ನಂದಿನಿ ಹಾಲಿನ ದರ ಏರಿಕೆಗೆ ಸಂಪುಟ ಸಮ್ಮತಿ: ಲೀಟರ್‌ಗೆ ₹8 ಹೆಚ್ಚಳ ಸಾಧ್ಯತೆ!

ಬಸ್‌ ಟಿಕೆಟ್‌ ದರ ಏರಿಕೆಗೆ ಇಂದು ನಿರ್ಧಾರವಿಲ್ಲ; ಜಿಪಂ–ತಾಪಂ ಚುನಾವಣೆ ಕುರಿತು ಮಹತ್ವದ ಚರ್ಚೆ
ಬೆಂಗಳೂರು: ನಂದಿನಿ ಹಾಲಿನ ದರ ಹೆಚ್ಚಳ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಒಟ್ಟು 40ಕ್ಕೂ ಹೆಚ್ಚು ವಿಷಯಗಳ ಕುರಿತು ಚರ್ಚೆ ನಡೆದಿದ್ದು, ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ ಸೂಚಿಸಿದೆ. ಆದರೆ ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ದರ ಏರಿಕೆ ಕುರಿತು ಅಧಿಕೃತ ಘೋಷಣೆ ಮಾಡಿಲ್ಲ. ಚುನಾವಣಾ ಆಯೋಗದ ಅನುಮತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ನಂದಿನಿ

ರಾಜ್ಯದ 16 ಹಾಲು ಒಕ್ಕೂಟಗಳು ಹಾಲಿನ ಖರೀದಿ ಮತ್ತು ಮಾರಾಟ ದರವನ್ನು ಪ್ರತಿ ಲೀಟರ್‌ಗೆ ₹8ರಿಂದ ₹10ರವರೆಗೆ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದವು. ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಪ್ರತಿ ಲೀಟರ್‌ಗೆ ಸುಮಾರು ₹8ರಷ್ಟು ದರ ಹೆಚ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಎಷ್ಟು ದರ ಹೆಚ್ಚಳ ಮಾಡಬೇಕು ಎಂಬುದು ಮುಂದಿನ ಹಂತದಲ್ಲಿ ನಿರ್ಧಾರವಾಗಲಿದೆ.

ಹಾಲು ಉತ್ಪಾದನಾ ವೆಚ್ಚ, ಪಶು ಆಹಾರದ ದರ ಹಾಗೂ ಇತರ ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಲಿನ ದರ ಪರಿಷ್ಕರಣೆಗೆ ಒಕ್ಕೂಟಗಳು ಮನವಿ ಮಾಡಿವೆ. ದರ ಏರಿಕೆಯಾದರೆ ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗಲಿದೆ ಎಂದು ಒಕ್ಕೂಟಗಳು ಸರ್ಕಾರದ ಗಮನಕ್ಕೆ ತಂದಿವೆ.

ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರವನ್ನು ತಕ್ಷಣವೇ ಘೋಷಿಸಲು ಸಾಧ್ಯವಾಗುತ್ತಿಲ್ಲ. ಚುನಾವಣಾ ಆಯೋಗದ ಅನುಮತಿ ಪಡೆದು ದರ ಏರಿಕೆ ಕುರಿತು ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ.

ಬಸ್‌ ಟಿಕೆಟ್‌ ದರ ಏರಿಕೆಗೆ ನಿರ್ಧಾರವಿಲ್ಲ

ನಂದಿನಿ ಹಾಲಿನ ದರದ ಜತೆಗೆ ರಾಜ್ಯದ ಬಸ್‌ ಟಿಕೆಟ್‌ ದರ ಏರಿಕೆ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಪ್ರತಿ ಸ್ಟೇಜ್‌ಗೆ 80 ಪೈಸೆಯಿಂದ ₹1ರವರೆಗೆ ದರ ಹೆಚ್ಚಿಸುವ ಪ್ರಸ್ತಾವನೆ ಸಭೆಯ ಮುಂದಿತ್ತು ಎನ್ನಲಾಗಿದೆ.

