ನ್ಯಾಯದ ಮೇಲೆ ನೆರಳು: ಧೃವ್‌ ರಾಠಿ ಎತ್ತಿದ ಗಂಭೀರ ಪ್ರಶ್ನೆಗಳು

ಈ ಧೃವ್‌ ರಾಠಿ ಪ್ರತಿಬಾರಿ ವಿಡಿಯೊ ರಿಲೀಸ್‌ ಮಾಡಿದಾಗಲೂ ನನಗೆ ಅಚ್ಚರಿ. ಸರಕಾರದ ವಿರುದ್ಧ ಎಲ್ಲ ಪ್ರತಿಪಕ್ಷಗಳೂ ಒಟ್ಟಾಗಿ ಎತ್ತುವ ಧ್ವನಿಗಿಂತ ಈ ಒಬ್ಬ ಯುವಕನ ಧ್ವನಿಯೇ ನಮಗೆ ಗಟ್ಟಿಯಾಗಿ ತಟ್ಟುತ್ತದೆ ಹೇಗೆ? ಇಷ್ಟೊಂದು ಪ್ರತಿಷ್ಠಿತ ದಿನಪತ್ರಿಕೆ, ಟಿವಿ ಚಾನೆಲ್‌ಗಳ ಪ್ರತಿಷ್ಠಿತ ಸುದ್ದಿಕರ್ತರು ಸಂಗ್ರಹಿಸುವ ಮಾಹಿತಿಗಳಿಗಿಂತ ಈತನಿಗೆ ಸರ್ಕಾರವನ್ನು ಪ್ರಶ್ನಿಸಲು ಇಷ್ಟೊಂದು ಸರಕುಗಳು ಎಲ್ಲಿಂದ ಸಿಗುತ್ತವೆ? ರಾಠಿ ಎಂದರೆ ಎಂಥ ಬಲಿಷ್ಠ ಲಾಠಿಗಳೂ ಬೆದರುತ್ತವೆ ಏಕೆ? ನ್ಯಾಯ

– ನಾಗೇಶ್ ಹೆಗಡೆ

ರಾಠಿ ನಿನ್ನೆಯಷ್ಟೇ ಪೋಸ್ಟ್‌ ಮಾಡಿದ ಈ ಒಂದು ಪುಟ್ಟ ವಿಡಿಯೊವನ್ನು ಅದಾಗಲೇ 15 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 1650ಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ. ಹಿಂದಿ ಭಾಷೆ ಗೊತ್ತಿಲ್ಲದವರಿಗೆ ನಾನು ಇದನ್ನು ಇಲ್ಲಿ ತರ್ಜುಮೆ ಮಾಡಿ ಹಾಕುತ್ತಿದ್ದೇನೆ. ಲಿಂಕ್‌ ಕೊನೆಯಲ್ಲಿದೆ.

ಶಿರೋನಾಮೆ: “ಇವರು ಇಂಡಿಯಾದ ಅತ್ಯಂತ ವಿವಾದಾತ್ಮಕ ಜಜ್‌ ಇರಬಹುದೆ?”

ಇದನ್ನೂ ಓದಿ: ಸರ್ಕಾರದ ಕೃಷಿ ಭೂಮಿ ಸ್ವಾಧೀನ ಕ್ರಮ ವಿರೋಧಿಸಿ 20 ಕ್ಕೂ ಹೆಚ್ಚು ರೈತರು ಪ್ರತಿಭಟನೆ

ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶೆ ಜಸ್ಟಿಸ್ ಸ್ವರ್ಣ ಕಾಂತಾ ಶರ್ಮಾ ಅವರ ವಿಷಯ ಹೀಗಿದೆ:

ಅವರು ದೆಹಲಿಯ ಎಕ್ಸೈಸ್‌ (ಅಬಕಾರಿ) ನೀತಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶೆ. ಅವರೆದುರು ಒಂದು ವಿಲಕ್ಷಣ ಬೇಡಿಕೆ ಬಂದಿದೆ.

“ಮ್ಯಾಡಮ್‌, ತಾವು ಸ್ವತಃ ಈ ಪ್ರಕರಣದಿಂದ ಹಿಂದೆ ಸರಿಯಬೇಕು” ಎಂದು ಅರವಿಂದ ಕೇಜ್ರಿವಾಲ್‌ ನ್ಯಾಯಾಲಯದಲ್ಲಿ ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಹೈಕೋರ್ಟ್‌ ನಿಯಮಗಳ ಪ್ರಕಾರ ಆಪಾದಿತನೊಬ್ಬ ಹೀಗೆ ವಿನಂತಿಸಿಕೊಳ್ಳಲು ಅವಕಾಶ ಇದೆ.

