ಭಾರತ ತನ್ನ 80ನೇ ಸ್ವಾತಂತ್ರ್ಯ ದಿನವನ್ನ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಎಂಬತ್ತು ವರ್ಷಗಳ ಹಿಂದೆ ಈ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸುವಲ್ಲಿ ನಡೆಸಿದ ಹೋರಾಟಗಳ ಕುರಿತು ಮತ್ತು ವಿಚಾರಗಳ ಕುರಿತು ತಿಳಿದುಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಅದಕ್ಕಾಗಿಯೇ ಡಾ. ಬಿ.ಆರ್. ಅಂಬೇಡ್ಕರ್ ಹೇಳಿರುವುದು “ಇತಿಹಾಸವನ್ನು ಮರೆತವರು ಇತಿಹಾಸವನು ಸೃಷ್ಟಿಸಲಾರರು” ಎಂದು. ಸ್ವಾತಂತ್ರ್ಯ
– ಹೆಚ್. ಆರ್. ನವೀನ್‌ಕುಮಾರ್
ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಹಲವು ದಾರೆಗಳು ಮೂಡಿಬಂದಿವೆ, ಪ್ರತಿಯೊಂದು ದಾರೆಯೂ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡಿವೆ. ಅವೆಲ್ಲವುಗಳು ಇತಿಹಾಸದಲ್ಲಿ ಹಲವು ಕುರುಹುಗಳನ್ನು ಉಳಿಸಿ ಹೋಗಿವೆ. ಹಾಗೂ ಪ್ರತಿ ದಾರೆಯಿಂದಲೂ ನಾವು ಕಲಿಯಬೇಕಾದ ಪಾಠಗಳು ಸಾಕಷ್ಟಿವೆ. ಸ್ವಾತಂತ್ರ್ಯ
ಇಂತಹ ದಾರೆಗಳಲ್ಲಿ ಪ್ರಮುಖ ದಾರೆಯಾದ ಕ್ರಾಂತಿಕಾರಿಗಳು ಮತ್ತು ಕಮ್ಯುನಿಸ್ಟರ ದಾರೆಯ ಕುರಿತು ಈ ಲೇಖನದ ಮೂಲಕ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ. ಸಾಮಾನ್ಯವಾಗಿ ಇಂದು ನಾವು ಓದುವ ಪಠ್ಯಪುಸ್ತಕಗಳಲ್ಲಿ ಅಥವಾ ಇತಿಹಾಸದ ಪುಸ್ತಕಗಳಲ್ಲಿ ಮರೆಯಾಗಿರುವ ಈ ವಿಚಾರವನ್ನು ಮತ್ತು ಅದರ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ದುಡಿಯುವ ವರ್ಗದ ಇತಿಹಾಸದ ಕುರಿತು ಅಂತರಾಷ್ಟ್ರೀಯ ಕಮ್ಯುನಿಸ್ಟ್ ಚಳುವಳಿಯ ನಾಯಕರಾಗಿದ್ದ ರಷ್ಯಾ ಸಮಾಜವಾದಿ ಕ್ರಾಂತಿಯ ರುವಾರಿಗಳಾಗಿದ್ದ ಲೆನಿನ್ ರವರು “ತನ್ನ ಚಳುವಳಿಗಳ ಇತಿಹಾಸದ ಬಗ್ಗೆ ನಿರ್ಲಕ್ಷ್ಯ ತೋರುವ ಕಾರ್ಮಿಕ ಒಬ್ಬ ವರ್ಗ ಪ್ರಜ್ಞೆಯಯುಳ್ಳ ಕಾರ್ಮಿಕನಾಗಲಾರ” ಎಂದು ಹೇಳುತ್ತಾರೆ. ಸ್ವಾತಂತ್ರ್ಯ
ಇದನ್ನೂ ಓದಿ: ಕರ್ನಾಟಕ ಎಸ್‌ಐಆರ್ : 1.09 ಕೋಟಿ ಮತದಾರರು ಎಎಸ್‌ಡಿಡಿಒ ಪಟ್ಟಿಯಲ್ಲಿ; ಬೆಂಗಳೂರು ದಕ್ಷಿಣದಲ್ಲಿ ಶೇ.50.32
ಸ್ವಾತಂತ್ರ್ಯ ಚಳುವಳಿಯಲ್ಲಿ ಕಮ್ಯುನಿಸ್ಟರು ನಿರ್ವಹಿಸಿದ ಪಾತ್ರಗಳು
1. ಮೊದಲ ಬಾರಿಗೆ ಪೂರ್ಣ ಸ್ವರಾಜ್ಯದ ಘೋಷಣೆ ನೀಡಿದವರು ಕಮ್ಯುನಿಸ್ಟರು.
2. ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧದ ಹೋರಾಟದ ಜೊತೆಗೆ ದೇಶೀ ಭೂಮಾಲಕ, ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಹೋರಾಡಿದವರು ಕಮ್ಯುನಿಸ್ಟರು.
3. ಸ್ವಾತಂತ್ರ್ಯ ಚಳುವಳಿಯನ್ನು ವರ್ಗ ಹೋರಾಟದ ನೆಲೆಗಟ್ಟಿನಲ್ಲಿ ನೋಡಿ ಸಮಾಜವಾದದ ಸ್ಥಾಪನೆಗೆ ಶ್ರಮಿಸಿದವರು ಕಮ್ಯುನಿಸ್ಟರು.
4. ರೈತ, ಕಾರ್ಮಿಕರು ಮತ್ತು ಒಟ್ಟಾರೆ ದುಡಿಯುವ ವರ್ಗವನ್ನು ಪ್ರತ್ತೇಕವಾಗಿ ಸಂಘಟಿಸಿದವರು ಕಮ್ಯುನಿಸ್ಟರು.
5. ಸಾಮಾಜಿಕ ಅನಿಷ್ಟವಾದ ಜಾತಿವ್ಯವಸ್ಥೆ ಮತ್ತು ಕೋಮುವಾದದ ವಿರುದ್ಧ ರಾಜಿ ರಹಿತ ಚಳುವಳಿ ರೂಪಿಸಿದವರು ಕಮ್ಯುನಿಸ್ಟರು.
ಭಾರತವನ್ನ ಪ್ರವೇಶಿಸಿದ ಬ್ರಿಟಿಷರು
ಸ್ವಾತಂತ್ರ್ಯ ಚಳುವಳಿಯಲ್ಲಿ ಕ್ರಾಂತಿಕಾರಿಗಳು ಮತ್ತು ಕಮ್ಯುನಿಸ್ಟರ ಪಾತ್ರದ ಕುರಿತು ಚರ್ಚಿಸುವ ಮುನ್ನ ಭಾರತ ಬ್ರಿಟಿಷರ ದಾಸ್ಯಕ್ಕೆ ಒಳಗಾಗಿದ್ದರ ಕುರಿತು ಸ್ವಲ್ಪ ಗಮನಹರಿಸೋಣ. ಸ್ವಾತಂತ್ರ್ಯ
1600 ರಲ್ಲಿ ಬ್ರಿಟಿಷರು ಭಾರತವನ್ನ ಪ್ರವೇಶಿಸಿದರು. 1613-14 ರಲ್ಲಿ ಗುಜರಾತಿನಲ್ಲಿ ಮೊದಲು ವ್ಯಾಪಾರ ಪ್ರಾರಂಭಿಸಿದರು. 1615-18 ಮೊಗಲರು ಬ್ರಿಟಿಷರೊಂದಿಗೆ ವ್ಯಾಪಾರ ಒಪ್ಪಂದವನ್ನ ಮಾಡಿಕೊಂಡರು. 1751 ರಾಬರ್ಟ್ ಕ್ಲೆöÊವ್ ದಕ್ಷಿಣ ಭಾರತವನ್ನ ಆಕ್ರಮಿಸಿದನು. 1764 ಬ್ರಿಟಿಷರು ದುರ್ಬಲ ಮೊಗಲ್ ಚರ್ಕವರ್ತಿಯನ್ನ ಸೋಲಿಸಿದರು. 1773 ಬಂಗಾಳದಲ್ಲಿನ ಅಫೀಮು ಬೆಳೆಯುವುದು ಮತ್ತು ಮಾರಾಟದ ಸಂಪೂರ್ಣ ಹಿಡಿತವನ್ನು ಬ್ರಿಟಿಷರು ಪಡೆದರು. ಸ್ವಾತಂತ್ರ್ಯ

1799 ಮೇ 4 ರಂದು ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರ ವಿರುದ್ದದ ನಾಲ್ಕನೇ ಆಂಗ್ಲೋ ಮೈಸೂರು ಯುದ್ದದಲ್ಲಿ ಟಿಪ್ಪು ವೀರ ಮರಣ ಹೊಂದಿದನು. ಟಿಪ್ಪು ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಮಡಿದ ಮೊದಲ ರಾಜ. ವ್ಯಾಪಾರದ ಉದ್ದೇಶದಿಂದ ಭಾರತವನ್ನ ಪ್ರವೇಶಿಸಿದ ಬ್ರಿಟಿಷರು 1800 ರಿಂದ ತಮ್ಮ ಸಾಮ್ರಾಜ್ಯವನ್ನ ದೇಶಾದ್ಯಂತ ವಿಸ್ತರಿಸಿದರು. ನಿರಂತರ ಶೋಷಣೆ, ಆಸ್ತಿಗಳ ಲೂಟಿ, ಭಾರತದ ಎಲ್ಲ ರೀತಿಯ ಸಂಪನ್ಮೂಲಗಳ ಲೂಟಿ ಯತೇಚ್ಚವಾಯಿತು. ಭಾರತ ಸಂಪೂರ್ಣ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. ಸ್ವಾತಂತ್ರ್ಯ
1757-1857 ರವರೆಗೆ ಒಂದು ಶತಮಾನದಲ್ಲಿ ಭಾರತದಲ್ಲಿ ಬ್ರಿಟಿಷರ ವಿರುದ್ಧ ರಾಜರು, ಸಾಮಂತರು, ಭೂಮಾಲಕರ ವಿರುದ್ಧ ನೂರಾರು ಸಶಸ್ತç ಬಂಡಾಯಗಳು ನಡೆದಿವೆ. ಸ್ವಾತಂತ್ರ್ಯ
1857 ಮೊದಲ ಸ್ವಾತಂತ್ರ‍್ಯ ಸಂಗ್ರಾಮ
1857 ರಲ್ಲಿ ನಡೆದ ಸೈನಿಕ ಬಂಡಾಯವನ್ನ ಇತಿಹಾಸದಲ್ಲಿ ‘ಸೈನಿಕರಿಗೆ ಹಂದಿ ಮತ್ತು ದನದ ಕೊಬ್ಬು ಸವರಿದ ಮದ್ದುಗಳನ್ನು ಬಳಸಲು ಕೊಡುತ್ತಿದ್ದರು, ಹಿಂದು ಮತ್ತು ಮುಸ್ಲಿಂ ಸೈನಿಕರಿದ್ದಿದ್ದರಿಂದ ಅವರು ಬಂಡೆದ್ದರು’ ಎಂಬ ವಿಚಾರವನ್ನು ಬೋದಿಸಲಾಗುತ್ತದೆ. ಆದರೆ ಈ ವಿಷಯ ಒಂದು ನೆಪ ಮಾತ್ರವಾಗಿತ್ತು. 1839-1857 ರವರೆಗೆ ಒಟ್ಟು 10 ಯುದ್ದಗಳಲ್ಲಿ ಭಾರತೀಯ ಬ್ರಿಟಿಷ್ ಸೈನಿಕರನ್ನು ಹವ್ಯಾತವಾಗಿ ದುಡಿಸಲಾಗಿತ್ತು. ಸ್ವಾತಂತ್ರ್ಯ

