ಪ್ರಜಾಪ್ರಭುತ್ವವಾದೀ” ವ್ಯವಸ್ಥೆ ತನ್ನದು ಎಂದು ಹೇಳಿಕೊಂಡಿತು. ಕೊರಿಯಾ ಮತ್ತು ವಿಯೆಟ್ನಾಂ ಮೇಲೆ ನಡೆಸಿದ ಭಯಾನಕ ಯುದ್ಧಗಳನ್ನು ಉಲ್ಲೇಖಿಸದಿದ್ದರೂ, ಇರಾನಿನ ಮೊಸಾಡೆಗ್‌ ಅವರಿಂದ ಹಿಡಿದು, ಗ್ವಾಟೆಮಾಲಾದ ಅರ್ಬೆನ್ಜ್‌, ಕಾಂಗೋದ ಲುಮುಂಬಾ ಮತ್ತು ಚಿಲಿಯ ಅಲೆಂಡೆ ವರೆಗೆ, ಹಲವಾರು ನಾಯಕರ ಹತ್ಯೆ ಮತ್ತು ಹಲವಾರು ಸಂದರ್ಭಗಳಲ್ಲಿ ಯಾವುದಕ್ಕೂ ಹೇಸದ ಅದರ ಕೃತ್ಯಗಳ ಹೊರತಾಗಿಯೂ, ತನ್ನ ಹೊಸ ಇಮೇಜನ್ನು ಜಗತ್ತಿಗೆ ಮನವರಿಕೆ ಮಾಡಿಕೊಡುವಲ್ಲಿ ಒಂದು ಗಮನಾರ್ಹ ಮಟ್ಟದಲ್ಲಿ ಅದು ಯಶಸ್ವಿಯಾಯಿತು.

ಬೇರೆ ರೀತಿಯಲ್ಲಿ ಹೇಳುವುದಾದರೆ, ಬಂಡವಾಳಶಾಹಿಯು ತನ್ನ ಅಸ್ತಿತ್ವಕ್ಕೆ ಬಂದ ಬಿಕ್ಕಟ್ಟನ್ನು “ಬಂಡವಾಳಶಾಹಿಯ ಸುವರ್ಣಯುಗ” ಎಂದು ಕರೆಯಲ್ಪಡುವ ಒಂದು ಹಂತವನ್ನು ಆರಂಭಿಸುವ ಮೂಲಕ ನಿವಾರಿಸಿಕೊಂಡಿತು ಮತ್ತು ಈ ಹಂತವು ಅದರ ಹಿಂದಿನ ಸ್ವರೂಪದ ಹಂತಕ್ಕೆ ಹೋಲಿಸಿದರೆ, ತುಲನಾತ್ಮಕವಾಗಿ ಒಂದು ನವೀನ ಮತ್ತು ವಿಭಿನ್ನ ಹಂತವನ್ನು ಪ್ರತಿನಿಧಿಸಿತು ಕೂಡ.

