ಹಿಮಾಚಲ ಪ್ರದೇಶ: ರಾಜ್ಯದ ಉನಾ ಜಿಲ್ಲೆಯಲ್ಲಿ ತೋಟದಿಂದ ಪೇರಳೆ ಹಣ್ಣು ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿ, 4 ವರ್ಷದ ಬಾಲಕಿಯನ್ನು ಕಟ್ಟಿಹಾಕಿ ಹಿಂಸೆ ಮಾಡಿದ್ದ ನಿವೃತ್ತ ಸೇನಾ ಸಿಬ್ಬಂದಿಯೊಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ. ಹಿಂಸೆ
ಪುಟ್ಟ ಬಾಲಕಿಯ ಮೇಲೆ ನಿವೃತ್ತ ಸೇನಾ ಸಿಬ್ಬಂದಿ ಹಲ್ಲೆ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಕೃತ್ಯಕ್ಕೆ ಎಲ್ಲೆಡೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ವಿಡಿಯೊದಲ್ಲಿ ಬಾಲಕಿ ಅಳುತ್ತಾ ‘ಅಂಕಲ್, ದಯವಿಟ್ಟು ನನ್ನನ್ನು ಕಾಪಾಡಿ’ ಎಂದು ಬೇಡಿಕೊಂಡಿದ್ದಾಳೆ.
ವರದಿಗಳ ಪ್ರಕಾರ, ಬಾಲಕಿಯು ನಿವೃತ್ತ ಸೇನಾ ಸಿಬ್ಬಂದಿಯ ತೋಟದಲ್ಲಿದ್ದ ಪೇರಳೆ ಹಣ್ಣು ಕಿತ್ತಿದ್ದಾಳೆ, ಇದನ್ನು ನೋಡಿದ ಅವರು ಬಾಲಕಿಯನ್ನು ಬಲವಂತವಾಗಿ ಹಿಡಿದು, ಆಕೆಯ ಕೈಗಳನ್ನು ಹಗ್ಗದಿಂದ ಕಟ್ಟಿ, ಥಳಿಸಿದ್ದಾರೆ.
ಇದನ್ನೂ ಓದಿ: ಎಲ್‌ಪಿಜಿ ಹಾಹಾಕಾರ: ಸಂಕಷ್ಟದಲ್ಲಿ ಸಿಲುಕಿರುವ ಆಟೋಚಾಲಕರು
ಈ ಘಟನೆ ಬಳಿಕ ಸ್ಥಳೀಯ ನಿವಾಸಿ ರೋಹಿತ್ ಜೈಸ್ವಾಲ್ ಎಂಬುವವರು ಮನೆಯ ಪಕ್ಕ ನಡೆದುಕೊಂಡು ಹೋಗುವಾಗ ಮಗು ಅಳುತ್ತಿರುವ ಶಬ್ಧವನ್ನು ಆಲಿಸಿದ್ದಾರೆ. ಏನೋ ಆಗಿರಬಹುದೆಂದು ತಿಳಿದು ನಿವೃತ್ತ ಸೇನಾ ಸಿಬ್ಬಂದಿಯ ಮನೆಗೆ ಹೋದಾಗ ಅಲ್ಲಿ ಮಗುವಿನ ಗಂಭೀರ ಸ್ಥಿತಿಯನ್ನು ನೋಡಿದ್ದಾರೆ. ತಕ್ಷಣ ಪೊಲೀಸರಿಗೆ ಕರೆ ಮಾಡಿ, ವಿಡಿಯೊ ಚಿತ್ರೀಕರಣ ಮಾಡಿದ್ದಾರೆ.
ಬಳಿಕ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಮಗುವನ್ನು ಬಿಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಡಿಯೊ ನೋಡಿ, ನಿವೃತ್ತ ಸೇನಾ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಊನಾದ ಠಾಣಾಧಿಕಾರಿಯೊಬ್ಬರು ಹೇಳಿದ್ದಾರೆ.
ಸದ್ಯ, ನಿವೃತ್ತ ಸೇನಾ ಸಿಬ್ಬಂದಿಯು ಘಟನೆಗೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿ, ಗ್ರಾಮಸ್ಥರ ಬಳಿ ಕ್ಷಮೆಯಾಚಿಸಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ‘ಇಂತಹ ಕೃತ್ಯ ಮಾಡಿರುವವರ ಮೀಸೆ ಕತ್ತರಿಸಿ’ ಎಂದಿದ್ದಾರೆ.
ಮತ್ತೊಬ್ಬರು ‘ಒಂದು ಹಣ್ಣಿಗಾಗಿ ಮಗುವಿಗೆ ಈ ರೀತಿಯ ಶಿಕ್ಷೆ ಕೊಡುವುದು ಸರಿಯೇ?, ಇವರಿಗೆ ನ್ಯಾಯಾಂಗದ ಪ್ರಜ್ಞೆ ಇದೆಯೇ!’ ಎಂದು ಕಿಡಿಕಾರಿದ್ದಾರೆ.
ಇದನ್ನೂ ನೋಡಿ: ಕರ್ನಾಟಕದ ಮತದಾರರ ಪಟ್ಟಿ ಪರಿಶೀಲನೆ – ಮ್ಯಾಪಿಂಗ್ ಆಗದ ಮತದಾರರು ಎಷ್ಟು? Janashakthi Media
