ಹಾವೇರಿ: ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿ ನಿಯಂತ್ರಣ ಹಾಗೂ ಶುಲ್ಕ ನಿಯಂತ್ರಣ ಕಾಯ್ದೆಯ ಸಮರ್ಪಕ ಜಾರಿಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಒಂದು ವಾರದೊಳಗೆ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ (ಡೇರಾ) ಸಭೆ ಕರೆಯದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪಾಲಕರು ಮತ್ತು ವಿದ್ಯಾರ್ಥಿಗಳೊಂದಿಗೆ ಧರಣಿ ಹಾಗೂ ಹೋರಾಟ ನಡೆಸುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ.
ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿದ ಎಸ್‌ಎಫ್‌ಐ ಪದಾಧಿಕಾರಿಗಳು, 2026-27ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಿದ್ದರೂ, ಡೊನೇಷನ್ ಹಾವಳಿ ತಡೆಯಲು ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಸಿಲ್ಲ ಎಂದು ಆರೋಪಿಸಿದರು.
1983ರ ಶಿಕ್ಷಣ ಕಾಯ್ದೆ ಹಾಗೂ 2009ರ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಲ್ಲಿದ್ದರೂ ಖಾಸಗಿ ಶಾಲೆಗಳು ಲಕ್ಷಾಂತರ ರೂಪಾಯಿ ಡೊನೇಷನ್ ವಸೂಲಿ ಮಾಡುತ್ತಿವೆ. ಅಲ್ಲದೆ ಪ್ರವೇಶ ಪರೀಕ್ಷೆ, ಅನಧಿಕೃತ ಟ್ಯೂಷನ್, ಸಿಎಸ್‌ಸಿ, ಸಿಬಿಎಸ್‌ಸಿ, ಜೆಇಇ, ನೀಟ್, ಸಿಇಟಿ ಹೆಸರಿನಲ್ಲಿ ನಿಯಮಬಾಹಿರ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಎಸ್‌ಎಫ್‌ಐ ದೂರಿದೆ.
ಇದನ್ನೂ ಓದಿ : ಅದಾನಿಗಾಗಿ ಪ್ರಧಾನಿ ರಾಜಿ ಮಾಡಿಕೊಂಡರು : ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಶಾಲೆಗಳು ನೋಟ್‌ಬುಕ್, ಶಾಲಾ ಬ್ಯಾಗ್, ಬೂಟು, ಸಮವಸ್ತ್ರ ಸೇರಿದಂತೆ ವಿವಿಧ ವಸ್ತುಗಳನ್ನು ಕಡ್ಡಾಯವಾಗಿ ಶಾಲೆಯಲ್ಲೇ ಖರೀದಿಸಲು ಪಾಲಕರ ಮೇಲೆ ಒತ್ತಡ ಹೇರುತ್ತಿವೆ. ಸರ್ಕಾರ ನಿಗದಿಪಡಿಸಿರುವ ಶುಲ್ಕ ವಿವರ, ಶಿಕ್ಷಕರ ಸಂಖ್ಯೆ, ಮೂಲ ಸೌಕರ್ಯಗಳ ಮಾಹಿತಿ ಶಾಲಾ ಆವರಣದಲ್ಲಿ ಪ್ರಕಟಿಸಬೇಕೆಂಬ ನಿಯಮವಿದ್ದರೂ ಅನೇಕ ಸಂಸ್ಥೆಗಳು ಅದನ್ನು ಪಾಲಿಸುತ್ತಿಲ್ಲ ಎಂದು ಸಂಘಟನೆ ಆರೋಪಿಸಿದೆ.
ಡೊನೇಷನ್ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪಾಲಕರು, ಶಿಕ್ಷಣ ಇಲಾಖೆ ಹಾಗೂ ವಿದ್ಯಾರ್ಥಿ ಸಂಘಟನೆಗಳ ಜಂಟಿ ಸಭೆ ಕರೆಯಬೇಕು, ಅನಧಿಕೃತ ಟ್ಯೂಷನ್ ಕೇಂದ್ರಗಳನ್ನು ಮುಚ್ಚಬೇಕು, ಖಾಸಗಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕು ಎಂದು ಎಸ್‌ಎಫ್‌ಐ ಆಗ್ರಹಿಸಿದೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, “ಡೊನೇಷನ್ ಹಾವಳಿ ಕುರಿತು ಪರಿಶೀಲನೆ ನಡೆಸುತ್ತೇವೆ. ಸಭೆ ಕರೆಯುವ ಬಗ್ಗೆ ಚರ್ಚಿಸುತ್ತೇವೆ. ಪಾಲಕರು ಕೂಡ ಮುಂದೆ ಬಂದು ದೂರು ನೀಡಬೇಕು” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಮುಖಂಡರಾದ ಅರುಣ್ ನಗವತ್, ಕೃಷ್ಣ ನಾಯ್ಕ್, ಸಂಗೀತಾ ಮೊಟ್ಟಳ್ಳಿ, ಶಂಭು ಸವದತ್ತಿ ಹಾಗೂ ಪರಶುರಾಮ ಎಸ್ ಉಪಸ್ಥಿತರಿದ್ದರು.
ಇದನ್ನೂ ನೋಡಿ : ಸುಳ್ಳಿನ ಭರವಸೆಗಳು, ಜನರ ಮೇಲಾಗುತ್ತಿರುವ ಬೆಲೆ ಏರಿಕೆಯ ಹೊರೆ | ವಿಶ್ಲೇಷಣೆ – ಟಿ.ಆರ್.ಭಟ್ Janashakthi Media
