ಮಲ್ಲತಹಳ್ಳಿ| ವಿದ್ಯಾರ್ಥಿನಿಲಯದಲ್ಲಿ ಅವ್ಯವಸ್ಥೆ ಆರೋಪ; ಉಪವಾಸ ಸತ್ಯಾಗ್ರಹ ನಡೆಸಿದ ವಿದ್ಯಾರ್ಥಿಗಳು

ಬೆಂಗಳೂರು: ಮಲ್ಲತಹಳ್ಳಿಯ ಶ್ರೀಗಂಧಕಾವಲು ಪ್ರದೇಶದಲ್ಲಿರುವ ಪಿಯುಸಿ, ಯುಜಿ ಹಾಗೂ ಪಿಜಿ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಮೂಲಸೌಕರ್ಯ ಕೊರತೆ, ಕಳಪೆ ಆಹಾರ ಮತ್ತು ಆಡಳಿತದ ನಿರ್ಲಕ್ಷ್ಯ ಖಂಡಿಸಿ ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ನಡೆಸಿದರು. ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಲ್ಲತಹಳ್ಳಿ

ವಿದ್ಯಾರ್ಥಿಗಳ ಆರೋಪದಂತೆ, ಹಾಸ್ಟೆಲ್‌ನಲ್ಲಿ ನೀಡಲಾಗುತ್ತಿರುವ ಆಹಾರ ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು, ಜಿರಳೆ, ಹುಳು, ಕಲ್ಲು, ದಾರ ಹಾಗೂ ಗಾಜಿನ ತುಂಡುಗಳು ಆಹಾರದಲ್ಲಿ ಪತ್ತೆಯಾಗುತ್ತಿವೆ. ಪೌಷ್ಟಿಕಾಂಶವಿಲ್ಲದ ಆಹಾರದಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ದೂರಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದರೂ ನಿಲಯಪಾಲಕರು, ಸಹಾಯಕ ನಿರ್ದೇಶಕರು (AD) ಮತ್ತು ಜಂಟಿ ನಿರ್ದೇಶಕರು (JD) ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಹಾಸ್ಟೆಲ್‌ನ ವಾರ್ಡನ್ ವಿಜಯಕುಮಾರ್ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವ ಬದಲು ವಿದ್ಯಾರ್ಥಿಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ವಾರ್ಡನ್ ನಿಯಮಿತವಾಗಿ ಹಾಸ್ಟೆಲ್‌ಗೆ ಭೇಟಿ ನೀಡುವುದಿಲ್ಲ ಎಂದು ಆರೋಪಿಸಿದ್ದು, ಅವರನ್ನು ಹಾಗೂ ಅಡುಗೆ ಸಿಬ್ಬಂದಿಯನ್ನು ಬದಲಾಯಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪ್ರವಾಹ ಸಂತ್ರಸ್ತರ ನೆರವು ದುರ್ಬಳಕೆ ಆರೋಪ: ಟಿಎಂಸಿ ಕಚೇರಿಯಲ್ಲಿ ಸಾಮಗ್ರಿ ಸಂಗ್ರಹ

ಅಡುಗೆ ಸಿಬ್ಬಂದಿಗಳು ಆಹಾರದ ಸ್ವಚ್ಛತೆ ಕಾಪಾಡದೆ ಬೇಕಾಬಿಟ್ಟಿ ಅಡುಗೆ ಮಾಡುತ್ತಿದ್ದಾರೆ. ತರಬೇತಿ ಪಡೆದ ಅಡುಗೆಯವರ ಕೊರತೆಯಿಂದ ಈ ಸಮಸ್ಯೆಗಳು ಉಂಟಾಗಿವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಇದೇ ಕಾರಣದಿಂದ ನಾವು ಹೋರಾಟದ ಮಾರ್ಗ ಹಿಡಿಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಲ್ಲತಹಳ್ಳಿ

ಇದೇ ವೇಳೆ ಕಳೆದ ಆರು ತಿಂಗಳಿಂದ ಪುಸ್ತಕಗಳನ್ನು ವಿತರಿಸಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಹಲವು ಬಾರಿ ಕೇಳಿದರೂ ವಾರ್ಡನ್ ಕೇವಲ ಭರವಸೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ಶಿಕ್ಷಣಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಾಸ್ಟೆಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲದ ಕಾರಣ ಅಪರಿಚಿತರು ಒಳನುಗ್ಗುವ ಭೀತಿ ಇದೆ. ಇದು ವಿದ್ಯಾರ್ಥಿಗಳ ಭದ್ರತೆಗೆ ಅಪಾಯ ಉಂಟುಮಾಡುತ್ತಿದೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನೂ ವಿದ್ಯಾರ್ಥಿಗಳಿಗೆ ಬೆಡ್‌, ಕಾಟ್‌, ತಟ್ಟೆ-ಲೋಟ, ಶುಚಿ ಕಿಟ್‌, ಸಮವಸ್ತ್ರ ಹಾಗೂ ನೈಟ್ ಡ್ರೆಸ್ ನೀಡಿಲ್ಲ ಎಂದು ದೂರಲಾಗಿದೆ. ಶೌಚಾಲಯಗಳ ಸ್ವಚ್ಛತೆ ಕಾಪಾಡಲಾಗುತ್ತಿಲ್ಲ. ಪಿನಾಯಿಲ್ ಹಾಗೂ ಕ್ರಿಮಿನಾಶಕ ಬಳಸಿ ಪ್ರತಿದಿನ ಸ್ವಚ್ಛತೆ ನಡೆಸಲು ಸಿಬ್ಬಂದಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಹಾಸ್ಟೆಲ್ ಮುಂಭಾಗದ ಚರಂಡಿ ತಿಂಗಳಿನಿಂದ ಬ್ಲಾಕ್ ಆಗಿದ್ದು, ಆವರಣದಲ್ಲಿ ಕಸ ತುಂಬಿಕೊಂಡು ದುರ್ವಾಸನೆ ಹರಡುತ್ತಿದೆ. ಗ್ರಂಥಾಲಯ ಮತ್ತು ಕಂಪ್ಯೂಟರ್‌ಗಳ ದುರಸ್ತಿ, ಹೆಚ್ಚುವರಿ ಕೊಠಡಿಗಳ ನಿರ್ಮಾಣ, ಬಿಸಿನೀರಿನ ವ್ಯವಸ್ಥೆ ಹಾಗೂ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕು ಎಂಬ ಬೇಡಿಕೆಗಳನ್ನೂ ವಿದ್ಯಾರ್ಥಿಗಳು ಮುಂದಿಟ್ಟಿದ್ದಾರೆ.

ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ದೊಡ್ಡ ಬಸವರಾಜ್‌, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್‌ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಸ್ಯೆಗಳನ್ನು ಕೂಡಲೇ ಬಗೆಹರಿಸದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ನೋಡಿ: ಚುನಾವಣಾ ಫಲಿತಾಂಶ : ಹೆಚ್ಚಾದ ಹಿಂಸಾಚಾರ Janashakthi Media

Donate Janashakthi Media

Leave a Reply

Your email address will not be published. Required fields are marked *