ಬೆಂಗಳೂರು, ಮಾ.30: ನಗರದ ಸೌಹಾರ್ದ ಸಭಾಂಗಣದಲ್ಲಿ (ಎಲ್ಐಸಿ ಕಚೇರಿ) ಎಸ್ಎಫ್ಐ (ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ) 16ನೇ ಜಿಲ್ಲಾ ಸಮ್ಮೇಳನ ಭಾನುವಾರ ನಡೆಯಿತು. ಸಮ್ಮೇಳನವನ್ನು ಡಾ. ಸಂಗಮೇಶ್ ಉಪಾಸೆ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಬೆಂಗಳೂರು
ಉದ್ಘಾಟನಾ ಭಾಷಣದಲ್ಲಿ ಅವರು ಜಾಗತಿಕ ಮಟ್ಟದಲ್ಲಿ ಯುದ್ಧಮಯ ವಾತಾವರಣ ನಿರ್ಮಾಣವಾಗುತ್ತಿರುವುದನ್ನು ಉಲ್ಲೇಖಿಸಿ, ಮಾನವನ ದುರಾಸೆಯೇ ಇಂತಹ ಪರಿಸ್ಥಿತಿಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿದರು. ಇಂದಿನ ರಾಜಕೀಯ ವ್ಯವಸ್ಥೆ ಮಾನವೀಯ ಮೌಲ್ಯಗಳನ್ನು ಹಿನ್ನಡೆಯತ್ತ ತಳ್ಳುತ್ತಿದೆ. ಸರ್ಕಾರಗಳು ಜನರ ಮೂಲಭೂತ ಸಮಸ್ಯೆಗಳನ್ನು ಕಡೆಗಣಿಸುತ್ತಿದ್ದು, ಸಾರ್ವಜನಿಕ ಶಿಕ್ಷಣವನ್ನು ಖಾಸಗೀಕರಣದತ್ತ ಕೊಂಡೊಯ್ಯುವ ಪ್ರಯತ್ನಗಳು ಹೆಚ್ಚಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಡ ಮಕ್ಕಳಿಗೆ ಶಿಕ್ಷಣದ ಅವಕಾಶ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಗತಿಪರ ಶಕ್ತಿಗಳು ಧ್ವನಿ ಎತ್ತಬೇಕಾಗಿದೆ ಎಂದು ಕರೆ ನೀಡಿದರು.
ಎಸ್ಎಫ್ಐ ರಾಜ್ಯಾಧ್ಯಕ್ಷ ಶಿವಪ್ಪ ಅಂಬ್ಲಿಕಲ್ ಮಾತನಾಡಿ, ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದ್ದು, ಯುವಕರಿಗೆ ಉದ್ಯೋಗದ ಕೊರತೆ ತೀವ್ರವಾಗಿದೆ ಎಂದರು. ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ಭರ್ತಿ ಕುರಿತು ಸರ್ಕಾರ ಸ್ಪಷ್ಟತೆ ನೀಡಬೇಕಿದೆ ಎಂದು ಒತ್ತಾಯಿಸಿದರು. ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರದ ನೀತಿಗಳನ್ನೂ ಅವರು ಟೀಕಿಸಿದರು.
ಇದನ್ನೂ ಓದಿ: ಅಸ್ಸಾಂ ಯುವಕರಿಗೆ ಉದ್ಯೋಗ ಭರವಸೆ: ಡಿ.ಕೆ. ಶಿವಕುಮಾರ್ ಹೇಳಿಕೆ
ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಅವರು ಸಾರ್ವಜನಿಕ ಶಿಕ್ಷಣವನ್ನು ಉಳಿಸಲು ಸಂಘಟನೆ ಹೋರಾಟ ಮುಂದುವರೆಸುತ್ತಿದೆ ಎಂದರು. ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯನ್ನು ನಡೆಸಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರ ವಿದ್ಯಾರ್ಥಿ-ಪೋಷಕರನ್ನು ವಂಚಿಸುತ್ತಿವೆ ಎಂದು ಆರೋಪಿಸಿದರು.