ಇದರ ಹಿಂದೆ ಮೂರು ಕಾರಣಗಳಿವೆ:

ಮೊದಲ ಕಾರಣ: ಈ ನ್ಯಾಯಾಧೀಶೆ ಕನಿಷ್ಠ ನಾಲ್ಕು ಬಾರಿ “ಅಖಿಲ ಭಾರತೀಯ ಅಧಿವಕ್ತಾ ಪರಿಷತ್‌”ನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇದು ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ವಕೀಲರ ಸಂಘವಾಗಿದೆ [ಪೂರಕ ಮಾಹಿತಿಗೆ ಅಡಿ ಟಿಪ್ಪಣಿ ನೋಡಿ]

ಎರಡನೇ ಕಾರಣ: ಜಸ್ಟಿಸ್ ಶರ್ಮಾ ಅವರ ಟ್ರಾಕ್ ರೆಕಾರ್ಡ್ ಹೀಗಿದೆ:

ಕಳೆದ ಕೆಲವು ವರ್ಷಗಳಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ವಿರೋಧ ಪಕ್ಷದ ನಾಯಕರ ಕನಿಷ್ಠ ಐದು ಪ್ರಕರಣಗಳು ಅವರ ಮುಂದೆ ಬಂದಿದ್ದು ಇವೆಲ್ಲದರಲ್ಲೂ ಅವರು ಆಪಾದಿತರಿಗೆ ಜಾಮೀನು ನಿರಾಕರಿಸಿದ್ದಾರೆ ಅಥವಾ ಆರೋಪಿಗಳ ವಿರುದ್ಧ ತೀರ್ಪು ನೀಡಿದ್ದಾರೆ.

ಕೇಜ್ರಿವಾಲ್ ಗೆ ಅವರ ಜಾಮೀನು ನಿರಾಕರಿಸಿದ್ದರು, ಸಂಜಯ್ ಸಿಂಗ್ ಅವರದ್ದನ್ನೂ ನಿರಾಕರಿಸಿದ್ದರು. ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರ ಜಾಮೀನನ್ನೂ ನಿರಾಕರಿಸಿದ್ದರು.

ಆದರೆ ಮಾಜಿ ಬಿಜೆಪಿ ಕೇಂದ್ರ ಸಚಿವ ದಿಲೀಪ್ ರಾಯ್ ಅವರ ಕಲ್ಲಿದ್ದಲ ಬ್ಲಾಕ್ ಹಂಚಿಕೆ ಪ್ರಕರಣ ಬಂದಾಗ, ಜಾಮೀನು ಅಲ್ಲ, ಅವರ ಮೇಲಿನ ಶಿಕ್ಷೆಯನ್ನೇ ಅಮಾನತಿನಲ್ಲಿಟ್ಟಿದ್ದರು!
ಏಕೆಂದರೆ ದಿಲೀಪ್ ರಾಯ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು.

ಇನ್ನು, ಮೂರನೇ ಕಾರಣ ಅತ್ಯಂತ ಗಂಭೀರವಾಗಿದೆ.

ಜಸ್ಟಿಸ್ ಸ್ವರ್ಣಾ ಶರ್ಮಾ ಅವರಿಗೆ ಇಬ್ಬರು ಮಕ್ಕಳು ಇದ್ದಾರೆ — ಮಗ ಈಶಾಂತ್ ಶರ್ಮಾ ಮತ್ತು ಮಗಳು ಶಾಂಭವಿ ಶರ್ಮಾ. ಇಬ್ಬರೂ ವಕೀಲರು. ಮತ್ತು ಇಬ್ಬರನ್ನೂ ಕೇಂದ್ರ ಸರ್ಕಾರ ಎಂಪ್ಯಾನೆಲ್‌ಗೆ ಸೇರಿಸಿದೆ.

ಈಗ “ಎಂಪ್ಯಾನೆಲ್” ಅಂದರೆ ಏನು ಎಂದು ತಿಳಿದುಕೊಳ್ಳಿ, ಇದು ಬಹಳ ಮುಖ್ಯ.

