ಪಶ್ಚಿಮ ಬಂಗಾಳದಲ್ಲಿ ಬುಲ್ಡೋಜರ್‌ ಆಡಳಿತ? : ಬಡವರ ಬದುಕಿನ ಮೇಲೆ ದಾಳಿ

ಎಡಪಕ್ಷಗಳ ಅವಧಿಯಲ್ಲಿ ಧರ್ಮನಿರಪೇಕ್ಷತೆಯ ಪ್ರಭಾವದಲ್ಲಿದ್ದ ಪಶ್ಚಿಮ ಬಂಗಾಳ, ತೃಣಮೂಲ ಆಡಳಿತದಲ್ಲಿ ದಬ್ಬಾಳಿಕೆ ಮತ್ತು ಪಕ್ಷಾಧಾರಿತ ನಿಯಂತ್ರಣದ ಆರೋಪಗಳನ್ನು ಎದುರಿಸಿತು. ಈ ಅಸಮಾಧಾನದ ನಡುವೆ “ಪರಿವರ್ತನೆ” ಮತ್ತು “ಡಬಲ್ ಎಂಜಿನ್ ಅಭಿವೃದ್ಧಿ” ಘೋಷಣೆಗಳೊಂದಿಗೆ ಬಿಜೆಪಿ ಬೆಳೆದಿತು. ಆದರೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬುಲ್ಡೋಜರ್ ರಾಜಕೀಯ, ಬೀದಿ ವ್ಯಾಪಾರಿಗಳ ತೆರವು ಮತ್ತು ಕೋಮು ಧ್ರುವೀಕರಣದ ಆರೋಪಗಳು ಕೇಳಿಬರುತ್ತಿರುವುದು ಪಶ್ಚಿಮ ಬಂಗಾಳವೂ ಈಗ ಉತ್ತರ ಪ್ರದೇಶ ಮಾದರಿಯ ಭೀತಿಯ ರಾಜಕೀಯದತ್ತ ಸಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಎಬ್ಬಿಸಿದೆ?
ಗುರುರಾಜ ದೇಸಾಯಿ

ಒಂದು ಚುನಾವಣೆ ಫಲಿತಾಂಶ ಕೇವಲ ಸರ್ಕಾರ ಬದಲಾವಣೆಯ ಸೂಚನೆಯಲ್ಲ. ಅದು ಸಮಾಜದ ರಾಜಕೀಯ ದಿಕ್ಕು, ಆಡಳಿತದ ಮನಸ್ಥಿತಿ ಮತ್ತು ಸಾಮಾನ್ಯ ಜನರ ಬದುಕಿನ ಮೇಲೆಯೂ ಪರಿಣಾಮ ಬೀರುತ್ತದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ನಡೆದ ಬೆಳವಣಿಗೆಗಳು ಇದೇ ಆತಂಕವನ್ನು ಹುಟ್ಟಿಸುತ್ತಿವೆ. ರಾಜ್ಯದ ಹಲವು ನಗರ ಪ್ರದೇಶಗಳು, ರೈಲು ನಿಲ್ದಾಣಗಳು ಮತ್ತು ಮಾರುಕಟ್ಟೆಗಳಲ್ಲಿ ಬೀದಿ ವ್ಯಾಪಾರಿಗಳ ವಿರುದ್ಧ ಆರಂಭವಾದ ತೆರವು ಕಾರ್ಯಾಚರಣೆಗಳು ಸಾಮಾನ್ಯ ಆಡಳಿತ ಕ್ರಮಗಳಿಗಿಂತ ಹೆಚ್ಚಾಗಿ ರಾಜಕೀಯ ಸಂದೇಶವನ್ನು ಹೊತ್ತಂತಿವೆ.

