ವಸಂತರಾಜ ಎನ್.ಕೆ
ಯುರೋ ಕೂಟದ ‘ಯುರೋಪಿನ ಮರು-ಶಸ್ತ್ರೀಕರಣ ಯೋಜನೆ’ ಮತ್ತು ಜರ್ಮನಿಯ ಮಿಲಿಟರೀಕರಣ ಮಾಡುವ ಎರಡು ಹೊಸ ಕಾನೂನುಗಳು – ಅತಂಕಕಾರಿ ಬೆಳವಣಿಗೆಗಳು. ಇದು ಜಾಗತಿಕ ಶಾಂತಿಗೆ ಗಂಭೀರ ಅಪಾಯ ಒಡ್ಡುವಂತಹ ಯುರೋಪಿನ ಮರು-ಮಿಲಿಟರೀಕರಣದತ್ತ ಸಾಗುತ್ತಿರುವಂತೆ ಕಾಣುತ್ತದೆ. ಇದಕ್ಕೆ ಕಾರಣ ಉಕ್ರೇನ್ ಯುದ್ಧ ಮತ್ತು ಅದರಲ್ಲಿ ಗೆದ್ದರೆ ಇಡೀ ಯುರೋಪಿನ ಭದ್ರತೆಗೆ ಒಡ್ಡುವ ಅಪಾಯವೆಂದು ಯುರೋಕೂಟದ ನಾಯಕರು ಹೇಳುತ್ತಾರೆ. ಆದರೆ ಯುರೋಪಿನ ಮಿಲಿಟರಿ ಬಲ ರಶ್ಯಾಕ್ಕಿಂತ ಎಲ್ಲಾ ಆಯಾಮಗಳಲ್ಲೂ ಎಷ್ಟೋ ಪಾಲು ಹೆಚ್ಚಿದೆ. ರಶ್ಯಾದ ಭದ್ರತೆಗೆ ಯುರೋ ಮತ್ತು ನಾಟೋ ಕೂಟಗಳು ಒಡ್ಡಿರುವ ಬೆದರಿಕೆ, ಮತ್ತು ಅದಕ್ಕೆ ಅದರ ಸಹಜ ಪ್ರತಿಕ್ರಿಯೆಯಿಂದಾಗಿ ಯುರೋಪಿನಲ್ಲಿ ಇಂದಿನ ಅಸ್ಥಿರತೆಯ ಪರಿಸ್ಥಿತಿ ಉಂಟಾಗಿದೆ. ಈ ವಿದ್ಯಮಾನದ ಮಿಲಿಟರಿ, ರಾಜಕೀಯ ಆಯಾಮವನ್ನು ಭಾಗ-1ರಲ್ಲಿ ನಿರೂಪಿಸಲಾಗಿದೆ. ಯುರೋ ಕೂಟ ಎದುರಿಸುತ್ತಿರುವ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟುಗಳನ್ನು ನಿರ್ವಹಿಸುವಲ್ಲಿ ಅಲ್ಲಿನ ಆಳುವ ವರ್ಗಗಳು ಮಾಡಿರುವ ಪ್ರಮಾದಗಳಿಂದ ಜನತೆಯ ಗಮನ ಬೇರೆಡೆಗೆ ತಿರುಗಿಸುವುದಕ್ಕಾಗಿ ರಶ್ಯಾದ ‘ಭೀತಿಯ ಭೂತ’ ಹರಡಲಾಗುತ್ತಿದೆ. ಭಾಗ-2 ರಲ್ಲಿ ಯುರೋಪಿನ ಈ ಮರು-ಮಿಲಿಟರೀಕರಣದ ನಿಜವಾದ ಕಾರಣ, ಸ್ವರೂಪಗಳನ್ನು ಬಿಚ್ಚಿಡಲಾಗಿದೆ. ಮರು-ಮಿಲಿಟರೀಕರಣ
ಆರ್ಥಿಕ ಬಿಕ್ಕಟ್ಟಿಗೆ ಮಿಲಿಟರಿ ಕೈನೇಶಿಯನ್–ವಾದಿ ಪರಿಹಾರಕ್ಕೆ ಪ್ರಯತ್ನ
