ಅಮೇರಿಕನ್ ಕಂಪನಿಗಳ ಜೇಬು ತುಂಬಲು ನಮ್ಮ ಜನರ ಜೇಬಿಗೆ ಕತ್ತರಿ!
ಇತ್ತೀಚೆಗೆ ನಮ್ಮ ಸಂಸತ್ತಿನಲ್ಲಿ ತೆರಿಗೆ ಮತ್ತು ಇತರೆ ಮಸೂದೆಗಳ ತಿದ್ದುಪಡಿ ಮಸೂದೆ 2026 ಅನ್ನು ಚರ್ಚೆ ಇಲ್ಲದೆ ಅಂಗೀಕಾರ ಮಾಡಲಾಯಿತು. ಯುಪಿಐ ಪಾವತಿಗಳ ಮೇಲೆ ಶುಲ್ಕ ಹೇರುವ ಅವಕಾಶವನ್ನೂ/ ಅಧಿಕಾರವನ್ನೂ ಈ ಮಸೂದೆ ಸರ್ಕಾರಕ್ಕೆ ನೀಡುತ್ತದೆ. ಈ ಮಸೂದೆ ಮಂಡಿಸಿದ ಕೇಂದ್ರದ ಹಣಕಾಸು ಮಂತ್ರಿಗಳು ಯಾವುದೇ ಶುಲ್ಕವನ್ನು ಸದ್ಯಕ್ಕೆ ಹೇರುವುದಿಲ್ಲ. ಕಾನೂನಿನಲ್ಲಿ ಅದರ ಅವಕಾಶ ಮಾತ್ರ ಇರುತ್ತದೆ ಎಂದು ಮಸೂದೆ ಮಂಡಿಸುವಾಗ ಹೇಳಿದರು. ಸುತ್ತಿ ಬಳಸಿ ಆಡುವ ಎಲ್ಲ ಮಾತುಗಳನ್ನು ಬಿಟ್ಟು ನೇರವಾಗಿ ಹೇಳುವುದಾದರೆ, ಯುಪಿಐ ಪಾವತಿಗಳ ಮೇಲೆ ಮುಂದೆ ಯಾವಾಗ ಬೇಕಾದರೂ ಶುಲ್ಕ ಹೇರಬಹುದು. ಫೋನ್ ಪೆ, ಗೂಗಲ್ ಪೆ ಇತ್ಯಾದಿ ಪಾವತಿಗಳ ಮೇಲೆ ಶುಲ್ಕ ಹೇರುವ ಅವಕಾಶವನ್ನು ಸರ್ಕಾರ ಮಾಡಿಕೊಂಡಿದೆ. ಯುಪಿಐಗೆ
ಇಲ್ಲಿಯವರೆಗೆ ಪುಕ್ಕಟೆಯಾಗಿ ದೊರೆಯುತ್ತಿದ್ದ ಸೇವೆಗಳು ಶುಲ್ಕಗಳ ಹೊರೆ ಹೊತ್ತು ಬರಬಹುದಾದ ಸ್ಪಷ್ಟ ಲಕ್ಷಣಗಳು ಈ ಮಸೂದೆಯ ಮೂಲಕ ಕಾಣತೊಡಗಿವೆ. ಯಾವುದೇ ವ್ಯವಸ್ಥೆ ತನ್ನ ಕಾಲ ಮೇಲೆ ತಾನು ನಿಲ್ಲುವಂತಾಗಬೇಕು. ಇಂತಹ ಸೇವೆಗಳನ್ನು ನೀಡಲು ಆಗುವ ಖರ್ಚುಗಳನ್ನು ಯಾರಾದರೂ(ಅಂದರೆ ಬಳಕೆದಾರರು) ನೀಡಬೇಕಲ್ಲವೇ? ಇತ್ಯಾದಿ ನೆವ ರೂಪದ ಸಮರ್ಥನೆಗಳು ಸರ್ಕಾರದಿಂದ ಬಂದಿವೆ. ನಮ್ಮ ಜೇಬಿಗೆ ಕತ್ತರಿ ಬೀಳದಿದ್ದರೆ ನಾವೂ ಸುಮ್ಮನಿರುವವರೆ. ಆದರೆ ನಿಜಕ್ಕೂ ನಮ್ಮ ಜೇಬಿಗೇ ಕತ್ತರಿ ಬೀಳುವ ಖಂಡಿತ ಸಾಧ್ಯತೆ ಇದೆ ಎಂಬುದು ಸ್ಪಷ್ಟ. ಎರಡು ಸಾವಿರ ರೂಪಾಯಿಗಳಿಗೂ ಹೆಚ್ಚಿನ ವ್ಯಾಪಾರಿ ಪಾವತಿ ಮೊತ್ತದ ಮೇಲೆ ಶೇ 0.25 ರಿಂದ ಶೇ 0.4 ರಷ್ಟು ಶುಲ್ಕ ಹಾಕಲು ಮಸೂದೆ ಅವಕಾಶ ಮಾಡಿದೆ.