ಉದ್ಯಾನವನಗಳ ಜಾಗಕ್ಕೆ ಶೇ.5ರಷ್ಟು ಕತ್ತರಿ: ತಿದ್ದುಪಡಿ ಹಿಂಪಡೆಯಲು ‘ಜಾಗೃತ ನಾಗರಿಕರು ಕರ್ನಾಟಕ’ ಒತ್ತಾಯ

ಬೆಂಗಳೂರು: ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ಕಾಯ್ದೆ, 1975ಕ್ಕೆ ಪ್ರಸ್ತಾಪಿಸಿರುವ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ‘ಜಾಗೃತ ನಾಗರಿಕರು ಕರ್ನಾಟಕ’ ಸರ್ಕಾರವನ್ನು ಒತ್ತಾಯಿಸಿದೆ. ಉದ್ಯಾನ

ಸರ್ಕಾರದ ಪ್ರಸ್ತಾವಿತ ತಿದ್ದುಪಡಿಯ ಪ್ರಕಾರ, ರಾಜ್ಯದ ಸರ್ಕಾರಿ ಉದ್ಯಾನವನ ಅಥವಾ ಉದ್ಯಾನದ ಒಟ್ಟು ವಿಸ್ತೀರ್ಣದ ಗರಿಷ್ಠ ಶೇ.5ರಷ್ಟು ಜಾಗವನ್ನು ಸಾರ್ವಜನಿಕ ಮೂಲಸೌಕರ್ಯ ಮತ್ತು ಸಾರ್ವಜನಿಕ ಉಪಯೋಗದ ಯೋಜನೆಗಳಿಗೆ ಬಳಸಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಜಾಗವನ್ನು ಮಾರಾಟ, ಗುತ್ತಿಗೆ, ಉಡುಗೊರೆ, ವಿನಿಮಯ ಅಥವಾ ಅಡಮಾನದಂತಹ ವಿಧಾನಗಳ ಮೂಲಕ ವರ್ಗಾಯಿಸಲು ಅವಕಾಶ ನೀಡುವ ಪ್ರಸ್ತಾವನೆಯೂ ಇದೆ. ಶೇ.5ರಷ್ಟು ಎಂಬುದು ಕೇವಲ ಒಂದು ಸಂಖ್ಯೆ ಅಲ್ಲ; ಅದು ನಗರದ ಭವಿಷ್ಯದ ಹಸಿರು ಪ್ರದೇಶದ ಪ್ರಶ್ನೆಯಾಗಿದೆ ಎಂದು ಸಂಘಟನೆ ಹೇಳಿದೆ.

ಉದ್ಯಾನವನಗಳು ಕೇವಲ ವಾಯುವಿಹಾರಕ್ಕೆ ಮೀಸಲಾದ ಸ್ಥಳಗಳಲ್ಲ. ಅವು ಶುದ್ಧ ಗಾಳಿ, ನೆರಳು, ಮಳೆನೀರು ಇಂಗಿಸುವ ಸಾಮರ್ಥ್ಯ, ಜೀವವೈವಿಧ್ಯ ಸಂರಕ್ಷಣೆ ಹಾಗೂ ನಗರಗಳ ಉಷ್ಣತೆಯನ್ನು ನಿಯಂತ್ರಿಸುವಂತಹ ಪ್ರಮುಖ ಪರಿಸರ ಸೇವೆಗಳನ್ನು ಒದಗಿಸುತ್ತವೆ. ಹೀಗಿರುವಾಗ ಉದ್ಯಾನವನದ ಜಾಗವನ್ನು ಬೇರೆ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವುದು ಮುಂದಿನ ದಿನಗಳಲ್ಲಿ ಇಂತಹ ವಿನಾಯಿತಿಗಳ ದುರ್ಬಳಕೆಗೆ ದಾರಿ ಮಾಡಿಕೊಡಬಹುದು ಎಂದು ‘ಜಾಗೃತ ನಾಗರಿಕರು ಕರ್ನಾಟಕ’ ಆತಂಕ ವ್ಯಕ್ತಪಡಿಸಿದೆ.

ಸರ್ಕಾರ ‘ಸಾರ್ವಜನಿಕ ಉದ್ದೇಶಕ್ಕಾಗಿ’ ಉದ್ಯಾನವನದ ಜಾಗ ಬಳಸಲಾಗುತ್ತದೆ ಎಂದು ಹೇಳುವುದು ಕೇವಲ ಕಣ್ಣೊರೆಸುವ ತಂತ್ರವಾಗಬಹುದು. ಪ್ರಸ್ತಾವಿತ ತಿದ್ದುಪಡಿಯಲ್ಲಿ ಪಾರದರ್ಶಕತೆಯ ಕೊರತೆಯೂ ಇದೆ. ಯಾವ ಯೋಜನೆಗಳಿಗೆ, ಯಾವ ಮಾನದಂಡದ ಆಧಾರದ ಮೇಲೆ ಹಾಗೂ ಯಾರ ಅನುಮತಿಯೊಂದಿಗೆ ಉದ್ಯಾನವನದ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಉದ್ಯಾನ

ಇದನ್ನೂ ಓದಿ : ಉದ್ಯಾನ ಭೂಮಿಗೂ ಕತ್ತರಿ: ಶೇ.5ರಷ್ಟು ಅನ್ಯ ಬಳಕೆಗೆ ಅವಕಾಶ ನೀಡುವ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರ

ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ಈಗಾಗಲೇ ಹಲವು ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಕ್ಲಬ್‌ಗಳು ಹಾಗೂ ಇತರ ಕಟ್ಟಡಗಳು ಇರುವುದನ್ನು ಸಂಘಟನೆ ಉಲ್ಲೇಖಿಸಿದೆ. ಇದೇ ರೀತಿಯ ಪರಿಸ್ಥಿತಿ ಲಾಲ್‌ಬಾಗ್‌ ಸೇರಿದಂತೆ ನಗರದ ಇತರ ಪ್ರಮುಖ ಉದ್ಯಾನವನಗಳಿಗೂ ಬರಬಾರದು ಎಂದು ಎಚ್ಚರಿಸಿದೆ.