ಸರ್ಕಾರವು ನ್ಯಾಯಾಲಯಗಳಲ್ಲಿ ತನ್ನ ಪ್ರಕರಣಗಳನ್ನು ವಾದಿಸಲು ಖಾಸಗಿ ವಕೀಲರನ್ನು ಅಧಿಕೃತ ಪ್ರತಿನಿಧಿಗಳಾಗಿ ನೇಮಿಸುತ್ತದೆ. ಇದು ಅಪರೂಪವೇನಲ್ಲ. ಇದನ್ನು ʻಪ್ಯಾನೆಲ್ ಕೌನ್ಸೆಲ್ (ವಕೀಲರ) ನೇಮಕಾತಿ’ ಎಂದು ಕರೆಯುತ್ತಾರೆ. ಇದು ಕೇವಲ ಒಂದು ಹುದ್ದೆ ಅಲ್ಲ. ಇದರ ಮೂಲಕ ಅಂಥ ಖಾಸಗಿ ವಕೀಲರಿಗೆ ಖ್ಯಾತಿ, ವೃತ್ತಿಪರ ಸ್ಥಾನಮಾನ ಮತ್ತು ಹಣ ದೊರೆಯುತ್ತದೆ.

ಅನೇಕ ಪ್ರತಿಭಾವಂತ ಹಿರಿಯ ವಕೀಲರು ವರ್ಷಗಳ ಕಾಲ ಪ್ರಯತ್ನಿಸಿದರೂ ಪ್ಯಾನೆಲ್ ನೇಮಕಾತಿಯ ಭಾಗ್ಯ ಸಿಗುವುದಿಲ್ಲ.

ಈಗ ನೋಡಿ- ಜಸ್ಟಿಸ್ ಶರ್ಮಾ ಅವರ ಮಕ್ಕಳಿಗೆ ಎಷ್ಟು ಪ್ಯಾನೆಲ್‌ಗಳು ಸಿಕ್ಕಿವೆ ಅಂತ:

ಮಗ ಈಶಾಂತ್ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್‌ನ ಅತ್ಯುನ್ನತ ಗ್ರೂಪ್ ‘ಎ’ ಪ್ಯಾನೆಲ್, ದೆಹಲಿ ಹೈಕೋರ್ಟ್‌ನ ಸೀನಿಯರ್ ಪ್ಯಾನೆಲ್, ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)ಲ್ಲೂ ಪ್ಯಾನೆಲ್, ದೆಹಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಲ್ಲೂ ಪ್ಯಾನೆಲ್.

ಇನ್ನು, ಮಗಳು ಶಂಭಾವಿ ಶರ್ಮಾ ಅವರಿಗೆ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಗ್ರೂಪ್ ಸಿ ಪ್ಯಾನೆಲ್, ದೆಹಲಿ ಹೈಕೋರ್ಟ್‌ನಲ್ಲಿ ಅವರನ್ನು ಸರ್ಕಾರದ ವಕೀಲರನ್ನಾಗಿಯೂ ನೇಮಕ ಮಾಡಲಾಗಿದೆ.

ಈ ಇಬ್ಬರು ಅಣ್ಣ ತಂಗಿಯರನ್ನೂ ಒಂದೇ ದಿನ ಪ್ಯಾನೆಲ್‌ಗೆ ಸೇರಿಸಲಾಗಿದೆ. ಸೆಪ್ಟೆಂಬರ್ 2025 ರಂದು ದೆಹಲಿ ಹೈಕೋರ್ಟ್‌ನಲ್ಲಿ ಮತ್ತು 21 ನವೆಂಬರ್ 2025 ರಂದು ಸುಪ್ರೀಂ ಕೋರ್ಟ್‌ನಲ್ಲಿ. ಈ ಎರಡೂ ನ್ಯಾಯಾಲಯಗಳಲ್ಲಿ ಇಬ್ಬರಿಗೂ ಒಂದೇ ದಿನಾಂಕದಲ್ಲಿ ನೇಮಕವಾಗಿದೆ.