ನ್ಯೂ ಮಾರ್ಕೆಟ್ ಪ್ರದೇಶದಲ್ಲಿ ಬುಲ್ಡೋಜರ್‌ಗಳನ್ನು ಚಲಾಯಿಸಿ ಸಣ್ಣ ವ್ಯಾಪಾರಿಗಳ ಅಂಗಡಿಗಳನ್ನು ಧ್ವಂಸಗೊಳಿಸಿದ ಘಟನೆ ಕೇವಲ ಅಕ್ರಮ ತೆರವು ಕಾರ್ಯಾಚರಣೆಯಲ್ಲ; ಅದು “ಬಲವೇ ಕಾನೂನು” ಎಂಬ ಆಡಳಿತ ಮನೋಭಾವದ ಅಭಿವ್ಯಕ್ತಿ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಆಡಳಿತದ ವೇಳೆ “ಬುಲ್ಡೋಜರ್ ರಾಜಕೀಯ” ಹೇಗೆ ಅಧಿಕಾರದ ಪ್ರದರ್ಶನದ ಸಂಕೇತವಾಯಿತೋ, ಅದೇ ಮಾದರಿಯನ್ನು ಈಗ ಬೇರೆ ರಾಜ್ಯಗಳಲ್ಲೂ ಕಾಣಲಾಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ಫ್ಯಾಸಿಸ್ಟ್ ರಾಜಕೀಯದ ಪ್ರಮುಖ ಲಕ್ಷಣವೆಂದರೆ ಭಯದ ಮೂಲಕ ಆಡಳಿತ ನಡೆಸುವುದು. ಜನರು ವಿರೋಧಿಸುವ ಮುನ್ನವೇ ಅವರನ್ನು ಭೀತಿಗೊಳಿಸಿ ಮೌನಗೊಳಿಸುವುದು. ಇಲ್ಲಿ ಬುಲ್ಡೋಜರ್ ಕೇವಲ ಯಂತ್ರವಲ್ಲ; ಅದು ಒಂದು ರಾಜಕೀಯ ಸಂಕೇತ. “ನಾವು ಬಂದಿದ್ದೇವೆ, ಈಗ ನಮ್ಮದೇ ನಿಯಮ” ಎಂಬ ಅಧಿಕಾರದ ಘೋಷಣೆ. ವಿಶೇಷವಾಗಿ ಬಡವರ ಬದುಕಿನ ಮೇಲೆಯೇ ಈ ಶಕ್ತಿ ಪ್ರದರ್ಶನ ನಡೆಯುತ್ತಿರುವುದು ಯಾದೃಚ್ಛಿಕವಲ್ಲ.

ನ್ಯೂ ಮಾರ್ಕೆಟ್‌ನಂತಹ ಪ್ರದೇಶಗಳಲ್ಲಿ ಹೆಚ್ಚಿನ ಮುಸ್ಲಿಂ ವ್ಯಾಪಾರಿಗಳು ಇದ್ದಾರೆ ಎಂಬ ಕಾರಣದಿಂದ ಕೋಮು ರಾಜಕೀಯದ ಆರೋಪಗಳು ಕೇಳಿಬಂದಿವೆ. ಆದರೆ ರೈಲು ನಿಲ್ದಾಣಗಳು, ಪಟ್ಟಣಗಳು, ಬೀದಿ ಬದಿಗಳಲ್ಲಿ ತೆರವುಗೊಳ್ಳುತ್ತಿರುವವರು ಕೇವಲ ಮುಸ್ಲಿಮರಲ್ಲ; ಹಿಂದೂಗಳು,ದಲಿತರು, ಹಿಂದುಳಿದವರು, ದಿನಗೂಲಿ ಬದುಕಿನ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ಬಡ ಜನರು. ಬೀದಿ ವ್ಯಾಪಾರ ಎಂಬುದು ಧರ್ಮದ ಪ್ರಶ್ನೆಯಲ್ಲ; ಅದು ನಿರುದ್ಯೋಗ ಮತ್ತು ಅಸಮಾನತೆಯ ಪ್ರಶ್ನೆ.

ಇದನ್ನೂ ಓದಿ : ಚುನಾವಣಾ ಫಲಿತಾಂಶ | 1967ರ ರಾಜಕೀಯ ಕ್ಷಣ ಮತ್ತೆ ಮರುಕಳಿಸುತ್ತಿದೆಯೇ?

