ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುಹಂಚಿಕೆ: ಬಿಜೆಪಿಯ ಸೀಮಿತ ರಾಜಕೀಯ ಅಜೆಂಡಾಗೆ ಕುಗ್ಗಿಸಬಾರದು

ಬೆಂಗಳೂರು: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಇತರೆ ಎಡಪಂಥೀಯ ಮಹಿಳಾ ಸಂಘಟನೆಗಳು ಹಾಗೂ ಅನೇಕ ಮಹಿಳಾ ಸಂಘಟನೆಗಳು ಮತ್ತು ಬಹುತೇಕ ವಿರೋಧ ಪಕ್ಷಗಳು ಸದಾ ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಕಡ್ಡಾಯವಾಗಿ ಒಂದು ಮೂರನೇ ಭಾಗ ಮೀಸಲಾತಿ ನೀಡಬೇಕು ಎಂದು ಬಲವಾಗಿ ಆಗ್ರಹಿಸುತ್ತ ಬಂದಿವೆ ಎಂದು ಅಧ್ಯಕ್ಷೆ ಚಂದ್ರಕುಮಾರಿ ಹಾಗೂ ಪ್ರಧಾನ ಕಾರ್ಯದರ್ಶಿ ದೇವಿ ತಿಳಿಸಿದ್ದಾರೆ.

ಈ ಬೇಡಿಕೆ ನಿರಂತರ ಹೋರಾಟ ಮತ್ತು ಸಂಘಟಿತ ಚಳುವಳಿಗಳಿಂದ ಬಲಪಡಿಸಲ್ಪಟ್ಟಿದ್ದು, ಮಹಿಳೆಯರ ರಾಜಕೀಯ ಪ್ರತಿನಿಧಿತ್ವಕ್ಕಾಗಿ ಬಲವಾದ ಚಳುವಳಿ ನಿರ್ಮಿಸುವಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪ್ರಮುಖ ಪಾತ್ರವಹಿಸಿದೆ.

ಈ ಹಿನ್ನೆಲೆಯಲ್ಲಿ, 2023ರಲ್ಲಿ ‘ನಾರಿ ಶಕ್ತಿ ವಂದನ್ ಅಧಿನಿಯಮ’ದಲ್ಲಿ ಸೂಚಿಸಿದಂತೆ ಮಹಿಳಾ ಮೀಸಲಾತಿಯನ್ನು ಜನಗಣತಿ ಮತ್ತು ಕ್ಷೇತ್ರ ಮರುಹಂಚಿಕೆ (ಗಡಿ ನಿರ್ಣಯ)ಗೆ ಕೊಂಡಿಹಾಕುವ ಪ್ರಸ್ತಾಪಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದರೂ, ಸಂವಿಧಾನದ 108ನೇ ತಿದ್ದುಪಡಿ ಮೂಲಕ ಒಂದು ಮೂರನೇ ಭಾಗ ಮೀಸಲಾತಿ ನೀಡುವ ಮಸೂದೆ ಅಂಗೀಕಾರಕ್ಕೆ ನಾವು ಬೆಂಬಲ ನೀಡಿದ್ದೇವೆ.

ಇದನ್ನೂ ಓದಿ: ಹಸಿರು ವಲಯಕ್ಕೆ ಭೂಸ್ವಾಧೀನಕ್ಕೆ ವಿಳಂಬ ತಂತ್ರ – ಹೋರಾಟದ ಎಚ್ಚರಿಕೆ

ಆಗಲೇ ಈ ರೀತಿಯ ಕೊಂಡಿಗಳು ಗಂಭೀರ ವಿಳಂಬಕ್ಕೆ ಕಾರಣವಾಗುತ್ತವೆ ಹಾಗೂ 2024 ಮತ್ತು 2029ರ ಚುನಾವಣೆಯಲ್ಲಿಯೂ ಮಹಿಳೆಯರಿಗೆ ಮೀಸಲಾತಿ ಹಕ್ಕು ಸಿಗದಂತೆ ಮಾಡುವ ಸಾಧ್ಯತೆ ಇದೆ ಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವೆ.

ಈ ಆತಂಕಗಳು ಈಗ ನಿಜವಾಗಿವೆ. ಎರಡು ವರ್ಷಗಳಾದರೂ ಜನಗಣತಿ ನಡೆದಿ ಆಯೋಗವೂ ರಚನೆಯಾಗಿಲ್ಲ. ಇದರಿಂದ ಈ ಕೊಂಡಿ ಆಡಳಿತ ಪಕ್ಷದ ಉದ್ದೇಶಿತ ವಿಳಂಬ ತಂತ್ರವೆಂದು ಸ್ಪಷ್ಟವಾಗುತ್ತದೆ.