(ಸಾವಿರ ರೂಪಾಯಿಗಳಿಗೆ 2.5 ಯಿಂದ 4 ರೂಪಾಯಿಗಳ ಶುಲ್ಕ! ಕಡಿಮೆಯೇನಲ್ಲ) ಯುಪಿಐಗೆ
ಈಗಲೇ ಇಂತಹ ಮಸೂದೆ ಯಾಕೆ ?
ಈ ಪ್ರಶ್ನೆ ಏಳುತ್ತದೆ. ನಮ್ಮ ಯುಪಿಐ ಪಾವತಿಗಳು ವಿಸಾ ಮತ್ತು ಮಾಸ್ಟರ್ ಕಾರ್ಡ್‌ಗಳಿಗೆ ಹೊಡೆತ ನೀಡಿದ್ದರಿಂದ ಅವರ ವ್ಯವಹಾರ ಕುಸಿದಿದೆ ಎನ್ನಲಾಗಿದೆ. ಯಾಕೆಂದರೆ, ಯುಪಿಐ ಪಾವತಿಗಳು ಶುಲ್ಕ ರಹಿತ. ವಿಸಾ ಮತ್ತು ಮಾಸ್ಟರ್ ಕಾರ್ಡ್‌ಗಳ ಪಾವತಿಗಳಲ್ಲಿ ಶೆ 1-3 ರಷ್ಟು ಶುಲ್ಕ ಸೇರಿಕೊಳ್ಳುತ್ತದೆ. ವಿಸಾ ಮತ್ತು ಮಾಸ್ಟರ್ ಕಾರ್ಡ್ ಅಮೇರಿಕದ ಕಂಪನಿಗಳು. ಇವು ಕಾರ್ಡ್ ಗಳನ್ನು ನೀಡುವ ಕೆಲಸ ಮಾಡುವುದಿಲ್ಲ. ಬದಲಿಗೆ ವಿಸಾ ಮತ್ತು ಮಾಸ್ಟರ್ ಕಾರ್ಡ್ ಕಾರ್ಡ್‌ಗಳನ್ನು ನೀಡುವ ಬ್ಯಾಂಕುಗಳಿಗೆ ಒಂದು ವೇದಿಕೆ ಒದಗಿಸುತ್ತವೆ. ಇವು ಜಗತ್ತಿನಾದ್ಯಂತ ಕಾರ್ಡ್ ವ್ಯವಹಾರಗಳಿಗೆ ವೇದಿಕೆ ಒದಗಿಸುವ ಮೂಲಕ ಅಪಾರ ಮೊತ್ತದ ಶುಲ್ಕ ಆದಾಯ ಗಳಿಸುತ್ತವೆ. ವೇದಿಕೆಗೆ ಸಾಧನಗಳು ಮತ್ತು ಒಂದು ವ್ಯವಸ್ಥೆ ಮಾಡಿಕೊಂಡರೆ ದಿನನಿತ್ಯದ ಖರ್ಚುಗಳು ಕಡಿಮೆ ಇದ್ದು ಈ ಜಾಗತಿಕ ಅಮೇರಿಕದ ಕಂಪನಿಗಳು ಅಪಾರ ಲಾಭ ಗಳಿಸುತ್ತವೆ. ಕ್ಯುಆರ್ ಕೋಡ್ ಗಳನ್ನು ಬಳಸಿ ಯುಪಿಐ ಯಾವುದೇ ಶುಲ್ಕ ಇಲ್ಲದೆ ಇಂತಹ ಪಾವತಿಗಳನ್ನು ಮಾಡುತ್ತದಾದ್ದರಿಂದ ಇದು ಜನಗಳಿಗೆ ಹೆಚ್ಚಿನ ಅನುಕೂಲವನ್ನು ಖರ್ಚಿಲ್ಲದೆ ಕಲ್ಪಿಸಿದೆ.