ತಾತ್ಕಾಲಿಕ ವಿರಾಮವೂ ಇಲ್ಲ

ಬಂಡವಾಳಶಾಹಿಯ ಅಸ್ತಿತ್ವಕ್ಕೆ ಸಂಬಂಧಿಸಿದ ಅಂದಿನ ಮತ್ತು ಇಂದಿನ ಬಿಕ್ಕಟ್ಟುಗಳ ನಡುವೆ ಇರುವ ಒಂದು ಪ್ರಮುಖ ವ್ಯತ್ಯಾಸವೆಂದರೆ, ಬಂಡವಾಳಶಾಹಿ ಜಗತ್ತಿನ ಇಂದಿನ ಸ್ಥಗಿತತೆಯ ಬಿಕ್ಕಟ್ಟನ್ನು ಬೇಡಿಕೆ ನಿರ್ವಹಣೆಯ ಮೂಲಕ ನಿವಾರಿಸಲು ಪ್ರಭುತ್ವವು ಮಧ್ಯಪ್ರವೇಶಿಸುವುದು ಇನ್ನು ಮುಂದೆ ಸಾಧ್ಯವಿಲ್ಲ ಎಂಬುದು. ಬೇಡಿಕೆಯನ್ನು ವೃದ್ಧಿಸಲು ಪ್ರಭುತ್ವದ ವೆಚ್ಚಗಳ ಹೆಚ್ಚಳವು ಪರಿಣಾಮಕಾರಿಯಾಗಬೇಕು ಎಂದಾದರೆ, ಆ ಹಣವನ್ನು ವಿತ್ತೀಯ ಕೊರತೆಯ ಮೂಲಕ ಅಥವಾ ಶ್ರೀಮಂತರ ಮೇಲೆ ಅಧಿಕ ತೆರಿಗೆ ಹೇರುವ ಮೂಲಕ ಒದಗಿಸಿಕೊಳ್ಳಬೇಕು – ಏಕೆಂದರೆ, ತಮ್ಮ ವರಮಾನದ ಬಹುಭಾಗವನ್ನು ಹೇಗೂ ಬದುಕಿಗಾಗಿ ಬಳಸಿಕೊಳ್ಳುವ ದುಡಿಯುವ ಜನರ ಮೇಲೆ ತೆರಿಗೆ ವಿಧಿಸುವುದರಿಂದ ಉತ್ಪತ್ತಿಯಾಗುವ ಆದಾಯವನ್ನು ಖರ್ಚು ಮಾಡುವುದರಿಂದ, ಒಟ್ಟಾರೆ ಬೇಡಿಕೆಯ ಸಂಯೋಜನೆಯಲ್ಲಿ ಮಾತ್ರ ಬದಲಾವಣೆ ಇರುತ್ತದೆ; ಒಟ್ಟಾರೆ ಬೇಡಿಕೆಯ ಪ್ರಮಾಣ ಬದಲಾಗುವುದಿಲ್ಲ. ಆದರೆ, ಹಣಕಾಸು ಬಂಡವಾಳವು ವಿತ್ತೀಯ ಕೊರತೆ ಮತ್ತು ಶ್ರೀಮಂತರ ಮೇಲಿನ ತೆರಿಗೆ ಈ ಎರಡನ್ನೂ ಇಷ್ಟಪಡುವುದಿಲ್ಲ (ಏಕೆಂದರೆ ಹಣಕಾಸುದಾರರು ಸಾಮಾನ್ಯವಾಗಿ ಶ್ರೀಮಂತರೇ ಆಗಿರುತ್ತಾರೆ). ಮತ್ತು, ಹಣಕಾಸು ಬಂಡವಾಳವು ಜಾಗತೀಕರಣಗೊಂಡಿದ್ದರೂ, ಪ್ರಭುತ್ವವು ರಾಷ್ಟ್ರ-ಪ್ರಭುತ್ವವಾಗಿಯೇ ಉಳಿದಿರುವುದರಿಂದ, ಹಣಕಾಸು ಬಂಡವಾಳದ ಅಪೇಕ್ಷೆಯನ್ನು ಒಂದ ವೇಳೆ ನಿರ್ಲಕ್ಷಿಸಿದರೆ, ಬಂಡವಾಳವು ಹಾರಿ ಹೋಗುವ ಅಪಾಯ ಸೃಷ್ಟಿಯಾಗುತ್ತದೆ.

ನವ-ಉದಾರವಾದಿ ಬಂಡವಾಳಶಾಹಿಯನ್ನು ಪೀಡಿಸುತ್ತಿರುವ ಬಿಕ್ಕಟಿಗೆ ಒಂದು ತಾತ್ಕಾಲಿಕ ವಿರಾಮವೂ ಇಲ್ಲ. ಅದು ತಲುಪಿರುವುದು ಮುಂದೆ ದಾರಿಯಿರದ  ಕುರುಡು ಗಲ್ಲಿಯ ಕೊನೆಗೆ; ಮುಂದೆ ಹೊಗಲಾಗದ ಈ ಹಂತದಲ್ಲಿ ಅದು ಸ್ಥಗಿತತೆಯಲ್ಲಿ ಸಿಲುಕಿಕೊಂಡಿದೆ, ಅದರಿಂದ ಹೊರಬರಲು ಏನೂ ಮಾಡಲಾಗದ ಸ್ಥಿತಿಯಲ್ಲಿದೆ. ಇವೀಗ ಅವನತಿಯ ಪ್ರಸಕ್ತ ಲಕ್ಷಣಗಳು, ಬಂಡವಾಳಶಾಹಿಯು ತಾನು ಹಿಂದೆ ಪ್ರಸ್ತುತಪಡಿಸಿಕೊಂಡಿದ್ದಕ್ಕೆ ತದ್ವಿರುದ್ಧವಾದ ಲಕ್ಷಣಗಳು.