ಯುರೋಪಿನ ಉದ್ದಗಲಕ್ಕೂ ಭಾರೀ ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರ, ಅಸಮಾನತೆ, ‘ಮಿತವ್ಯಯ’’ದ ಹೆಸರಲ್ಲಿ ಕಲ್ಯಾಣ ಕ್ರಮಗಳಲ್ಲಿ ಕಡಿತ, ಆರ್ಥಿಕ ಬಿಕ್ಕಟ್ಟು ಜನತೆಯನ್ನು ಬಾಧಿಸುತ್ತಿದ್ದು ಜನತೆ ರೊಚ್ಚಿಗೆದ್ದಿದ್ದಾರೆ. ಇದಕ್ಕೆ ಯುರೋಪಿನ ಹೆಚ್ಚಿನ ದೇಶಗಳನ್ನು ಆಳುತ್ತಿದ್ದ ನಡುಪಂಥೀಯ (ನಡು-ಎಡ, ನಡು-ಬಲ ಸೇರಿದಂತೆ) ಪಕ್ಷಗಳ ಸರಕಾರಗಳು ಕಾರಣವೆಂದು ಜನಕ್ಕೆ ಗೊತ್ತಿದೆ. ಹಾಗಾಗಿ ದಶಕಗಳ ಕಾಲ ಆಳುವ-ವಿರೋಧ ಪಕ್ಷ ಪಾತ್ರವನ್ನು ಪರಸ್ಪರ ವಹಿಸುತ್ತಿದ್ದ ಹೆಚ್ಚಿನ ಪಕ್ಷಗಳು, ಕಳೆದ ಕೆಲವು ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ಭಾರೀ ಪ್ರಮಾಣದಲ್ಲಿ ಬೆಂಬಲ, ಆಧಿಕಾರ ಕಳೆದುಕೊಂಡಿವೆ. ಆದರೆ ಈ ಆಕ್ರೋಶ ಫ್ರಾನ್ಸ್ ಬಿಟ್ಟರೆ, ಹೆಚ್ಚಾಗಿ ಉಗ್ರ-ಬಲಪಂಥೀಯ ಅರೆ-ಫ್ಯಾಸಿಸ್ಟ್ ಪಕ್ಷಗಳನ್ನು ಬಲಗೊಳಿಸಿದೆ. ಜರ್ಮನಿ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ನಡುಪಂಥೀಯ ಪಕ್ಷಗಳೆಲ್ಲ ಸೇರಿ ‘ಮಹಾಕೂಟ’ ರಚಿಸಿ ಸರಕಾರ ರಚಿಸಬೇಕಾಗಿದ್ದು, ಅವೂ ಅಸ್ಥಿರವಾಗಿವೆ. ಉಕ್ರೇನ್ ರಕ್ಷಣೆಗಾಗಿ ‘ತ್ಯಾಗ’ ಮಾಡಬೇಕು, ‘ಮಿತವ್ಯಯ’ ಮಾಡಬೇಕು ಎಂಬ ಆಳುವ ವರ್ಗಗಳ ಪ್ರಚಾರ ಸ್ವಲ್ಪ ಸಮಯ ಕೆಲಸ ಮಾಡಿದೆ. ಉಕ್ರೇನ್ ಯುದ್ಧ 5ನೇ ವರ್ಷಕ್ಕೆ ತಲುಪಲು, ಯುರೋಪಿಯನ್ ನಾಯಕತ್ವ ಇದನ್ನು ನಿರ್ವಹಿಸಿದ ರೀತಿ ಸಹ ಕಾರಣ ಎಂಬುದು ಜನತೆಗೆ ಸ್ಪಷ್ಟವಾಗುತ್ತಿದೆ.
