ನವದೆಹಲಿ: ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ-2026ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿದ್ದೂ, ಈ ಸಂಬಂಧ ಕೇಂದ್ರ ಸರ್ಕಾರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದೆ.
2026ರ ಹೊಸ ತಿದ್ದುಪಡಿ ಮಸೂದೆಯು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ತಮ್ಮ ಲಿಂಗ ಗುರುತಿನ ಪ್ರಮಾಣಪತ್ರವನ್ನು ಪಡೆಯಲು ‘ಕಡ್ಡಾಯವಾಗಿ ವೈದ್ಯಕೀಯ ಚಿಕಿತ್ಸೆಗೆ ಒಳಪಡಬೇಕು’ ಎಂಬ ನಿಯಮವನ್ನು ಒಳಗೊಂಡಿದೆ. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ಈ ನಿಯಮವು ವ್ಯಕ್ತಿಯ ‘ಸ್ವಯಂ-ನಿರ್ಣಯದ ಹಕ್ಕನ್ನು’ (Right of Self-determination) ಉಲ್ಲಂಘಿಸುತ್ತದೆ ಎಂದು ವಾದಿಸಿದ್ದಾರೆ.
ನ್ಯಾಯಪೀಠದ ಪ್ರಮುಖ ಅಂಶಗಳು:
ತ್ರಿಸದಸ್ಯ ಪೀಠ: ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ನೇತೃತ್ವದ ಪೀಠವು ಈ ವಿಷಯದ ಗಂಭೀರತೆಯನ್ನು ಪರಿಗಣಿಸಿ, ಇದರ ವಿಚಾರಣೆಗಾಗಿ ಸಿಜೆಐ ನೇತೃತ್ವದಲ್ಲೇ ಮೂವರು ನ್ಯಾಯಾಧೀಶರ ವಿಶೇಷ ಪೀಠವನ್ನು ರಚಿಸಿದೆ.
ಇದನ್ನೂ ಓದಿ: ಅತ್ತ ʼನರಕದ ಗುಂಡಿʼ…ಇತ್ತ ʼನಾಗರಿಕತೆಯ ತೊಟ್ಟಿಲುʼ-ನಡುವೆ ವಿಶ್ವಾಸದ ಕೊರತೆಯ ತಳಮಳ!
ಅರ್ಜಿದಾರರ ವಾದ: ಲಿಂಗ ಗುರುತಿಸಿಕೊಳ್ಳುವುದು ವೈಯಕ್ತಿಕ ಆಯ್ಕೆಯಾಗಿದೆ. ಆದರೆ ಸರ್ಕಾರವು ವೈದ್ಯಕೀಯ ಚಿಕಿತ್ಸೆಯನ್ನು ಕಡ್ಡಾಯಗೊಳಿಸಿರುವುದು ಮೂಲಭೂತ ಹಕ್ಕುಗಳ ಬಾಧಕವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
“ವೈದ್ಯಕೀಯ ಹಸ್ತಕ್ಷೇಪವಿಲ್ಲದೆ ತನ್ನ ಲಿಂಗವನ್ನು ಗುರುತಿಸಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಘನತೆಯ ಹಕ್ಕಾಗಿದೆ. ಈ ತಿದ್ದುಪಡಿಯು ಆ ಹಕ್ಕನ್ನು ಕಸಿದುಕೊಳ್ಳುತ್ತಿದೆ,” ಎಂಬುದು ಅರ್ಜಿದಾರರ ಪ್ರಮುಖ ಆಕ್ಷೇಪವಾಗಿದೆ.
ಈ ವಿಚಾರವಾಗಿ ವಿವರವಾದ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ರಾಜ್ಯಗಳಿಗೆ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಈ ಮಹತ್ವದ ಕಾನೂನಿನ ಭವಿಷ್ಯ ನಿರ್ಧಾರವಾಗಲಿದೆ.
ಇದನ್ನೂ ನೋಡಿ: “ಮೇ ದಿನದ ಇತಿಹಾಸ: 8 ಗಂಟೆ ಕೆಲಸದ ಹಕ್ಕು ಹೇಗೆ ಬಂದಿತು?” JanashakthiMedia