ನಗದು ಮತ್ತು ಕಾರ್ಡ್ ಪಾವತಿಗಳಿಗೆ ಪರ್ಯಾಯವಾಗಿ ಯುಪಿಐ ವೇದಿಕೆ ಹೊರಹೊಮ್ಮಿದೆ. ನಗದು ಮತ್ತು ಕಾರ್ಡ್ ಪಾವತಿಗಳು ಯುಪಿಐ ಪಾವತಿಗೆ ಹೋಲಿಸಿದರೆ ತುಟ್ಟಿ ಎಂಬುದು ಸ್ಪಟಿಕದಷ್ಟು ಸ್ಪಷ್ಟ. ಯುಪಿಐ ಇಂತಹ ಲಾಭಗಳಿಗೆ ಕಡಿತ ಮಾಡಿದ್ದರಿಂದ ಕಾರ್ಡ್ ಕಂಪನಿಗಳಿಗೆ ಸಮಸ್ಯೆ ಉಂಟಾಗಿದೆ. ಅಮೇರಿಕ ಭಾರತದ ರಾಷ್ಟ್ರೀಯ ನೀತಿಗಳಲ್ಲಿ ಮೂಗು ತೂರಿಸಿ ತನ್ನ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದೆ. ಅಮೇರಿಕ ತನ್ನ ಲಾಭ ನೋಡಿಕೊಳ್ಳುವುದು ಸ್ವಾಭಾವಿಕ. ಆದರೆ ಭಾರತದ ಸರ್ಕಾರ ತನ್ನ ಜನರ ಜೇಬು ದರೋಡೆ ಮಾಡಿ ಅಮೇರಿಕದ ಕಂಪನಿಗಳ ಜೇಬು ತುಂಬುವ ಕೆಲಸ ಮಾಡುತ್ತಿರುವುದು ಅತ್ಯಂತ ಹೇಸಿಗೆ ಹುಟ್ಟಿಸುವ ವಿಚಾರ. ಯುಪಿಐಗೆ
ಇದನ್ನೂ ಓದಿ : ಚರ್ಚೆಯಿಲ್ಲದೆ ಮಸೂದೆಗಳ ಅಂಗೀಕಾರ: ಸಂಸತ್ತಿನ ಮುಂಗಾರು ಅಧಿವೇಶನದ ಪ್ರಜಾಸತ್ತಾತ್ಮಕ ಪರೀಕ್ಷೆ
ಯುಪಿಐ ಜೊತೆಗೆ ರೂಪೆ ಕಾರ್ಡಗಳು
ಇದರ ಜೊತೆಗೆ ರೂಪೆ ಕಾರ್ಡಗಳು ವಿಸಾ ಮತ್ತು ಮಾಸ್ಟರ್ ಕಾರ್ಡ್ ಗಳಿಗೆ ಇನ್ನೊಂದು ಸವಾಲು ಒಡ್ಡಿವೆ.ರೂಪೆ ಕಾರ್ಡ್ ಗಳಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ವಿಧಗಳಿದ್ದು ಎರಡೂ ಸ್ಪರ್ಧೆ ನೀಡುತ್ತಿವೆ. ರೂಪೆ ಡೆಬಿಟ್ ಕಾರ್ಡ್ ಗಳು ಯುಪಿಐ ಜೊತೆಗೆ ಸೇರಿ ದೊಡ್ಡ ಪ್ರಮಾಣದ ಸ್ಪರ್ಧೆ ಒಡ್ಡಿವೆ. ಸಾರ್ವಜನಿಕ ಬ್ಯಾಂಕುಗಳ ಮೂಲಕ ದೊಡ್ಡ ಪ್ರಮಾಣದ ಸಂಖ್ಯೆಯಲ್ಲಿ ಹರಡಿದ ಇವು