ದೇಶದಲ್ಲಿ ಲಕ್ಷಾಂತರ ಯುವಕರಿಗೆ ಸ್ಥಿರ ಉದ್ಯೋಗವಿಲ್ಲ. ಕೃಷಿ ಸಂಕಷ್ಟ, ಕಾರ್ಮಿಕ ವಲಯದ ಕುಸಿತ, ಖಾಸಗೀಕರಣ, ಬೆಲೆ ಏರಿಕೆ, ಇವೆಲ್ಲ ಸೇರಿ ಅನೇಕ ಕುಟುಂಬಗಳನ್ನು ಅನೌಪಚಾರಿಕ ಉದ್ಯೋಗದತ್ತ ತಳ್ಳಿವೆ. ಹಣ್ಣು ಮಾರುವುದು, ಟೀ ಅಂಗಡಿ ನಡೆಸುವುದು, ಫಾಸ್ಟ್ ಫುಡ್ ಸ್ಟಾಲ್ ಇಡುವುದು, ರೈಲು ನಿಲ್ದಾಣದ ಬಳಿ ಸಣ್ಣ ವ್ಯಾಪಾರ ಮಾಡುವುದು ಇವೇ ಅವರ ಬದುಕಿನ ಆಧಾರ. ಸರ್ಕಾರ ಜನರಿಗೆ ಉದ್ಯೋಗ ಒದಗಿಸಲು ವಿಫಲವಾದಾಗ, ಬದುಕಿಗಾಗಿ ಜನರು ಪಾದಚಾರಿ ಮಾರ್ಗಗಳನ್ನು ಆಶ್ರಯಿಸುವುದು ಅನಿವಾರ್ಯವಾಗುತ್ತದೆ.

ಇಂತಹ ಜನರ ಮೇಲೆ ಏಕಾಏಕಿ ಬುಲ್ಡೋಜರ್ ಚಲಾಯಿಸುವುದು ಸಮಸ್ಯೆಗೆ ಪರಿಹಾರವಲ್ಲ. ಒಂದು ಪ್ರಜಾಪ್ರಭುತ್ವ ಸರ್ಕಾರದ ಕರ್ತವ್ಯ ಎಂದರೆ ಮೊದಲು ಪರ್ಯಾಯ ವ್ಯವಸ್ಥೆ ಕಲ್ಪಿಸುವುದು. ಸಾರ್ವಜನಿಕ ಹಿತಾಸಕ್ತಿಗಾಗಿ ತೆರವು ಅಗತ್ಯವಿದ್ದರೆ, ಪುನರ್ವಸತಿ, ಪರ್ಯಾಯ ವ್ಯಾಪಾರ ಸ್ಥಳ, ಆರ್ಥಿಕ ನೆರವು. ಇವೆಲ್ಲವನ್ನು ಒದಗಿಸಿದ ಬಳಿಕ ಕ್ರಮ ಕೈಗೊಳ್ಳಬೇಕು. ಆದರೆ ಈಗ ಕಾಣುತ್ತಿರುವುದು “ಮೊದಲು ಧ್ವಂಸ, ನಂತರ ಮೌನ” ಎಂಬ ಆಡಳಿತ ಶೈಲಿ.

