ಹೆಚ್ಚುವರಿ ಪ್ರವೇಶ ಶುಲ್ಕ ವಸೂಲಿ ಆರೋಪ: ಶ್ರೀರಾಮುಲು ಸ್ಮಾರಕ ಕಾಲೇಜಿನ ವಿರುದ್ಧ ಎಸ್ಎಫ್‌ಐ ಪ್ರತಿಭಟನೆ

ಗಂಗಾವತಿ: ನಿಗದಿತ ಪ್ರವೇಶ ಶುಲ್ಕಕ್ಕಿಂತ ಹೆಚ್ಚುವರಿಯಾಗಿ ವಿದ್ಯಾರ್ಥಿಗಳಿಂದ ವಸೂಲಿ ಮಾಡಿದ ಹಣದಲ್ಲಿ ₹500ನ್ನು ಮರುಪಾವತಿಸದೆ ಉಳಿಸಿಕೊಂಡಿರುವುದನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್ಎಫ್‌ಐ) ಗಂಗಾವತಿ ತಾಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗಂಗಾವತಿ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗಂಗಾವತಿಯ ಶ್ರೀ ಎಚ್‌.ಆರ್‌. ಶ್ರೀರಾಮುಲು ಸ್ಮಾರಕ ಕಾಲೇಜಿನಲ್ಲಿ ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಂದ ಹೆಚ್ಚುವರಿ ಪ್ರವೇಶ ಶುಲ್ಕ ವಸೂಲಿ ಮಾಡಲಾಗಿದೆ ಎಂದು ಎಸ್ಎಫ್‌ಐ ಆರೋಪಿಸಿದೆ. ಕೊಪ್ಪಳ ವಿಶ್ವವಿದ್ಯಾಲಯದ ಆದೇಶದಂತೆ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ವಸೂಲಿ ಮಾಡಿದ್ದ ₹1,100ನ್ನು ಮರುಪಾವತಿಸಬೇಕಾಗಿದ್ದರೂ, ಕಾಲೇಜು ಆಡಳಿತ ಕೇವಲ ₹600ನ್ನು ಹಿಂದಿರುಗಿಸಿ, ಉಳಿದ ₹500ನ್ನು ಮರುಪಾವತಿಸಿಲ್ಲ ಎಂದು ಸಂಘಟನೆ ದೂರಿದೆ.

ಎಸ್ಎಫ್‌ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ, ಕೊಪ್ಪಳ ವಿಶ್ವವಿದ್ಯಾಲಯದ ಆದೇಶವನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಹಣವನ್ನು ಮರುಪಾವತಿಸದೆ ಇರುವುದು ಅಮಾನವೀಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದು ಕೇವಲ ಹಣಕಾಸಿನ ವಿಚಾರವಲ್ಲ; ಅದು ವಿದ್ಯಾರ್ಥಿಗಳ ಶಿಕ್ಷಣದ ಹಕ್ಕಿನ ಮೇಲಿನ ನೇರ ಹೊಡೆತವಾಗಿದೆ ಎಂದು ಹೇಳಿದರು.

ತಾಲೂಕು ಅಧ್ಯಕ್ಷ ನಾಗರಾಜ್‌ ಯು ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳು ಶಿಕ್ಷಣದ ಖರ್ಚಿಗಾಗಿ ಕುಟುಂಬದ ಆದಾಯವನ್ನೇ ಅವಲಂಬಿಸಿರುತ್ತಾರೆ. ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡುವುದರಿಂದ ಅಂತಹ ಕುಟುಂಬಗಳ ಮೇಲೆ ಅನಗತ್ಯ ಆರ್ಥಿಕ ಹೊರೆ ಬೀಳುತ್ತದೆ. ಆರ್ಥಿಕ ಸಮಸ್ಯೆಗಳಿಂದಾಗಿ ಈಗಾಗಲೇ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರ ಉಳಿಯುತ್ತಿರುವ ಸಂದರ್ಭದಲ್ಲಿ ಕಾಲೇಜು ಆಡಳಿತವೇ ಹೆಚ್ಚುವರಿ ಶುಲ್ಕದ ಹೊರೆ ಹೇರುವುದು ಖಂಡನೀಯ ಎಂದರು.

