ಜಾರ್ಖಂಡ್‌ ನೇಮಕಾತಿ ಪರೀಕ್ಷೆ ಅಕ್ರಮ ಆರೋಪ: 21ನೇ ದಿನಕ್ಕೆ ಕಾಲಿಟ್ಟ ವಿದ್ಯಾರ್ಥಿಗಳ ಪ್ರತಿಭಟನೆ

ರಾಂಚಿ: ಜಾರ್ಖಂಡ್‌ನಲ್ಲಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ 21ನೇ ದಿನಕ್ಕೆ ಕಾಲಿಟ್ಟಿದೆ. ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ‘ತ್ರಿವರ್ಣ ಯಾತ್ರೆ’ ನಡೆಸಲು ಪ್ರತಿಭಟನಾನಿರತ ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ. ಜಾರ್ಖಂಡ್‌

ಜೆಪಿಎಸ್‌ಸಿ–ಜೆಎಸ್‌ಎಸ್‌ಸಿ ಸುಧಾರಣಾ ವೇದಿಕೆಯ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಪಾರದರ್ಶಕತೆ, ವಿವಾದಕ್ಕೆ ಒಳಗಾಗಿರುವ ಹಲವು ಪರೀಕ್ಷೆಗಳನ್ನು ರದ್ದುಗೊಳಿಸುವುದು ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂಬ ಬೇಡಿಕೆಗಳನ್ನು ವಿದ್ಯಾರ್ಥಿಗಳು ಮುಂದಿಟ್ಟಿದ್ದಾರೆ.

ಸಿಬಿಐ ತನಿಖೆ ನಡೆಸಬೇಕು ಅಥವಾ ಜಾರ್ಖಂಡ್‌ ಹೊರಗಿನ ನಿವೃತ್ತ ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಆಗಸ್ಟ್‌ 10ರಂದು ವಿಧಾನಸಭೆಯತ್ತ ವಿದ್ಯಾರ್ಥಿಗಳು ನಡೆಸಿದ ಮೆರವಣಿಗೆ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ರಾಂಚಿ ಪೊಲೀಸರು 300 ಮಂದಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ನಿಷೇಧಾಜ್ಞೆ ಉಲ್ಲಂಘನೆ, ಸರ್ಕಾರಿ ಆಸ್ತಿಗೆ ಹಾನಿ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪಗಳನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ ಎಂದು ರಾಂಚಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ₹150 ಕೋಟಿ ಪ್ರೋತ್ಸಾಹಧನ ಬಾಕಿ: ಸಂಕಷ್ಟದಲ್ಲಿ ತ್ರಿವರ್ಣ ಧ್ವಜ ತಯಾರಿಸುವ ಖಾದಿ ಕಾರ್ಮಿಕರು

ವಿಧಾನಸಭೆಯ ಮುಂಗಾರು ಅಧಿವೇಶನ ಹಿನ್ನೆಲೆಯಲ್ಲಿ ವಿಧಾನಸಭೆ ಕಟ್ಟಡದ ಸುತ್ತಲಿನ 750 ಮೀಟರ್‌ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್‌ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಇದುವರೆಗೆ ಯಾವುದೇ ಪ್ರತಿಭಟನಾಕಾರರನ್ನು ಬಂಧಿಸಿಲ್ಲ ಅಥವಾ ವಶಕ್ಕೆ ಪಡೆದಿಲ್ಲ. ಘರ್ಷಣೆಯ ಸಂದರ್ಭದ ವಿಡಿಯೊ ದೃಶ್ಯಗಳನ್ನು ಪರಿಶೀಲಿಸಿ ಘಟನೆಗೆ ಕಾರಣರಾದವರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆಯ 21ನೇ ದಿನವಾದ ಆಗಸ್ಟ್‌ 15ರಂದು ವಿದ್ಯಾರ್ಥಿಗಳು ತ್ರಿವರ್ಣ ಯಾತ್ರೆ ನಡೆಸಲು ಮುಂದಾಗಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವುದರ ಜತೆಗೆ ನೇಮಕಾತಿ ಪರೀಕ್ಷೆಗಳಲ್ಲಿ ಪಾರದರ್ಶಕತೆ ಮತ್ತು ಸುಧಾರಣೆಯ ಬೇಡಿಕೆಯನ್ನು ಮತ್ತಷ್ಟು ಬಲವಾಗಿ ಮುಂದಿಡುವುದು ಯಾತ್ರೆಯ ಉದ್ದೇಶವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ನೇಮಕಾತಿ ಪರೀಕ್ಷೆಗಳ ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು ಉದ್ಯೋಗಾಕಾಂಕ್ಷಿಗಳ ಹಿತಾಸಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ವಿದ್ಯಾರ್ಥಿಗಳ ಹೋರಾಟ ಮುಂದುವರಿದಿದ್ದು, ಸರ್ಕಾರದ ಮುಂದಿನ ಕ್ರಮದತ್ತ ಇದೀಗ ಗಮನ ಹರಿದಿದೆ.

ಇದನ್ನೂ ನೋಡಿ : ಕ್ಯಾಸ್ಟ್ರೊ 100 | ಕ್ಯೂಬಾದ ಮೇಲೆ 66 ವರ್ಷಗಳ ಯುಎಸ್‌ ಕ್ರೂರ ದಿಗ್ಬಂಧನ! ಪುಟ್ಟ ರಾಷ್ಟ್ರದ ಮೇಲೆ ಯಾಕಿಷ್ಟು ದ್ವೇಷ?

Donate Janashakthi Media

Leave a Reply

Your email address will not be published. Required fields are marked *