ತೋರಣಗಲ್ಲು: ಗಣಿನಾಡು ತೋರಣಗಲ್ಲಿನ ಇತಿಹಾಸವನ್ನು ಅರಿತುಕೊಂಡು, ಪ್ರಸಕ್ತ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ಯುವಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನಶೀಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಜಿಲ್ಲಾ ಕಾರ್ಯದರ್ಶಿ ಸ್ವಾಮಿ ಕರೆ ನೀಡಿದರು. ಡಿವೈಎಫ್‌ಐ
ತೋರಣಗಲ್ಲು ಗ್ರಾಮದಲ್ಲಿ ಗುರುವಾರ ನಡೆದ ‘ಗಣಿನಾಡು ತೋರಣಗಲ್ಲು ಇತಿಹಾಸ ಮತ್ತು ಪ್ರಸಕ್ತ ವಿದ್ಯಾರ್ಥಿ ಯುವಜನರ ಪರಿಸ್ಥಿತಿ’ ವಿಷಯದ ಪ್ರಬಂಧ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ವರಿಗೂ ಉದ್ಯೋಗ, ಸಮಾನ ಗುಣಮಟ್ಟದ ಶಿಕ್ಷಣ, ಆರೋಗ್ಯದ ಹಕ್ಕು ಹಾಗೂ ವಸತಿ ನಿವೇಶನಕ್ಕಾಗಿ ಒತ್ತಾಯಿಸಿ ಡಿವೈಎಫ್‌ಐ ಸಂಡೂರು ತಾಲೂಕು ಯುವಜನರ 7ನೇ ತಾಲೂಕು ಸಮ್ಮೇಳನವನ್ನು ಆಗಸ್ಟ್ 23ರಂದು ಆಯೋಜಿಸುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಬಂಧ ಸ್ಪರ್ಧೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಬ್ರಿಟಿಷರ ಆಳ್ವಿಕೆಯಿಂದ ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ದೊರೆತಿದ್ದರೂ, ಸಮಾನತೆ, ಬಡಜನರ ಏಳಿಗೆ, ಸರ್ವರಿಗೂ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಸಾಮಾಜಿಕ ನ್ಯಾಯದ ಬದುಕಿನಂತಹ ಆಶಯಗಳು ಇನ್ನೂ ಸಂಪೂರ್ಣವಾಗಿ ಸಾಕಾರಗೊಂಡಿಲ್ಲ ಎಂದು ಸ್ವಾಮಿ ಹೇಳಿದರು.
ಗಣಿನಾಡು ತೋರಣಗಲ್ಲು ಹಲವು ವರ್ಷಗಳಲ್ಲಿ ಕಂಡಿರುವ ಬದಲಾವಣೆಗಳನ್ನು ವಿದ್ಯಾರ್ಥಿ-ಯುವಜನರು ತಿಳಿದುಕೊಳ್ಳಬೇಕು. ಸರ್ಕಾರಿ ಶಾಲೆ ಮತ್ತು ಕಾಲೇಜುಗಳು ಮತ್ತಷ್ಟು ಬಲಿಷ್ಠವಾಗಬೇಕು ಹಾಗೂ ಶಿಕ್ಷಣದ ಖಾಸಗೀಕರಣ ಕಡಿಮೆಯಾಗಬೇಕು. ಪಠ್ಯಪುಸ್ತಕಗಳ ಅಧ್ಯಯನದ ಜತೆಗೆ ಸ್ಥಳೀಯವಾಗಿ ನಡೆಯುತ್ತಿರುವ ಅನ್ಯಾಯ, ಅಸಮಾನತೆ ಮತ್ತು ಬಡತನದಂತಹ ಸಮಸ್ಯೆಗಳನ್ನೂ ಅರ್ಥಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
“ಇತಿಹಾಸವನ್ನು ತಿಳಿದುಕೊಳ್ಳಿ, ವರ್ತಮಾನವನ್ನು ಅರ್ಥಮಾಡಿಕೊಳ್ಳಿ, ಭವಿಷ್ಯವನ್ನು ರೂಪಿಸಿ. ನಿಮ್ಮ ಬರಹದ ಮೂಲಕ ಇತಿಹಾಸವನ್ನು ತಿಳಿದು, ನೀವೇ ಒಂದು ಇತಿಹಾಸವಾಗಬೇಕು” ಎಂದು ಅವರು ವಿದ್ಯಾರ್ಥಿ-ಯುವಜನರಿಗೆ ಕರೆ ನೀಡಿದರು. ಡಿವೈಎಫ್‌ಐ
