ಬೆಂಗಳೂರು: ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಆರು ಸದಸ್ಯರ ಗ್ಯಾರಂಟಿ ಸಮಿತಿಗಳನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಈ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಮುಂದಿನ ವಾರದೊಳಗೆ ಸಮಿತಿಗಳನ್ನು ರಚಿಸುವಂತೆ ಶಾಸಕರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ನಡೆದ ಭಾರತ್ ಜೋಡೋ ಯಾತ್ರೆಯ ನಾಲ್ಕನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್, ಪಕ್ಷದ ಕಾರ್ಯಕರ್ತರು ತಮ್ಮೊಂದಿಗೆ ನಿಂತರೆ ಅವರನ್ನು ಸಬಲೀಕರಣಗೊಳಿಸಲು ಸರ್ಕಾರ ಸಿದ್ಧವಿದೆ ಎಂದರು.
ಪ್ರತಿ ತಾಲೂಕಿನಲ್ಲಿ ಸುಮಾರು 250 ಮಂದಿಗೆ ಅಧಿಕಾರ ಮತ್ತು ಜವಾಬ್ದಾರಿ ನೀಡುವ ಉದ್ದೇಶವಿದೆ ಎಂದು ಅವರು ಹೇಳಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ಪಕ್ಷದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಮಿತಿಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ತಿಳಿಸಿದರು.
ಇದನ್ನೂ ಓದಿ : ಕರ್ನಾಟಕದಲ್ಲಿ ಬರದಿಂದ ₹18 ಸಾವಿರ ಕೋಟಿ ನಷ್ಟ; ಕೇಂದ್ರಕ್ಕೆ ಶೀಘ್ರ ಪರಿಹಾರ ಕೋರಿ ಮನವಿ
ಇದೇ ವೇಳೆ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಶಿವಕುಮಾರ್, ಕಾಂಗ್ರೆಸ್ ತ್ಯಾಗ, ಹೋರಾಟ ಮತ್ತು ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳ ಪರಂಪರೆಯನ್ನು ಹೊಂದಿರುವ ಪಕ್ಷ ಎಂದು ಹೇಳಿದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಹಲವು ವರ್ಷ ಜೈಲಿನಲ್ಲಿದ್ದರು. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಸೋನಿಯಾ ಗಾಂಧಿ ಅಧಿಕಾರವನ್ನು ತ್ಯಜಿಸಿದರು ಎಂದು ಅವರು ಉಲ್ಲೇಖಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಕಾರ್ಯಕರ್ತರಂತೆ ತ್ರಿವರ್ಣ ಧ್ವಜ ಹಿಡಿಯುವ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದ ಅವರು, ಬಿಜೆಪಿ ನಾಯಕರು ತಮ್ಮ ಪಾದಯಾತ್ರೆ ನಡೆಸಲಿ, ಅದಕ್ಕಿಂತ ನಾಲ್ಕು ಹೆಜ್ಜೆ ಮುಂದೆ ನಡೆಯುವ ಸಾಮರ್ಥ್ಯ ಕಾಂಗ್ರೆಸ್‌ಗಿದೆ ಎಂದು ಸವಾಲು ಹಾಕಿದರು.
ಇದನ್ನೂ ನೋಡಿ : ಕನಿಷ್ಠ ವೇತನ ಜಾರಿ ಮಾಡಿ, ನಮ್ಮ ಬದುಕು ಉಳಿಸಿ! | 20 ಸಾವಿರ ಕಾರ್ಮಿಕರ ಬೃಹತ್ ಹೋರಾಟJanashakthi Media