ನವ-ಉದಾರವಾದಿ ಬಂಡವಾಳಶಾಹಿಯನ್ನು ಪೀಡಿಸುತ್ತಿರುವ ಆರ್ಥಿಕ ಸ್ಥಗಿತತೆಯ ಬಿಕ್ಕಟ್ಟು ವರಮಾನಗಳ ಅಸಮಾನತೆ ಬೃಹತ್ ಪ್ರಮಾಣದಲ್ಲಿ ಹೆಚ್ಚಿರುವುದರಿಂದಾಗಿ ಉಂಟಾಗಿದೆ. ಈ ಬಿಕ್ಕಟಿಗೆ ಒಂದು ತಾತ್ಕಾಲಿಕ ವಿರಾಮವೂ ಇಲ್ಲ. ಅದು ತಲುಪಿರುವುದು ಮುಂದೆ ದಾರಿಯಿರದ  ಕುರುಡು ಗಲ್ಲಿಯ ಕೊನೆಗೆ; ಮುಂದೆ ಹೊಗಲಾಗದ ಈ ಹಂತದಲ್ಲಿ ಅದು ಸ್ಥಗಿತತೆಯಲ್ಲಿ ಸಿಲುಕಿಕೊಂಡಿದೆ, ಅದರಿಂದ ಹೊರಬರಲು ಏನೂ ಮಾಡಲಾಗದ ಸ್ಥಿತಿಯಲ್ಲಿದೆ. ಇವೀಗ ಅವನತಿಯ ಪ್ರಸಕ್ತ ಲಕ್ಷಣಗಳು, ಬಂಡವಾಳಶಾಹಿಯು ತಾನು ಹಿಂದೆ ಪ್ರಸ್ತುತಪಡಿಸಿಕೊಂಡಿದ್ದಕ್ಕೆ ತದ್ವಿರುದ್ಧವಾದ ಲಕ್ಷಣಗಳು.

ಮೊದಲನೆಯದಾಗಿ, ಪ್ರಜಾಪ್ರಭುತ್ವದ ಮೇಲೆ ಭೀಕರವಾಗಿ ದಾಳಿ ಮಾಡಲಾಗುತ್ತಿದೆ. ಬಂಡವಾಳಶಾಹಿ ಜಗತ್ತಿನಾದಾದ್ಯಂತವೂ, ಮುಚ್ಚು ಮರೆಯಿಲ್ಲದ ನವ-ಫ್ಯಾಸಿಸ್ಟ್ ಆಳ್ವಿಕೆಗಳಿವೆ ಅಥವಾ ಸರ್ಕಾರದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವವರನ್ನು ಅವರು ಅಪಾಯಕಾರಿಗಳೆಂದು ಪರಿಗಣಿಸಿ ಅವರ ವಿರುದ್ಧ ಮೆಕಾರ್ಥಿ (ಈತ ಅಮೆರಿಕದ ಒಬ್ಬ ಸೆನೆಟರ್‌; ಕಮ್ಯೂನಿಸಂ ಬಗ್ಗೆ ಸಹಾನುಭೂತಿ ಹೊಂದಿದವರನ್ನು ಯಾವ ಸಾಕ್ಷಾಧಾರವೂ ಇಲ್ಲದೆ ವಿಧ್ವಂಸದ ಅಥವಾ ದೇಶ ದ್ರೋಹದ ಆಪಾದನೆ ಹೊರಿಸಿ ಅವರನ್ನು ಜೈಲಿಗಟ್ಟುವುದನ್ನು ಈತ ಪ್ರತಿಪಾದಿಸಿದ್ದ-ಅನು) ಪ್ರತಿಪಾದಿಸಿದ ರೀತಿಯಲ್ಲಿ ಬೇಟೆಯಾಡುವ ಕ್ರಮಗಳನ್ನು ಜರುಗಿಸುವ ಪ್ರಜಾಪ್ರಭುತ್ವದ ಮುಖವಾಡ ಧರಿಸಿದ ದಮನಕಾರಿ ಆಳ್ವಿಕೆಗಳಿವೆ. ಪ್ಯಾಲೆಸ್ಟೀನಿಯನ್ನರ ವಿರುದ್ಧ ಇಸ್ರೇಲ್ ನಡೆಸಿದ ನರಮೇಧವನ್ನು ಮುಂದುವರಿದ ಬಂಡವಾಳಶಾಹಿ ಜಗತ್ತಿನ ಸರ್ಕಾರಗಳು ವ್ಯಾಪಕವಾಗಿ ಬೆಂಬಲಿಸಿವೆ (ಸ್ಪೇನ್‌ನಂತಹ ಕೆಲವು ದೇಶಗಳು ವಿರೋಧಿಸಿವೆಯಷ್ಟೇ). ಆದರೆ, ಆ ದೇಶಗಳಲ್ಲಿ ಬಹುಪಾಲು ಜನರು ಈ ನರಮೇಧವನ್ನು ಘಂಟಾಘೋಷವಾಗಿ ವಿರೋಧಿಸುತ್ತಿದ್ದಾರೆ ಮತ್ತು ಆ ದೇಶಗಳ ಜನತೆಯ ಈ ವಿರೋಧವನ್ನು ಅಲ್ಲಿನ ಸರ್ಕಾರಗಳು ತೀವ್ರವಾಗಿ ದಮನಿಸುತ್ತಿವೆ. ಭಿನ್ನಾಭಿಪ್ರಾಯಗಳನ್ನು ಸಹಿಸಿಕೊಳ್ಳುವ ಬಗ್ಗೆ ಹೆಮ್ಮೆಪಡುವ ಒಂದು ದೇಶವಾದ ಬ್ರಿಟನ್‌ನಲ್ಲಿ, ಪ್ಯಾಲೆಸ್ಟೈನ್ ಪರ ಭಾಷಣ ಮಾಡಿದ್ದಕ್ಕಾಗಿ ವಿದ್ಯಾರ್ಥಿಗಳನ್ನು “ಭಯೋತ್ಪಾದಕರು” ಎಂದು ಪರಿಗಣಿಸಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಅಷ್ಟೇ ಅಲ್ಲ, ಅಂತಹ “ಅಪರಾಧ” ಗಳನ್ನು ಮಾಡಿದ್ದಕ್ಕಾಗಿ ಬಂಧಿಸಲ್ಪಟ್ಟವರಲ್ಲಿ ಅನೇಕ ಮಂದಿಯನ್ನು ವಿಚಾರಣೆಗೆ ಒಳಪಡಿಸುವ ಮಾತಿರಲಿ, ಅವರ ಮೇಲೆ ಆರೋಪವನ್ನೂ ಹೊರಿಸಿಲ್ಲ. ಇತರ ಮುಂದುವರಿದ ಬಂಡವಾಳಶಾಹಿ ದೇಶಗಳಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ. ಉದಾಹರಣೆಗೆ, ಜರ್ಮನಿಯ ಅನೇಕ ನಗರಗಳಲ್ಲಿ ಪ್ಯಾಲೆಸ್ಟೈನ್‌ನೊಂದಿಗೆ ಸೌಹಾರ್ಧ ವ್ಯಕ್ತಪಡಿಸುವ ಸಭೆಗಳನ್ನು ನಿಷೇಧಿಸಲಾಗಿದೆ. ಈ ರೀತಿಯಲ್ಲಿ ನರಮೇಧಕ್ಕೆ ಮುಕ್ತ ಬೆಂಬಲ ನೀಡುವ ಮೂಲಕ ಬಂಡವಾಳಶಾಹಿಯು ತಾನು ಮಾನವ ಹಕ್ಕುಗಳ ರಕ್ಷಕ ಎಂಬ ದಾವೆಯನ್ನು ತಾನೇ ಸುಳ್ಳು ಮಾಡಿದೆ ಮಾತ್ರವಲ್ಲ, ನರಮೇಧದ ಬೆಂಬಲಕ್ಕೆ ಪೂರಕವಾಗಿ ಎರಡನೇ ಮಹಾಯುದ್ಧಾನಂತರದ ಯುಗದಲ್ಲಿ ಕಂಡಿರದ ಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು ಅದು ಕುಂದಿಸಿದೆ.

ಇದನ್ನೂ ಓದಿ : 40 ಕಾಂಗ್ರೆಸ್ ಶಾಸಕರು, ಸಚಿವರು ಇ.ಡಿ. ನಿಗಾದಲ್ಲಿ: ಸಿಎಂ ಡಿ.ಕೆ. ಶಿವಕುಮಾರ್

ದಮನಕಾರಿ ಆಳ್ವಿಕೆಯ ಮರುಕಳಿಕೆ

ನವ ಉದಾರವಾದಿ ಬಂಡವಾಳಶಾಹಿಯು ಈ ದಮನಕಾರಿ ಪ್ರವೃತ್ತಿಗೆ ಮರಳಿರುವುದರ ಜೊತೆಗೆ, ಮೂರನೇ ಜಗತ್ತನ್ನು ಮತ್ತೊಮ್ಮೆ ವಸಾಹತುವನ್ನಾಗಿ ಮಾಡಿಕೊಳ್ಳುವ ಅಮೆರಿಕದ ಪ್ರಯತ್ನವೂ ನಡೆದಿದೆ. ತಮ್ಮ ಈ ಕಾರ್ಯಸೂಚಿಯನ್ನು ಡೊನಾಲ್ಡ್ ಟ್ರಂಪ್ ಹಲವಾರು ವಿಧಾನಗಳಲ್ಲಿ  ಪ್ರಕಟ ಪಡಿಸಿದ್ದಾರೆ ಮಾತ್ರವಲ್ಲ, ವೆನೆಜುವೆಲಾದ ಮೇಲಿನ ಹಠಾತ್‌ ದಾಳಿ, ಇರಾನ್ ವಿರುದ್ಧ ಮುಂದುವರೆಯುತ್ತಿರುವ ಮಿಲಿಟರಿ ಆಕ್ರಮಣ ಮತ್ತು ಗ್ರೀನ್‌ಲ್ಯಾಂಡ್ ಮತ್ತು ಇತರ ದೇಶಗಳ ವಿರುದ್ಧ ಸಂಭವನೀಯ ಆಕ್ರಮಣದ ಯೋಜನೆಗಳನ್ನು ಕೈಗೊಂಡಿದ್ದಾರೆ. ಈ ಕೆಲವು ಆಕ್ರಮಣಕಾರಿ ಕುತಂತ್ರಗಳನ್ನು ಕೈಗೊಳ್ಳುವಲ್ಲಿ ಅಮೆರಿಕವು ಇತರ ಪ್ರಮುಖ ಬಂಡವಾಳಶಾಹಿ ರಾಷ್ಟ್ರಗಳ ಬೆಂಬಲವನ್ನು ಬಯಸುತ್ತದೆ. ಅಂತಹ ಬೆಂಬಲವನ್ನು ಪಡೆಯಲು ಈಗಾಗಲೇ ಎರಡು ಪ್ರಮುಖ ಕ್ರಮಗಳನ್ನು ವಾಸ್ತವವಾಗಿ ತೆಗೆದುಕೊಳ್ಳಲಾಗಿದೆ.