ಇದರಿಂದ ಸೈನಿಕರ ಅಪಾರ ಸಾವು ನೋವು ಸಂಬವಿಸಿದ್ದವು. ಬ್ರಿಟಿಷರು ಜಮೀನ್ದಾರರಿಗೆ ರಿಯಾಯ್ತಿ ನೀಡಿ ರೈತರಿಗೆ ತೆರಿಗೆ ಹೆಚ್ಚಿಸಿದರು. ಇವೆಲ್ಲವುಗಳ ಪರಿಣಾಮ ಸಿಪಾಯಿಗಳು ದಂಗೆಯೆದ್ದರು. ಸ್ವಾತಂತ್ರ್ಯ
ಬಂಗಾಳದ ಬ್ಯಾರಕ್ ಪುರದಲ್ಲಿ ಮಂಗಲ್ ಪಾಂಡೆ ನೇತೃತ್ವದಲ್ಲಿ 1,35,000 ಸೈನಿಕರಲ್ಲಿ 1,25,000 ಸೈನಿಕರು ಈ ದಂಗೆಯಲ್ಲಿ ಭಾಗವಹಿಸಿದ್ದರು. ಎಲ್ಲ ಧರ್ಮದ ಸೈನಿಕರು, ಜನರು ಈ ಸಂಗ್ರಾಮದಲ್ಲಿ ಜೊತೆಯಾದರು. 1857 ರಲ್ಲಿ ನಡೆದ ಸೈನಿಕರ ಈ ದಂಗೆಯನ್ನ ಮಾಹಾನ್ ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್ “ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ” ಎಂದು ಕರೆದರು. ಸ್ವಾತಂತ್ರ್ಯ
1885 ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆ
1858 ರಲ್ಲಿ ಭಾರತ ಆಡಳಿತಾತ್ಮಕವಾಗಿ ಸಂಪೂರ್ಣ ಬ್ರಿಟಿಷರ ಕೈವಶವಾಯಿತು. 1885 ರಲ್ಲಿ ಭಾರತದ ಬುದ್ದಿಜೀವಿಗಳ ಒಂದು ಗುಂಪು ಭಾರತೀಯರ ಭಾವನೆಗಳನ್ನು ಬ್ರಿಟಿಷ್ ಸರ್ಕಾರಕ್ಕೆ ತಲುಪಿಸಲು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪಿಸಿದರು.

ಇದನ್ನು ಸ್ಥಾಪಿಸಿದ್ದು ಬ್ರಿಟಿಷ್ ನಿವೃತ್ತ ಅಧಿಕಾರಿ ಎ.ಓ. ಹ್ಯೂಮ್. ಕಾಂಗ್ರೆಸಿನ ಒಳಗೆ ಮಂದಗಾಮಿಗಳು ಮತ್ತು ತೀವ್ರಗಾಮಿಗಳು ಎಂಬ ಎರಡು ಗುಂಪುಗಳಿದ್ದವು. ತೀವ್ರಗಾಮಿಗಳ ಗುಂಪಿನಲ್ಲಿ ಲಾಲ ಲಜಪತರಾಯ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್ ರವರುಗಳಿದ್ದರು.
ಬ್ರಿಟಿಷ್ ಲೂಟಿ
ಬ್ರಿಟಿಷರು ತಮ್ಮ ವ್ಯಾಪಾರಕ್ಕೆ ಅನುಕೂಲವಾಗುವಂತೆ ಮತ್ತು ಲೂಟಿಯ ಪ್ರಮಾಣವನ್ನು ವೇಗಗೊಳಿಸುವ ಉದ್ದೇಶದಿಂದ 1905 ರಲ್ಲಿ 350 ಕೋಟಿ ವೆಚ್ಚದಲ್ಲಿ 28,000 ಮೈಲಿಗಳಷ್ಟು ಉದ್ದದ ರೈಲು ಮಾರ್ಗವನ್ನು ನಿರ್ಮಿಸಿದರು.

ರಸ್ತೆ, ಅಂಚೆ, ಟೆಲಿಫೋನ್ ವ್ಯವಸ್ಥೆ ಮೂಲಕ ಸಂಪತ್ತನ್ನು ಸುಲಭವಾಗಿ ಲೂಟಿ ಮಾಡಲು ಆರಂಭಿಸಿದರು. ಇದೆಲ್ಲದರ ವೆಚ್ಚಗಳನ್ನು ಭಾರತೀಯರ ಮೇಲೆ ಅದರಲ್ಲೂ ರೈತರ ಮೇಲೆ ತೆರಿಗೆ ಹಾಕಿ ಸಂಗ್ರಹಿಸಿದರು. ಭಾರತದಿಂದ ಹತ್ತಿಯನ್ನು ರಫ್ತು ಮಾಡಿ, ಇಂಗ್ಲೆಂಡ್ ನಲ್ಲಿ ಬಟ್ಟೆಗಳನ್ನು ತಯಾರಿಸಿ ಭಾರತಕ್ಕೆ ತಂದು ಮಾರುತ್ತಿದ್ದರು.
ಬ್ರಿಟಿಷ್ ಶಿಕ್ಷಣ
ಬ್ರಿಟಿಷರು ತಮ್ಮ ಆಡಳಿತಕ್ಕೆ ಬೇಕಾದ ಗುಮಾಸ್ತರನ್ನು ತಯಾರಿಸುವ ಉದ್ದೇಶವನ್ನು ಭಾರತದಲ್ಲಿ ಮೆಕಾಲೆ ಶಿಕ್ಷಣ ಪದ್ದತಿಯನ್ನು ಅಳವಡಿಸಿಕೊಂಡರು. ಭಾರತೀಯರಿಗೆ ಎಂತಹ ಶಿಕ್ಷಣವನ್ನು ನೀಡಬೇಕೆನ್ನುವ ಕುರಿತು ಬ್ರಿಟಿಷ್ ಅಧಿಕಾರಿ ಮೆಕಾಲೆ ಹೀಗೆ ವಿವರಿಸುತ್ತಾರೆ.

“ಭಾರತೀಯರು ಬಣ್ಣದಲ್ಲಿ ಭಾರತೀಯರಾಗಿಯೂ, ಆಲೋಚನೆಯಲ್ಲಿ ಬ್ರಿಟಿಷರಾಗಿಯೂ ಇರಬೇಕು ಅಂತಹ ಶಿಕ್ಷಣ ನೀಡಬೇಕು” 1906 ರಲ್ಲಿ ಬ್ರಿಟಿಷ್ ಶಿಕ್ಷಣಕ್ಕೆ ಎದುರಾಗಿ ರವೀಂದ್ರನಾಥ ಠಾಗೋರ್ ಸೃಜನಾತ್ಮಕ ಶಿಕ್ಷಣಕ್ಕಾಗಿ ಶಾಂತಿನಿಕೇತನವನ್ನು ಸ್ಥಾಪಿಸಿದರು. ಇದೇ ಸಂದರ್ಭದಲ್ಲಿ ಬೆಂಗಾಲ್ ನ್ಯಾಷನಲ್ ಕಾಲೇಜು ಸ್ಥಾಪನೆಗೊಂಡಿತು. ಅದೇ ರೀತಿ ದೇಶದ ಹಲವು ಭಾಗಗಳಲ್ಲಿ ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜುಗಳು ಸ್ಥಾಪನೆಗೊಂಡವು.
ಗಾಂಧಿ
1909 ರಲ್ಲಿ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಗುಲಾಮಗಿರಿಯ ವಿರುದ್ಧ ಮತ್ತು ಉತ್ತಮ ಕೆಲಸದ ವಾತಾವರಣಕ್ಕಾಗಿ ಹೋರಾಟ ಮಾಡುತ್ತಾರೆ. 6 ವರ್ಷಗಳ ನಂತರ ಭಾರತಕ್ಕೆ ವಾಪಸಾಗುತ್ತಾರೆ. ಗಾಂಧಿಗೆ ಭಾರತದ ಸ್ವಾತಂತ್ರ‍್ಯ ಚಳುವಳಿಯನ್ನು ವರ್ಗಕಣ್ಣೋಟದಲ್ಲಿ ಕೊಂಡಯ್ಯಬೇಕೆನ್ನುವ ಆಲೋಚನೆ ಇರಲಿಲ್ಲ.
ಇವರು ಟ್ರಸ್ಟಿ ಶಿಫ್ (ಧರ್ಮದರ್ಶಿತ್ವ) ನಲ್ಲಿ ನಂಬಿಕೆ ಇಟ್ಟಿದ್ದರು. ಮಾಲಿಕರು ಕಾರ್ಮಿಕರು ಒಟ್ಟಿಗೆ, ಭೂಮಾಲಕರು ರೈತರು ಒಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಸಂಯುಕ್ತ ರಂಗದ ರೀತಿಯಲ್ಲಿ ಕೆಲಸ ಮಾಡಬೇಕೆಂದು ಬಯಸಿದ್ದರು.

ಚಳುವಳಿಗಳು ತೀವ್ರ ಸ್ವರೂಪವನ್ನು ಪಡೆದಾಗ ಅವರ ಅಹಿಂಸಾ ತತ್ವವನ್ನು ಮುಂದುಮಾಡಿ ಚಳುವಳಿಯನ್ನು ವಾಪಸ್ ಪಡೆಯುತ್ತಿದ್ದರು. ಇದರಿಂದ ಕಾಂಗ್ರೇಸ್‌ನಲ್ಲಿರುವ ಕ್ರಾಂತಿಕಾರಿಗಳು ಬೇಸರಗೊಂಡರು.
ಇದಕ್ಕೆ ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಉತ್ತರಪ್ರದೇಶದ ಚೌರಿ ಚೌರಾದಲ್ಲಿ ನಡೆದ ಘಟನೆಗೆ ಗಾಂಧಿಯವರು ಇಡೀ ಅಸಹಕಾರ ಚಳುವಳಿಯನ್ನೇ ವಾಪಸ್ ಪಡೆದರು. ಈ ಸಂದರ್ಭದಲ್ಲಿ ದೇಶದ ಎಲ್ಲಾ ಭಾಗಗಳಲ್ಲೂ ಜನರು ಸ್ವಯಂ ಸ್ಪೂರ್ತಿಯಿಂದ ಬ್ರಿಟಿಷರ ವಿರುದ್ಧ ಬೀದಿಗಿಳಿದು, ಅವರ ವಸ್ತುಗಳನ್ನು ಸುಟ್ಟು ಆಕ್ರೋಷಗೊಂಡಿದ್ದರು. ಗಾಂದಿಯವರ ಈ ನಿಲುವು ಬುಸಂಖ್ಯಾತರಿಗೆ ನಿರಾಸೆಯನ್ನು ಮೂಡಿಸಿತು.
ಜಲಿಯನ್ ವಾಲಾಬಾಗ್ ಘಟನೆ 1919
ಕ್ರಾಂತಿಕಾರಿಗಳ ಚಟುವಟಿಕೆಯನ್ನು ನಿಯಂತ್ರಿಸಲು ಬ್ರಿಟಿಷರು ರೌಲಟ್ ಕಮಿಟಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಪ್ರಯತ್ನಿಸಿದರು. ಇದರ ವಿರುದ್ಧ 1919 ಏಪ್ರಿಲ್ 10 ರಂದು ಪಂಜಾಬ್‌ನ ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ಜನ ಸೇರಿ ಪ್ರತಿಭಟನಾ ಸಮಾವೇಶ ನಡೆಸಿದರು ಜನರಲ್ ಡಯರ್ ತನ್ನ ಸೈನಿಕರಿಂದ ಸುತ್ತುವರೆದು ನೂರಾರು ಸುತ್ತು ಗುಂಡುಗಳನ್ನು ಹಾರಿಸಿ 379 ಜನರನ್ನು ಕೊಂದನು 1200 ಜನ ಗಾಯಗೊಂಡರು.