ಹಳೆಯ ತಂತ್ರಗಳು ಕೆಲಸ ಮಾಡದೆ ಹೋಗಬಹುದು ಎಂಬ ಆತಂಕದಿಂದ, ಯುರೋ ಕಮಿಶನ್ ಮತ್ತು ಪ್ರಮುಖ ಯುರೋಪಿಯನ್ ದೇಶಗಳ ಸರಕಾರಗಳು ‘ರಶ್ಯಾ ಉಕ್ರೇನಿನಲ್ಲಿ ಗೆದ್ದರೆ ಯುರೋಪಿನ ಮೇಲೆ ಆಕ್ರಮಣ ಮಾಡುವುದು’ ಎಂಬ ಭೀತಿಯ ಭೂತವನ್ನು ಮುನ್ನೆಲೆಗೆ ತಂದಿವೆ. ಇದನ್ನು ತಡೆಯಲು ‘ಯುರೋಪಿನ ಮರು-ಶಸ್ತ್ರೀಕರಣ’ದ ಯೋಜನೆಯನ್ನು ಮುಂದೊಡ್ಡಿವೆ. 2029-30ರ ಹೊತ್ತಿಗೆ ರಶ್ಯದ ಆಕ್ರಮಣ ಖಚಿತ ಎನ್ನುತ್ತಿವೆ. ಹಾಗಾಗಿ ರಕ್ಷಣೆಗೆ ಭಾರೀ ಹಣ ಹೂಡಿಕೆ ಮಾಡಬೇಕು. ಯುರೋಪಿನ ಮೌಲ್ಯಗಳಾದ ಪ್ರಜಾಪ್ರಭುತ್ವ, ಸ್ವಾತಂತ್ರ್ಯಗಳ ರಕ್ಷಣೆಗಾಗಿ, ‘ತ್ಯಾಗ’ ಮಾಡಬೇಕು, ‘ಮಿತವ್ಯಯ’ ಮಾಡಬೇಕು, ಬೆಲೆಏರಿಕೆ, ಹಣದುಬ್ಬರ, ನಿರುದ್ಯೋಗ ಸಹಿಸಿಕೊಳ್ಳಬೇಕು ಎಂದೆಲ್ಲ ನಂಬಿಸಲು ಆರಂಭಿಸಿವೆ ರಾಷ್ಟ್ರಭಕ್ತಿಯ ಉನ್ಮಾದ, ರಶ್ಯಾದ ವಿರುದ್ಧ ದ್ವೇಷವನ್ನು ಢಾಳಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ‘ಯುರೋಪಿನ ಮರು-ಶಸ್ತ್ರೀಕರಣ’ದ ರಾಜಕೀಯ ಆಯಾಮ.

ಬಂಡವಾಳಶಾಹಿ ವ್ಯವಸ್ಥೆಯ ಚಕ್ರ
ಮರು-ಶಸ್ತ್ರೀಕರಣ’ ಯೋಜನೆಯ ಆರ್ಥಿಕ ಆಯಾಮ
ಯುರೋಪಿನ ಮರು-ಶಸ್ತ್ರೀಕರಣ’ದ ಯೋಜನೆಗೆ ಒಂದು ಆರ್ಥಿಕ ಆಯಾಮವೂ ಇದೆ. ಯುರೋಪಿನ ಕೈಗಾರಿಕೀಕರಣಕ್ಕೆ ಉತ್ತೇಜನ ನೀಡಲು, ಆರ್ಥಿಕ ಸ್ಥಗಿತತೆಯನ್ನು ಹೋಗಲಾಡಿಸುವ ಭಾರೀ ಲಾಭದಾಯಕ ಹೂಡಿಕೆ ಮಾಡಲು, ‘ಮರು-ಶಸ್ತ್ರೀಕರಣ’ ಉತ್ತಮ ಪರಿಹಾರ. ಇದನ್ನು ಮಿಲಿಟರಿ ಕೈನೇಶೀಯನ್-ವಾದಿ ಪರಿಹಾರ ಎನ್ನುತ್ತಾರೆ. ಬಂಡವಾಳಶಾಹಿ ವ್ಯವಸ್ಥೆ ಅದರಷ್ಟಕ್ಕೆ ಬಿಟ್ಟರೆ – ವಿಸ್ತರಣೆ, ಉತ್ಕರ್ಷ, ಹಿಂಜರಿತ, ಕುಸಿತ, ಮತ್ತೆ ವಿಸ್ತರಣೆ ಇತ್ಯಾದಿ – ಗಳ ಹಂತಗಳ ಚಕ್ರದಲ್ಲಿ ಸುತ್ತುತ್ತಿರುತ್ತದೆ. ಇದಕ್ಕೆ ಪರಿಹಾರ ಹಿಂಜರಿತದ ಹಂತಕ್ಕೆ ಹೋಗುವ ಲಕ್ಷಣ ಕಂಡು ಬಂದಾಗ, ಅಂದರೆ ಒಟ್ಟು ಹೂಡಿಕೆ ಮತ್ತು ಬಳಕೆ ಕಡಿಮೆಯಾದಾಗ, ಸರಕಾರ ಸಾರ್ವಜನಿಕ ಹೂಡಿಕೆ ಮೂಲಕ ಮಧ್ಯಪ್ರವೇಶ ಮಾಡಿ ಉದ್ಯೋಗಗಳನ್ನು ಹೆಚ್ಚಿಸಿ, ಆ ಮೂಲಕ ಸಾರ್ವಜನಿಕ ಸಂಪನ್ಮೂಲ ಸೃಷ್ಟಿಸುವುದಲ್ಲದೆ, ಜನರ ಆದಾಯ ಹೆಚ್ಚಿಸಿ ಸರಕು-ಸೇವೆಗಳಿಗೆ ಬೇಡಿಕೆ ಹೆಚ್ಚಿಸಿ ಆರ್ಥಿಕ ಪುನಶ್ಚೇತನ ಸಾಧಿಸಬಹುದು. ಆ ಮೂಲಕ ಬಂಡವಾಳಶಾಹಿ ವ್ಯವಸ್ಥೆ ಬಿಕ್ಕಟ್ಟಿಗೆ ಒಳಗಾಗುವುದನ್ನು ತಪ್ಪಿಸಬಹುದು. ಇದು ಕೈನೇಶೀಯನ್-ವಾದಿ ಪರಿಹಾರದ ಸ್ಥೂಲ ವಿವರಣೆ. ಮರು-ಮಿಲಿಟರೀಕರಣ

ಬಂಡವಾಳಶಾಹಿ ವ್ಯವಸ್ಥೆಗೆ ಕೈನೇಶಿಯನ್ ಪರಿಹಾರ
1930ರ ಸಾರ್ವತ್ತಿಕ ಬಂಡವಾಳಶಾಹಿ ಬಿಕ್ಕಟ್ಟಿನ ಸಂದರ್ಭದಲ್ಲಿ ಇದನ್ನು ಪ್ರಯೋಗಿಸಲಾಯಿತು. ಯು.ಎಸ್ ಸಾರ್ವಜನಿಕ ಹೂಡಿಕೆ ಮೂಲಕ ಬೃಹತ್ ಆಣೆಕಟ್ಟು ಮುಂತಾದ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಿ ಇಂತಹ ಪರಿಹಾರಕ್ಕೆ ಪ್ರಯತ್ನಿಸಿತು. ಅದು ‘ನ್ಯೂ ಡೀಲ್’ ಎಂದು ಪ್ರಸಿದ್ಧವಾಗಿದೆ. ಜರ್ಮನ್ ನಾಜೀ ಸರಕಾರವೂ ಇದನ್ನು ಪ್ರಯೋಗಿಸಿತು. ಆದರೆ ವ್ಯತ್ಯಾಸವೆಂದರೆ ಸಾರ್ವಜನಿಕ ಹೂಡಿಕೆ ಮಾಡಿದ್ದು ಭಾರೀ ಶಸ್ತ್ರಾಸ್ತ್ರಗಳ ತಯಾರಿಕೆಯ ಕೈಗಾರಿಕೆಯಲ್ಲಿ. ಇಂತಹ ಕ್ರಮಗಳನ್ನು ‘ಮಿಲಿಟರಿ ಕೈನೇಶೀಯನ್-ವಾದ’ ಎನ್ನುತ್ತಾರೆ. ಯು.ಎಸ್ ಸಹ ಇದನ್ನೇ 50-60ರ ದಶಕಗಳಲ್ಲಿ ಬಳಸಿತು ಎನ್ನಲಾಗಿದೆ. ಯುರೋಪಿಯನ್ ಕಮಿಶನ್ ಮತ್ತು ಯುರೋಪಿನ ಪ್ರಮುಖ ಸರಕಾರಗಳು ಮುನ್ನೆಲೆಗೆ ತರುತ್ತಿರುವ ಯುರೋಪಿನ ಮರು-ಶಸ್ತ್ರೀಕರಣ’ದ ಯೋಜನೆ ಈ ರೀತಿಯದ್ದು. ರಶ್ಯ ಆಕ್ರಮಣದ ಭೀತಿಯ ಭೂತ ಅದಕ್ಕೆ ರಾಜಕೀಯ ಹೊದಿಕೆಯಷ್ಟೇ. ಅಂದರೆ ಯುರೋಫಿಯನ್ ನಾಯಕರು 1930ರ ಯುದ್ಧಕೋರ ಯುರೋಪನ್ನು ಮರುಕಳಿಸಲು ಯತ್ನಿಸುತ್ತಿದ್ದಾರೆ. ಈ ಲೇಖನದ ಮೊದಲಲ್ಲಿ ಹೇಳಿದ ಮೂರು ಬೆಳವಣಿಗೆಗಳು ಇದರ ಭಾಗ. ಕಳೆದ ವರ್ಷ (2025) ಯುರೋಪಿನ ಮಿಲಿಟರಿ ವೆಚ್ಚ 559 ಶತಕೋಟಿ ಡಾಲರ್ ಆಗಿದ್ದು ಇದು ಜಾಗತಿಕ ಮಿಲಿಟರಿ ವೆಚ್ಚದ 19.35%. 2024ಕ್ಕೆ ಹೋಲಿಸಿದರೆ ಇದು 20% ಏರಿಕೆ. ರಶ್ಯದ ಮಿಲಿಟರಿ ವೆಚ್ಚ 190 ಶತಕೋಟಿ ಡಾಲರ್ (ಜಾಗತಿಕ ವೆಚ್ಚದ 7%), 2024ಕ್ಕೆ ಹೋಲಿಸಿದರೆ 5.9% ಏರಿಕೆ.
ಇದನ್ನೂ ಓದಿ : ಯುರೋಪಿನ ಮರು-ಮಿಲಿಟರೀಕರಣ : ಜಾಗತಿಕ ಶಾಂತಿಗೆ ಹೊಸ ಅಪಾಯ – ಭಾಗ 1
ನವ-ಉದಾರವಾದಿ ಯುಗದಲ್ಲಿ ಮಿಲಿಟರಿ ಕೈನೇಶಿಯನ್ ಪರಿಹಾರ ಕಾರ್ಯಸಾಧ್ಯವಲ್ಲ!
ಯುರೋಪಿನ ಪ್ರಮುಖವಾಗಿ ಜರ್ಮನಿ, ಫ್ರಾನ್ಸ್, ಹಾಲಂಡ್, ಸ್ವೀಡನ್ ನ ಮಿಲಿಟರಿ ತಯಾರಿಕಾ ಉದ್ಯಮ ಮತ್ತು ಶಸ್ತ್ರಾಸ್ತ್ರ ಲಾಬಿ ಇದರ ಹಿಂದೆ ಕೆಲಸ ಮಾಡಿದೆ. ಯಾಕೆಂದರೆ 800 ಶತಕೋಟಿ ಯುರೋಗಳ ‘ಯುರೋಪಿನ ಮರು-ಶಸ್ತ್ರೀಕರಣ ಯೋಜನೆ’ ಮತ್ತು 500 ಶತಕೋಟಿ ಯುರೋಗಳ ಜರ್ಮನಿಯ ರಕ್ಷಣಾ ಹೂಡಿಕೆ ಘೋಷಣೆಯಾಗುತ್ತಿದ್ದಂತೆ ಜರ್ಮನಿಯ ಪ್ರಮುಖ ರಕ್ಷಣಾ ಉತ್ಪಾದನಾ ಕಂಫನಿಗಳಾದ ರೈನ್ ಮೆಟಲ್ ಮತ್ತು ಲಿಯನಾರ್ಡೊ ಗಳ ಶೇರು ಬೆಲೆಗಳಲ್ಲಿ ಭಾರೀ ಜಿಗಿತ ಕಂಡು ಬಂತು. ರೈನ್ ಮೆಟಲ್ ಮಾರುಕಟ್ಟೆ ಮೌಲ್ಯ ಮೂರು ಪಟ್ಟು ಆಗಿದ್ದು, ಅದು ಇದುವರೆಗೆ ಮಾರುಕಟ್ಟೆ ಮೌಲ್ಯದಲ್ಲಿ ಅತಿ ದೊಡ್ಡ ಕಂಪನಿಯಾಗಿದ್ದ ಕಾರು ತಯಾರಕ ಫೋಕ್ಸ್ ವಾಗನ್ ಮೌಲ್ಯವನ್ನು ಮೀರಿಸಿದೆ. ಕಾರು ತಯಾರಿಕೆಯನ್ನು ನಿಲ್ಲಿಸಿ ಫೋಕ್ಸ್ ವಾಗನ್ ಟ್ಯಾಂಕ್ ತಯಾರಿಕೆಯಲ್ಲಿ ತೊಡಗಲು ನಿರ್ಧರಿಸಿದೆ. 1930ರ ದಶಕದಲ್ಲೂ ಇದು ಟ್ಯಾಂಕ್ ತಯಾರಿಕೆಯಲ್ಲಿ ತೊಡಗಿತ್ತು.