ಪ್ಯಾನೆಲ್ ಸಿಕ್ಕದ್ದು ಒಂದು ವಿಷಯ, ಆದರೆ ನಿಜವಾದ ಚಿತ್ರ RTI ಡೇಟಾದಿಂದ ತಿಳಿಯುತ್ತದೆ. ಈಶಾಂತ್ ಶರ್ಮಾ ಅವರಿಗೆ 2023ರಲ್ಲಿ 2487 ಪ್ರಕರಣಗಳು ಹಂಚಿಕೆಯಾಗಿವೆ. 2024ರಲ್ಲಿ 1784 ಪ್ರಕರಣಗಳು ಹಂಚಿಕೆಯಾಗಿವೆ. (ಇದು ಎನ್ಫೋರ್ಸ್‌ಮೆಂಟ್ ಡೈರೆಕ್ಟೊರೇಟ್‌ನ ಪ್ರಸಿದ್ಧ ವಕೀಲ ಸೋಹೇಬ್ ಹುಸೇನ್ ಅವರಿಗಿಂತಲೂ ಹೆಚ್ಚು).

ವಕೀಲರಿಗೆ ಎಷ್ಟು ಹೆಚ್ಚು ಪ್ರಕರಣಗಳು ಸಿಗುತ್ತವೋ, ಅಷ್ಟು ಹೆಚ್ಚು ಹಣ ಗಳಿಸಲು ಸಾಧ್ಯವಾಗುತ್ತದೆ. ಈ ಹಂಚಿಕೆಯನ್ನು ಯಾರು ಮಾಡುತ್ತಾರೆ? ಸರ್ಕಾರದ ಉನ್ನತ ಅಧಿಕಾರಿಗಳು.

“ಪ್ಯಾನೆಲ್ ವಕೀಲರನ್ನು ರಾಜಕೀಯ ಪಕ್ಷದ ಆಧಾರದ ಮೇಲೆ ನೇಮಿಸಲಾಗುತ್ತದೆ; ಪ್ರತಿಭೆಯ ಆಧಾರದ ಮೇಲೆ ಅಲ್ಲ” ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಮನಮೋಹನ್ ಅವರು ಸಾರ್ವಜನಿಕವಾಗಿ ಹಿಂದೆಯೇ ಹೇಳಿದ್ದರು.

ಈ ಮೂರು ಕಾರಣಗಳನ್ನು ಒಟ್ಟಿಗೆ ನೋಡಿದರೆ ಒಂದು ಮಾದರಿ ಕಾಣಿಸುತ್ತದೆ. ಅದು ಏನೆಂದು ನಿಮಗೆ ಈಗಲೇ ಅಂದಾಜು ಆಗಿರಬಹುದು.

Justice must not only done. It must also be seen to be done. ಭಾರತೀಯ ಕಾನೂನು ಹೇಳುವುದು: ನ್ಯಾಯದಾನ ಆಗುತ್ತಿರಬೇಕು ಅಷ್ಟೇ ಅಲ್ಲ, ಅದು ಸರಿಯಾಗಿ ಆಗುತ್ತಿರುವಂತೆ ಕಾಣಿಸಬೇಕು ಕೂಡ.

ಈಗ ಪ್ರಶ್ನೆ ಏನೆಂದರೆ, ಇಂತಹ ಪ್ರಕರಣದಲ್ಲಿ ಅದು ಸಾಧ್ಯವಾಗುತ್ತದೆಯೇ?

[ಪೂರಕ ಮಾಹಿತಿ: ನಮ್ಮ ದೇಶದ ವಕೀಲರಲ್ಲಿ ಭಾರತೀಯ ಮೌಲ್ಯಗಳನ್ನೂ ನೈತಿಕ ನೆಲೆಗಟ್ಟನ್ನೂ ಎತ್ತರಿಸುವ ಉದ್ದೇಶದಿಂದ ಆರೆಸ್ಸೆಸ್‌ ಮೂಲಕ 1992ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು “ಭಾರತೀಯ ಅಧಿವಕ್ತಾ ಪರಿಷತ್‌”. ವಕೀಲರ ಮತ್ತು ನ್ಯಾಯಾಧೀಶರ ಸಮ್ಮೇಳನ ಇಲ್ಲಿ ಕಾಲಕಾಲಕ್ಕೆ ನಡೆಯುತ್ತಿರುತ್ತದೆ]