ಆದರೆ ಈ ಕುರಿತು ಮಂಗಳವಾರ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬಸ್‌ ಟಿಕೆಟ್‌ ದರ ಏರಿಕೆ ಕುರಿತು ಮತ್ತಷ್ಟು ಚರ್ಚೆ ನಡೆಸಿ ಬಳಿಕ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಜಿಪಂ–ತಾಪಂ ಚುನಾವಣೆ ಕುರಿತು ಚರ್ಚೆ

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ. ಬಹುತೇಕ ಜನವರಿ ಮೊದಲ ವಾರದಲ್ಲಿ ಜಿಪಂ ಮತ್ತು ತಾಪಂ ಚುನಾವಣೆ ನಡೆಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಒಲವು ವ್ಯಕ್ತವಾಗಿದೆ.

ಜಿಪಂ–ತಾಪಂ ಚುನಾವಣೆ ಪೂರ್ಣಗೊಂಡ ಬಳಿಕ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಈ ಕುರಿತು ಮುಂದಿನ ಹಂತದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ನಂದಿನಿ

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಅಕ್ಟೋಬರ್‌ 16ರಿಂದ ಶೇ.10 ನೀರು ಕಡಿತ: ಬರದ ಆತಂಕ

ಎಸ್‌ಐಆರ್‌, ಫಾರಂ–7 ವಿವಾದವೂ ಚರ್ಚೆ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಫಾರಂ–7 ವಿವಾದದ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಫಾರಂ–7 ಮೂಲಕ ಮತದಾರರ ಹೆಸರುಗಳನ್ನು ಅಳಿಸಲು ಅರ್ಜಿಗಳು ಸಲ್ಲಿಕೆಯಾಗಿರುವ ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸುವ ಸಾಧ್ಯತೆ ಕುರಿತು ಸಭೆಯಲ್ಲಿ ಚರ್ಚೆ ನಡೆದಿದ್ದು, ಪ್ರಸ್ತುತ ಹಂತದಲ್ಲಿ SIT ರಚನೆಗೆ ಅವಕಾಶ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ.

ಈಗಾಗಲೇ ಎಫ್‌ಐಆರ್‌ ದಾಖಲಾಗಿರುವ ಪ್ರಕರಣಗಳ ತನಿಖೆಯನ್ನು ಸ್ಥಳೀಯವಾಗಿಯೇ ಚುರುಕುಗೊಳಿಸುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಪ್ರಕರಣಗಳ ತನಿಖೆಯನ್ನು ಸಂಬಂಧಪಟ್ಟ ಪೊಲೀಸ್‌ ಅಧಿಕಾರಿಗಳ ಮೂಲಕವೇ ವೇಗಗೊಳಿಸಲು ಸರ್ಕಾರ ಮುಂದಾಗುವ ಸಾಧ್ಯತೆ ಇದೆ.

ಬರ ನಿರ್ವಹಣೆಗೆ ಹಲವು ಕ್ರಮಟ

ರಾಜ್ಯದ ಹಲವು ಭಾಗಗಳಲ್ಲಿ ಬರದ ಪರಿಸ್ಥಿತಿ ಹಿನ್ನೆಲೆಯಲ್ಲಿ ಮೇವು ಸಂಗ್ರಹಣೆಗಾಗಿ ಅನುದಾನ ನೀಡುವುದು, ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಹಾಗೂ ಅಗತ್ಯವಿರುವ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಬಗ್ಗೆಯೂ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಗೋಸಂರಕ್ಷಣಾ ಕೇಂದ್ರಗಳಿಗೆ ಅನುದಾನ ನೀಡುವ ಪ್ರಸ್ತಾವನೆಗೂ ಸಂಪುಟ ಒಪ್ಪಿಗೆ ನೀಡಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೂ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಒಟ್ಟಾರೆ, ನಂದಿನಿ ಹಾಲಿನ ದರ ಏರಿಕೆಗೆ ಸಂಪುಟ ಸಮ್ಮತಿ ನೀಡಿದ್ದರೂ, ಪ್ರಸ್ತುತ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಿತ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ಟೋಬರ್ 27ರ ಬಳಿಕ ಹೊಸ ದರ ಜಾರಿಯಾಗಬಹುದು.

ಇದನ್ನೂ ನೋಡಿ : ಧಾರವಾಡದಲ್ಲಿ ಫ್ಯಾಸಿಸ್ಟ್‌ ಶಕ್ತಿಗಳ ವಿರುದ್ಧ ಪ್ರತಿರೋಧದ ಕಹಳೆ Janashakthi Media

Donate Janashakthi Media

Leave a Reply

Your email address will not be published. Required fields are marked *