ಇದನ್ನೂ ಓದಿ : ಎಸ್‌ಐಆರ್‌ ಕರಡು ಪಟ್ಟಿ ಪ್ರಕಟ | 1 ಕೋಟಿ ಮತದಾರರ ಮುಂದಿನ ಚಿತ್ರವೇನು?

ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದೊಂದಿಗೆ ಆಟವಾಡುವ ಹಕ್ಕು ಯಾವುದೇ ಕಾಲೇಜು ಆಡಳಿತ ಮಂಡಳಿಗೂ ಇಲ್ಲ. ಶಿಕ್ಷಣವನ್ನು ವ್ಯಾಪಾರದ ರೂಪದಲ್ಲಿ ನೋಡುವ ಮತ್ತು ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಂದ ಅನ್ಯಾಯವಾಗಿ ವಸೂಲಿ ಮಾಡಿರುವ ಹೆಚ್ಚುವರಿ ಶುಲ್ಕವನ್ನು ತಕ್ಷಣ ಮರುಪಾವತಿಸಬೇಕು. ಈ ಪ್ರಕರಣಕ್ಕೆ ಕಾರಣರಾದ ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯ ಬಳಿಕ ಎಸ್ಎಫ್‌ಐ ವತಿಯಿಂದ ಗಂಗಾವತಿ ತಹಶೀಲ್ದಾರ್‌ ವಸಂತಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ತಹಶೀಲ್ದಾರ್‌, ಕೊಪ್ಪಳ ವಿಶ್ವವಿದ್ಯಾಲಯದ ಆದೇಶದಂತೆ ವಿದ್ಯಾರ್ಥಿಗಳಿಗೆ ₹1,100 ಸಂಪೂರ್ಣ ಮರುಪಾವತಿ ಮಾಡುವ ಕುರಿತು ಕಾಲೇಜಿನ ಮುಖ್ಯಸ್ಥರನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಿ ಆಡಳಿತ ಮಂಡಳಿಗೆ ಸೂಚಿಸಿದರು.

ಪ್ರತಿಭಟನೆಯಲ್ಲಿ ಎಸ್ಎಫ್‌ಐ ಜಿಲ್ಲಾಧ್ಯಕ್ಷ ಶಿವಕುಮಾರ್‌ ಈಚನಾಳ್‌, ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ತಾಲೂಕು ಅಧ್ಯಕ್ಷ ನಾಗರಾಜ್‌ ಯು, ಉಪಾಧ್ಯಕ್ಷ ಶರೀಫ್‌ ಎಂ., ಸಹಕಾರ್ಯದರ್ಶಿ ಬಸಯ್ಯ ಹಿರೇಮಠ್‌ ಸೇರಿದಂತೆ ವಿದ್ಯಾರ್ಥಿಗಳಾದ ದಿನೇಶ್‌, ಕಿರಣ್‌, ಮೋಹನ್‌ ಕುಮಾರ್‌, ಸುಮಿತ್‌, ತಿಮ್ಮಣ್ಣ, ಮೋಹನ್‌, ರಾಹುಲ್‌, ಇಂದ್ರೇಶ್‌, ಗಾಯತ್ರಿ, ದೀಪಿಕಾ, ಲಕ್ಷ್ಮೀದೇವಿ, ಅನಿತಾ, ಲಕ್ಷ್ಮೀ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದನ್ನೂ ನೋಡಿ : PTCL ಸಾರ್ವಜನಿಕ ಅಹವಾಲು ತೀರ್ಪುಗಾರರ ವರದಿ ಬಿಡುಗಡೆ

Donate Janashakthi Media

Leave a Reply

Your email address will not be published. Required fields are marked *