ಜಲಿಯನ್ ವಾಲಾಬಾಗ್‌ನ ಈ ಕರಾಳ ಘಟನೆ ದೇಶದಲ್ಲಿ ಒಂದು ಸಂಚಲನವನ್ನ ಮೂಡಿಸಿತು. ಆಗ ಹನ್ನೆರಡು ವರ್ಷ ವಯಸ್ಸಿನ ಯುವಕ ಭಗತ್ ಸಿಂಗ್ ನ ಮೇಲೂ ಗಾಢವಾದ ಪ್ರಭಾವವನ್ನು ಬೀರಿ ತಾನು ಸ್ವಾತಂತ್ರ್ಯ ಚಳುವಳಿಯಲ್ಲಿ ತನ್ನನ್ನು ಸಂಪೂರ್ಣ ಅರ್ಪಿಸಿಕೊಳ್ಳಬೇಕೆನ್ನುವ ನಿರ್ಧಾರವನ್ನು ಕೈಗಳ್ಳುವಂತೆ ಮಾಡಿತು.
ಭಾರತ ಕಮ್ಯುನಿಸ್ಟ್ ಚಳುವಳಿ ಹಿನ್ನೆಲೆ
ಭಾರತದಲ್ಲಿ ಕಮ್ಯುನಿಸ್ಟ್ ಚಳುವಳಿಯು, ಭಾರತದ ಜನತೆಯ ಸಾಮ್ರಾಜ್ಯಶಾಹಿ ವಿರೋಧಿ ಸಮರಧೀರ ತೊರೆಗಳು ಮತ್ತು ಪ್ರಜಾಸತ್ತಾತ್ಮಕ ಹೋರಾಟಗಳ ಮೂಲಕ ಹೊರಹೊಮ್ಮಿದೆ.

ರಷ್ಯಾದ ಸೋವಿಯತ್ ಸಮಾಜವಾದಿ ಕ್ರಾಂತಿಯು ಉಂಟು ಮಾಡಿದ ಮಹಾನ್ ಬದಲಾವಣೆಗಳಿಗೂ ಮುಂಚಿತವಾಗಿ, ಭಾರತದಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟಗಳು ಹೆಚ್ಚೆಚ್ಚು ಸಮರಧೀರ ಆಗುತ್ತಿದ್ದವು. ಕಾರ್ಮಿಕ ವರ್ಗದ ಚಳುವಳಿಯು ಮೊದಲಿಗೆ 19 ನೇ ಶತಮಾನದ ಉತ್ತರಾರ್ಧದಲ್ಲಿ ಆರಂಭಗೊಂಡು ನಿಧಾನವಾಗಿ ವಿಸ್ತರಣೆ ಆಗತೊಡಗಿತು.
ಸ್ವಾತಂತ್ರ್ಯ ಚಳುವಳಿ
ಸ್ವತಂತ್ರ ಹೋರಾಟಗಾರ ತಿಲಕರ ಬಂಧನವನ್ನು ವಿರೋಧಿಸಿ ಬಾಂಬೆ ಜವಳಿ ಕಾರ್ಮಿಕರು 1908 ರಲ್ಲಿ ಸಾರ್ವತ್ರಿಕ ಮುಷ್ಕರ ನಡೆಸಿದರು. “ಕಾರ್ಮಿಕ ವರ್ಗವು ರಾಜಕೀಯ ರಂಗ ಪ್ರವೇಶಿಸಿದ್ದರ ಸಂಕೇತ” ಎಂದು ಲೆನಿನ್ ಇದನ್ನು ಹೊಗಳಿದರು.
19ನೇ ಶತಮಾನದಲ್ಲಿ ಅಸಂಖ್ಯಾತ ರೈತ ಹೋರಾಟಗಳು ಮತ್ತು ದಂಗೆಗಳು ನಡೆದವು. ‘ಡೊಮಿನಿಯನ್ ಸ್ಟೇಟಸ್’ (ಅಧೀನ ಸ್ಥಾನಮಾನ) ಕೇಳುತ್ತಿದ್ದ ಕಾಂಗ್ರೇಸ್, ರಾಷ್ಟ್ರೀಯ ನಾಯಕರ ಉದಾರವಾದಿ ಮತ್ತು ಸುಧಾರಣಾವಾದಿ ನೀತಿಗಳ ಬಗ್ಗೆ ಜನತೆ ಅಸಂತೃಪ್ತಿಯನ್ನು ಹೊಂದಿದ್ದರು.

ಸ್ವಾತಂತ್ರ‍್ಯಕ್ಕಾಗಿ ಹೊಸ ದಾರಿಗಳನ್ನು ಹುಡುಕುತ್ತಿದ್ದರು. ಇಂತಹ ಸಂದರ್ಭದಲ್ಲಿ ಸಮರಧೀರ ಕ್ರಾಂತಿಕಾರಿ ರಾಜಕೀಯವು ಯುವಜನರನ್ನು ಆಕರ್ಷಿಸಲು ಆರಂಭಿಸಿತು.
ಮಹಾನ್ ಅಕ್ಟೋಬರ್ ಸಮಾಜವಾದಿ ಕ್ರಾಂತಿಯು ಭಾರತದ ಜನತೆಯ ಮೇಲೆ ವಿದ್ಯುತ್ಕಾಂತೀಯ ಪರಿಣಾಮವನ್ನು ಉಂಟು ಮಾಡಿತು. ಇಡೀ ಭಾರತವೇ ಜನತೆಯ ಚಳುವಳಿಗಳ ಅಲೆಯಲ್ಲಿ ತುಂಬಿಹೋಯಿತು. ಬ್ರಿಟಿಷರು ತಮ್ಮ ಭಯಂಕರ ದಾಳಿಗಳನ್ನು ತೀವ್ರಗೊಳಿಸಿದರು.
ಬ್ರಿಟಿಷರಿಗೆ ಕಮ್ಯುನಿಸ್ಟರನ್ನು ಕಂಡರೆ ಭಯ
ಎಲ್ಲೆಡೆ ಪ್ರಭಲಗೊಳ್ಳುತ್ತಿದ್ದ ಕಮ್ಯುನಿಸ್ಟ್ ಚಳುವಳಿಗಳಿಂದ ಬಿಟಿಷರು ಗಾಬರಿಗೊಂಡಿದ್ದರು. ಅದಕ್ಕಾಗಿ ಬ್ರಿಟಿಷ್ ಗೃಹ ಇಲಾಖೆ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ನೀಡಿದ ಸೂಚನೆ ಹೀಗಿತ್ತು.

“ಎಲ್ಲೆಲ್ಲಿ ಕಮ್ಯುನಿಸಂ ತಲೆ ಎತ್ತಿದೆಯೋ, ಅಲ್ಲೆಲ್ಲಾ ಅದನ್ನು ಪ್ಲೇಗಿನ ರೀತಿಯಲ್ಲಿ ಎದುರಿಸಿ ನಿರ್ನಾಮ ಮಾಡಬೇಕು. ಭಾರತದಲ್ಲಿನ ಕಮ್ಯುನಿಸಂ ಪ್ರಸಾರ ಒಂದು ನಿರ್ದಿಷ್ಟ ‘ದೃಷ್ಟಿಕೋನದಿಂದ’ ನೋಡಬಹುದಾದ ಒಂದು ಸಮಸ್ಯೆಯಲ್ಲ; ಅದನ್ನು ಮುಖಾಮುಖಿಯಾಗಿ ನೋಡಬೇಕು ಮತ್ತು ಅದನ್ನು ಏನೇನೂ ದಯಾ ದಾಕ್ಷಿಣ್ಯವಿಲ್ಲದೇ ಬಗ್ಗು ಬಡಿಯಬೇಕು”
ಭಾರತ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆ
ಅತ್ಯಂತ ಕ್ರೂರವಾದ ಬ್ರಿಟಿಷ್ ದೌರ್ಜನ್ಯಕ್ಕೆ ಒಳಗಾದ ನೂರಾರು ಕ್ರಾಂತಿಕಾರಿ ಯುವಕರು ಭಾರತವನ್ನು ತೊರೆಯಬೇಕಾದ ಪರಿಸ್ಥಿತಿ ಬಂತು. ಪರ್ವತಗಳನ್ನು ದಾಟುತ್ತಾ, ಅಪಾಯಕಾರಿ ಸಂಕಷ್ಟಗಳನ್ನು ಎದುರಿಸುತ್ತಾ, ಸಾವಿರಾರು ಕಿಲೋಮೀಟರ್‌ಗಳ ದುರ್ಗಮ ದಾರಿಯನ್ನು ಸವೆಸುತ್ತಾ ನೂತನವಾಗಿ ರಚನೆಯಾಗಿದ್ದ ಸಮಾಜವಾದಿ ಸೋವಿಯತ್ ರಷ್ಯಾವನ್ನು ತಲುಪಿದರು.
ಸೋವಿಯತ್ ರಷ್ಯಾದ ಕ್ರಾಂತಿಕಾರಿ ಸರ್ಕಾರವು, ಮುಜಹಿರ್ಸ್ ಎಂದು ಕರೆಯಲಾಗುತ್ತಿದ್ದ ಈ ಹೋರಾಟಗಾರರನ್ನು ಸ್ವಾಗತಿಸಿತು, ಇವರು ಸಂಘಟಿತರಾಗಲು ಸಹಾಯ ಮಾಡಿತು ಮತ್ತು ರಾಜಕೀಯ ಶಿಕ್ಷಣವನ್ನು ಸಹ ನೀಡಿತು. ಇವರಲ್ಲಿ ಸಾಕಷ್ಟು ಜನ ತಮ್ಮ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದಲ್ಲಿ ಮಾರ್ಕ್ಸ್ವಾದ ಮತ್ತು ಲೆನಿನ್‌ವಾದಿ ಸಿದ್ಧಾಂತವು ಮಾರ್ಗದರ್ಶನ ಮಾಡಬಹುದೆಂದು ಅದನ್ನು ಒಪ್ಪಿಕೊಂಡರು. ರಷ್ಯಾದಲ್ಲಿ ಕ್ರಾಂತಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಬರ್ಲಿನ್, ಇಂಗ್ಲೆಂಡ್ ಮತ್ತು ಇತರೆ ದೇಶಗಳಲ್ಲಿದ್ದ ಭಾರತೀಯರ ಪೈಕಿ ಹಲವಾರು ಜನ ಕ್ರಾಂತಿಕಾರಿಗಳು ಕಮ್ಯುನಿಸ್ಟ್ ಚಳುವಳಿಗೆ ಆಕರ್ಷಿತರಾದರು.
ರಷ್ಯಾದ ಕಮ್ಯುನಿಸ್ಟ್ ಪಕ್ಷದ ಜೊತೆ ಅವರು ಸಂಪರ್ಕಗಳನ್ನು ಸಾಧಿಸಿದರು. ಬ್ರಿಟಿಷರ ವಿರುದ್ಧ ಸಶಸ್ತç ದಂಗೆಯನ್ನು ನಡೆಸಲು ಶಸ್ತಾçಸ್ತçಗಳನ್ನು ಸಂಗ್ರಹಿಸಲು ವಿದೇಶಕ್ಕೆ ಹೋಗಿದ್ದ ಒಬ್ಬ ಕ್ರಾಂತಿಕಾರಿ ಎಂ.ಎನ್. ರಾಯ್, ಅಮೇರಿಕದಲ್ಲಿ ಸ್ವಲ್ಪ ಕಾಲ ಇದ್ದು, ಅಲ್ಲಿಂದ ಮೆಕ್ಸಿಕೋ ಕ್ರಾಂತಿಯಲ್ಲಿ ಭಾಗವಹಿಸಲು 1918 ರಲ್ಲಿ ತೆರಳಿದರು ಮತ್ತು ಅಲ್ಲಿ ಸಮಾಜವಾದಿಯಾದರು. ಇಂತಹ ಹಲವು ಗುಂಪುಗಳ ಪ್ರಯತ್ನದಿಂದ ಮತ್ತು ನಿರ್ದಿಷ್ಟವಾಗಿ ಮಹಜಿರ್ಸ್ಗಳ ಭಾಗವಹಿಸುವಿಕೆಯಿಂದ 1920 ಅಕ್ಟೋಬರ್ 17 ರಂದು ತಾಷ್ಕೆಂಟ್‌ನಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಆರಂಭವಾಯಿತು.

