ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇತ್ತೀಚೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಗ್ರಾಮ ಕಾಯಕ ಮಿತ್ರ ನೌಕರರು ಅನಿರ್ದಿಷ್ಟ ಹೋರಾಟ ನಡೆಸಿದರು. ರಾಜ್ಯದ 25 ಜಿಲ್ಲೆಗಳಿಂದ ಗ್ರಾಮ ಕಾಯಕ ಮಿತ್ರರು ಸ್ವಯಂಪ್ರೇರಿತರಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಗ್ರಾಮ
ಪ್ರತಿಭಟನಾ ಸ್ಥಳಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಆಗಮಿಸಿ ಗ್ರಾಮ ಕಾಯಕ ಮಿತ್ರರ ಬೇಡಿಕೆಗಳ ಮನವಿ ಪತ್ರ ಸ್ವೀಕರಿಸಿದ್ದರು. ಕಾಯಕ ಮಿತ್ರರಿಗೆ ಆರೋಗ್ಯ ಭತ್ಯೆ ಜಾರಿಗೊಳಿಸುವುದು, ಗ್ರಾಮ ಪಂಚಾಯಿತಿಗಳಲ್ಲಿ ಅಗತ್ಯ ಪೀಠೋಪಕರಣಗಳನ್ನು ಒದಗಿಸುವ ಕುರಿತು ಆದೇಶ ಹೊರಡಿಸುವುದು ಹಾಗೂ ಆಗಸ್ಟ್ ಬಳಿಕ ಗೌರವಧನ ಹೆಚ್ಚಳ ಮಾಡುವ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಹೋರಾಟವನ್ನು ಹಿಂಪಡೆಯಲಾಗಿತ್ತು.
ಇದರ ಮುಂದುವರಿದ ಭಾಗವಾಗಿ ಪಂಚಾಯತ್ ರಾಜ್ ಆಯುಕ್ತೆ ದಿವ್ಯ ಪ್ರಭು ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಕಾಯಕ ಮಿತ್ರರ 9 ಪ್ರಮುಖ ಬೇಡಿಕೆಗಳ ಕುರಿತು ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಕಾಯಕ ಮಿತ್ರರ ಬೇಡಿಕೆಗಳನ್ನು ಕೂಲಂಕಷವಾಗಿ ಚರ್ಚಿಸಲಾಯಿತು.
ಇದನ್ನೂ ಓದಿ : ಪಾಕಿಸ್ತಾನ ಪರ ಟರ್ಕಿಯ ನಿಲುವಿಗೆ ಭಾರತದ ತಿರುಗೇಟು; ಸೆಲೆಬಿ ಏವಿಯೇಷನ್ನ ಭದ್ರತಾ ಅನುಮತಿ ರದ್ದು

ಆರೋಗ್ಯ ಭತ್ಯೆ, ಗೌರವಧನ ಹೆಚ್ಚಳ, ಗ್ರಾಮ ಪಂಚಾಯಿತಿಗಳಲ್ಲಿ ಪೀಠೋಪಕರಣ ಸೇರಿದಂತೆ 9 ಬೇಡಿಕೆಗಳನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರಬೇಕು ಎಂದು ಗ್ರಾಮ ಕಾಯಕ ಮಿತ್ರರ ಸಂಘಟನೆ ಮನವಿ ಮಾಡಿತು. ಬೇಡಿಕೆಗಳ ಈಡೇರಿಕೆಗೆ ಶೀಘ್ರ ಕ್ರಮ ಕೈಗೊಳ್ಳಲು 100ರಷ್ಟು ಪ್ರಯತ್ನ ನಡೆಸುವುದಾಗಿ ಪಂಚಾಯತ್ ರಾಜ್ ಆಯುಕ್ತೆ ದಿವ್ಯ ಪ್ರಭು ಭರವಸೆ ನೀಡಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ಜುಲೈ 27ರಂದು ಆರಂಭವಾಗಿದ್ದ ಹೋರಾಟದಲ್ಲಿ 25 ಜಿಲ್ಲೆಗಳ ಗ್ರಾಮ ಕಾಯಕ ಮಿತ್ರರು ಪಾಲ್ಗೊಂಡಿದ್ದರು. ಸಂಘದ ರಾಜ್ಯಾಧ್ಯಕ್ಷ ಎಂ.ಬಿ. ನಾಡಗೌಡ, ಪ್ರಧಾನ ಕಾರ್ಯದರ್ಶಿ ಶಿಲ್ಪಾ ಹಾದಿಮನಿ, ಖಜಾಂಚಿ ಲಕ್ಷ್ಮಿ ತೋಟಗಿ, ಪಂಚಾಯಿತಿ ನೌಕರರ ಸಂಘದ ಉಪಾಧ್ಯಕ್ಷ ಜೆ. ರಾಮಕೃಷ್ಣ, ಕಾರ್ಯದರ್ಶಿ ಗೈಬುಜೈನಖಾನ್ ಸೇರಿದಂತೆ ಸಂಘಟನೆಯ ರಾಜ್ಯ ಪದಾಧಿಕಾರಿಗಳು ಹೋರಾಟದ ನೇತೃತ್ವ ವಹಿಸಿದ್ದರು.
ಆರೋಗ್ಯ ಭತ್ಯೆ, ಗೌರವಧನ ಹೆಚ್ಚಳ ಸೇರಿದಂತೆ ಗ್ರಾಮ ಕಾಯಕ ಮಿತ್ರರ 9 ಬೇಡಿಕೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ನಡೆದಿರುವ ಚರ್ಚೆ, ಪ್ರತಿಭಟನೆಯ ಬಳಿಕ ಬೇಡಿಕೆಗಳ ಈಡೇರಿಕೆಗೆ ಮುಂದಿನ ಹಂತದ ಕ್ರಮ ಕೈಗೊಳ್ಳುವ ನಿರೀಕ್ಷೆಯನ್ನು ಹುಟ್ಟಿಸಿದೆ.ಗ್ರಾಮ
ಇದನ್ನೂ ನೋಡಿ : ಪುರೋಹಿತಶಾಹಿ ಆರೆಸ್ಸೆಸ್ ನ ಖೆಡ್ಡಾ ಕುರಿತು ಮೈಯೆಲ್ಲಾ ಕಣ್ಣಾಗಿರಿ ಜೆನ್ ಜಿಗಳೇ… Janashakthi Media