ಇದನ್ನೂ ಓದಿ :ಕರ್ನಾಟಕ ಎಸ್‌ಐಆರ್: 2.41 ಲಕ್ಷ ಮತದಾರರ ಹೆಸರುಗಳು ಎಎಸ್‌ಡಿಡಿಒ ಪಟ್ಟಿಯಿಂದ ಹಿಂಪಡೆತ
ಮೂಲಸೌಕರ್ಯಕ್ಕಾಗಿ ನಿರಂತರ ಹೋರಾಟ
ಡಿವೈಎಫ್‌ಐ ತಾಲೂಕು ಉಪಾಧ್ಯಕ್ಷೆ ಶಂಕ್ರಮ್ಮ ಹಾಗೂ ಮುಖಂಡರಾದ ಸ್ವಾತಿ ಮಾತನಾಡಿ, ‘ವಿಜಯನಗರದ ಉಕ್ಕು ಕರ್ನಾಟಕದ ಹಕ್ಕು’ ಎಂಬ ಘೋಷಣೆಯೊಂದಿಗೆ ಸಂಘಟನೆ ರೂಪುಗೊಂಡಿದ್ದು, ಬಳ್ಳಾರಿ ಜಿಲ್ಲೆಯಾದ್ಯಂತ ಹಲವು ಐತಿಹಾಸಿಕ ಹೋರಾಟಗಳನ್ನು ನಡೆಸಿದೆ ಎಂದು ಹೇಳಿದರು.
ಸಂಡೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ, ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಶಾಲಾ-ಕಾಲೇಜುಗಳ ಕಟ್ಟಡಗಳ ಕೊರತೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ, ವಸತಿ ನಿವೇಶನ ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಸಂಘಟನೆ ಹೋರಾಟ ನಡೆಸಿದೆ ಎಂದು ತಿಳಿಸಿದರು.
ಗಣಿ ಚಟುವಟಿಕೆಗಳಿಂದ ಬಾಧಿತ ಪ್ರದೇಶಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಹಲವು ಹೋರಾಟಗಳನ್ನು ನಡೆಸಲಾಗಿದೆ. ಕಳೆದ ಆರು ತಾಲೂಕು ಸಮ್ಮೇಳನಗಳ ಸಂದರ್ಭದಲ್ಲಿ ವಿದ್ಯಾರ್ಥಿ-ಯುವಜನರ ಸಮಸ್ಯೆಗಳ ಕುರಿತು ವಿವಿಧ ಹೋರಾಟಗಳು, ಸ್ಪರ್ಧಾತ್ಮಕ ಕಾರ್ಯಕ್ರಮಗಳು, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿಯೂ ವಿದ್ಯಾರ್ಥಿ-ಯುವಜನರನ್ನು ಸಂಘಟಿಸಿ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಮುಖಂಡರು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸ್ವಾಮಿ, ತಾಲೂಕು ಉಪಾಧ್ಯಕ್ಷೆ ಶಂಕ್ರಮ್ಮ, ಮುಖಂಡರಾದ ಸ್ವಾತಿ ಮತ್ತು ಮಲ್ಲೇಶ್, ವಿದ್ಯಾರ್ಥಿ-ಯುವ ಮುಖಂಡರಾದ ಅರ್ಚನಾ, ರುದ್ರಮ್ಮ, ದೀಪಿಕಾ, ಗಂಗೋತ್ರಿ, ತಿಪ್ಪೇಸ್ವಾಮಿ, ಅಭಯ್, ಸ್ಪಂದನ, ಲಾವಣ್ಯ, ರಕ್ಷಿತ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಡಿವೈಎಫ್‌ಐ
ಇದನ್ನೂ ನೋಡಿ : ಕ್ಯಾಸ್ಟ್ರೊ 100 | ಕ್ಯೂಬಾದ ಮೇಲೆ 66 ವರ್ಷಗಳ ಯುಎಸ್ ಕ್ರೂರ ದಿಗ್ಬಂಧನ! ಪುಟ್ಟ ರಾಷ್ಟ್ರದ ಮೇಲೆ ಯಾಕಿಷ್ಟು ದ್ವೇಷ?