ಮೊದಲ ಸಭೆಯಲ್ಲಿ ಎಂ.ಎನ್. ರಾಯ್, ಎವಿಲಿನ್ ಟ್ರೆಂಟ್ ರಾಯ್, ಅಬನಿ ಮುಖರ್ಜಿ, ರೋಸಾ ಫಿಟಿಂಗೋವ್, ಮಹಮದ್ ಅಲಿ, ಮಹಮದ್ ಷಫೀಕ್, ಎಂ.ಪಿ.ಬಿ.ಟಿ.ಆಚಾರ್ಯ ಭಾಗವಹಿಸಿದ್ದರು. ಮಹಮದ್ ಷಫೀಕ್ ಕಾರ್ಯದರ್ಶಿಯಾಗಿ ಆಯ್ಕೆಯಾದರು. ನೂತನವಾಗಿ ರಚನೆಯಾದ ಪಕ್ಷದ ಹಲವು ಸ್ಥಾಪಕ ಸದಸ್ಯರು ಭಾರತಕ್ಕೆ ವಾಪಸ್ ಬಂದು ದೇಶದ ಹಲವು ಕಡೆಗಳಲ್ಲಿ ಕಮ್ಯುನಿಸ್ಟ್ ಗುಂಪುಗಳನ್ನು ಆರಂಭಿಸಿದರು. ಅವರನ್ನು ಬಂಧಿಸಲಾಯಿತು, ಹಿಂಸಿಸಲಾಯಿತು ಮತ್ತು ಹಲವು ಪಿತೂರಿ ಮೊಕದ್ದಮೆಗಳನ್ನು ಎದುರಿಸಬೇಕಾಯಿತು.
ಪೇಷಾವರ್ ಪಿತೂರಿ ಮೊಕದ್ದಮೆ – 1922
ಕಾನ್ಪುರ್ ಪಿತೂರಿ ಮೊಕದ್ದಮೆ – 1924
ಮೀರತ್ ಪಿತೂರಿ ಮೊಕದ್ದಮೆ – 1929
ಕ್ರಾಂತಿಕಾರಿ ಕೆಲಸವನ್ನು ಮುನ್ನಡೆಸಲು ಮತ್ತು ಮಾರ್ಕ್ಸ್ವಾದವನ್ನು ಜನಪ್ರಿಯಗೊಳಿಸಲು, ದೇಶದೊಳಗೂ ಸಾಮ್ರಾಜ್ಯಶಾಹಿ ವಿರೋಧಿ ಕ್ರಾಂತಿಕಾರಿ ಶಕ್ತಿಗಳು ಹಲವಾರು ಸ್ಥಳಗಳಲ್ಲಿ ಗುಂಪುಗಳನ್ನು ರಚಿಸಿದರು. ಬಾಂಬೆಯಲ್ಲಿ ಇಂತಹುದೊಂದು ಗುಂಪು 1922 ರಲ್ಲಿ ಎಸ್.ಎ. ಡಾಂಗೆ ನೇತೃತ್ವದಲ್ಲಿ ಅಸ್ಥಿತ್ವಕ್ಕೆ ಬಂತು. ಇದೇ ಅವಧಿಯಲ್ಲಿ ಕಲ್ಕತ್ತಾದಲ್ಲಿ ಮುಝಾಫರ್ ಅಹಮದ್ ಅವರ ನೇತೃತ್ವದಲ್ಲಿ ಒಂದು ಗುಂಪು ಕೆಲಸ ಆರಂಭಿಸಿತು. ಇವರು “ಗಣವಾಣಿ” ಪತ್ರಿಕೆಯನ್ನು ಆರಂಭಿಸಿದರು. ತಾಷ್ಕೆಂಟ್‌ನಲ್ಲಿ ಸಿಪಿಐನ ಆರಂಭಿಕ ಸದಸ್ಯರಾಗಿದ್ದ ಶೌಕತ್ ಉಸ್ಮಾನಿ ಭಾರತಕ್ಕೆ ವಾಪಸ್ ಬಂದು ಬನಾರಸ್‌ನಲ್ಲಿ ಕಮ್ಯುನಿಸ್ಟ್ ಗುಂಪನ್ನು ಆರಂಭಿಸಿದರು.
ಗುಲಾಂ ಹುಸೇನ್ ಲಾಹೋರಿನಲ್ಲಿ ಒಂದು ಗುಂಪನ್ನು ಆರಂಭಿಸಿದರು ಮತ್ತು “ಇಂಕ್ವಿಲಾಬ್” ಪತ್ರಿಕೆಯನ್ನು ಪ್ರಕಟಿಸಿದರು. ಪಂಜಾಬಿನಲ್ಲಿ ಗದರ್ ಚಳುವಳಿಯ ಜೊತೆ ಸಂಬಂಧವನ್ನು ಹೊಂದಿದ್ದ ಸಂಗಾತಿಗಳು ಇಂತಹ ಹಲವಾರು ಗುಂಪುಗಳನ್ನು ರಚಿಸಿದರು. ಮದ್ರಾಸಿನಲ್ಲಿ ಸಿಂಗಾರವೇಲು ಚೆಟ್ಟಿಯಾರ್ ನೇತೃತ್ವದಲ್ಲಿ ಮಾರ್ಕ್ಸಿಸ್ಟ್ ಗುಂಪು ರಚನೆಯಾಯಿತು. ಕಾರ್ಮಿಕ ಚಳುವಳಿಯು ಹೆಚ್ಚು ಸಂಘಟಿತವಾಗತೊಡಗಿತು 1920 ರಲ್ಲಿ ಬಾಂಬೆಯಲ್ಲಿ ಎಐಟಿಯುಸಿ ಆರಂಭವಾಯಿತು. ಲಾಲ ಲಜಪತ್ ರಾಯ್ ಅವರು ಇದರ ಮೊದಲ ಅಧ್ಯಕ್ಷರಾಗಿದ್ದರು. ಎಐಟಿಯುಸಿಯಲ್ಲಿ ಕಮ್ಯುನಿಸ್ಟರು ಸಕ್ರಿಯವಾಗಿದ್ದರು.
ಪೂರ್ಣ ಸ್ವರಾಜ್ಯ
“ಪೂರ್ಣ ಸ್ವರಾಜ್ಯ“ ದ ಬೇಡಿಕೆ ಮತ್ತು ಕ್ರಾಂತಿಕಾರಿ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳ ಬೇಡಿಕೆಯನ್ನು ಪ್ರಣಾಳಿಕೆಗಳಾಗಿ 1921 ರ ಅಹಮದಾಬಾದ್ ಕಾಂಗ್ರೆಸ್ ಅಧಿವೇಶನ ಮತ್ತು 1922ರ ಗಯಾ ಕಾಂಗ್ರೆಸ್ ಅಧಿವೇಶನದಲ್ಲಿ ಹಂಚಿದವರು ಮತ್ತು ಮೊದಲಿಗೆ ಈ ಬೇಡಿಕೆಯನ್ನು ಎತ್ತಿದವರು ಕಮ್ಯುನಿಸ್ಟರು. ಮೌಲಾನಾ ಹಸ್ರತ್ ಮೊಹಾನಿ ನಿರ್ಣಯ ಮಂಡಿಸಿದರೆ, ಸ್ವಾಮಿ ಕುಮಾರಾನಂದ ಅನುಮೋದಿಸಿದರು. ಆದರೆ ಕಾಂಗ್ರೆಸ್ ನಿರ್ಣಯವನ್ನು ಸೋಲಿಸಿತು. (1930 ರಲ್ಲಿ ಕಾಂಗ್ರೇಸ್ ಅಧಿಕೃತವಾಗಿ ತನ್ನ ಅಧಿವೇಶನದಲ್ಲಿ ‘ಪೂರ್ಣ ಸ್ವರಾಜ್’ ನಿರ್ಣಯವನ್ನು ಮಂಡಿಸಿತು) ಆ ಸಂದರ್ಭದಲ್ಲಿ ಕಾಂಗ್ರೆಸ್ ಕೇವಲ “ಹೋಂ ರೂಲ್” ಬೇಡಿಕೆಗೆ ಮಾತ್ರ ಸೀಮಿತವಾಗಿತ್ತು ಎಂಬುದನ್ನು ಗಮನಿಸಬೇಕು.