ಈಗಾಗಲೇ ವಾಯುಮಾಲಿನ್ಯದ ತೀವ್ರ ಹೊಡೆತಕ್ಕೆ ಬೆಂಗಳೂರು ತತ್ತರಿಸುತ್ತಿದೆ. ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಮತ್ತು ಪರಿಸರ ಮಾಲಿನ್ಯದ ಹಿನ್ನೆಲೆಯಲ್ಲಿ ಹಸಿರು ಪ್ರದೇಶಗಳ ವಿಸ್ತರಣೆಗೆ ಆದ್ಯತೆ ನೀಡಬೇಕಾದ ಸರ್ಕಾರ, ಇರುವ ಉದ್ಯಾನವನಗಳ ಜಾಗವನ್ನೇ ಕಡಿಮೆ ಮಾಡಲು ಮುಂದಾಗಿರುವುದು ಖಂಡನೀಯ ಎಂದು ಹೇಳಿದೆ. ಖಾಸಗಿ ಬಡಾವಣೆಗಳಲ್ಲಿಯೂ ಉದ್ಯಾನವನಗಳಿಗೆ ಜಾಗ ಮೀಸಲಿಡುವ ನಿಯಮವಿರುವಾಗ, ಸರ್ಕಾರಿ ಉದ್ಯಾನವನಗಳ ಜಾಗವನ್ನು ಬೇರೆ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವುದು ತಾರ್ಕಿಕವಲ್ಲ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.

ಮುಂದಾಲೋಚನೆಯಿಲ್ಲದ ಇಂತಹ ಏಕಪಕ್ಷೀಯ ನಿರ್ಧಾರಗಳು ಅವೈಜ್ಞಾನಿಕ ಮತ್ತು ಅಮಾನವೀಯವಾಗುತ್ತವೆ. ನಗರಗಳ ಭವಿಷ್ಯದ ಪರಿಸರ ಸುರಕ್ಷತೆ, ಸಾರ್ವಜನಿಕ ಆರೋಗ್ಯ ಮತ್ತು ಮುಂದಿನ ಪೀಳಿಗೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.

ಯಾವುದೇ ಉದ್ಯಾನವನದ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸುವ ಮೊದಲು ಅದರ ಪರಿಸರ ಪರಿಣಾಮ, ಪರ್ಯಾಯ ಸ್ಥಳಗಳ ಲಭ್ಯತೆ ಹಾಗೂ ಯೋಜನೆಯ ನೈಜ ಅಗತ್ಯತೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಸ್ಥಳೀಯ ನಾಗರಿಕರ ಅಭಿಪ್ರಾಯ ಪಡೆಯಬೇಕು ಮತ್ತು ಪರಿಸರದ ಮೇಲೆ ಪರಿಣಾಮ ಬೀರುವ ಯೋಜನೆಗಳಿಗೆ ಸ್ವತಂತ್ರ ಮೌಲ್ಯಮಾಪನ ನಡೆಸಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಈ ಎಲ್ಲ ಕಾರಣಗಳಿಂದ ಸರ್ಕಾರಿ ಉದ್ಯಾನವನಗಳ ಒಟ್ಟು ವಿಸ್ತೀರ್ಣದ ಶೇ.5ರಷ್ಟು ಜಾಗವನ್ನು ಅನ್ಯ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವ ಪ್ರಸ್ತಾವನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ‘ಜಾಗೃತ ನಾಗರಿಕರು ಕರ್ನಾಟಕ’ ಒತ್ತಾಯಿಸಿದೆ.

ಮನವಿಗೆ ಜಿ. ರಾಮಕೃಷ್ಣ, ಕೆ. ಮರುಳ ಸಿದ್ದಪ್ಪ, ವಿಜಯಾ, ಎಸ್‌.ಜಿ. ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಮಾವಳ್ಳಿ ಶಂಕರ್‌, ಬಂಜಗೆರೆ ಜಯಪ್ರಕಾಶ್‌, ಬಿ. ಶ್ರೀಪಾದ ಭಟ್‌, ಕೆ.ಎಸ್‌. ವಿಮಲಾ, ಟಿ. ಸುರೇಂದ್ರ ರಾವ್‌, ವಸುಂಧರಾ ಭೂಪತಿ, ಎನ್‌. ಗಾಯತ್ರಿ ಹಾಗೂ ರುದ್ರಪ್ಪ ಹನಗವಾಡಿ ಸೇರಿದಂತೆ ಹಲವರು ಸಹಿ ಹಾಕಿದ್ದಾರೆ. ಉದ್ಯಾನ

ಇದನ್ನೂ ನೋಡಿ : SIR ಕರಡು ಪಟ್ಟಿ ಪ್ರಕಟ: ಹೆಚ್ಚಲಿದೆಯೇ ಜನರ ಸಂಕಟ? Janashakthi Media

Donate Janashakthi Media

Leave a Reply

Your email address will not be published. Required fields are marked *