ಸಾರ್ವಜನಿಕರಿಗೆ ಅಪಾರ ಅನುಕೂಲ ಒದಗಿಸಿದವು. MDR (merchant discount rate) ಎಂಬ ಶುಲ್ಕ ಇಲ್ಲದಿರುವುದರಿಂದ ಇವುಗಳಿಗೆ ಬೇಡಿಕೆ ದೊಡ್ಡ ಪ್ರಮಾಣದಲ್ಲಿ ಬಂತು. ಇಲ್ಲಿ ನಾವು ಗಮನಿಸಬೇಕಾದದ್ದು ಸಾರ್ವಜನಿಕರಿಗೆ ಅನುಕೂಲ ಎಂದರೆ ವಿಸಾ ಮಾಸ್ಟರ್ ಗಳ ಲಾಭಕ್ಕೆ ಹೊಡೆತ.
ರೂಪೆ ಕ್ರೆಡಿಟ್ ಕಾರ್ರ್ಡಗಳೂ ಜಾರಿಗೆ ಬಂದು 2000 ರೂಪಾಯಿಗಳವರೆಗಿನ ಪಾವತಿಗಳನ್ನು ಶುಲ್ಕವಿಲ್ಲದೇ ಮಾಡಲು ಅನುಕೂಲವಾಯಿತು. ರೂಪೆ ಕ್ರೆಡಿಟ್ ಕಾರ್ಡ್ಗಳು ಬಂದು ಬರೀ ಶೇ 10 ರಷ್ಟಿದ್ದ ಯುಪಿಐ-ರೂಪೆ ಕಾರ್ಡ್ ಗಳ ವಹಿವಾಟಿನ ಪಾಲು ಶೇ 40 ಕ್ಕೆ ಏರಿತು. ಇಂತಹ ಸ್ಥಿತಿಯಲ್ಲಿ ವಿಸಾ ಮಾಸ್ಟರ್ ಗಳು ಭಾರತ ಸರ್ಕಾರವನ್ನು ಅಮೇರಿಕ ವ್ಯಾಪಾರ ಪ್ರತಿನಿಧಿಗಳ ಮೂಲಕ ತಮ್ಮ ವಹಿವಾಟನ್ನು ರಕ್ಷಿಸಲು ಕೇಳಿದವು. ಅಮೇರಿಕ ಶೂನ್ಯ ವ್ಯಾಪಾರಿ ಶುಲ್ಕ ವ್ಯವಸ್ಥೆಯನ್ನೇ ಟೀಕಿಸಿತು. ಈ ಹಿನ್ನೆಲೆಯಲ್ಲಿ ಇಂತಹ ಕಾನೂನು ಬಂದಿದೆ ಎಂಬುದನ್ನು ಗಮನಿಸಿದರೆ ಎಲ್ಲವೂ ಅರ್ಥವಾಗುತ್ತದೆ. ಭಾರತೀಯ ರಾಷ್ಟ್ರೀಯ ಪಾವತಿ ಪ್ರಾಧಿಕಾರ(NPCI) ಪ್ರತಿ ಯುಪಿಐ ಮೇಲೆ ಒಟ್ಟುವಹಿವಾಟಿನ ಶೇ 30ರ ಮಿತಿ ಹೇರಬೇಕೆಂಬ ನಿಬಂಧನೆ ಅರ್ಥಪೂರ್ಣ ಎನಿಸುತ್ತದೆ. ಆದರೆ ಇದನ್ನೂ ಅಮೆರಿಕನ್ ಕಂಪನಿಗಳು ವಿರೋಧಿಸುತ್ತಿವೆ.ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಯುಪಿಐ ವಹಿವಾಟಿನ ಸಿಂಹ ಪಾಲು ಹೊಂದಿರುವ ಫೋನ್ ಪೆ ಅಮೇರಿಕದ ದೈತ್ಯ ಕಂಪನಿ ವಾಲ್ ಮಾರ್ಟ್ ನ ಮಾಲಿಕತ್ವದಲ್ಲಿ ಇರುವಂತಹದ್ದು ಎಂಬುದು. ಯುಪಿಐಗೆ