1921 ರಲ್ಲಿ ಅಹಮದಾಬಾದ್ ಕಾಂಗ್ರೇಸ್ ಅಧಿವೇಶನದಲ್ಲಿ ಕಮ್ಯುನಿಸ್ಟ್ ಪಕ್ಷ ಸಲ್ಲಿಸಿದ ಪ್ರಣಾಳಿಕೆಯ ಒಂದು ಅಂಶ ಹೀಗಿತ್ತು. “ಒಂದು ವೇಳೆ ಕ್ರಾಂತಿಯ ಮುಂದಾಳತ್ವವನ್ನು ಕಾಂಗ್ರೇಸ್ ವಹಿಸುವುದಾದರೆ ಕೇವಲ ಮತಪ್ರದರ್ಶನ, ತಾತ್ಕಾಲಿಕ ಹುಮ್ಮಸ್ಸು ಸಾಲದು. ಅದು ಕಾರ್ಮಿಕ ಸಂಘದ ಬೇಡಿಕೆಗಳನ್ನು, ಕಿಸಾನ್ ಸಭಾದ ಬೇಡಿಕೆಯನ್ನು ತನ್ನ ಬೇಡಿಕೆ ಎಂದು ತಿಳಿಯಬೇಕು. ಯಾವ ಅಡೆತಡೆಗಳನ್ನು ಲೆಕ್ಕಿಸದೇ ಮುನ್ನುಗ್ಗಿದಾಗ ಕಾಂಗ್ರೇಸ್‌ಗೆ ತಮ್ಮ ಪ್ರಾಪಂಚಿಕ ಹಿತಾಸಕ್ತಿಗಳಿಗಾಗಿ ಹೋರಾಡುತ್ತಿರುವ ಇಡೀ ಜನಸಮೂಹದ ಬೆಂಬಲ ಸಿಗುವುದು.
ದಮನಗಳನ್ನು ಪ್ರತಿರೋಧಿಸಿ ಬೆಳೆದ ಕಮ್ಯುನಿಸ್ಟರು
1924 ರಲ್ಲಿ ಬ್ರಿಟಿಷರು ಕಮ್ಯುನಿಸ್ಟರ ಮೇಲಿನ ದಾಳಿಯನ್ನು ತೀವ್ರಗೊಳಿಸಲು ಕಾನ್ಪುರ್ ಪಿತೂರಿ ಮೊಕದ್ದಮೆಯನ್ನು ಹೂಡಿದರು. ಇದರಲ್ಲಿ ಮುಝಾಫರ್ ಅಹಮದ್, ಡಾಂಗೆ, ಶೌಕತ್ ಉಸ್ಮಾನಿ ಮುಂತಾದ ಕಮ್ಯುನಿಸ್ಟ್ ನಾಯಕರನ್ನು ಆರೋಪಿಗಳನ್ನಾಗಿ ಮಾಡಿದರು. ಅಸಂಖ್ಯಾತ ದಾಳಿಗಳ ನಡುವೆಯೂ ಕಮ್ಯುನಿಸ್ಟರು ಜನತೆಯ ನಡುವೆ ತಮ್ಮ ಕೆಲಸವನ್ನು ಮುಂದುವರೆಸಿದರು.

ಕಮ್ಯುನಿಸ್ಟ್ ಪಕ್ಷವನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿದ್ದರಿಂದ ಜನರ ನಡುವೆ ಕೆಲಸವನ್ನು ಮುಂದುವರೆಸಲು “ಕಾರ್ಮಿಕರು ಮತ್ತು ರೈತರ ಪಕ್ಷ”ವನ್ನು ಆರಂಭಿಸಿದರು. 1924 ಮತ್ತು 1929 ರ ನಡುವೆ ದೇಶಾದ್ಯಂತ ಕಾರ್ಮಿಕ ಚಳುವಳಿಗಳ ಮಹಾಪೂರವೇ ಉಂಟಾಯಿತು.
ಅಸಂಖ್ಯಾತ ಮುಷ್ಕರಗಳು ನಡೆದವು. ಕಮ್ಯುನಿಸ್ಟರು ರಾಷ್ಟ್ರೀಯ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದರು. 1928 ರಲ್ಲಿ ಬಾಂಬೆಯಲ್ಲಿ ಒಂದೂವರೆ ಲಕ್ಷ ಜವಳಿ ಕಾರ್ಮಿಕರ ಸಾರ್ವತ್ರಿಕ ಮುಷ್ಕರ 6 ತಿಂಗಳ ಕಾಲ ನಡೆಯಿತು. ಈ ಮುಷ್ಕರಗಳಲ್ಲಿ ಕಾರ್ಮಿಕರು ತಮ್ಮ ಬೇಡಿಕೆಗಳ ಜೊತೆ ಸ್ವಾತಂತ್ರ ಬೇಡಿಕೆಗಳನ್ನು ಎತ್ತಿದ್ದರು.
ಸೈಮನ್ ಗೋಬ್ಯಾಕ್ ಚಳುವಳಿ 1928
ಭಾರತದ ಪ್ರಜಾಸತ್ತೆಯನ್ನು ತಾನೇ ನಿರ್ವಹಿಸಲು ಎಷ್ಟು ಅರ್ಹವಾಗಿದೆ ಎಂದು ಪರಿಶೀಲಿಸಲು ಸೈಮನ್ ನೇತೃತ್ವದ ಒಂದು ಆಯೋಗ ಮುಂಬಯಿಗೆ ಭೇಟಿ ಕೊಟ್ಟಿತು. ಇದರಲ್ಲಿ ಬ್ರಿಟೀಷ್ ಅಧಿಕಾರಿಗಳು ಮಾತ್ರ ಇದ್ದರು. ಈ ಆಯೋಗ ಲಾಹೋರ್‌ಗೆ ಭೇಟಿ ನೀಡಿದಾಗ ಲಾಲ ಲಜಪತ್ ರಾಯ್ ನೇತೃತ್ವದಲ್ಲಿ ‘ಸೈಮನ್ ಗೋಬ್ಯಾಕ್’ ಚಳುವಳಿ ನಡೆಯಿತು.

ಇದರಲ್ಲಿ ವಿದ್ಯಾರ್ಥಿ ಯುವಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಭಗತ್ ಸಿಂಗ್ ಸಂಗಡಿಗರು ಇದರಲ್ಲಿದ್ದರು. ಸಾಂಡರ್ಸ್ ಎಂಬ ಬ್ರಿಟಿಷ್ ಅಧಿಕಾರಿಯ ಲಾಠಿ ಏಟಿನಿಂದ ಲಜಪತರಾಯ್‌ಗೆ ತೀವ್ರ ಪೆಟ್ಟಾಯಿತು ಇದರಿಂದ ಅವರು ಸಾವನಪ್ಪಿದರು. ನಂತರ ಭಗತ್ ಸಿಂಗ್ ಮತ್ತು ಗೆಳೆಯರು ಸಾಂಡರ್ಸ್ನನ್ನು ಕೊಲ್ಲಲು ಯೋಜನೆ ರೂಪಿಸಿ, ಸ್ಕಾಟ್ ನನ್ನು ಕೊಂದರು.
ಭಗತ್‌ಸಿಂಗ್ ಮತ್ತು ಸಂಗಡಿಗರು
ಚಂದ್ರಶೇಖರ್ ಆಜಾದ್‌ರವರ ನೇತೃತ್ವದಲ್ಲಿ ಸ್ಥಾಪನೆಯಾಗಿದ್ದ ಹೆಚ್.ಆರ್.ಎ (ಹಿಂದುಸ್ಥಾನ್ ರಿಪಬ್ಲಿಕನ್ ಆರ್ಮಿ) ಸಂಘಟನೆಯನ್ನು ಭಗತ್‌ಸಿಂಗ್ ಮತ್ತು ಆತನ ಸಂಗಡಿಗರು ಹಿಂದುಸ್ಥಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಹೆಚ್.ಎಸ್.ಆರ್.ಎ ಎಂದು ಮರು ನಾಮಕರಣ ಮಾಡಿದರು. ಸಮಾಜವಾದವೇ ನಮ್ಮ ಗುರಿ ಎನ್ನುವ ಸ್ಪಷ್ಟತೆಗೆ ಇವರು ಬಂದಿದ್ದರು. ಇನ್ನೂ ಹಲವು ಘಟನೆಗಳು ಇದನ್ನು ಸಾಕ್ಷೀಕರಿಸುತ್ತವೆ.
ಸಾರ್ವಜನಿಕ ಸುರಕ್ಷತ ಮಸೂದೆ ಮತ್ತು ವ್ಯಾಪಾರ ತಗಾದೆ ಮಸೂದೆ ವಿರುದ್ಧ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ಹೆಚ್‌ಎಸ್‌ಆರ್‌ಎ ನೇತೃತ್ವದಲ್ಲಿ 1929 ಏಪ್ರಿಲ್ 8 ರಂದು ಪಾರ್ಲಿಮೆಂಟ್‌ನಲ್ಲಿ ಯಾರಿಗೂ ಪ್ರಾಣಹಾನಿಯಾಗದಂತೆ ಖಾಲಿ ಸ್ಥಳವನ್ನು ನೋಡಿ ಬಾಂಬ್ ಸಿಡಿಸಿದರು. ಈ ಸಂದರ್ಭದಲ್ಲಿ ತಪ್ಪಿಸಿಕೊಂಡು ಹೋಡಿ ಹೋಗದೆ ತಮ್ಮ ಉದ್ದೇಶದ ಕರಪತ್ರಗಳನ್ನು ವಿತರಿಸುತ್ತಾ “ಸಾಮ್ರಾಜ್ಯಶಾಹಿ ನಾಶವಾಗಲಿ – ಕ್ರಾಂತಿ ಚಿರಾಯುವಾಗಲಿ” ಎಂಬ ಘೋಷಣೆಗಳನ್ನು ಕೂಗಿದರು.
ಕರಪತ್ರದ ಮೊದಲ ಸಾಲಿನಲ್ಲಿ “ಕಿವುಡರಿಗೂ ಕೇಳಿಸುವಂತಾಗಬೇಕಾದರೆ ಸದ್ದು ಬಹಳ ಶಕ್ತಿಶಾಲಿಯಾಗಿರಬೇಕು” ಎಂದು ಬರೆಯಲಾಗಿತ್ತು. ಕ್ರಾಂತಿಕಾರಿಗಳು ತಮ್ಮ ವಿಚಾರಗಳನ್ನು ಜನತೆಗೆ ತಲುಪಿಸಲು ನ್ಯಾಯಾಲಯಗಳನ್ನು ಒಂದು ಪರಿಣಾಮಕಾರಿ ವೇದಿಕೆಯನ್ನಾಗಿ ಬಳಸಿಕೊಂಡರು. ಇದರಿಂದಾಗಿ ತಮ್ಮ ವಿಚಾರಗಳು ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತಿದ್ದವು. ಜೂನ್ 6 1929 ರಂದು ಭಗತ್‌ಸಿಂಗ್ ನೀಡಿದ ಹೇಳಿಕೆಯೊಂದು ಹೀಗಿತ್ತು.

“ಯುವಜನರೇ, ಕಾರ್ಮಿಕರೇ, ರೈತರೇ ಹಾಗೂ ಕ್ರಾಂತಿಕಾರಿ ಬುದ್ದಿಜೀವಿಗಳೇ ಮುಂದೆ ಬಂದು ಸ್ವಾತಂತ್ರ್ಯದ ಬಾವುಟವನ್ನು ಮುಂದೊಯ್ಯುವಲ್ಲಿ ನಮ್ಮ ಜೊತೆಗೂಡಿ… ಹೇಡಿಗಳು ಹಿಂದೆ ಉಳಿದು ಸಂದಾನ ಮತ್ತು ಶಾಂತಿಗಾಗಿ ಹಲ್ಲುಗಿಂಜಲಿ. ನಮಗೆ ಕರುಣೆ ಬೇಡ, ನಾವೂ ಕರುಣೆ ತೋರೆವು. ಕೊನೆವರೆಗೂ, ವಿಜಯ ಅಥವಾ ಮರಣದವರೆಗೂ ನಡೆಸುವ ಯುದ್ಧ ನಮ್ಮದು. ಇಂಕ್ವಿಲಾಬ್ ಜಿಂದಾಬಾದ್” ಭಗತ್ ಸಿಂಗ್ ಮತ್ತು ತನ್ನ ಸಂಗಡಿಗರು ಜೈಲಿನಲ್ಲಿರುವಾಗ ರಾಜಕೀಯ ಕೈದಿಗಳಿಗೆ ಸಿಗಬೇಕಾದ ಎಲ್ಲಾ ರೀತಿಯ ಸವಲತ್ತುಗಳು ಮತ್ತು ಓದಲು ಪುಸ್ತಕಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಜೈಲಿನಲ್ಲೇ 116 ದಿನ ಉಪವಾಸ ನಡೆಸಿದರು.
ಈ ಉಪವಾಸದಲ್ಲಿ ಜತಿಂದಾಸ್ ಹುತಾತ್ಮರಾದರು. 23 ನೇ ವಯಸ್ಸಿನಲ್ಲಿ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವರನ್ನು ಬ್ರಿಟಿಷರು ನೇಣುಗಂಬಕ್ಕೇರಿಸದರು. ನೇಣು ಗಂಬಕ್ಕೇರುವ ದಿನ ಸರಳುಗಳ ಹಿಂದೆ ಗಂಭೀರವಾಗಿ ಪುಸ್ತಕವೊಂದನ್ನು ಓದುತ್ತಿದ್ದ ಭಗತ್‌ನಲ್ಲಿ ಜೈಲು ಅಧಿಕಾರಿ ಪ್ರಶ್ನಿಸಿದ್ದರೆ ಅವನು ಕೊಡುವ ಉತ್ತರ. “ಅರ್ಧ ಗಂಟೆ ಸಮಯಾವಕಾಶ ಕೊಡಿ ಒಬ್ಬ ಕ್ರಾಂತಿಕಾರಿ ಮತ್ತೊಬ್ಬ ಕ್ರಾಂತಿಕಾರಿಯನ್ನು ಸಂದಿಸುತ್ತಿದ್ದಾನೆ” ಎಂದು ಕೈಯಲ್ಲಿದ್ದ ಲೆನಿನ್ ಜೀವನ ಚರಿತ್ರೆಯ ಪುಸ್ತಕದ ಪುಟಗಳನ್ನು ತಿರುವಿಹಾಕಿದರು. ಭಗತ್ ಸಿಂಗ್ ನ ಕ್ರಾಂತಿಕಾರಿ ಕಮ್ಯುನಿಸ್ಟ್ ವಿಚಾರಗಳು ಮತ್ತು ಹೋರಾಟ ದೇಶದ ಯುವಜನರ ನಡುವೆ ಸ್ಪೂತಿಯ ಚಿಲುಮೆಯಾಗಿ ಪರಿವರ್ತನೆಗೊಂಡಿತು.
ಕೈಗಾರಿಕಾ ಮುಷ್ಕರಗಳು
1928 ರಲ್ಲಿ ದೇಶಾದ್ಯಂತ 200 ಕೈಗಾರಿಕಾ ಮುಷ್ಕರಗಳು ನಡೆದವು, ಇವುಗಳಲ್ಲಿ ಸುಮಾರು 5 ಲಕ್ಷ ಕಾರ್ಮಿಕರು ಭಾಗವಹಿಸಿದ್ದರು. ಮಹಾರಾಷ್ಟçದಲ್ಲಿ ಕಿರಣಿ ಕಾಮಗಾರ್ ಯೂನಿಯನ್ ಕಮ್ಯುನಿಸ್ಟರ ನೇತೃತ್ವದಲ್ಲಿ ಸ್ಥಾಪನೆಯಾಯಿತು. 1928 ರಲ್ಲಿ ಸಂಘ ಸ್ಥಾಪನೆಯಾದಾಗ 324 ಸದಸ್ಯರಿದ್ದರು ಡಿಸೆಂಬರ್‌ಗೆ 54000 ಕ್ಕೆ ಏರಿತು 1929 ರಲ್ಲಿ 65000 ಆಯಿತಿ.

ಇದು ಕಾರ್ಮಿಕ ವರ್ಗದ ನಡುವೆ ವೇಗವಾಗಿ ಬೆಳೆಯುತ್ತಿದ್ದ ಕಮ್ಯುನಿಸ್ಟ್ ರ ಪ್ರಭಾವವನ್ನು ಸೂಚಿಸುತ್ತದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರ ಮೇಲೆ ಬ್ರಿಟಿಷರು ನಡೆಸಿದ ದೌರ್ಜನ್ಯದ ವಿರುದ್ದ ಕಾಂಗ್ರೇಸಿಗರು ಮಾತನಾಡಲಿಲ್ಲ. 1929 ರಲ್ಲಿ ಐದು ಲಕ್ಷ ಕಾರ್ಮಿಕರು ಪಾಲ್ಗೊಂಡ ಸುಮಾರು 200 ಕ್ಕೂ ಹೆಚ್ಚು ಮುಷ್ಕರಗಳು ನಡೆದವು. ಈ ಎಲ್ಲಾ ಮುಷ್ಕರಗಳಲ್ಲಿ “ಸಂಪೂರ್ಣ ಸ್ವರಾಜ್ಯ”ದ ರಾಜಕೀಯ ಬೇಡಿಕೆಯನ್ನೂ ತೀವ್ರವಾಗಿ ಮುಂದೊಡ್ಡಲಾಯಿತು.
ವಿಸ್ತಾರಗೊಂಡ ಕಮ್ಯೂನಿಸ್ಟ್ ಚಳುವಳಿ
1929 ರಲ್ಲಿ ದೇಶದ 31 ಮುಂಚೂಣಿ ಕಮ್ಯುನಿಸ್ಟ್ ಮತ್ತು ಎಡ ಚಿಂತನೆಯ ಕ್ರಾಂತಿಕಾರಿಗಳನ್ನು ಬಂಧಿಸಿ ಹೆಸರಾಂತ ಮೀರತ್ ಪಿತೂರಿ ಮೊಕದ್ದಮೆಯನ್ನು ಹೂಡಲಾಯಿತು. ದೇಶಾದ್ಯಂತ ಕಮ್ಯುನಿಸ್ಟರ ನೇತೃತ್ವದಲ್ಲಿ ಮತ್ತು ಕಮ್ಯುನಿಸ್ಟರ ಪ್ರಭಾವದಲ್ಲಿ ಹಲವು ಕ್ರಾಂತಿಕಾರಿ ಚಳುವಳಿಗಳು ಬೆಳೆದುಬಂದವು. ಬಂಗಾಳದಲ್ಲಿ ಅನುಸೀಲನ್ ಸಂಘಟನೆಯ ಕ್ರಾಂತಿಕಾರಿ ಹೋರಾಟಗಳು, ಚಿತ್ತಗಾಂಗ್ ಸಶಸ್ತ್ರದಾಳಿ, ಬ್ರಿಟೀಷರು “ಭಯೋತ್ಪಾದಕರು” ಎಂದು ಹೇಳಿ ಅಂಡಮಾನ್ ಜೈಲಿನಲ್ಲಿ ಕರಿ ನೀರಿನ ಶಿಕ್ಷೆಗೆ ಗುರಿಪಡಿಸಿದವರಲ್ಲಿ ಬಹುತೇಕರು ಕಮ್ಯುನಿಸ್ಟರು. 1934 ರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಪ್ಲೀನಂ ನಲ್ಲಿ ಅಂಗೀಕರಿಸಿದ ಕಾರ್ಯಕ್ರಮದಲ್ಲಿ ಹೀಗೆ ಹೇಳಲಾಗಿತ್ತು.

“ಭಾರತೀಯ ಜನತೆಯ ಗುಲಾಮಿಕೆಯನ್ನು ನಾಶಮಾಡಿ ಕಾರ್ಮಿಕ ವರ್ಗ ಹಾಗೂ ರೈತಾಪಿ ಜನಗಳನ್ನು ಕಿತ್ತು ತಿನ್ನುತ್ತಿರುವ ಬಡತನದಿಂದ ವಿಮೋಚನೆಗೊಳಿಸಬೇಕಾದರೆ, ದೇಶದ ಸ್ವಾತಂತ್ರ‍್ಯ ಗೆದ್ದುಕೊಳ್ಳುವುದು ಹಾಗೂ ಮಧ್ಯಯುಗದಿಂದ ಉಳಿದುಕೊಂಡು ಬಂದಿರುವ ಭೂಮಾಲಿಕ ವ್ಯವಸ್ಥೆಯನ್ನು ಧ್ವಂಸ ಮಾಡಿ, ಮಧ್ಯಯುಗದ ಹೊಲಸುಗಳಿಂದ ಇಡೀ ದೇಶವನ್ನು ಸ್ವಚ್ಚ ಗೊಳಿಸುವ ಒಂದು ಕಾರ್ಷಿಕ ಕ್ರಾಂತಿಯ ಬಾವುಟವನ್ನು ಎತ್ತಿಹಿಡಿಯುವುದು ಅತ್ಯಗತ್ಯ. ಬ್ರಿಟಿಷ್ ಬಂಡವಾಳಶಾಹಿ ಮತ್ತು ಭೂಮಾಲಕತ್ವದ ವಿರುದ್ಧ ಒಂದು ಕಾರ್ಷಿಕ ಕ್ರಾಂತಿ ಭಾರತದ ಕಾಂತಿಕಾರಿ ವಿಮೋಚನೆಯ ಆಧಾರವಾಗಬೇಕು.”
1936 ರಲ್ಲಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ – ಎಐಎಸ್‌ಎಫ್ ಆರಂಭವಾಯಿತು. ಇದು ವಿದ್ಯಾರ್ಥಿಗಳ ಸಾಮ್ರಾಜ್ಯಶಾಹಿ ವಿರೋಧಿ ವಿಶಾಲ ವೇದಿಕೆಯಾಗಿ ಸಕ್ರಿಯವಾಗಿ ಕೆಲಸ ಮಾಡಿತು. ಕಮ್ಯುನಿಸ್ಟರ ನೇತೃತ್ವದಲ್ಲಿ ಎಐಕೆಎಸ್, ಎಐಪಿಡಬ್ಲ್ಯೂಎ, ಐಪಿಟಿಎ ಆರಂಭ. ಎರಡನೆ ಪ್ರಪಂಚ ಯುದ್ಧ ಆರಂಭವಾಗುವ ಸಮಯಕ್ಕೆ, ಬಿಹಾರ, ಬಂಗಾಳ, ಪಂಜಾಬ್, ಸಿಂಧ್, ಆಂಧ್ರ, ಮಲಬಾರ್, ಸುರ್ಮ ಕಣಿವೆ, ಮುಂತಾದ ಕಡೆಗಳಲ್ಲಿ ರೈತ ಚಳುವಳಿಗಳು ನಡೆಯುತ್ತಿದ್ದವು. ಯುದ್ಧ ಕಾಲದ ದಾಳಿಗಳು ಹೆಚ್ಚಾದರೂ ರೈತ ಚಳುವಳಿಗಳು ಬೆಳೆದವು ಮತ್ತು ತೀವ್ರಗೊಂಡವು.
1936ರಲ್ಲಿ ಸುರ್ಮಾ ಕಣಿವೆ
1936ರಲ್ಲಿ ಸುರ್ಮಾ ಕಣಿವೆಯಲ್ಲಿ ಕಿಸಾನ್ ಸಭಾವು ಗೇಣಿದಾರರ ಬೇಡಿಕೆಗಳಿಗಾಗಿ ಒತ್ತಾಯ ಮಾಡಿತು. ಜಮೀನುದಾರರ ಜಮೀನನ್ನು 12 ವರ್ಷಗಳಿಗಿಂತ ಹೆಚ್ಚು ಸಾಗುವಳಿ ಮಾಡಿದ್ದರೆ, ಅಂತಹ ಗೇಣಿದಾರರಿಗೆ ಜಮೀನಿನ ಹಕ್ಕುಪತ್ರ ನೀಡಬೇಕು (ಅಂದರೆ ಅವರನ್ನು ಜಮೀನುದಾರರು ಮನಸ್ಸಿಗೆ ಬಂದ ಹಾಗೆ ಒಕ್ಕಲೆಬ್ಬಿಸುವಂತಿಲ್ಲ); ಹಕ್ಕು ಪತ್ರ ಹೊಂದಿರುವ ಗೇಣಿದಾರರು ಕೆರೆ ಅಗೆಯಲು ಮತ್ತು ಪಕ್ಕಾ ಮನೆ ಕಟ್ಟಿಕೊಳ್ಳಲು ಅಧಿಕಾರ ಹೊಂದುತ್ತಾರೆ; ಎಲ್ಲಾ ಕಾನೂನುಬಾಹಿರ ಬಲಾತ್ಕಾರದ ವಸೂಲಿಯನ್ನು ನಿಲ್ಲಿಸಬೇಕು.