ಧೃವ್‌ ರಾಠೀ ವಿಡಿಯೊದ ಲಿಂಕ್‌ ಇಲ್ಲಿದೆ:

https://www.youtube.com/watch?v=n9CafeWaIsM

ನನ್ನ ಮಾತು: ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷ “ಇದಕ್ಕಿಂತಲೂ ಜಾಸ್ತಿ ಅನೈತಿಕ ಕೆಲಸಗಳನ್ನು ನ್ಯಾಯಾಧೀಶರಿಂದ ಮಾಡಿಸುತ್ತ ಬಂದಿದೆ” ಎಂದು ಟ್ರೋಲ್‌ಗಳು ನನ್ನ ಈ ಪೋಸ್ಟನ್ನು ಓದಿ ಉಗ್ರ ವಕಾಲತ್ತನ್ನು ಮಂಡಿಸಬಹುದು. ತುರ್ತು ಪರಿಸ್ಥಿತಿಯ ಉದಾಹರಣೆಗಳನ್ನೂ ನೀಡಬಹುದು. ಇಲ್ಲಿನ ಪ್ರಶ್ನೆ ಅದಲ್ಲ. ಧೃವ್‌ ರಾಠಿಯವರು ನೀಡಿದ ಮಾಹಿತಿಯ ಆಧಾರದಲ್ಲಿ ನನ್ನ ಪ್ರಶ್ನೆ ಇಷ್ಟೆ: ನ್ಯಾಯಾಂಗದ ಮೌಲ್ಯವನ್ನು ಎತ್ತರಿಸಲೆಂದೇ ಅಸ್ತಿತ್ವಕ್ಕೆ ಬಂದ ಭಾ. ಅ. ಪರಿಷತ್‌ ಸಭೆಗಳಲ್ಲಿ ಭಾಗವಹಿಸಿದ ನ್ಯಾಯಮೂರ್ತಿ ಸ್ವರ್ಣಾ ಅವರು ಅಲ್ಲಿ ಏನನ್ನು ಕಲಿತಿರಬಹುದು ಅಥವಾ ಕಲಿಸಿ ಬಂದಿರಬಹುದು?

ಕಂತೆ ಕಂತೆ ನೋಟುಗಳು ಅರೆಸುಟ್ಟ ಸ್ಥಿತಿಯಲ್ಲಿ ತಮ್ಮ ಮನೆಯ ಆವರಣದಲ್ಲಿ ಪತ್ತೆಯಾದ ಕಾರಣಕ್ಕೆ ವಾಗ್ದಂಡನೆಯನ್ನು ತಪ್ಪಿಸಿಕೊಳ್ಳಲು ರಾಜೀನಾಮೆ ನೀಡಿದ ನ್ಯಾಯಾಧೀಶ ವರ್ಮಾ ಅವರಿಗೂ ಈಗಿನ ಈ ಪೋಸ್ಟಿಗೂ ಸಂಬಂಧ ಇಲ್ಲ.

“ನ್ಯಾಯಾಂಗದಲ್ಲಿ ಭ್ರಷ್ಟಾಚಾರ” ಎಂಬ ಹೆಸರಿನ 8ನೇ ಕ್ಲಾಸ್‌ ಪಾಠವನ್ನು ಕಿತ್ತು ಹಾಕಬೇಕೆಂದು ಸರ್ವೋನ್ನತ ನ್ಯಾಯಾಲಯ ನೀಡಿದ ಆದೇಶಕ್ಕೂ ಈ ಪೋಸ್ಟಿಗೂ ಸಂಬಂಧ ಇಲ್ಲ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್‌ ತಮ್ಮ ಪುತ್ರಿಯರಾದ ಮೇಧಾ ರೂಪಮ್‌ ಮತ್ತು ಅಭಿಶ್ರೀ ಇಬ್ಬರಿಗೂ ಏನೇನು ಸರ್ಕಾರಿ ಸೌಕರ್ಯ, ಸವಲತ್ತುಗಳನ್ನು ಕೊಡಿಸಿದ್ದಾರೆಂಬ ಆರೋಪಗಳಿಗೂ ಈ ಪೋಸ್ಟ್‌ಗೂ ಸಂಬಂಧ ಇಲ್ಲವೇ ಇಲ್ಲ. ಇದ್ದರೆ ಅದು ಕಾಕತಾಳೀಯ.

ಇದನ್ನೂ ನೋಡಿ: ಎಸ್ ಐಆರ್: ವಿಶೇಷ ಸಮಗ್ರ ಹೊರತಳ್ಳುವಿಕೆ: ಮುಗಿಯದ ವ್ಯಥೆ? Janashakthi Media

Donate Janashakthi Media

Leave a Reply

Your email address will not be published. Required fields are marked *