ಭಾರತೀಯ ರಿಜರ್ವ ಬ್ಯಾಂಕಿನ ಎಡಬಿಡಂಗಿ ನಿಲುವು
ಭಾರತೀಯ ರಿಜರ್ವ ಬ್ಯಾಂಕಿನ ಗವರ್ನರ್ ಅವರು ಯುಪಿಐ ನಡೆಸಲು ಬೇಕಾದ ಖರ್ಚನ್ನು ಯಾರಾದರೂ ಭರಿಸಬೇಕಲ್ಲವೇ ಎಂದು ಕೇಳಿದ್ದಾರೆ. ಈ ವಾದ ಸರಿಯಾದದ್ದಲ್ಲ ಎಂಬ ಟೀಕೆಗಳು ಆಗಲೇ ಬಂದಿವೆ. ಯಾಕೆಂದರೆ ಇಂತಹ ಒಂದು ಉತ್ತಮ ಮತ್ತು ತ್ವರಿತ ಪಾವತಿ ವ್ಯವಸ್ಥೆಯ ಲಾಭವನ್ನು ಅಮೇರಿಕದ ಮತ್ತು ಇತರ ದೈತ್ಯ ಕಂಪನಿಗಳು ಪಡೆವಾಗ ಅವು ಈ ಖರ್ಚುಗಳನ್ನು ಭರಿಸುವುದು ನ್ಯಾಯವಾದದ್ದು. ವಿಸಾ ಮಾಸ್ಟರ್ ಗಳ ತೆಕ್ಕೆಯಿಂದ ಲಾಭ ಅಮೇರಿಕದ ಇತರ ಕಂಪನಿಗಳಾದ ವಾಲ್ ಮಾರ್ಟ್ ಇತ್ಯಾದಿ ಕಂಪನಿಗಳಿಗೆ ಹೋಗುತ್ತದೆ. ಯಾಕೆಂದರೆ ಭಾರತ ತನ್ನ ಪಾವತಿ ವ್ಯವಸ್ಥೆಗಳನ್ನು ಬಹುತೇಕವಾಗಿ ವಿವಿಧ ಅಮೇರಿಕದ ಕಂಪನಿಗಳಿಗೆ ತೆರೆದಿದೆ.
ಧೀರ ಬ್ರೆಜಿಲ್‌ನ ಉದಾಹರಣೆ :ಈ ವಿಷಯದಲ್ಲಿ ಬ್ರೆಜಿಲ್ ಅಮೇರಿಕದ ಒತ್ತಡವನ್ನು ಎದುರಿಸಿದೆ. ಅದರ ಕ್ಷಿಪ್ರ ಪಾವತಿ ವ್ಯವಸ್ಥೆ ಪಿಕ್ಸ್ ಅನ್ನು ಸಡಿಲಗೊಳಿಸಲು ಅಮೇರಿಕ ಸುಂಕದ ಬೆದರಿಕೆ ಹಾಕಿತು. ಬ್ರೆಜಿಲ್ ಮಣಿಯಲಿಲ್ಲ. ಪಿಕ್ಸ್ ರಾಷ್ಟ್ರೀಯ ಮೂಲ ಸೌಕರ್ಯ. ಆದ್ದರಿಂದ ಅದನ್ನು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಸುಂಕವನ್ನು ಎದುರಿಸುವದೇ ಸರಿ ಎಂಬ ನಿಲುವನ್ನು ಅದು ತಳೆಯಿತು. ಭಾರತಕ್ಕೆ ಇದೊಂದು ಜ್ವಲಂತ ಉದಾಹರಣೆ.
ಸಾರ್ವಜನಿಕ ಮೂಲ ಸೌಕರ್ಯ
ಯುಪಿಐ ಪಾವತಿ ಒಂದು ಸಾರ್ವಜನಿಕ ಮೂಲ ಸೌಕರ್ಯ ಎಂಬು ಪರಿಗಣಿಸಿದರೆ ಅದನ್ನು ನಡೆಸಲು ಆಗುವ ಖರ್ಚು ದೊಡ್ಡದಾಗಿ ಕಾಣಿಸುವುದಿಲ್ಲ. ರಸ್ತೆ, ಕೋರ್ಟು ಕಛೇರಿ,ಹಣ ಇತ್ಯಾದಿಗಳಂತೆ ಇದೂ ಒಂದು ಮೂಲಭೂತ ಸೌಕರ್ಯ. ಅದನ್ನು ಸರ್ಕಾರ ನಡೆಸಬೇಕು. ನಮ್ಮ ಆರ್ಥಿಕಕ್ಕೆ ಅದು ಅವಶ್ಯ. ನೋಟುಗಳ ಮುದ್ರಣ ಮಾಡಿದಂತೆ. ಭಾರತೀಯ ರಿಜರ್ವ ಬ್ಯಾಂಕು 2026 ರಲ್ಲಿ ನೋಟು ಮುದ್ರಣಕ್ಕೆ 4875 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಇದೇ ರೀತಿಯಲ್ಲಿ ಯುಪಿಐ ಖರ್ಚನ್ನೂ ಭರಿಸಬಹುದು.
ಯುಪಿಐ ಈಗ ಭಾರತವಲ್ಲದೆ ಭೂತಾನ್, ನೇಪಾಳ,ಶ್ರೀಲಂಕಾ,ಸಿಂಗಾಪೂರ್,ಫ್ರಾನ್ಸ್ , ಮೌರೀಷಿಯಸ್ ಮತ್ತು ಯುಎಇ ಗಳಲ್ಲಿ ಲಭ್ಯವಿದೆ. ಖತಾರ್, ಥಾಯ್ಲ್ಯಾಂಡ್ ಮತ್ತು ದಕ್ಷಿಣ ಆಗ್ನೇಯ ಏಶಿಯಾ ದೇಶಗಳು ಸೇರಿಕೊಳ್ಳುವ ಸಂಭವವಿದೆ.
ಭಾರತ ಇಂದು ಡಿಜಿಟಲ್ ಮೂಲ ಸೌಕರ್ಯವನ್ನು ಸೃಜಿಸಿ ಬೆಳೆಸಿದೆ. ಇದರ ಲಾಭವನ್ನು ತನ್ನ ಜನರ ಆರ್ಥಿಕ ಪ್ರಯೋಜನಕ್ಕೆ ಬಳಸಿಕೊಳ್ಳಬೇಕು. ಅಮೇರಿಕದ ಒತ್ತಡಕ್ಕೆ ಮಣಿದು ಅದರ ಲಾಭಕ್ಕೆ ಅನುವಾಗುವ ನಡೆ ಅನುಸರಿಸಬಾರದು. ಇಂತಹ ಸರಳ ವಿಚಾರಗಳೂ ಅರ್ಥವಾಗದ ಜನ ಸರ್ಕಾರದಲ್ಲಿ ಇದ್ದಾರೆಯೇ? ಇದು ದೊಡ್ಡ ಪ್ರಶ್ನೆ.
(ಸಂಗ್ರಹ: ಜಿ.ಎಸ್.ಮಣಿ)
ಇದನ್ನೂ ನೋಡಿ : ಕ್ಯಾಸ್ಟ್ರೊ 100 | ಕ್ಯೂಬಾದ ಮೇಲೆ 66 ವರ್ಷಗಳ ಯುಎಸ್ ಕ್ರೂರ ದಿಗ್ಬಂಧನ! ಪುಟ್ಟ ರಾಷ್ಟ್ರದ ಮೇಲೆ ಯಾಕಿಷ್ಟು ದ್ವೇಷ?