ಮರು-ಮಿಲಿಟರೀಕರಣದಲ್ಲಿ ಈ ಭಾರೀ ಹೂಡಿಕೆ ಯುರೋಪಿನ ಭದ್ರತೆ ಹೆಚ್ಚಿಸುವುದೇ? ಯು.ಎಸ್ ಮೇಲಿನ ಅವಲಂಬನೆ ಕಡಿಮೆ ಮಾಡುವುದೇ? ಮಿಲಿಟರಿ ಕೈನೇಶಿಯನ್ ಪರಿಹಾರ ಕೊಡುವುದೆ? ಈಗ ಯುರೋಪ್ ರಕ್ಷಣಾ ಸಾಮಗ್ರಿಗಳ ಉತ್ಪಾದನೆ, ಆಮದು, ರಫ್ತುಗಳ ಮಟ್ಟ ಇತ್ಯಾದಿ ಬಹುಪಾಲು ರಾಷ್ಟ್ರೀಯವಾಗಿ ನಿರ್ಣಯವಾಗುತ್ತವೆ. ಅದರಲ್ಲೂ ಫ್ರಾನ್ಸ್ ಬಿಟ್ಟರೆ ಹೆಚ್ಚಿನ ದೇಶಗಳಲ್ಲಿ ರಕ್ಷಣಾ ಉದ್ಯಮ ಖಾಸಗಿ ಕ್ಷೇತ್ರದಲ್ಲಿದೆ. ಇದರಲ್ಲಿ ದೊಡ್ಡ ಪಾಲು (80-95%) ಯು.ಎಸ್, ದ,ಕೊರಿಯ, ಇಸ್ರೇಲ್ ಗಳಿಂದ ಆಮದಾಗುತ್ತದೆ. ಕಳೆದ 5 ವರ್ಷದಲ್ಲಿ ದೊಡ್ಡ ಯುರೋಪಿಯನ್ ರಕ್ಷಣಾ ಉತ್ಪಾದನಾ ಕಂಪನಿಗಳ ವಹಿವಾಟು 9.8% ನಷ್ಟು ಏರಿದೆ. ಆದರೆ ಅವುಗಳ ರಫ್ತು ವಹಿವಾಟು ಹತ್ತು ಪಟ್ಟಾಗಿದೆ. ಅಂದರೆ ಯುರೋಪಿನಲ್ಲಿ ರಕ್ಷಣಾ ಉಪಕರಣಗಳ ಖರೀದಿಯಲ್ಲಿ ಹೆಚ್ಚಿನ ಹೂಡಿಕೆ ಯು.ಎಸ್ ರಕ್ಷಣಾ ಉತ್ಪಾದನಾ ಕಂಪನಿಗಳಿಗೆ ವಹಿವಾಟು, ಲಾಭ ಹೆಚ್ಚಿಸುತ್ತಿವೆ. ಮರು-ಮಿಲಿಟರೀಕರಣ

ಯುರೋಪಿಯನ್ ದೇಶಗಳ ರಕ್ಷಣಾ ಉಪಕರಣಗಳಲ್ಲಿ ಆಮದಿನ ಪಾತ್ರ