ಆದರೆ ಈ ಪರಿಸ್ಥಿತಿಗೆ ತೃಣಮೂಲ ಕಾಂಗ್ರೆಸ್‌ನ ಕೊಡುಗೆಯೂ ದೊಡ್ಡದಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿಯೂ ಸುಲಿಗೆ, ಸ್ಥಳೀಯ ದಬ್ಬಾಳಿಕೆ, ರಾಜಕೀಯ ಹಿಂಸಾಚಾರ, ಪಕ್ಷಾಧಾರಿತ ನಿಯಂತ್ರಣ ಹಾಗೂ ಅನೌಪಚಾರಿಕ ವಲಯದ ಮೇಲಿನ ಒತ್ತಡಗಳ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಅನೇಕ ಸಣ್ಣ ವ್ಯಾಪಾರಿಗಳು, ಹಾಕರ್‌ಗಳು ಮತ್ತು ಸಾಮಾನ್ಯ ಜನರು ಸ್ಥಳೀಯ ರಾಜಕೀಯ ಜಾಲದ ಒತ್ತಡದ ನಡುವೆ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂಬ ಆರೋಪಗಳೂ ಇದ್ದವು. ಈ ಅಸಮಾಧಾನವೇ ಬಿಜೆಪಿ ಬೆಳವಣಿಗೆಗೆ ಒಂದು ರಾಜಕೀಯ ನೆಲೆಯಾಗಿ ಪರಿಣಮಿಸಿತು.

ಆದರೆ ಬದಲಾವಣೆಯ ನಿರೀಕ್ಷೆಯಲ್ಲಿ ಮತಹಾಕಿದ ಬಡ ಜನರಿಗೆ ಈಗ ಮತ್ತೊಂದು ರೀತಿಯ ಭೀತಿ ಎದುರಾಗುತ್ತಿರುವಂತಿದೆ. “ಡಬಲ್ ಎಂಜಿನ್ ಸರ್ಕಾರ” ಅಭಿವೃದ್ಧಿ ಮತ್ತು ಭದ್ರತೆ ತರುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಆರಂಭದಲ್ಲೇ ಬುಲ್ಡೋಜರ್ ರಾಜಕೀಯ, ಭಯದ ವಾತಾವರಣ ಮತ್ತು ಕಠಿಣ ದಮನಾತ್ಮಕ ಕ್ರಮಗಳು ಸಾಮಾನ್ಯ ಜನರಲ್ಲಿ ಆತಂಕ ಹುಟ್ಟಿಸಿವೆ.

ಈ ಬೆಳವಣಿಗೆಗಳನ್ನು ಪಶ್ಚಿಮ ಬಂಗಾಳದ ರಾಜಕೀಯ ಪರಿವರ್ತನೆಯೊಂದಿಗೆ ನೋಡಲೇಬೇಕು. ದೀರ್ಘಕಾಲ ಎಡಪಕ್ಷಗಳ ಆಡಳಿತದಲ್ಲಿದ್ದ ಈ ರಾಜ್ಯದಲ್ಲಿ ವರ್ಗ ರಾಜಕೀಯ, ಕಾರ್ಮಿಕ ರೈತ ಚಳವಳಿಗಳು ಮತ್ತು ಸಾಮಾಜಿಕ ಸೌಹಾರ್ದತೆಯ ಸಂಸ್ಕೃತಿ ಪ್ರಬಲವಾಗಿತ್ತು. ರಾಜಕೀಯ ಸಂಘರ್ಷಗಳಿದ್ದರೂ ಸಮಾಜವನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಪ್ರಯತ್ನಗಳಿಗೆ ಅಷ್ಟೊಂದು ನೆಲೆ ಸಿಗಲಿಲ್ಲ. ದೊಡ್ಡ ಮಟ್ಟದ ಕೋಮು ಧ್ರುವೀಕರಣದ ರಾಜಕೀಯಕ್ಕೆ ಸಾಮಾಜಿಕ ಪ್ರತಿರೋಧವೂ ಇತ್ತು.