ಜಮೀನುದಾರರ ಮನೆಗಳಲ್ಲಿ ಮತ್ತು ಜಮೀನುಗಳಲ್ಲಿ ಮಾಡುತ್ತಿದ್ದ ಬಿಟ್ಟಿ ಚಾಕರಿಯನ್ನೂ ಒಳಗೊಂಡಂತೆ ನಂಕಾರ್ ಪದ್ಧತಿ (ಅರೆಗುಲಾಮ ಪದ್ಧತಿ)ಯನ್ನು ರದ್ದುಮಾಡಬೇಕು ಮತ್ತು ಗೇಣಿದಾರರು ಸಾಗುವಳಿ ಮಾಡುತ್ತಿದ್ದ ಜಮೀನುದಾರರ ಜಮೀನಿನ ಒಂದು ಭಾಗದಲ್ಲಿ ಕಟ್ಟಿಕೊಂಡ ಮನೆಯ ಹಕ್ಕುಪತ್ರವನ್ನೂ ನೀಡುವಂತೆ ಗೇಣಿ ಕಾಯಿದೆಯಲ್ಲಿ ನಮೂದಿಸಬೇಕು; ಟೀ ತೋಟಗಳಲ್ಲಿ ನೆಲೆಸಿರುವ ಗೇಣಿದಾರರಿಗೆ ಕೂಡ ಅವರು ನೆಲೆಸಿರುವ ಹಕ್ಕುಪತ್ರ ನೀಡಬೇಕು ಮತ್ತು ಗೇಣಿದಾರರ ಮೇಲೆ ನಡೆಯುತ್ತಿದ್ದ ಎಲ್ಲಾ ರೀತಿಯ ದಬ್ಬಾಳಿಕೆಗಳು ನಿಲ್ಲಬೇಕು ಹಾಗೂ ಎಲ್ಲಾ ಸಾಮಾಜಿಕ ಅವಮಾನ ಮತ್ತು ಕಡೆಗಣಿಕೆಗಳನ್ನು ತೆಗೆದುಹಾಕಬೇಕು.
ಕೈಯ್ಯೂರು ರೈತ ಹೋರಾಟ ಮತ್ತು ಹುತಾತ್ಮರು
ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ, ಬಡ ರೈತ ಕುಟುಂಬದಲ್ಲಿ ಹುಟ್ಟಿದ ನಾಲ್ವರು ಎಳೆ ವಯಸ್ಸಿನ ಕಮ್ಯುನಿಸ್ಟರು, ಮದತ್ತಿಲ್ ಅಪ್ಪು, ಕುಞಂಬು ನಾಯರ್, ಚಿರುಕುಂಡನ್ ಮತ್ತು ಅಬೂಬಕರ್ ಮಾರ್ಚ್ 29, 1943ರಂದು ಗಲ್ಲಿಗೇರಿದರು.

ಸ್ವಾತಂತ್ರ‍್ಯಕ್ಕಾಗಿ ಹೋರಾಡುವ ಅಜೇಯ ಸೇನೆಯನ್ನು, ಕಮ್ಯುನಿಸ್ಟ್ ಪಕ್ಷವನ್ನು ಸೇರಿದ ಅವರು ನಿಜವಾದ ದೇಶಪ್ರೇಮಿಗಳಾಗಿ ಬದುಕಿದರು, ತಮ್ಮ ತುಟಿಯ ಮೇಲೆ ‘ಕಮ್ಯುನಿಸ್ಟ್ ಪಕ್ಷ ಚಿರಾಯುವಾಗಲಿ’ ಎಂಬ ಘೋಷಣೆಯೊಂದಿಗೆ ಉದಾತ್ತ ಹುತಾತ್ಮರಾಗಿ ಮಡಿದರು. ಈ ಕಯ್ಯೂರಿನ ನಾಲ್ವರ ರಾಜಕೀಯ ಪರಿಪಕ್ವತೆ ಮತ್ತು ಸ್ಥೈರ್ಯ ಅಸಾಧಾರಣವಾಗಿತ್ತು.
ಬಂಗಾಳದ ತೇಭಾಗ ಹೋರಾಟ
ಗೇಣಿದಾರರು ತಾವು ಬೆಳೆದ ಬೆಳೆಯಲ್ಲಿನ ಮೂರನೇ ಒಂದು ಪಾಲನ್ನು ಮಾತ್ರ ಭೂಮಾಲಕರಿಗೆ ಕೊಡುತ್ತೇವೆನ್ನುವ ಬೇಡಿಕೆಯ ಮೂಲಕ 1946-47 ರವರೆಗು ತೆಭಾಗಾ ಚಳುವಳಿ ನಡೆಯಿತು.
ಇದು ಮರೆಯಲಾಗದ ಪರಿಣಾಮವನ್ನು ಬೀರಿತು; ಹೋರಾಟದ ಕೆಚ್ಚನ್ನು ಮತ್ತು ತ್ಯಾಗ ಭಾವವನ್ನು ಮತ್ತು ಒಡನಾಡಿ ಭಾವನೆಯನ್ನು ರೈತರಲ್ಲಿ ತುಂಬಿತು; ಸಂಘಟಿತ ವರ್ಗ ಹೋರಾಟವಿಲ್ಲದೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಕಲಿಸಿತು.

ದೇಶದ ಇತರ ಭಾಗಗಳ ರೈತ ಹೋರಾಟಗಳಿಗಿಂತ ತೆಭಾಗಾ ಚಳುವಳಿಯು ವಿಶಿಷ್ಟವಾದದ್ದು. ಬೇರೆಲ್ಲಾ ಪ್ರಾಂತಗಳಲ್ಲಿ, ಹೋರಾಟಗಳು ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದವು, ಅದೇ ಬಂಗಾಳದಲ್ಲಿ ಚಳುವಳಿಯು ಇಡೀ ಪ್ರಾಂತವನ್ನು ಆವರಿಸಿಕೊಂಡಿತ್ತು.
ಈ ಚಳುವಳಿಯ ಅತ್ಯಂತ ಗಮನಾರ್ಹ ಅಂಶವೇನೆಂದರೆ ಅದು ವರ್ಗಹೋರಾಟ ಆಧಾರಿತ ಹಿಂದೂ-ಮುಸ್ಲಿಂ ಐಕ್ಯತೆಯ ದೀಪವನ್ನು ಬೆಳಗಿದ್ದು, ಮತ್ತು ಅದು ಬಂಗಾಳದ ಎಲ್ಲಾ ಕಡೆಗಳಿಂದಲೂ ಎಲ್ಲಾ ಸಮುದಾಯಗಳ ಲಕ್ಷಾಂತರ ರೈತರನ್ನು ಹುರಿದುಂಬಿಸಿ ತನ್ನ ತೆಕ್ಕೆಗೆ ತೆಗೆದುಕೊಂಡದ್ದು. ಬಂಗಾಳದ ತೇಭಾಗ ಹೋರಾಟದಲ್ಲಿ ಕಮ್ಯುನಿಸ್ಟರು ಮುಂಚೂಣಿಯಲ್ಲಿ ಪಾತ್ರ ವಹಿಸಿದರು.
ವಾರ್ಲಿ ಆದಿವಾಸಿಗಳ ಹೋರಾಟ 1945
ಭೂಮಾಲಕ, ಜಮೀನ್ದಾರಿ ವ್ಯವಸ್ಥೆಯ ವಿರುದ್ಧ ಹೋರಾಟ, ಗೋದಾವರಿ ಪುರಳೇಕರ್ ನೇತೃತ್ವದಲ್ಲಿ ತಮ್ಮ ಗುಲಾಮಗಿರಿಗೆ ಕೊನೆಹಾಡಬೇಕೆಂದು ಹಾತೊರೆಯುತ್ತಿದ್ದ ವಾರ್ಲಿ ಆದಿವಾಸಿ ಜನಗಳು ಅದನ್ನು ಹೇಗೆ ಸಾಧಿಸುವುದೆಂದು ಗೊತ್ತಿಲ್ಲದೇ ಪರದಾಡುತ್ತಿದ್ದರು. ಕಮ್ಯುನಿಸ್ಟರ ನೇತೃತ್ವದ ಕಿಸಾನ್ ಸಭಾ ಆ ಕಂದರವನ್ನು ತುಂಬಿತ್ತು. ಕೆಂಬಾವುಟದ ಚಳುವಳಿಯು ವಿಮೋಚನೆಯ ಚಳುವಳಿ ಮತ್ತು ಋಣಭಾರದ ಗುಲಾಮಗಿರಿಯಿಂದ ವಿಮೋಚನೆಯು ಅದರ ಅವಿಭಾಜ್ಯ ಅಂಗ ಎನುವುದನ್ನು ವಾರ್ಲಿಗಳು ಅರಿತುಕೊಂಡರು.

ಹೋರಾಟಗಳ ಅನುಭವ ಅವರನ್ನು ಬಹುಬೇಗ ಮಾರ್ಪಾಟು ಮಾಡಿತು. ಅವರು ಹೊಸ ಮನುಷ್ಯರಾದರು. ಅವರಲ್ಲಿ ಜ್ಞಾನದ ಹಸಿವು ಬೆಳೆಯಿತು. ಸಮಾಜವಾದ ಮತ್ತು ಸೋವಿಯತ್ ಯೂನಿಯನ್‌ನ ಎಲ್ಲಾ ಮಾಹಿತಿಗಳನ್ನು ತಿಳಿಯಲು ಹಾತೊರೆದರು. ಭೂಮಾಲಕರ ಅಪಪ್ರಚಾರ ಅವರಲ್ಲಿ ಈ ಹಂಬಲವನ್ನು ಹುಟ್ಟುಹಾಕಿತು. ಇದು ಅವರ ಆರ್ಥಿಕ ಹಕ್ಕುಗಳ ಬಗ್ಗೆ ಪ್ರಜ್ಞೆಯನ್ನು ಉಂಟುಮಾಡಿದ್ದಲ್ಲದೇ ಅವರ ನಾಗರಿಕ ಹಾಗೂ ರಾಜಕೀಯ ಹಕ್ಕುಗಳ ಮೌಲ್ಯಗಳ ಬಗ್ಗೆ ಕೂಡ ಹೋರಾಟವು ಅವರಲ್ಲಿ ಅರಿವು ಮೂಡಿಸಿತು.
ಪುನ್ನಪ್ಪವಯಲಾರ್ ವೀರರು
ಕತ್ತದ ಉದ್ದಿಮೆ ಕಾರ್ಮಿಕರು ಅವರ ಮಾಲೀಕರ ವಿರುದ್ಧ ಮತ್ತು ತಿರುವಾಂಕೂರಿನ ದಿವಾನರ ಸರ್ವಾಧಿಕಾರಿ ಆಳ್ವಿಕೆಯ ವಿರುದ್ಧ ಹಾಗೂ ಜವಾಬ್ದಾರಿಯುತ ಸರ್ಕಾರಕ್ಕಾಗಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ 1946ರಿಂದ ನಡೆಸಿದ ವೀರೋಚಿತ ಹೋರಾಟದ ಗಾಥೆಯಿದು. ಅಳಪುಜಾ ಮತ್ತು ಸುತ್ತಲ ಪ್ರದೇಶಗಳಲ್ಲಿನ ಕಾರ್ಮಿಕ ವರ್ಗದ ಕಟ್ಟಾಳುಗಳು ತಿರುವಾಂಕೂರು ಈ ಹಿಂದೆಂದೂ ಕಂಡಿರದಂತಹ ಧೀರತನವನ್ನು ಪ್ರದರ್ಶಿಸಿದರು.

