ಮೇ 15ರೊಳಗೆ ಸಂಪುಟ ಪುನರ್ ರಚನೆಗೆ ಕಾಂಗ್ರೆಸ್‌ ಶಾಸಕರು ಒತ್ತಾಯ

ನವದೆಹಲಿ: ಮೇ 15ರೊಳಗೆ ಸಂಪುಟ ಪುನರ್ ರಚನೆ ‍ಪ್ರಕ್ರಿಯೆ ನಡೆಸಬೇಕು ಎಂದು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ರಾಷ್ಟ್ರ ರಾಜಧಾನಿಯಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್‌ನ ಹಿರಿಯ ಶಾಸಕರು ಪಟ್ಟು ಹಿಡಿದಿದ್ದಾರೆ.

ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ ಪಟ್ಟಣ ಮತ್ತು ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ದೆಹಲಿ ಯಾತ್ರೆ ಕೈಗೊಂಡಿರುವ 20ಕ್ಕೂ ಅಧಿಕ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಏಪ್ರಿಲ್‌ 13ರ ಸಂಜೆ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಹೈಕಮಾಂಡ್‌ ನೀಡಿರುವ ವಾಗ್ದಾನದಂತೆ ಸಚಿವ ಸಂಪುಟ ಪುನರ್ ರಚನೆ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಟ್ರಾನ್ಸ್‌ಜೆಂಡರ್ ಕಾಯ್ದೆ ತಿದ್ದುಪಡಿ ವಿರುದ್ಧ ಟೀಕೆ: ಸ್ವಯಂ ಗುರುತಿನ ಹಕ್ಕು ಕಡಿತ ಆರೋಪ

ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡುವ ಉದ್ದೇಶದಿಂದ ಇದೇ 16ರ ವರೆಗೆ ನವದೆಹಲಿಯಲ್ಲೇ ಇರಲು ಸಚಿವ ಸ್ಥಾನದ ಆಕಾಂಕ್ಷಿಗಳು ತೀರ್ಮಾನಿಸಿದ್ದಾರೆ.

ರಾಹುಲ್ ಅವರು ಪಶ್ಚಿಮ ಬಂಗಾಳ ಚುನಾವಣಾ ರ‍್ಯಾಲಿಯಲ್ಲಿ ಮಂಗಳವಾರ ಭಾಗವಹಿಸಲಿದ್ದಾರೆ. ಹೀಗಾಗಿ, ಶಾಸಕರಿಗೆ ರಾಹುಲ್‌ ಸಿಗುವ ಸಾಧ್ಯತೆ ಕಡಿಮೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಲು ಶಾಸಕರು ಕಾಲಾವಕಾಶ ಕೇಳಿದ್ದಾರೆ. ಮಂಗಳವಾರ ವಿಶ್ರಾಂತಿ ಪಡೆದು ಹೈಕಮಾಂಡ್‌ ನಾಯಕರನ್ನು ಬುಧವಾರ ಭೇಟಿ ಮಾಡಲು ಪ್ರಯತ್ನಿಸುವುದಾಗಿ ಶಾಸಕರು ತಿಳಿಸಿದ್ದಾರೆ.

ಖರ್ಗೆ ಅವರನ್ನು ಭೇಟಿ ಮಾಡುವ ಮುನ್ನ ಶಾಸಕರು ಕರ್ನಾಟಕ ಭವನದಲ್ಲಿ ಸಭೆ ನಡೆಸಿ ಸಹಿ ಸಂಗ್ರಹ ನಡೆಸಿದರು. ‘ಸರ್ಕಾರಕ್ಕೆ ಮೇ ತಿಂಗಳಲ್ಲಿ ಮೂರು ವರ್ಷ ತುಂಬಲಿದೆ. ಎರಡೂವರೆ ವರ್ಷಗಳ ಬಳಿಕ ಹಾಲಿ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಸ್ಥಾನ ಕಲ್ಪಿಸುವುದಾಗಿ ಹೈಕಮಾಂಡ್‌ ಭರವಸೆ ನೀಡಿತ್ತು. ಸಂಪುಟದಲ್ಲಿರುವ ಅನೇಕ ಸಚಿವರು ನಿಷ್ಕ್ರೀಯರಾಗಿದ್ದಾರೆ. ಅವರಿಂದ ಪಕ್ಷ ಸಂಘಟನೆಗೆ ಲಾಭ ಆಗುತ್ತಿಲ್ಲ. ಅಂತಹವರನ್ನು ಸಂಪುಟದಿಂದ ಕೈಬಿಡಬೇಕು. 3–4 ಬಾರಿ ಶಾಸಕರಾದವರಿಗೆ ಆದ್ಯತೆ ನೀಡಬೇಕು‘ ಎಂದು ಹಿರಿಯ ಶಾಸಕರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ನೋಡಿ: ಗಾಳಿ ದುರಗಪ್ಪ ಫ್ಯೂಷನ್ ಮ್ಯೂಸಿಕ್ – ತಲೆದೂಗದೆ ಇರೋದು ಅಸಾಧ್ಯ! Janashakthi Media

Donate Janashakthi Media

Leave a Reply

Your email address will not be published. Required fields are marked *