ಈ ಹಿನ್ನೆಲೆದಲ್ಲಿ ಮೋದಿ ಸರ್ಕಾರವು ಈಗ ಹೊಸ ಪ್ರಸ್ತಾಪವನ್ನು ಮುಂದಿಟ್ಟಿದೆ. 2011ರ ಜನಗಣತಿ ಆಧಾರವಾಗಿ ಕ್ಷೇತ್ರ ಮರುಹಂಚಿಕೆ ಮಾಡಿ, ಸಂಸತ್ ಮತ್ತು ವಿಧಾನಸಭೆಗಳ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವುದರೊಂದಿಗೆ ಮಹಿಳಾ ಮೀಸಲಾತಿಯನ್ನು ಜೋಡಿಸಲು ಯತ್ನಿಸುತ್ತಿದೆ. ಈ ಪ್ರಸ್ತಾಪವನ್ನು ವಿರೋಧ ಪಕ್ಷಗಳೊಂದಿಗೆ ಯಾವುದೇ ಚರ್ಚೆ ಇಲ್ಲದೆ, ಎಲ್ಲಾ ಪಕ್ಷಗಳ ಸಭೆ ನಡೆಸಬೇಕೆಂಬ ಬೇಡಿಕೆಗಳನ್ನು ಲೆಕ್ಕಿಸದೇ ಮುಂದಿಟ್ಟಿರುವುದು ಖಂಡನೀಯ.

ಇಂತಹ ಕ್ರಮ ಗಂಭೀರ ಚಿಂತೆಗಳಿಗೆ ಕಾರಣವಾಗಿದೆ. ಹಳೆಯ ಜನಗಣತಿ ಆಧಾರದಲ್ಲಿ ಕ್ಷೇತ್ರ ಮರುಹಂಚಿಕೆ ಮಾಡಿ ಸ್ಥಾನಗಳನ್ನು ಹೆಚ್ಚಿಸುವುದು ದೇಶದ ವಿವಿಧ ರಾಜ್ಯಗಳ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ. ಈ ವಿಷಯದಲ್ಲಿ ಎಲ್ಲಾ ರಾಜ್ಯಗಳೊಂದಿಗೆ ಸಮಗ್ರ ಚರ್ಚೆ ಮತ್ತು ಸಲಹೆ ಅಗತ್ಯವಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ಸಮಯದಲ್ಲಿ ಇಂತಹ ಪ್ರಸ್ತಾಪವನ್ನು ತುರ್ತುವಾಗಿ ಮುಂದೂಡುವುದು ಅತ್ಯಂತ ಆಕ್ಷೇಪಾರ್ಹ. ಇದು ಮಹಿಳಾ ಸಬಲೀಕರಣದ ನಿಜವಾದ ಬದ್ಧತೆಯಲ್ಲ, ಚುನಾವಣಾ ಲಾಭಕ್ಕಾಗಿ ನಡೆಸುವ ಸೀಮಿತ ರಾಜಕೀಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ.

ಆದ್ದರಿಂದ, ಪ್ರಮುಖ ಮಹಿಳಾ ಸಂಘಟನೆಯಾಗಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಈ ಪ್ರಸ್ತಾಪಗಳನ್ನು ತಕ್ಷಣವೇ ಬದಿಗಿಟ್ಟು, ಸ್ಥಾನಗಳ ಹೆಚ್ಚಳದ ಪರಿಣಾಮಗಳ ಬಗ್ಗೆ ಎಲ್ಲಾ ಸಂಬಂಧಿತ ಪಕ್ಷಗಳು ಮತ್ತು ರಾಜ್ಯಗಳೊಂದಿಗೆ ವ್ಯಾಪಕ ಚರ್ಚೆ ನಡೆಸಬೇಕೆಂದು ಆಗ್ರಹಿಸುತ್ತದೆ.

ನಾವು ಮತ್ತೆ ಒತ್ತಿಹೇಳುವುದೇನೆಂದರೆ, ಮಹಿಳಾ ಮೀಸಲಾತಿಯನ್ನು 2029ರ ಸಾಮಾನ್ಯ ಚುನಾವಣೆಯಿಂದಲೇ ಜಾರಿಗೆ ತರಬೇಕು. ಇದಕ್ಕಾಗಿ ಜನಗಣತಿ ಮತ್ತು ಕ್ಷೇತ್ರ ಮರುಹಂಚಿಕೆಯಿಂದ ಅದನ್ನು ಬೇರ್ಪಡಿಸುವ ತಿದ್ದುಪಡಿ ಅಗತ್ಯವಿದೆ. ಆದರೆ ಮೋದಿ ಸರ್ಕಾರವು ಇಂತಹ ಪ್ರಸ್ತಾಪಗಳನ್ನು ಕೇವಲ ರಾಜಕೀಯ ತಂತ್ರವಾಗಿ ಬಳಸುತ್ತಿದ್ದು, ಮಹಿಳಾ ಮೀಸಲಾತಿ ಜಾರಿಗೆ ಸ್ಪಷ್ಟ ಇಚ್ಛಾಶಕ್ತಿ ತೋರಿಸುತ್ತಿಲ್ಲ.

ಮಹಿಳಾ ಮೀಸಲಾತಿ ಮಸೂದೆಯನ್ನು ಯಾವುದೇ ಬೇರೆ ಕೊಂಡಿಗಳಿಲ್ಲದೆ ಸ್ಪಷ್ಟವಾಗಿ ಮತ್ತು ನಿಬಂಧನೆಯಿಲ್ಲದೆ ಜಾರಿಗೆ ತರಬೇಕೆಂದು ಎಲ್ಲಾ ಪ್ರಜಾಪ್ರಭುತ್ವವಾದ ಶಕ್ತಿಗಳಿಗೆ ನಾವು ಕರೆ ನೀಡುತ್ತೇವೆ.

ಇದನ್ನೂ ನೋಡಿ: ನಿತೀಶ್ ಕುಮಾರ್ ಎಂಬ ನಾನು…!? ಜೆಡಿಯುಗೆ ಇದು ಕೊನೆಯ ಮೊಳೆಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *