‘ವಿಭಜನೆಯ ರಾಜಕಾರಣದ ಫಲವೇ ಮಣಿಪುರ ದುರಂತ’ – ರಾಹುಲ್ ಗಾಂಧಿ ಆರೋಪ

ನವದೆಹಲಿ: ಮಣಿಪುರದ ಕಾಮ್ಜಾಂಗ್ ಜಿಲ್ಲೆಯಲ್ಲಿ ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ  ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದರು. ಈ ಹಿಂಸಾಚಾರವು ನರೇಂದ್ರ ಮೋದಿ ನೇತೃತ್ವದ ಸರ್ಕಾರದ “ವಿಭಜನೆಯ ಚಿಂತನೆ”ಯ ಪರಿಣಾಮ ಎಂದು ಅವರು ಆರೋಪಿಸಿದರು. ವಿಭಜನೆ

ಇತ್ತೀಚಿನ ಘರ್ಷಣೆಗಳಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ಮಣಿಪುರ ವರ್ಷಗಳಿಂದ ಉರಿಯುತ್ತಿದೆ” ಎಂದು ಹೇಳಿ, ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದ್ದರೂ ಶಾಂತಿ ಸ್ಥಾಪಿಸಲು ಕೇಂದ್ರ ವಿಫಲವಾಗಿದೆ ಎಂದು ಟೀಕಿಸಿದರು. ವಿಭಜನೆ

“ಮಣಿಪುರ ವರ್ಷಗಳಿಂದ ಬೆಂಕಿಯಲ್ಲಿದೆ. ಮತ್ತೆ 20 ಮನೆಗಳು ದ್ವೇಷ ಮತ್ತು ಹಿಂಸಾಚಾರದ ಬೆಂಕಿಯಲ್ಲಿ ಭಸ್ಮವಾಗಿವೆ. ಎರಡು ಸರ್ಕಾರಗಳು ಮತ್ತು ರಾಷ್ಟ್ರಪತಿ ಆಡಳಿತ ಇದ್ದರೂ ಸಂಘರ್ಷ ಕಡಿಮೆಯಾಗದೇ ಇನ್ನಷ್ಟು ಗಂಭೀರವಾಗುತ್ತಿದೆ. ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ, ಅನೇಕ ಕುಟುಂಬಗಳು ನಾಶವಾಗಿವೆ—ಮಣಿಪುರ ಅನುಭವಿಸುತ್ತಿರುವ ನೋವು ಊಹಿಸಲು ಸಹ ಕಷ್ಟ,” ಎಂದು ಅವರು ‘ಎಕ್ಸ್’ (ಹಿಂದಿನ ಟ್ವಿಟ್ಟರ್) ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಕನ್ನಡ ಹಕ್ಕಿಗೆ ಧಕ್ಕೆ: ಎನ್‌ಸಿಇಆರ್‌ಟಿ ವಿರುದ್ಧ ಕರವೇ ಆಕ್ರೋಶ

ಈ ಹಿಂಸಾಚಾರಕ್ಕೆ ಬಿಜೆಪಿಯ ನೇತೃತ್ವದ ಕೇಂದ್ರ ಸರ್ಕಾರದ ವಿಭಜನೆಯ ರಾಜಕಾರಣವೇ ಕಾರಣ ಎಂದು ಅವರು ಆರೋಪಿಸಿದರು.

“ಧರ್ಮ, ಜಾತಿ, ಭಾಷೆ, ಪ್ರದೇಶ ಮತ್ತು ಗುರುತಿನ ಹೆಸರಿನಲ್ಲಿ ಜನರನ್ನು ವಿಭಜಿಸುವ ಮೋದಿ ಸರ್ಕಾರದ ಚಿಂತನೆಯ ಫಲವೇ ಇದು. ಇಂದು ಮಣಿಪುರ ಮಾತ್ರವಲ್ಲ, ಇಡೀ ದೇಶವೇ ಪ್ರಧಾನಿಯಿಂದ ಕನಿಷ್ಠ ಸಹಾನುಭೂತಿಯ ಎರಡು ಮಾತುಗಳನ್ನೂ ನಿರೀಕ್ಷಿಸುವ ಸ್ಥಿತಿಯಲ್ಲಿಲ್ಲ,” ಎಂದು ಅವರು ಹೇಳಿದರು.

ಒಗ್ಗಟ್ಟಿನ ಅಗತ್ಯವನ್ನು ಒತ್ತಿ ಹೇಳಿದ ರಾಹುಲ್ ಗಾಂಧಿ, “ಮಣಿಪುರಕ್ಕೆ ಉತ್ತಮ ಭವಿಷ್ಯ ಬೇಕು — ಅದಕ್ಕಾಗಿ ಭಾರತ ಒಗ್ಗಟ್ಟಾಗಬೇಕು,” ಎಂದು ಹೇಳಿದ್ದಾರೆ.

ಭಾರತ-ಮ್ಯಾನ್ಮಾರ್ ಗಡಿಯ ಸಮೀಪದ ಕಾಮ್ಜಾಂಗ್ ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ ಹಿಂಸಾಚಾರ ಭುಗಿಲೆದ್ದ ಬಳಿಕ ಅವರ ಈ ಹೇಳಿಕೆ ಬಂದಿದೆ. ಶಸ್ತ್ರಸಜ್ಜಿತ ಉಗ್ರರು ಕನಿಷ್ಠ ಎರಡು ಜನಾಂಗೀಯ ಗ್ರಾಮಗಳಲ್ಲಿ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.

ಅಧಿಕಾರಿಗಳ ಪ್ರಕಾರ, ಚಸ್ಸಾದ್ ಪೊಲೀಸ್ ಠಾಣೆಯಿಂದ ಸುಮಾರು 45 ಕಿಮೀ ದೂರದ ಕುಕಿ-ಜೋ ಸಮುದಾಯದ ಫೈಮೋಲ್ ಗ್ರಾಮದಲ್ಲಿ ಸುಮಾರು 10 ಹುಲ್ಲಿನ ಮನೆಗಳನ್ನು ಬೆಂಕಿಗಾಹುತಿಗೊಳಿಸಲಾಗಿದೆ. ಈ ಗ್ರಾಮವನ್ನು ಈಗಾಗಲೇ ಖಾಲಿ ಮಾಡಲಾಗಿದ್ದು, ನಿವಾಸಿಗಳು ವಾರಕ್ಕೂ ಹೆಚ್ಚು ಕಾಲದಿಂದ ಸಮೀಪದ ಗ್ರಾಮದಲ್ಲಿ ಆಶ್ರಯ ಪಡೆದಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕುಕಿ ಸಮುದಾಯದ ಉನ್ನತ ಸಂಸ್ಥೆಯಾದ ಕುಕಿ ಇನ್‌ಪಿ ಮಣಿಪುರ ಈ ದಾಳಿಯನ್ನು ಖಂಡಿಸಿದ್ದು, ಮ್ಯಾನ್ಮಾರ್ ಗಡಿಯಾಚೆ ಕಾರ್ಯನಿರ್ವಹಿಸುತ್ತಿರುವ ಶಸ್ತ್ರಸಜ್ಜಿತ ಗುಂಪುಗಳೇ ಇದಕ್ಕೆ ಕಾರಣ ಎಂದು ಆರೋಪಿಸಿದೆ.

ಪ್ರತೀಕಾರ ದಾಳಿಯೆಂದು ಶಂಕಿಸಿರುವ ಘಟನೆಯಲ್ಲಿ, ಕಾಮ್ಜಾಂಗ್ ಜಿಲ್ಲೆಯ ಕಾಂಗ್ಕಾನ್ ಥಾನಾ ಹಾಗೂ ಅದರ ಸುತ್ತಮುತ್ತಲಿನ ತಾಂಗ್ಖುಲ್ ನಾಗಾ ಸಮುದಾಯ ವಾಸಿಸುವ ಪ್ರದೇಶಗಳಲ್ಲಿ ಸುಮಾರು ಎಂಟು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

ಆದರೆ ಫುಂಗ್ಯಾರ್ ಕ್ಷೇತ್ರದ ಶಾಸಕ ಲೈಶಿಯೋ ಕೇಶಿಂಗ್ ಅವರ ಪ್ರಕಾರ, ಈ ದಾಳಿಯಲ್ಲಿ ತಾಂಗ್ಖುಲ್ ನಾಗಾ ಸಮುದಾಯದ ಕನಿಷ್ಠ 12 ಮನೆಗಳು ನಾಶವಾಗಿವೆ.

ಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ನಾಗಾ ಮತ್ತು ಕುಕಿ ಸಮುದಾಯಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಭದ್ರತಾ ಪಡೆಗಳು ಗಡಿ ಜಿಲ್ಲೆಯಲ್ಲಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದಿವೆ.

ಇದನ್ನೂ ನೋಡಿ: ಒಂದು ಕೋಟಿ ಕುಟುಂಬಗಳ ಬದುಕಿನ ಮೇಲೆ ಹೊಡೆತ; ಕನಿಷ್ಠ ವೇತನ ಹಿಂಪಡೆದರೆ ಬೀದಿಗಿಳಿಯುತ್ತೇವೆ: ಕಾರ್ಮಿಕ ಸಂಘಟನೆಗಳು

Donate Janashakthi Media

Leave a Reply

Your email address will not be published. Required fields are marked *