ಆದರೆ ಕಳೆದ ಕೆಲವು ವರ್ಷಗಳಲ್ಲಿ ಧಾರ್ಮಿಕ ಗುರುತುಗಳ ರಾಜಕೀಯ ವೇಗವಾಗಿ ಬೆಳೆದಿದೆ. ರಾಮನವಮಿ ಮೆರವಣಿಗೆಗಳು, ಧಾರ್ಮಿಕ ಘೋಷಣೆಗಳು, ಸಾಮಾಜಿಕ ಜಾಲತಾಣಗಳ ಪ್ರಚೋದನೆ, ಚುನಾವಣಾ ಧ್ರುವೀಕರಣ ಇವೆಲ್ಲ ಸೇರಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಿವೆ. ಸಣ್ಣ ಘಟನೆಗಳೇ ದೊಡ್ಡ ಘರ್ಷಣೆಗೆ ತಿರುಗುತ್ತಿವೆ. ಜನರ ನೈಜ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆ, ಶಿಕ್ಷಣ, ಆರೋಗ್ಯ ಇತ್ಯಾದಿ ಪ್ರಶ್ನೆಗಳಿಂದ ಗಮನ ಬೇರೆಡೆ ತಿರುಗಿಸಲು ಧಾರ್ಮಿಕ ರಾಜಕೀಯ ಬಳಸಲಾಗುತ್ತಿದೆ ಎಂಬ ಆರೋಪಗಳು ಗಟ್ಟಿಯಾಗುತ್ತಿವೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಒಂದು ವಿಡಿಯೋ ಇದೇ ಮನಸ್ಥಿತಿಯ ಮತ್ತೊಂದು ಮುಖವನ್ನು ತೋರಿಸಿತು. ಬೀದಿ ಬದಿಯಲ್ಲಿ ಆಹಾರ ಮಾರುತ್ತಿದ್ದ ಬಡ ವ್ಯಾಪಾರಿಯ ಅಂಗಡಿಯನ್ನು ಕೆಲವರು ಧ್ವಂಸಗೊಳಿಸಿದರು. ಪೇಪರ್ ಪ್ಲೇಟ್ ಮೇಲೆ ಇದ್ದ ಚಿತ್ರದ ಹೆಸರಿನಲ್ಲಿ ಆತನ ಜೀವನೋಪಾಯವನ್ನೇ ನಾಶಮಾಡಲಾಯಿತು. ದೊಡ್ಡ ಕಂಪನಿಗಳ ವಿರುದ್ಧ ಧ್ವನಿ ಎತ್ತಲು ಹೆದರುವವರು, ಕಾನೂನು ಉಲ್ಲಂಘಿಸುವ ದೊಡ್ಡವರ ವಿರುದ್ಧ ಪ್ರಶ್ನಿಸಲು ಧೈರ್ಯವಿಲ್ಲದವರು ತಮ್ಮ ಕೋಪವನ್ನು ಬಡವರ ಮೇಲೆ ಹೊರಿಸುತ್ತಿದ್ದಾರೆ.

ಇದು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಲ್ಲ; ಇದು ಮಾನವೀಯತೆಯ ಸಂಕಷ್ಟ. ಒಬ್ಬ ಬಡ ವ್ಯಾಪಾರಿಯ ಅಂಗಡಿ ಧ್ವಂಸವಾದರೆ ಕೇವಲ ಕೆಲವು ಕುರ್ಚಿಗಳು ಅಥವಾ ಪಾತ್ರೆಗಳು ನಾಶವಾಗುವುದಿಲ್ಲ ಒಂದು ಕುಟುಂಬದ ಭವಿಷ್ಯ ಕುಸಿಯುತ್ತದೆ. ಮಕ್ಕಳ ಶಿಕ್ಷಣ, ಮನೆಯ ಬಾಡಿಗೆ, ಸಾಲ, ದಿನದ ಊಟ ಎಲ್ಲವೂ ಪ್ರಶ್ನಾರ್ಥಕವಾಗುತ್ತದೆ.

ಇಂದು ಅಗತ್ಯವಿರುವುದು ಭಯದ ರಾಜಕೀಯದ ವಿರುದ್ಧ ಮಾನವೀಯ ರಾಜಕೀಯ. ಬಡವರನ್ನು ಅಪರಾಧಿಗಳಂತೆ ಕಾಣುವ ಆಡಳಿತ ಮನೋಭಾವ ಪ್ರಶ್ನೆಯಾಗಬೇಕು. ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಮೊದಲು ಅವರಿಗೆ ಬದುಕಿನ ಹಕ್ಕು ಇದೆ ಎಂಬುದನ್ನು ಸರ್ಕಾರ ಒಪ್ಪಬೇಕು. ಚುನಾಯಿತ ಸರ್ಕಾರವು ರಾಜನಲ್ಲ; ಅದು ಜನರ ಪ್ರತಿನಿಧಿ. ಜನರ ಹೊಟ್ಟೆಗೆ ಹೊಡೆಯುವುದು ಸರ್ಕಾರದ ಕೆಲಸವಲ್ಲ.