ಪ್ರಾಂತರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟಚಲಯ್ಯ ಮಾತನಾಡಿ, ರೈತರ ಸಮಸ್ಯೆಗಳು ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ರೈತರ ಮಕ್ಕಳಿಗೆ ಶಿಕ್ಷಣದಲ್ಲಿ ಅನ್ಯಾಯವಾಗುತ್ತಿದೆ ಎಂದು ಹೇಳಿದರು. ರೈತ ಮತ್ತು ವಿದ್ಯಾರ್ಥಿ ವರ್ಗದ ಸಮಸ್ಯೆಗಳು ಪರಸ್ಪರ ಸಂಬಂಧ ಹೊಂದಿವೆ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಡಾ. ಮುನಿರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಂಟು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಸಂಘಟಿತವಾಗಿ ಸಮ್ಮೇಳನ ಆಯೋಜಿಸಿರುವುದು ಮಹತ್ವದ್ದಾಗಿದೆ ಎಂದರು. ಶಿಕ್ಷಣದ ಹಕ್ಕು ಖಾತ್ರಿ, ವಿದ್ಯಾರ್ಥಿ ಸಂಘಗಳ ಚುನಾವಣೆ, ಹಾಗೂ ಕ್ಯಾಂಪಸ್ಗಳಲ್ಲಿ ಪ್ರಜಾಸತ್ತಾತ್ಮಕ ವಾತಾವರಣ ನಿರ್ಮಾಣ ಮುಖ್ಯವಾಗಿದೆ ಎಂದು ಹೇಳಿದರು. ಕ್ಯಾಂಪಸ್ಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ, ವಿದ್ಯಾರ್ಥಿನಿಯರ ಭದ್ರತೆಗೆ ಕ್ರಮ ಅಗತ್ಯವಿದೆ ಎಂದರು.
ಸಮ್ಮೇಳನದಲ್ಲಿ ಶೈಕ್ಷಣಿಕ ವರದಿಯನ್ನು ಅರ್ಪಿತಾ ಗ್ರೇಸಿ ಮಂಡಿಸಿದರು. ವರದಿ ಕುರಿತು ಪ್ರತಿನಿಧಿಗಳು ಚರ್ಚೆ ನಡೆಸಿದರು. ಬಳಿಕ 21 ಸದಸ್ಯರ ಜಿಲ್ಲಾ ಸಮಿತಿಗೆ ಅನುಮೋದನೆ ನೀಡಿ, 20 ಸದಸ್ಯರ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಹೊಸ ಪದಾಧಿಕಾರಿಗಳು:
ಅಧ್ಯಕ್ಷೆ: ಅರ್ಪಿತಾ ಗ್ರೇಸಿ
ಕಾರ್ಯದರ್ಶಿ: ವೆಂಕಟೇಶ್
ಉಪಾಧ್ಯಕ್ಷರು: ಪ್ರಧಾನ್, ಕಾವ್ಯ
ಸಹ ಕಾರ್ಯದರ್ಶಿಗಳು: ಪರಿವರ್ತನಾ, ರಾಜಿ, ಮಣಿಭಾರತಿ
ಪದಾಧಿಕಾರಿಗಳು: ವೈಶಾಲಿ, ಅಂಕಿತಾ, ಸಾಬಮ್ಮ (ಸೌಮ್ಯ)
ಜಿಲ್ಲಾ ಸಮಿತಿ ಸದಸ್ಯರು:
ಸ್ವಾತಿ, ಜಗದೀಶ್, ಕೀರ್ತನ, ಕಿರಣ್, ಶಾನ್, ಶರಣ್ಯ, ಜೈಕಾಂತ್, ಪ್ರಭು, ವರಲಕ್ಷ್ಮಿ ಸೇರಿದಂತೆ ಇತರರು ಆಯ್ಕೆಯಾದರು. ಬೆಂಗಳೂರು

ಇದನ್ನೂ ನೋಡಿ: ಬಿಜೆಪಿ–ಸಂಘಪರಿವಾರದಿಂದ ಇತಿಹಾಸ ವಿರೂಪಗೊಳಿಸುವ ಪ್ರಯತ್ನ – ಪ್ರಿಯಾಂಕ್ ಖರ್ಗೆ Janashakthi Media
