ಹೈದರಾಬಾದ್| “ಚಲೋ ಅಸೆಂಬ್ಲಿ” ಮೇಲೆ ದಾಳಿ: ವಿದ್ಯಾರ್ಥಿಗಳ ಬಂಧನಕ್ಕೆ SFI ಆಕ್ರೋಶ

ಹೈದರಾಬಾದ್: ವಿದ್ಯಾರ್ಥಿ ಸಂಘಟನೆ, ಭಾರತೀಯ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ಕೇಂದ್ರ ಕಾರ್ಯಕಾರಿ ಸಮಿತಿ (CEC) ತೆಲಂಗಾಣದಲ್ಲಿ ನಡೆದ “ಚಲೋ ಅಸೆಂಬ್ಲಿ” ಕರೆ ಬಳಿಕ ತನ್ನ ನಾಯಕರ ಮತ್ತು ಕಾರ್ಯಕರ್ತರ ಮೇಲೆ “ವ್ಯಾಪಕ ಪೊಲೀಸ್ ದಾಳಿ ಮತ್ತು ಅಕ್ರಮ ಬಂಧನಗಳು” ನಡೆದಿವೆ ಎಂದು ತೀವ್ರವಾಗಿ ಖಂಡಿಸಿದೆ. ದಾಳಿ

ಎಸ್‌ಎಫ್‌ಐ ಪ್ರಕಾರ, ಬುಧವಾರ ಮುಂಜಾನೆ ಹೈದರಾಬಾದ್ ವಿಶ್ವವಿದ್ಯಾಲಯ (ಯುಒಎಚ್/ಎಚ್‌ಸಿಯು) ವಿದ್ಯಾರ್ಥಿ ವಸತಿಗೃಹಗಳಿಗೆ ಪೊಲೀಸರು ನುಗ್ಗಿ ವಿದ್ಯಾರ್ಥಿ ನಾಯಕರನ್ನು ಗೃಹಬಂಧನಕ್ಕೆ ಒಳಪಡಿಸಿದರು. ರಾಜ್ಯದಾದ್ಯಂತ ಸುಮಾರು 300 ವಿದ್ಯಾರ್ಥಿಗಳನ್ನು, ಅದರಲ್ಲಿ ಎಸ್‌ಎಫ್‌ಐ ತೆಲಂಗಾಣ ರಾಜ್ಯಾಧ್ಯಕ್ಷರು ಹಾಗೂ ಹಲವಾರು ಮಹಿಳಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ವಿಧಾನಸಭೆಯತ್ತ ಮೆರವಣಿಗೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಹಾಗೂ ಹಲ್ಲೆಗಳು ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಸಿಇಸಿ ಹೇಳಿಕೆಯಲ್ಲಿ ತಿಳಿಸಿದೆ. “ಜನರ ಸರ್ಕಾರ ಎಂದು ಹೇಳಿಕೊಳ್ಳುವ ತೆಲಂಗಾಣ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ಮೇಲೆ ದಮನಕಾರಿ ಕ್ರಮಗಳನ್ನು ಅನುಸರಿಸಿ ಕ್ರೂರವಾಗಿ ಹಲ್ಲೆ ನಡೆಸಿದೆ” ಎಂದು ಸಿಇಸಿ ಆರೋಪಿಸಿದೆ.

“ಚಲೋ ಅಸೆಂಬ್ಲಿ” ಪ್ರತಿಭಟನೆ ತೆಲಂಗಾಣದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸರ್ಕಾರವು ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡುತ್ತಿರುವುದನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ ಕ್ಷೇತ್ರಕ್ಕೆ ಕನಿಷ್ಠ 30% ಬಜೆಟ್ ಹಂಚಿಕೆ, ಬಾಕಿ ಉಳಿದಿರುವ TS-ePASS ವಿದ್ಯಾರ್ಥಿವೇತನ ಹಾಗೂ ಶುಲ್ಕ ಮರುಪಾವತಿ ಬಿಡುಗಡೆ, 2024–25ರಿಂದ ಜಾರಿಗೆ ತಂದಿರುವ ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್‌ಫರ್ (DBT) ವಿಧಾನವನ್ನು ಹಿಂತೆಗೆದುಕೊಳ್ಳುವುದು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ  ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿಗೆ ವಿರೋಧ ವ್ಯಕ್ತಪಡಿಸುವುದು ಪ್ರತಿಭಟನೆಯ ಪ್ರಮುಖ ಬೇಡಿಕೆಗಳಾಗಿದ್ದವು. ದಾಳಿ

ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂಮಿ ಪ್ರಕರಣ: ಲಾಲು ಪ್ರಸಾದ್ ಯಾದವ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಎಸ್‌ಎಫ್‌ಐ ತೆಲಂಗಾಣ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ನಾಗರಾಜು, “ದೊಡ್ಡ ಮಟ್ಟದ ಮೂಲಸೌಕರ್ಯಗಳಿಗೆ ಸರ್ಕಾರ ಹಣವನ್ನು ಕಂಡುಕೊಳ್ಳುತ್ತದೆ. ಆದರೆ ಸುಮಾರು 25 ಲಕ್ಷ ವಿದ್ಯಾರ್ಥಿಗಳ ಶಿಕ್ಷಣವು ₹12,000 ಕೋಟಿ ಶುಲ್ಕ ಮರುಪಾವತಿ ಬಾಕಿಯಿಂದ ಸಂಕಷ್ಟದಲ್ಲಿದೆ” ಎಂದು ಟೀಕಿಸಿದರು.

