ಪಶ್ಚಿಮ ಬಂಗಾಳ: ಸುಮಾರು 91 ಲಕ್ಷ ಮತದಾರರ ಹೆಸರುಗಳನ್ನು ರಾಜ್ಯದಲ್ಲಿ ನಡೆದ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಕೆಯ ನಂತರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ತಿಳಿಸಿವೆ. ಬಂಗಾಳ
ಪರಿಷ್ಕರಣೆ ಪ್ರಕ್ರಿಯೆಯ ನಂತರ ರಾಜ್ಯದ ಅಂತಿಮ ಮತದಾರರ ಸಂಖ್ಯೆ ಎಷ್ಟು ಎಂಬುದನ್ನು ಚುನಾವಣಾ ಸಮಿತಿ ಇನ್ನಷ್ಟೆ ಅಧಿಕೃತವಾಗಿ ಘೋಷಿಸಬೇಕಿದೆ.
ಫೆಬ್ರವರಿ 28 ರಂದು ಪ್ರಕಟವಾದ ಆರಂಭಿಕ ಅಂಕಿಅಂಶಗಳ ಪ್ರಕಾರ, ನವೆಂಬರ್ನಿಂದ ಆರಂಭವಾದ ಪರಿಷ್ಕರಣೆಯಲ್ಲಿ ಶೇ. 8.3 ರಷ್ಟು ಅಂದರೆ 63.66 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿತ್ತು. ಇದರಿಂದ ಮತದಾರರ ಸಂಖ್ಯೆ 7.66 ಕೋಟಿಯಿಂದ 7.04 ಕೋಟಿಗೆ ಇಳಿಕೆಯಾಗಿತ್ತು. ಇದರಲ್ಲಿ 60.06 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳು ‘ನ್ಯಾಯಾಂಗ ಪರಿಶೀಲನೆ’ಯಲ್ಲಿದ್ದವು.
ಇದನ್ನೂ ಓದಿ: ಬೆಂಗಳೂರು| ಎಲ್ಪಿಜಿ ಬಿಕ್ಕಟ್ಟು; ಆಟೋ ಚಾಲಕರ ಸಂಕಷ್ಟ ಹೆಚ್ಚಳ
ನ್ಯಾಯಾಂಗ ಅಧಿಕಾರಿಗಳ ನಂತರದ ಪರಿಶೀಲನೆಯಲ್ಲಿ, ವಿವಾದಿತ ಹೆಸರುಗಳ ಪೈಕಿ 27.16 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಯಿತು. ಉಳಿದ ಸುಮಾರು 32.68 ಲಕ್ಷ ಹೆಸರುಗಳನ್ನು ಅಂತಿಮ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ.
ಒಟ್ಟಾರೆಯಾಗಿ, ಈ ಎಸ್ಐಆರ್ ಪ್ರಕ್ರಿಯೆಯಲ್ಲಿ ಇದುವರೆಗೆ ಸರಿಸುಮಾರು 90.83 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಈ ಪರಿಷ್ಕರಣೆಯನ್ನು ಹಂತ ಹಂತವಾಗಿ ಮತ್ತು ಪಾರದರ್ಶಕವಾಗಿ ನಡೆಸಲಾಗಿದೆ ಹಾಗೂ ಹೊಣೆಗಾರಿಕೆಗಾಗಿ ಜಿಲ್ಲಾವಾರು ಅಂಕಿಅಂಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಪರಿಶೀಲನೆಯಲ್ಲಿದ್ದ 60.06 ಲಕ್ಷ ಪ್ರಕರಣಗಳ ಪೈಕಿ 59.84 ಲಕ್ಷ ಪ್ರಕರಣಗಳ ಮಾಹಿತಿಯನ್ನು ಪ್ರಕಟಿಸಲಾಗಿದೆ. ಬಾಕಿ ಉಳಿದಿರುವ 22,163 ಪ್ರಕರಣಗಳ ಪ್ರಕ್ರಿಯೆ ಮುಗಿದಿದ್ದು, ಇ-ಸಹಿ (e-signatures) ಬಾಕಿ ಇದೆ. ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅಂಕಿಅಂಶಗಳಲ್ಲಿ ಸ್ವಲ್ಪ ಬದಲಾವಣೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತಿಮ ಪೂರಕ ಪಟ್ಟಿ ಬಿಡುಗಡೆಯಾದ ನಂತರ, ನಿಯಮದಂತೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ರಾಜ್ಯದ ಒಟ್ಟು 294 ಕ್ಷೇತ್ರಗಳ ಪೈಕಿ 152 ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಮತದಾನ ನಡೆಯಲಿದೆ. ಉಳಿದ 142 ಕ್ಷೇತ್ರಗಳಿಗೆ ಏಪ್ರಿಲ್ 29 ರಂದು ಚುನಾವಣೆ ನಡೆಯಲಿದ್ದು, ಎರಡನೇ ಹಂತದ ಪಟ್ಟಿಯನ್ನು ಏಪ್ರಿಲ್ 9 ರಂದು ಅಂತಿಮಗೊಳಿಸಲಾಗುತ್ತದೆ.
ಈ ಹಂತದಲ್ಲಿ ಮತದಾರರ ಪಟ್ಟಿಗೆ ಯಾವುದೇ ಹೊಸ ಸೇರ್ಪಡೆ ಮಾಡಲಾಗುವುದಿಲ್ಲ ಎಂದು ಚುನಾವಣಾ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಏಪ್ರಿಲ್ 13 ರಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದ್ದು, ನ್ಯಾಯಾಲಯದ ನಿರ್ದೇಶನ ಅಥವಾ ಕಾನೂನು ನಿಬಂಧನೆಗಳ ಆಧಾರದ ಮೇಲೆ ಮುಂದಿನ ಬದಲಾವಣೆಗಳು ನಡೆಯಲಿವೆ.
ಇದನ್ನೂ ನೋಡಿ: 1 ಲಕ್ಷ ಶಿಕ್ಷಕರು ಜನಗಣತಿಗೆ: ಶಿಕ್ಷಣ ವ್ಯವಸ್ಥೆಗೆ ದೊಡ್ಡ ಹೊಡೆತ? Janashakthi Media
