ಬೆಂಗಳೂರು: ಅಂಬೇಡ್ಕರ್ ಜಯಂತಿ ಅಂಗವಾಗಿ “ಇಂದಿಗೆ ಅಂಬೇಡ್ಕರ್ ರಾಡಿಕಲ್ ಚಿಂತನೆಗಳು” ವಿಷಯದ ಕುರಿತಾಗಿ ಜನಶಿಕ್ಷಣ ಟ್ರಸ್ಟ್ ವತಿಯಿಂದ ವಿಚಾರ ಸಂಕಿರಣ ಆಯೋಜಿಸಲಾಯಿತು. ಬೆಂಗಳೂರು
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಬಿ.ಆರ್. ಮಂಜುನಾಥ್, “ರಾಡಿಕಲ್” ಎಂಬ ಪದದ ಅರ್ಥವನ್ನು ವಿವರಿಸುತ್ತಾ, ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಸಮಾಜದಲ್ಲಿ ಮೂಲಭೂತ ಬದಲಾವಣೆಯನ್ನು ಒತ್ತಾಯಿಸುವುದಾಗಿ ಹೇಳಿದರು. ಜಾತಿ ಆಧಾರಿತ ಅಸಮಾನತೆ, ಸಾಮಾಜಿಕ ಬಹಿಷ್ಕಾರ ಹಾಗೂ ಅಪ್ರಜಾಸತ್ತಾತ್ಮಕ ಧೋರಣೆಗಳ ವಿರುದ್ಧ ಅಂಬೇಡ್ಕರ್ ನಡೆಸಿದ ಹೋರಾಟವನ್ನು ಇಂದಿನ ಪೀಳಿಗೆ ಮುಂದುವರಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಂವಿಧಾನಾತ್ಮಕ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂಬುದನ್ನೂ ಅವರು ಒತ್ತಿ ಹೇಳಿದರು.
ಅಂಬೇಡ್ಕರ್ ಅವರ ಚಿಂತನೆಗಳು ಕಾರ್ಮಿಕ ವರ್ಗದ ಹಕ್ಕುಗಳ ಪರವಾಗಿಯೂ ಸ್ಪಷ್ಟವಾಗಿ ನಿಂತಿವೆ ಎಂದು ಹೇಳಿದ ಅವರು, ಕಮ್ಯುನಿಸ್ಟ್ ಚಳವಳಿಗಳೊಂದಿಗೆ ಕೆಲವು ವಿಚಾರಗಳಲ್ಲಿ ಹೊಂದಾಣಿಕೆ ಮತ್ತು ಸಹಕಾರದ ಅಂಶಗಳಿದ್ದವು ಎಂದು ಉಲ್ಲೇಖಿಸಿದರು. ವರ್ಗ ಶೋಷಣೆಯ ವಿರುದ್ಧದ ಹೋರಾಟ ಹಾಗೂ ಜಾತಿ ನಿರ್ಮೂಲನೆ ಪರಸ್ಪರ ಸಂಬಂಧ ಹೊಂದಿರುವ ದಿಕ್ಕುಗಳಾಗಿವೆ ಎಂದು ವಿವರಿಸಿದರು.
ಇದನ್ನೂ ಓದಿ :ಮೇ 15ರೊಳಗೆ ಸಂಪುಟ ಪುನರ್ ರಚನೆಗೆ ಕಾಂಗ್ರೆಸ್ ಶಾಸಕರು ಒತ್ತಾಯ ಬೆಂಗಳೂರು
ದಲಿತ ನಾಯಕ ಗೋಪಾಲಕೃಷ್ಣ ಅರಳಹಳ್ಳಿ ಮಾತನಾಡಿ, ದಲಿತ ಸಮುದಾಯದ ಇಂದಿನ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲಿದರು. ಅಂಬೇಡ್ಕರ್ ಅವರ ತತ್ವಗಳನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸದೆ, ಅವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು. “ಶಿಕ್ಷಣ, ಸಂಘಟನೆ ಮತ್ತು ಹೋರಾಟ” ಎಂಬ ಅಂಬೇಡ್ಕರ್ ಅವರ ಮಾರ್ಗದರ್ಶನ ಇಂದಿಗೂ ಪ್ರಸ್ತುತವಾಗಿದ್ದು, ಸಮಾನತೆಯ ಸಮಾಜ ನಿರ್ಮಾಣಕ್ಕೆ ಇದು ಮುಖ್ಯ ಸಾಧನವಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜನಶಿಕ್ಷಣ ಟ್ರಸ್ಟ್‌ನ ಕೆ.ಎಸ್. ವಿಮಲಾ, ಎನ್.ಕೆ. ವಸಂತರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ನೋಡಿ : ಇಂದಿಗೆ ಅಂಬೇಡ್ಕರ್ ರಾಡಿಕಲ್ ಚಿಂತನೆಗಳು ಬೆಂಗಳೂರು