ಶಿಕ್ಷಣ ವ್ಯವಸ್ಥೆಯ ಕುರಿತಾಗಿ ಗಂಭೀರ ಆತಂಕ ವ್ಯಕ್ತಪಡಿಸಿರುವ ಎಸ್‌ಎಫ್‌ಐ, “2024–25ರಲ್ಲಿ ಮಾತ್ರ ತೆಲಂಗಾಣದಲ್ಲಿ 2,081 ಸರ್ಕಾರಿ ಶಾಲೆಗಳು ಶೂನ್ಯ ವಿದ್ಯಾರ್ಥಿಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಸಾಮಾಜಿಕ ಕಲ್ಯಾಣ ವಿದ್ಯಾರ್ಥಿವೇತನಗಳು ಮತ್ತು ಶುಲ್ಕ ಮರುಪಾವತಿಗಳು ಹಲವು ವರ್ಷಗಳಿಂದ ಬಾಕಿಯಲ್ಲಿವೆ. ಗುರುಕುಲ ಶಾಲೆಗಳು, ಕಲ್ಯಾಣ ವಸತಿಗೃಹಗಳು ಹಾಗೂ ಕೆಜಿಬಿವಿಗಳಲ್ಲಿ 70% ಕಟ್ಟಡಗಳು ಬಾಡಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿಯ ತೀವ್ರ ಕೊರತೆ ಇದೆ. ಎರಡು ವರ್ಷಗಳ ಆಡಳಿತದ ಬಳಿಕವೂ ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ಸಚಿವರೇ ಇಲ್ಲದಿರುವುದು ಖಂಡನೀಯ” ಎಂದು ಹೇಳಿದೆ.

ಶಿಕ್ಷಣ ಸಂಕಷ್ಟದ ನಡುವೆ ನಿಧಿ ಬಳಕೆಗೆ ಪ್ರಶ್ನೆ

ಮೂಲಭೂತ ಕಲ್ಯಾಣ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೇ, ಸರ್ಕಾರ ಇತರ ರಾಜ್ಯಗಳಲ್ಲಿ ಜಾಹೀರಾತು ಹಾಗೂ ಸಾರ್ವಜನಿಕ ಸಂಪರ್ಕ ಅಭಿಯಾನಗಳಿಗೆ ಹೆಚ್ಚಿನ ವೆಚ್ಚ ಮಾಡುತ್ತಿದೆ ಎಂದು ಎಸ್‌ಎಫ್‌ಐ ಆರೋಪಿಸಿದೆ. “ಇದು ಚುನಾವಣಾ ಪ್ರಚಾರಕ್ಕಾಗಿ ಸರ್ಕಾರದ ಹಣವನ್ನು ಬಳಸುವ ಬಿಜೆಪಿಯ ತಂತ್ರವನ್ನು ಅನುಸರಿಸುವಂತಾಗಿದೆ” ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಇದೇ ರೀತಿಯ ಕ್ರಮಗಳನ್ನು ಕರ್ನಾಟಕ ಹಾಗೂ ತೆಲಂಗಾಣದ ಕಾಂಗ್ರೆಸ್ ಸರ್ಕಾರಗಳು ಅನುಸರಿಸುತ್ತಿವೆ ಎಂದು ಹೇಳಿರುವ ಎಸ್‌ಎಫ್‌ಐ, “ಬುಲ್ಡೋಜರ್ ರಾಜ್, ಭೂ ಕಬಳಿಕೆ, ಸಾರ್ವಜನಿಕ ಶಿಕ್ಷಣದಿಂದ ಹಿಂತೆಗೆದುಕೊಳ್ಳುವುದು ಹಾಗೂ ವಿರೋಧದ ಧ್ವನಿಯನ್ನು ಕುಂಠಿತಗೊಳಿಸಲು ರಾಜ್ಯ ಯಂತ್ರಾಂಗವನ್ನು ಬಳಸುವುದು — ಇವುಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವ್ಯತ್ಯಾಸವೇ ಇಲ್ಲ” ಎಂದು ಟೀಕಿಸಿದೆ.

ಬಂಧಿತರಾದ ಎಲ್ಲಾ ಕಾರ್ಯಕರ್ತರನ್ನು ತಕ್ಷಣ ಹಾಗೂ ಷರತ್ತಿಲ್ಲದೆ ಬಿಡುಗಡೆ ಮಾಡಬೇಕು ಎಂದು ಎಸ್‌ಎಫ್‌ಐ ಒತ್ತಾಯಿಸಿದೆ. ಜೊತೆಗೆ “ನಿಜವಾದ ಜನಪರ ಬಜೆಟ್” ರೂಪಿಸುವಂತೆ ಸರ್ಕಾರವನ್ನು ಆಗ್ರಹಿಸಿದೆ. ವಿದ್ಯಾರ್ಥಿ ಚಳವಳಿಯನ್ನು ಈ ರೀತಿಯ ಕ್ರಮಗಳು ತಡೆಯುವುದಿಲ್ಲ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ಇದನ್ನೂ ನೋಡಿ: ಇರಾನ್ ಮೇಲೆ ಯು.ಎಸ್.-ಇಸ್ರೇಲ್ ದಾಳಿ: ಜಾಗತಿಕ ಪರಿಣಾಮಗಳು – ಎನ್.ಕೆ. ವಸಂತರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *