ಗಂಗಾವತಿ : ಬಿಸಿಎಂ ಸೇರಿದಂತೆ ವಿವಿಧ ಇಲಾಖೆಗಳ ವಿದ್ಯಾರ್ಥಿ ವಸತಿ ನಿಲಯಗಳ ಆಯ್ಕೆ ಪಟ್ಟಿ ಪ್ರಕಟಣೆಯಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಗಂಗಾವತಿ ತಾಲೂಕು ಸಮಿತಿ ತಾಲೂಕು ಪಂಚಾಯಿತಿ ಆಡಳಿತಕ್ಕೆ ಮನವಿ ಸಲ್ಲಿಸಿತು. ಹಾಸ್ಟೆಲ್
ತಾಲೂಕು ಪಂಚಾಯಿತಿ ವ್ಯವಸ್ಥಾಪಕರ ಮೂಲಕ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ, 2026-27ನೇ ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ತಿಂಗಳು ಕಳೆದಿದ್ದರೂ ಬಿಸಿಎಂ, ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಿದ್ಯಾರ್ಥಿ ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ಇದುವರೆಗೆ ಪ್ರಕಟಿಸಿಲ್ಲ ಎಂದು ಆರೋಪಿಸಲಾಗಿದೆ.
ಗ್ರಾಮೀಣ ಪ್ರದೇಶಗಳಿಂದ ಗಂಗಾವತಿಗೆ ಉನ್ನತ ಶಿಕ್ಷಣಕ್ಕಾಗಿ ಬಂದಿರುವ ನೂರಾರು ವಿದ್ಯಾರ್ಥಿಗಳು ವಸತಿ ನಿಲಯಗಳನ್ನು ಅವಲಂಬಿಸಿದ್ದು, ಆಯ್ಕೆ ಪಟ್ಟಿ ಪ್ರಕಟವಾಗದ ಕಾರಣ ಖಾಸಗಿ ವಸತಿ ಹಾಗೂ ಸಾರಿಗೆಗೆ ಹೆಚ್ಚಿನ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬಡ, ಗ್ರಾಮೀಣ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ಎಸ್‌ಎಫ್‌ಐ ತಿಳಿಸಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರಿ ಬಸ್ ದರ ಏರಿಕೆ ಸಾಧ್ಯತೆ: BMTCಗೆ 44%, KSRTCಗೆ 33% ಹೆಚ್ಚಳ ಪ್ರಸ್ತಾವನೆ
ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಜೂನ್ 19ರಂದೇ ಪದವಿ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯಗಳ ಆಯ್ಕೆ ಪಟ್ಟಿ ಬಿಡುಗಡೆ ಮಾಡುವಂತೆ ಸುತ್ತೋಲೆ ಹೊರಡಿಸಿದ್ದರೂ, ತಾಲೂಕು ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಯ್ಕೆ ಪಟ್ಟಿ ಪ್ರಕಟವಾಗಿಲ್ಲ ಎಂದು ಸಂಘಟನೆ ದೂರಿದೆ. ಆಯ್ಕೆ ಪಟ್ಟಿ ಬಿಡುಗಡೆ ಸಮಿತಿಯ ಅಧ್ಯಕ್ಷರಾಗಿರುವ ಕ್ಷೇತ್ರದ ಶಾಸಕರೂ ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದೆ.
ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಕೂಡಲೇ ಹಾಸ್ಟೆಲ್ ಆಯ್ಕೆ ಪಟ್ಟಿಯನ್ನು ಪ್ರಕಟಿಸಬೇಕು. ಅರ್ಹ ವಿದ್ಯಾರ್ಥಿಗಳಿಗೆ ಶೀಘ್ರ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಎಸ್‌ಎಫ್‌ಐ ಒತ್ತಾಯಿಸಿದೆ.
ಇಲ್ಲದಿದ್ದರೆ, ತಾಲೂಕು ಪಂಚಾಯಿತಿ ಕಚೇರಿ ಎದುರು ಎಸ್‌ಎಫ್‌ಐ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಎಸ್‌ಎಫ್‌ಐ ಹಾಸ್ಟೆಲ್ ಉಪಸಮಿತಿಯ ರಾಜ್ಯ ಸಹ ಸಂಚಾಲಕ ಶರೀಫ್ ಎಂ.ಪಿ., ತಾಲೂಕು ಜಂಟಿ ಕಾರ್ಯದರ್ಶಿ ಬಸಯ್ಯ ಹಿರೇಮಠ, ಮುಖಂಡರಾದ ಯಂಕಣ್ಣ, ಕೌಶಿಕ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ‘ವಿಐಪಿ’! ಪಾಸ್‌ಪೋರ್ಟ್ ಕಥೆ ಏನು? ಎಸ್‌ಐಆರ್ ಸುತ್ತ ಪ್ರಶ್ನೆಗಳ ಹುತ್ತ |