ಒಂದು, ಎರಡನೇ ಮಹಾಯುದ್ಧದ ನಂತರ ನಿಶ್ಯಸ್ತ್ರಗೊಂಡಿದ್ದ ಜರ್ಮನಿ ಮತ್ತು ಜಪಾನ್‌ ದೇಶಗಳ ಮರು-ಶಸ್ತ್ರೀಕರಣ. ಈ ಸಶಸ್ತ್ರೀಕರಣದ ಪ್ರಸ್ತಾಪದ ಬಗ್ಗೆ ಜರ್ಮನಿ ಮತ್ತು ಜಪಾನ್‌ ಉತ್ಸಾಹಭರಿತವಾಗಿ ಪ್ರತಿಕ್ರಿಯಿಸಿವೆ. ಇದು ಬಂಡವಾಳಶಾಹಿಯ ಸುವರ್ಣಯುಗ ಎಂದು ಕರೆಯಲ್ಪಡುವ ಕಾಲಘಟ್ಟದ ಪೂರ್ವಕ್ಕೆ ಬಂಡವಾಳಶಾಹಿ ಮರಳುವ ಇನ್ನೊಂದು ಮಾರ್ಗವಾಗಿದೆ. ಜರ್ಮನಿಯಲ್ಲಿ,  ʼಜರ್ಮನಿಗಾಗಿ ಪರ್ಯಾಯʼ (ಎಎಫ್‌ಡಿ) ಎಂಬ ಪಕ್ಷದ ರೂಪದಲ್ಲಿ ನವ-ಫ್ಯಾಸಿಸಂ ಪ್ರಬಲವಾಗಿ ಕಾಣಿಸಿಕೊಳ್ಳುತ್ತಿರುವುದರಿಂದ, ಆ ದೇಶವನ್ನು ಶಸ್ತ್ರಸಜ್ಜಿತಗೊಳಿಸುವುದರಿಂದ ಉಂಟಾಗುವ ಅತ್ಯಂತ ಅಪಾಯಕಾರಿ ಪರಿಣಾಮಗಳ ವಿವರಕ್ಕೆ ಹೋಗುವ ಅಗತ್ಯವಿಲ್ಲ.

ಎರಡು, ನ್ಯಾಟೊ ತನ್ನ ಸದಸ್ಯ ದೇಶಗಳ ಮಿಲಿಟರಿ ವೆಚ್ಚವನ್ನು 2035ರ ವೇಳೆಗೆ ಜಿಡಿಪಿಯ ಶೇ. 5ರ ಮಟ್ಟಕ್ಕೆ ಏರಿಸಲು ನಿರ್ಧರಿಸಿದೆ. ಅದರಲ್ಲಿ ಶೇ. 3.5ರಷ್ಟನ್ನು ಪ್ರಮುಖ ಮಿಲಿಟರಿ ಚಟುವಟಿಕೆಗಳಿಗೆ ಮತ್ತು ಶೇ. 1.5ರಷ್ಟನ್ನು ಮಿಲಿಟರಿ ಮೂಲಸೌಕರ್ಯವನ್ನು ನಿರ್ಮಿಸಲು ಖರ್ಚು ಮಾಡಲಾಗುವುದು. ಇದು ಪ್ರಸ್ತುತ ಇರುವ ಮಟ್ಟಗಳಿಗೆ ಹೋಲಿಸಿದರೆ, ಒಂದು ದೊಡ್ಡ ಹೆಜ್ಜೆಯಾಗುತ್ತದೆ. ಇದು ಪ್ರಸ್ತುತ ಯುಎಸ್‌ನಲ್ಲಿರುವ ಶೇ. 3.4 ಮತ್ತು ಯುರೋಪಿನ ಸರಾಸರಿ ಶೇ. 2.5 ಮಟ್ಟಗಳಿಗಿಂತಲೂ ಒಂದು ದೊಡ್ಡ ಹೆಜ್ಜೆಯಾಗುತ್ತದೆ. ಕೀನ್ಸ್‌ ಅವರು ಪ್ರತಿಪಾದಿಸಿದ ಬೇಡಿಕೆ ಉತ್ತೇಜನ ಕ್ರಮಗಳನ್ನು ಭಂಗಗೊಳಿಸಲು ಬಳಸಿದ ವಿತ್ತೀಯ ಕೊರತೆಯ ಹೆಚ್ಚಳ ಮತ್ತು ಶ್ರೀಮಂತರ ಮೇಲೆ ತೆರಿಗೆ ವಿಧಿಸುವುದಕ್ಕೆ ನಿರ್ಬಂಧಗಳು ಮಿಲಿಟರಿ ವೆಚ್ಚವನ್ನು ಹೆಚ್ಚಿಸುವಲ್ಲಿಯೂ ಅಡ್ಡ ಬರುತ್ತವೆ. ಆದ್ದರಿಂದ, ನ್ಯಾಟೊ ದೇಶಗಳ ಮಿಲಿಟರಿ ಬಜೆಟ್‌ ಹೆಚ್ಚಳವು ಕಲ್ಯಾಣ ವೆಚ್ಚಗಳ ಮೇಲೆ ಒಂದು ನಿರ್ಬಂಧವನ್ನು ಹೇರುವ ಮೂಲಕವೇ ಬರಬೇಕಾಗುತ್ತದೆ. ಈ ಕಲ್ಯಾಣ ವೆಚ್ಚಗಳು ಎರಡನೇ ಮಹಾಯುದ್ಧಾನಂತರದ ಯುರೋಪಿನ ಬಂಡವಾಳಶಾಹಿಯ ಒಂದು ಪ್ರಮುಖ ಲಕ್ಷಣವಾಗಿತ್ತು. ಈ ರೀತಿಯಲ್ಲಿ ಬಂಡವಾಳಶಾಹಿಯು ಮತ್ತೊಮ್ಮೆ ಬೃಹತ್‌-ಪ್ರಮಾಣದ ಮಿಲಿಟರಿಶಾಹಿಗೆ ಹಿಂತಿರುಗುತ್ತಿದೆ. ಇದು ಮಹಾಯುದ್ಧಾನಂತರದ ಬಂಡವಾಳಶಾಹಿಯಲ್ಲಿ ಕಂಡು ಬಂದ ನಡವಳಿಕೆಗೆ ತದ್ವಿರುದ್ಧವಾಗಿದೆ.

ವಸಾಹತುಶಾಹಿಯ ದುಷ್ಪರಿಣಾಮಗಳ ಬಗ್ಗೆ ವಸಾಹತುಶಾಹಿ ವಿರೋಧಿ ಹೋರಾಟದ ವಾದಗಳಿಗೆ ಯುರೋಪಿನ ಬೂರ್ಜ್ವಾ ಅಭಿಪ್ರಾಯವು ಬಲಿಯಾಗದಿರಲಿ ಎಂದು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಇತ್ತೀಚೆಗೆ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಐದು ಶತಮಾನಗಳ ಪಾಶ್ಚ್ಯಾತ್ಯ ಪ್ರಾಬಲ್ಯದ ಬಗ್ಗೆ ಭಾವಪೂರಿತವಾಗಿ ಮಾತನಾಡಿದರು ಮತ್ತು ಹಿಂದಿನ ವೈಭವವನ್ನು ಪುನರುಜ್ಜೀವನಗೊಳಿಸುವಂತೆ ನಾಚಿಕೆಯಿಲ್ಲದೆ ಮನವಿ ಮಾಡಿದರು. ಅದನ್ನು ವೀಕ್ಷಕರು ಸ್ಪಷ್ಟವಾಗಿ ಮರುವಸಾಹತೀಕರಣದ ಕರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ರೂಬಿಯೊ ತನ್ನ ಯುರೋಪಿಯನ್ ಮಿತ್ರ ದೇಶಗಳು ತಮ್ಮ ವಸಾಹತುಶಾಹಿ ಗತಕಾಲದ ಬಗ್ಗೆ ಅಪರಾಧ ಪ್ರಜ್ಞೆಯಿಂದ ಕಸಿವಿಸಿಗೊಳ್ಳುವ ಅಗತ್ಯವಿಲ್ಲ ಎಂದು ಅವರನ್ನು ಹುರಿದುಂಬಿಸಿದರು. ಯುರೋಪಿನ ಎಲ್ಲ ನಾಯಕಮಣಿಗಳೂ ಅವರ ಮಾತುಗಳಿಂದ ನಾಚಿಕೆಪಟ್ಟುಕೊಳ್ಳುವುದರ ಬದಲು, ಪ್ರಚಂಡ ಕರತಾಡನದ ಮೂಲಕ   ಸ್ವಾಗತಿಸಿದರು.