ಈ ಅಸಮಾನ ಕದನದಲ್ಲಿ, ಕಾರ್ಮಿಕ ವರ್ಗದ ಸ್ವಯಂಸೇವಕರು ಅಳಪುಜಾ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಮ್ಮ ಒಡ್ಡೊಡ್ಡಾದ ಆಯುಧಗಳೊಂದಿಗೆ ಮಿಲಿಟರಿ ಮತ್ತು ಪೊಲೀಸರು ಹಾಗೂ ತಿರುವಾಂಕೂರು ಸರ್ಕಾರದ ಕುಮ್ಮಕ್ಕು ಪಡೆದ ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಡಿದರು.
ರಿನ್ ನಾವಿಕ ಬಂಡಾಯ
1946ರ ಫೆಬ್ರವರಿ 18 ರಂದು ಬ್ರಿಟಿಷರ ಯುದ್ಧನೌಕೆಯ 1,100 ಭಾರತೀಯ ನೌಕಾ ಸಿಬ್ಬಂದಿಗಳು ಮುಷ್ಕರ ಮಾಡಿದರು ಮತ್ತು ಅವರ ಜತೆ ಬೊಂಬಾಯಿಯಲ್ಲಿದ್ದ ಭಾರತೀಯ ನೌಕಾದಳದ 5,500 ಮಂದಿ ಸೇರಿಕೊಂಡರು; ಇದು ಜನಾಂಗೀಯ ತಾರತಮ್ಯದ ವಿರುದ್ಧ ಅವರ ಪ್ರತಿಭಟನೆಯಾಗಿತ್ತು. ನೌಕೆಯ ಪಟಸ್ತಂಭದಲ್ಲಿ ಹಾರಾಡುತ್ತಿದ್ದ ಬ್ರಿಟಿಷರ ಯೂನಿಯನ್ ಜಾಕ್ ಧ್ವಜವನ್ನು ಕಿತ್ತುಹಾಕಿ, ಅಲ್ಲಿ ಕಾಂಗ್ರೆಸ್, ಮುಸ್ಲಿಂ ಲೀಗ್ ಹಾಗೂ ಕೆಂಬಾವುಟಗಳನ್ನು ಹಾರಿಸಿದರು.
ಅವರು ಶಸ್ತ್ರಾಸ್ತ್ರ ಹಿಡಿದು ತಮ್ಮ ಹಿರಿಯ ಅಧಿಕಾರಿಗಳನ್ನು ಬಂಧಿಸಿದರು. ಮರುದಿನ ಕೋಟೆ ಕೊತ್ತಲಗಳ ಸೇನಾವಸತಿಗಳ ಸಿಬ್ಬಂದಿಗಳು ಮುಷ್ಕರವನ್ನು ಸೇರಿಕೊಂಡರು ಮತ್ತು ಕಾಂಗ್ರೆಸ್, ಮುಸ್ಲಿಂ ಲೀಗ್ ಹಾಗೂ ಕೆಂಪು ಬಾವುಟಗಳನ್ನು ಹಿಡಿದುಕೊಂಡು ನಗರದಲ್ಲಿ ಮತಪ್ರದರ್ಶನ ಮಾಡಿದರು.

ಮರುದಿನ ಮದ್ರಾಸ್, ಕರಾಚಿ, ವಿಶಾಖಪಟ್ಟಣ, ಕಲ್ಕತ್ತಾ, ದೆಹಲಿ, ಕೊಚಿನ್, ಜಾಮ್‌ನಗರ್, ಅಂಡಮಾನ್, ಬೆಹ್ರೇನ್ ಮತ್ತು ಏಡನ್‌ನ ಸಿಬ್ಬಂದಿಗಳು ಮುಷ್ಕರ ನಿರತ ನೌಕಾ ಸಿಬ್ಬಂದಿಗಳ ಬೆಂಬಲಕ್ಕೆ ನಿಂತರು.
78 ನೌಕೆಗಳು ಮತ್ತು 20 ಸಮುದ್ರ ತೀರದ ನೌಕಾದಳದ ಸಿಬ್ಬಂದಿಗಳು ಒಟ್ಟು 20,000 ಸಿಬ್ಬಂದಿಗಳು ಭಾಗಿಗಳಾಗಿದ್ದರು. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗಿನ ಮೇಲ್ವರ್ಗದ ನಾಯಕತ್ವ ಇದನ್ನು ಸಾಮಾನ್ಯ ನೌಕಾ ಸಿಬ್ಬಂದಿಗಳ ‘ಅನ್ನ-ಸಾರಿನ’ ಪ್ರತಿಭಟನೆ ಎಂದು ಕಡೆಗಣಿಸಿದರೂ ಮುಂಬೈಯ ದುಡಿಯುವ ಜನಗಳು ಇದನ್ನು ಸ್ವಾತಂತ್ರ‍್ಯ ಹೋರಾಟದ ಭಾಗವಾಗಿ ಕಂಡು ಬೆಂಬಲಿಸಿದರು. ಇದರಲ್ಲಿ ಕಮ್ಯುನಿಸ್ಟ್ ಪಕ್ಷದ ಪಾತ್ರ ಮಹತ್ವದ್ದಾಗಿದೆ. ಇದೀಗ ರಿನ್ ಬಂಡಾಯ ಎಂದು ಪ್ರಸಿದ್ಧವಾಗಿದೆ.
ಚಾರಿತ್ರಿಕ ಮತ್ತು ಕ್ರಾಂತಿಕಾರಿ ತೆಲಂಗಾಣ ಹೋರಾಟ
1947 ಆಗಸ್ಟ್ ನಿಂದ 1948 ಸೆಪ್ಟೆಂಬರ್ ವರೆಗೆ ಜನತಾ ಸರ್ಕಾರ ಸ್ಥಾಪನೆ. ನಲ್ಲಗೊಂಡ, ವಾರಂಗಲ್, ಖಮ್ಮಮ್ 3 ಜಿಲ್ಲೆಗಳಲ್ಲಿ 16,000 ಚದರ ಮೈಲಿ, 30 ಲಕ್ಷ ಜನಸಂಖ್ಯೆ, 3000 ಹಳ್ಳಿಗಳಲ್ಲಿ ಗ್ರಾಮ ರಾಜ್ಯ ಸ್ಥಾಪನೆ, 10 ಲಕ್ಷ ಎಕ್ಕರೆ ಭೂಮಿಯನ್ನು ರೈತರಿಗೆ ಹಂಚಲಾಯಿತು.

4 ಸಾವಿರಕ್ಕೂ ಹೆಚ್ಚು ಕಮ್ಯುನಿಸ್ಟ್ ಕಾರ್ಯಕರ್ತರ ಕಗ್ಗೊಲೆ, ಸುಮಾರು 10,000 ಕಮ್ಯುನಿಸ್ಟ್ ಕಾರ್ಯಕರ್ತರನ್ನು 4 ವರ್ಷಗಳ ಕಾಲ ಜೈಲುವಾಸ, ಸುಮಾರು 50,000 ಕ್ಕೂ ಹೆಚ್ಚು ಜನ ಪೊಲೀಸ್ ಮತ್ತು ಮಿಲಿಟರಿ ಕ್ಯಾಂಪುಗಳಲ್ಲಿ ಚಿತ್ರಹಿಂಸೆ ಅನುಭವಿಸಿದರು.
ಭಾರತ ಸ್ವಾಂತಂತ್ರ
1947 ದೇಶ ರಾಜಕೀಯ ಸ್ವಾತಂತ್ರ‍್ಯ ಸಾಧಿಸಿತು. ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಗೆಲುವನ್ನು ಕಮ್ಯುನಿಸ್ಟ್ ಪಕ್ಷ ಜನತೆಯೊಂದಿಗೆ ಸಂಭ್ರಮಿಸಿತು. ಆದರೆ ತನ್ನ ಸ್ವಾತಂತ್ರ್ಯ ಚಳುವಳಿಯ ಮೂಲ ಆಶಯಗಳನ್ನು ಮರೆಯಲಿಲ್ಲ.
ಅವುಗಳ ಈಡೇರಿಕೆಗಾಗಿ ತನ್ನ ಚಳುವಳಿಯನ್ನು ಸ್ವತಂತ್ರ ಭಾರತದಲ್ಲೂ ಮುಂದುವರೆಸಿತು. ಈಗಲೂ ಅದನ್ನು ಮುಂದುವರೆಸುತ್ತಿದೆ.
ದಾರಿ ಮತ್ತು ಗುರಿ
ಉತಮ್ಮ ನಾಳೆಗಳಿಗಾಗಿ, ಸ್ವಾತಂತ್ರ್ಯಕ್ಕಾಗಿ, ಪ್ರಜಾಸತ್ತಾತ್ಮಕತೆಗಾಗಿ ಮತ್ತು ಸಮಾಜವಾದಕ್ಕಾಗಿ, ಜನರ ಹೋರಾಟದಲ್ಲಿ ಕಮ್ಯುನಿಸ್ಟರು ಮುಂದೆ ನಿಲ್ಲುತ್ತಾರೆ. ಜನರೇ ಇವರ ಶಕ್ತಿ, ಹೊಸ ಭಾರತ ಇವರ ಕನಸು. ಅದಕ್ಕಾಗಿಯೇ ಅವರು ಭಾರತದಲ್ಲಿ ಜನತಾ ಪ್ರಜಾಪ್ರಭುತ್ವ ಕ್ರಾಂತಿಗೆ ಮುನ್ನಡೆಯುತ್ತಿದ್ದಾರೆ.
ಸ್ವಾತಂತ್ರ್ಯ ಚಳುವಳಿಯಲ್ಲಿ ಯಾವುದನ್ನ ಭಾರತ ಸಾಧಿಸಲು ಸಾದ್ಯವಾಗಲಿಲ್ಲವೋ ಅದನ್ನು ಮುಂದೆ ಸಾಧಿಸಬೇಕಾಗಿದೆ.
ಇದನ್ನೂ ನೋಡಿ: ‘ಪ್ರತಿ ಐವರಲ್ಲಿ ಒಬ್ಬ ಮತದಾರ ಪಟ್ಟಿಯಿಂದ ಹೊರಗೆ’ : SIR ವಿರುದ್ಧ ಗಂಭೀರ ಆರೋಪ Janashakthi Media
