ರೈತರ ಮೇಲೆ ಮತ್ತಷ್ಟು ಆರ್ಥಿಕ ಹೊರೆ : ಕೇಂದ್ರದ ನೀತಿಗಳ ವಿರುದ್ಧ ಆಕ್ರೋಶ
ನವದೆಹಲಿ : ದೇಶದಲ್ಲಿ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ರಸಗೊಬ್ಬರಗಳ ಬೆಲೆ ಏರಿಕೆಯಾಗುತ್ತಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಡಾಲರ್ ಎದುರು ರೂಪಾಯಿ ದುರ್ಬಲವಾಗುತ್ತಿರುವುದರಿಂದ ರಸಗೊಬ್ಬರ ಹಾಗೂ ಅದರ ಕಚ್ಚಾ ವಸ್ತುಗಳ ಆಮದು ವೆಚ್ಚ ಹೆಚ್ಚಳ ಕಂಡಿದ್ದು, ಇದರ ನೇರ ಪರಿಣಾಮ ರೈತರ ಮೇಲೆಯೇ ಬೀಳುತ್ತಿದೆ.
ಭಾರತದಲ್ಲಿ ಬಳಕೆಯಾಗುವ ಡಿಎಪಿ, ಎನ್ಪಿಕೆ ಸೇರಿದಂತೆ ಹಲವು ಪ್ರಮುಖ ರಸಗೊಬ್ಬರಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ರೂಪಾಯಿ ಮೌಲ್ಯ ಕುಸಿತದಿಂದ ಆಮದು ವೆಚ್ಚ ಹೆಚ್ಚಾಗಿದ್ದು, ಕೇಂದ್ರ ಸರ್ಕಾರದ ಸಬ್ಸಿಡಿ ಭಾರವೂ ಏರಿಕೆಯಾಗಿದೆ. ಇದರಿಂದ ಅನೇಕ ಕಂಪನಿಗಳು ರಸಗೊಬ್ಬರ ದರ ಹೆಚ್ಚಳದ ದಾರಿಗೆ ಹೋಗುತ್ತಿವೆ ಎನ್ನಲಾಗಿದೆ.
ಕೆಲವು ರಾಜ್ಯಗಳಲ್ಲಿ ಈಗಾಗಲೇ ವಿವಿಧ ರಸಗೊಬ್ಬರಗಳ ದರ ಏರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. 50 ಕೆಜಿ ಚೀಲಕ್ಕೆ ₹200 ರಿಂದ ₹250ರವರೆಗೆ ಹೆಚ್ಚುವರಿ ದರ ವಿಧಿಸಲಾಗುತ್ತಿದೆ ಎಂದು ರೈತ ಸಂಘಟನೆಗಳು ಆರೋಪಿಸಿವೆ. ಕೃಷಿ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ರಸಗೊಬ್ಬರ ದರ ಏರಿಕೆ ರೈತರ ಸಂಕಷ್ಟವನ್ನು ಮತ್ತಷ್ಟು ಗಂಭೀರಗೊಳಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಪಶ್ಚಿಮ ಬಂಗಾಳದಲ್ಲಿ ಬುಲ್ಡೋಜರ್ ಆಡಳಿತ? : ಬಡವರ ಬದುಕಿನ ಮೇಲೆ ದಾಳಿ
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆ, ರೆಡ್ ಸೀ ಬಿಕ್ಕಟ್ಟು, ಸಾಗಣೆ ವೆಚ್ಚ ಏರಿಕೆ ಹಾಗೂ ಚೀನಾದ ರಫ್ತು ನಿರ್ಬಂಧಗಳ ಪರಿಣಾಮವೂ ರಸಗೊಬ್ಬರ ಮಾರುಕಟ್ಟೆಯ ಮೇಲೆ ಬಿದ್ದಿದೆ. ಇದರೊಂದಿಗೆ ರೂಪಾಯಿ ಮೌಲ್ಯ ಕುಸಿತ ಸೇರಿ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರ ರೈತರಿಗೆ ಹೊರೆ ಕಡಿಮೆ ಮಾಡಲು ಹೆಚ್ಚುವರಿ ಸಬ್ಸಿಡಿ ನೀಡುತ್ತಿರುವುದಾಗಿ ಹೇಳುತ್ತಿದ್ದರೂ, ನೆಲಮಟ್ಟದಲ್ಲಿ ರೈತರು ದುಬಾರಿ ದರದಲ್ಲಿ ರಸಗೊಬ್ಬರ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಸಂಘಟನೆಗಳು ದೂರಿವೆ. ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗದಿರುವ ಸಂದರ್ಭದಲ್ಲಿ ಉತ್ಪಾದನಾ ವೆಚ್ಚ ಏರಿಕೆಯಾಗುತ್ತಿರುವುದು ರೈತರ ಸಾಲಭಾರವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ರಸಗೊಬ್ಬರ ದರ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ರೂಪಾಯಿ ಮೌಲ್ಯ ಕುಸಿತ ತಡೆಗಟ್ಟುವ ಜೊತೆಗೆ ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರ ಪೂರೈಕೆ ಖಚಿತಪಡಿಸಬೇಕು ಎಂದು ವಿವಿಧ ರೈತ ಸಂಘಟನೆಗಳು ಆಗ್ರಹಿಸಿವೆ.
ಇದನ್ನೂ ನೋಡಿ : ಕೋಗಿಲು ಲೇಔಟ್ ನಿವಾಸಿಗಳ ಹೋರಾಟ ತೀವ್ರ | “ಮನೆ ಕೊಡಿ ಅಥವಾ ಜೈಲಿಗಾದರೂ ಕಳುಹಿಸಿ” Janashakthi Media
