ಪಂಚ ರಾಜ್ಯಗಳ ಚುನಾವಣೆಯ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ. ಚುನಾವಣೆ ಸಂದರ್ಭದಲ್ಲಿ “ಸಾಕಷ್ಟು ದಾಸ್ತಾನು ಇದೆ, ಜನರು ಆತಂಕಪಡಬೇಕಿಲ್ಲ” ಎಂದು ಹೇಳಿದ್ದ ಸರ್ಕಾರ, ಫಲಿತಾಂಶ ಹೊರಬಂದ ತಕ್ಷಣವೇ ಇಂಧನ ದರ ಏರಿಕೆ ಮಾಡಿ ಜನರ ಮೇಲೆ ಹೊರೆ ಹಾಕಿದೆ ಎಂದು ಪಕ್ಷ ಆರೋಪಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಿಪಿಐ(ಎಂ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್, “ಇದಕ್ಕಿಂತ ದೊಡ್ಡ ಜನವಿರೋಧಿ ನಡೆ ಮತ್ತೊಂದಿಲ್ಲ. ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಜನರ ಬೆನ್ನು ಮುರಿಯುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ” ಎಂದು ಕಿಡಿಕಾರಿದ್ದಾರೆ.
ಅಮೆರಿಕಾ-ಇಸ್ರೇಲ್ ದಾಳಿಗಳ ಪರಿಣಾಮ ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವುದನ್ನು ಉಲ್ಲೇಖಿಸಿದ ಸಿಪಿಐ(ಎಂ), “ಯುದ್ಧೋನ್ಮಾದವನ್ನು ತಡೆಯಲು ಇತರ ರಾಷ್ಟ್ರಗಳೊಂದಿಗೆ ಕೈಜೋಡಿಸಿ ಶಾಂತಿ ಪ್ರಯತ್ನ ನಡೆಸಬೇಕಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾದ ಹಿಂಬಾಲಕ ನಾಯಕನಂತೆ ವರ್ತಿಸಿ, ಇಸ್ರೇಲ್ ಪರ ನಿಲುವು ತೆಗೆದುಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದೆ.
ಇದನ್ನೂ ಓದಿ : ಇಂಧನ ದರ ಏರಿಕೆ : ಜನರ ಜೇಬಿಗೆ ಮತ್ತೊಂದು ಹೊರೆ?
“ಇತರ ಅನೇಕ ದೇಶಗಳು ತಮ್ಮ ನಾಗರಿಕರ ಹಿತರಕ್ಷಣೆಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣ ಕ್ರಮಗಳನ್ನು ಕೈಗೊಂಡಿವೆ. ಆದರೆ ಭಾರತದಲ್ಲಿ ಜನಸಾಮಾನ್ಯರ ಬದುಕಿನ ಮೇಲೆ ಹೆಚ್ಚುವರಿ ಹೊರೆ ಹಾಕಲಾಗುತ್ತಿದೆ. ಜನಹಿತಕ್ಕಿಂತ ಚುನಾವಣಾ ರಾಜಕೀಯವೇ ಬಿಜೆಪಿಗೆ ಮುಖ್ಯವಾಗಿದೆ” ಎಂದು ಪ್ರಕಟಣೆಯಲ್ಲಿ ಟೀಕಿಸಲಾಗಿದೆ.
ಮಿತವ್ಯಯದ ಬಗ್ಗೆ ಜನರಿಗೆ ಪಾಠ ಹೇಳುವ ಪ್ರಧಾನಿ ನರೇಂದ್ರ ಮೋದಿ, ಮತ್ತೊಂದೆಡೆ ರೋಡ್ ಶೋ ಹಾಗೂ ವೈಮಾನಿಕ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿರುವುದು ಜನರ ನೋವನ್ನು ಅವಹೇಳನ ಮಾಡುವಂತಿದೆ ಎಂದು ಸಿಪಿಐ(ಎಂ) ಆರೋಪಿಸಿದೆ.
ಪೆಟ್ರೋಲ್-ಡೀಸೆಲ್ ದರ ಹೆಚ್ಚಿಸುವ ಬದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ತೆರಿಗೆಗಳನ್ನು ಕಡಿತಗೊಳಿಸಬೇಕಿತ್ತು. ಇಂಧನ ದರ ಏರಿಕೆಯ ಸಂಪೂರ್ಣ ಹೊರೆ ಜನರ ಮೇಲೆ ಹಾಕಬಾರದು ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.
ಇದನ್ನೂ ನೋಡಿ : ಕರ್ನಾಟಕಕ್ಕೂ ಬಂದೇ ಬಿಡ್ತು..SIR….ಎಚ್ಚರ ಎಚ್ಚರ Janashakthi Media