ಮರೆಮಾಡಿದ್ದ ವಿಷದ ಹಲ್ಲುಗಳ ಪ್ರದರ್ಶನ

ಫ್ಯಾಸಿಸಂ ವಸಾಹತುಶಾಹಿಯೊಂದಿಗೆ ಒಂದು ನಿಕಟ ಸಂಬಂಧವನ್ನು ಸದಾ ಹೊಂದಿದೆ. ಫ್ಯಾಸಿಸಂ ಹೊರಹೊಮ್ಮುವ ಸನ್ನಿವೇಶವು ವಿಭಿನ್ನವಾಗಿಯೇ ಇರುತ್ತದೆಯಾದರೂ, ಸಾಮಾನ್ಯವಾಗಿ ಒಂದು ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ, ಏಕಸ್ವಾಮ್ಯ ಬಂಡವಾಳವು ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ಜನರನ್ನು ವಿಚಲಿತಗೊಳಿಸುವ ಒಂದು ಪರ್ಯಾಯ ಸಂಕಥನ ಬೇಕಾಗುತ್ತದೆ ಮತ್ತು ಅದನ್ನು ಫ್ಯಾಸಿಸಂ ಒದಗಿಸುತ್ತದೆ. ಫ್ಯಾಸಿಸಂ ಅಳವಡಿಸಿಕೊಂಡ ಹಿಂಸಾತ್ಮಕ ವಿಧಾನಗಳನ್ನು ಮೊಟ್ಟಮೊದಲಿಗೆ ವಸಾಹತುಗಳಲ್ಲಿ ಪ್ರಯೋಗಿಸಲಾಗಿತ್ತು.

“ಕಲ್ಯಾಣ ಬಂಡವಾಳಶಾಹಿ”, “ಬದಲಾದ ಬಂಡವಾಳಶಾಹಿ” ಮತ್ತು “ಮಾನವೀಯ ಬಂಡವಾಳಶಾಹಿ” ಎಂಬೆಲ್ಲಾ  ಪ್ರಚಾರವನ್ನು ಸಂಪೂರ್ಣವಾಗಿ ಅಲ್ಲಗಳೆಯುವ ತನ್ನ ನಿರ್ದಯ ಸ್ವಭಾವಕ್ಕೆ ಬಂಡವಾಳಶಾಹಿಯು ಮರಳುತ್ತಿರುವುದು,  ಅದರ ಅವನತಿಯ, ಹತಾಶೆಯ ಮತ್ತು ಅದು ಜರ್ಝರಿತಗೊಂಡಿರುವುದರ ಲಕ್ಷಣಗಳು. ಅದು ಕುರುಡುಗಲ್ಲಿಯನ್ನು ಪ್ರವೇಶಿಸಿದ್ದು, ಅಲ್ಲಿಂದ ತಪ್ಪಿಸಿಕೊಳ್ಳುವ ದಾರಿಗಾಣದ ಸ್ಥಿತಿಯಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಇದು ಬಂಡವಾಳಶಾಹಿಯ ಅಳಿಗಾಲದ ಲಕ್ಷಣ.  

ಉದಾಹರಣೆಗೆ, ನಮೀಬಿಯಾದಲ್ಲಿ ನಮ ಮತ್ತು ಹೆರೆರೊ ಎಂಬ ಬುಡಕಟ್ಟು ಜನಾಂಗದವರ ಮೇಲೆ ಜರ್ಮನಿಯ ಅಮಾನವೀಯ ವರ್ತನೆ, ಮತ್ತು ಬೆಲ್ಜಿಯಂ ದೊರೆ ಲಿಯೋಪೋಲ್ಡ್ ಕಾಂಗೋದಲ್ಲಿ ನಡೆಸಿದ ನರಮೇಧದಲ್ಲಿ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು (10 ಮಿಲಿಯನ್) ಮಂದಿಯ ಹತ್ಯೆಯ ಪ್ರಕರಣಗಳು ತದನಂತರ ಯುರೋಪಿನ ಫ್ಯಾಸಿಸಂ ಅಡಿಯಲ್ಲಿ ಸಂಭವಿಸಿದ ನರಹತ್ಯಗೆ “ಮಾದರಿ”ಗಳಾದವು.