ಸಮಾಜದ ನಿಜವಾದ ಶಕ್ತಿ ದುರ್ಬಲರನ್ನು ರಕ್ಷಿಸುವುದರಲ್ಲಿ ಇದೆ. ಧರ್ಮ, ಜಾತಿ, ಭಾಷೆ ಎಂಬ ಹೆಸರಿನಲ್ಲಿ ಬಡವರ ಬದುಕನ್ನು ಧ್ವಂಸಗೊಳಿಸುವ ರಾಜಕೀಯ ಕೊನೆಗೆ ಸಮಾಜದ ಮಾನವೀಯತೆಯನ್ನೇ ನಾಶಮಾಡುತ್ತದೆ. ಬುಲ್ಡೋಜರ್‌ಗಳಿಂದ ರಸ್ತೆಗಳನ್ನು ತೆರವುಗೊಳಿಸಬಹುದು; ಆದರೆ ಜನರ ಮನಸ್ಸಿನ ಭಯ ಮತ್ತು ಅಸಮಾಧಾನವನ್ನು ಅಳಿಸಲಾಗುವುದಿಲ್ಲ. ಸರ್ಕಾರಗಳು ಬದಲಾಗುತ್ತವೆ, ಘೋಷಣೆಗಳು ಬದಲಾಗುತ್ತವೆ, ಆದರೆ ಬಡವರ ಬದುಕಿನ ಸಂಕಷ್ಟ ಮಾತ್ರ ಹಾಗೆಯೇ ಉಳಿಯುತ್ತದೆ. ಇಂದು ಬುಲ್ಡೋಜರ್‌ಗಳ ಗುರಿಯಾಗಿರುವುದು ಕೇವಲ ಅಂಗಡಿಗಳು ಅಥವಾ ಪಾದಚಾರಿ ಮಾರ್ಗಗಳಲ್ಲ; ಅನೌಪಚಾರಿಕ ವಲಯದಲ್ಲಿ ದುಡಿಯುವ ಲಕ್ಷಾಂತರ ಕುಟುಂಬಗಳ ಬದುಕೇ ಆಗಿದೆ. ಪ್ರಜಾಪ್ರಭುತ್ವದ ನಿಜವಾದ ಮೌಲ್ಯ ಅಳೆಯುವುದು ಅಧಿಕಾರದ ಬಲದಿಂದಲ್ಲ, ದುರ್ಬಲರನ್ನು ಹೇಗೆ ರಕ್ಷಿಸಲಾಗುತ್ತದೆ ಎಂಬುದರಿಂದ. ಭಯ, ದ್ವೇಷ ಮತ್ತು ದಮನದ ರಾಜಕೀಯ ಎಷ್ಟೇ ಬಲಿಷ್ಠವಾಗಿ ಕಾಣಿಸಿಕೊಂಡರೂ, ಕೊನೆಯಲ್ಲಿ ಸಮಾಜವನ್ನು ಉಳಿಸುವುದು ಮಾನವೀಯತೆ, ಸಾಮಾಜಿಕ ನ್ಯಾಯ ಮತ್ತು ಜನರ ಬದುಕಿನ ಹಕ್ಕನ್ನು ಕಾಪಾಡುವ ರಾಜಕೀಯವೇ ಆಗಿದೆ.

ಇದನ್ನೂ ನೋಡಿ : ಚುನಾವಣಾ ಫಲಿತಾಂಶ : ಹೆಚ್ಚಾದ ಹಿಂಸಾಚಾರ Janashakthi Media

 

 

Donate Janashakthi Media

Leave a Reply

Your email address will not be published. Required fields are marked *