ಈ ರೀತಿಯಲ್ಲಿ ನವ-ಫ್ಯಾಸಿಸಂ ಈಗ ಹರಡುತ್ತಿರುವ ಪರಿ, ವಸಾಹತುಶಾಹಿಗೆ ಹಿಂದಿರುಗಬೇಕು ಎಂಬ ಭಾವುಕ ಕೂಗು, ಬಾನಂಚಿನಲ್ಲಿ ಕಾಣಿಸುತ್ತಿರುವ ಮರು-ವಸಾಹತುಶಾಹಿ ಯೋಜನೆ ಇವು ಒಂದಕ್ಕೊಂದು ಹೊಂದಿಕೊಳ್ಳುತ್ತವೆ. ಮಹಾಯುದ್ಧಾನಂತರದ ಅವಧಿಯಲ್ಲಿ ಒಂದೆರಡು ಸಂದರ್ಭಗಳನ್ನು ಹೊರತುಪಡಿಸಿದರೆ, ಬಂಡವಾಳಶಾಹಿಯು ಮರೆಮಾಚಿದ್ದ  ತನ್ನ ವಿಷದ ಹಲ್ಲುಗಳ ಪ್ರದರ್ಶನವನ್ನು ನಾವು ಇನ್ನೊಮ್ಮೆ ಕಾಣುತ್ತಿದ್ದೇವೆ. ಈ ರೀತಿಯಲ್ಲಿ “ಕಲ್ಯಾಣ ಬಂಡವಾಳಶಾಹಿ”, “ಬದಲಾದ ಬಂಡವಾಳಶಾಹಿ” ಮತ್ತು “ಮಾನವೀಯ ಬಂಡವಾಳಶಾಹಿ” ಎಂಬೆಲ್ಲಾ  ಪ್ರಚಾರವನ್ನು ಸಂಪೂರ್ಣವಾಗಿ ಅಲ್ಲಗಳೆಯುವ ತನ್ನ ನಿರ್ದಯ ಸ್ವಭಾವಕ್ಕೆ ಬಂಡವಾಳಶಾಹಿಯು ಮರಳುತ್ತಿರುವುದು,  ಅದರ ಅವನತಿಯ, ಹತಾಶೆಯ ಮತ್ತು ಅದು ಜರ್ಝರಿತಗೊಂಡಿರುವುದರ ಲಕ್ಷಣಗಳು. ಅದು ಕುರುಡುಗಲ್ಲಿಯನ್ನು ಪ್ರವೇಶಿಸಿದ್ದು, ಅಲ್ಲಿಂದ ತಪ್ಪಿಸಿಕೊಳ್ಳುವ ದಾರಿಗಾಣದ ಸ್ಥಿತಿಯಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಇದು ಬಂಡವಾಳಶಾಹಿಯ ಅಳಿಗಾಲದ ಲಕ್ಷಣ.

ಆದರೆ ಬಂಡವಾಳಶಾಹಿಯು ಈ ರೀತಿಯಲ್ಲಿ ಒಂದು ಅತಿ-ಆಕ್ರಮಣಕಾರಿ, ಅತಿ-ದಮನಕಾರಿ ಹಂತಕ್ಕೆ ಮರಳುವ ಮೂಲಕ ಈ ವ್ಯವಸ್ಥೆಯನ್ನು ಉಳಿಸಲಾರದು. ಸಾವಿನ ಅಂಚಿನಲ್ಲಿರುವ ಬಂಡವಾಳಶಾಹಿಯು ನವ-ಫ್ಯಾಸಿಸಂ ಮೂಲಕವಾಗಲೀ, ಪ್ರಜಾಪ್ರಭುತ್ವವನ್ನು ಹಾಳುಗೆಡಹುವ ಮೂಲಕವಾಗಲೀ,  ಮತ್ತು ವಸಾಹತುಶಾಹಿ ಪದ್ಧತಿಗೆ ಮರಳುವ ಮೂಲಕವಾಗಲೀ  ತನ್ನನ್ನು ರಕ್ಷಿಸಿಕೊಳ್ಳುವುದು ಸಾಧ್ಯವಿಲ್ಲ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲಿ ಆಕ್ರಮಣದ ಗತಿ ಇಂದು ಏನಾಗುತ್ತಿದೆ ಎಂಬುದು ಇದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತದೆ.

ಇದನ್ನೂ ನೋಡಿ : ಕನಿಷ್ಠ ವೇತನ ಜಾರಿ ಮಾಡಿ, ನಮ್ಮ ಬದುಕು ಉಳಿಸಿ! | 20 ಸಾವಿರ ಕಾರ್ಮಿಕರ ಬೃಹತ್‌ ಹೋರಾಟJanashakthi Media

Donate Janashakthi Media