ರಕ್ಷಣಾ ಉಪಕರಣಗಳ ಉನ್ನತ ತಂತ್ರಜ್ಞಾನಗಳಲ್ಲಿ ಯುರೋಪಿಯನ್ ಕಂಪನಿಗಳು ಯು.ಎಸ್ ಕಂಪನಿಗಳಿಗಿಂತ ಬಹಳ ಹಿಂದೆ ಇವೆ. ಅವು ಈಗ ಸಂಶೋಧನೆಯಲ್ಲಿ ಭಾರೀ ಹೂಡಿಕೆ ಮಾಡಿದರೂ ಅವು 2030ರ ಹೊತ್ತಿಗೆ ರಶ್ಯಾಕ್ಕೆ ಸಾಠಿಯಾಗಬಲ್ಲ, ಯು.ಎಸ್ ಅವಲಂಬನೆ ಕಡಿಮೆ ಮಾಡುವ, ಯುರೋಪಿನ ಮರು-ಮಿಲಿಟರೀಕರಣಕ್ಕೆ ಸಹಾಯಕವಾಗುವ ಸಾಧ್ಯತೆ ಬಹಳ ಕಡಿಮೆ. ರಕ್ಷಣಾ ಉಪಕರಣಗಳ ಆಯ್ಕೆ ಈವರೆಗೆ ಮತ್ತು ಈಗಲೂ ರಾಷ್ಟ್ರೀಯವಾಗಿ ಆಗುವುದರಿಂದ ಯುರೋಪಿನ ವಿವಿಧ ದೇಶಗಳ ಉಪಕರಣಗಳಲ್ಲಿ ಬಹಳ ವೈವಿಧ್ಯತೆಯಿದೆ. ಉದಾಹರಣೆಗೆ ಯುರೋಪಿನಲ್ಲಿ 18 ರೀತಿಯ ಪ್ರಧಾನ ಯುದ್ಧ ಟ್ಯಾಂಕುಗಳು, 20 ವಿಧದ ಮುಖ್ಯ ಫೈಟರ್ ವಿಮಾನಗಳು ಇವೆ. ಇವನ್ನು ಬೇಗನೇ ಒಂದೇ ಮಾದರಿಗೆ ಬದಲಾಯಿಸುವುದು ಪ್ರಾಯೋಗಿಕವಲ್ಲ. ಈ ಕಾರಣಗಳಿಂದ ಯುರೋಪಿನ ರಕ್ಷಣಾ ಉಪಕರಣಗಳಲ್ಲಿ 2030ರ ಹೊತ್ತಿಗೆ ಕನಿಷ್ಟ 40% ಯುರೋಪಿನಲ್ಲೇ ತಯಾರಿಸಿದ್ದು ಇರಬೇಕು ಎಂಬ ಯುರೋ ಕಮಿಶನ್ ನ ಯೋಜನೆ ಕಾರ್ಯಸಾಧ್ಯವಲ್ಲ. ಹೀಗಾಗಿ ಮರು-ಮಿಲಿಟರೀಕರಣ ಯೋಜನೆ ಯು.ಎಸ್ ಕಂಪನಿಗಳ ವಹಿವಾಟು ಹೆಚ್ಚಿಸುತ್ತದೆಯಷ್ಟೇ. ಆ ಮೂಲಕ ಯು.ಎಸ್ ಮಿಲಿಟರಿ-ಕೈಗಾರಿಕಾ ಸಂಕೀರ್ಣವನ್ನು ಮತ್ತಷ್ಟು ಗಟ್ಟಿಗೊಳ್ಳಬಹುದು. ಹೀಗಾಗಿಯೇ ಯುರೋಪಿಯನ್ ದೇಶಗಳ ರಕ್ಷಣಾ ಉಪಕರಣಗಳ ಆಮದು 2015-19 ರ ಅವಧಿಯಲ್ಲಿ ಜಾಗತಿಕ ರಫ್ತಿನ ಸುಮಾರು 6% ಇದ್ದಿದ್ದು, 2020-24ರ ಅವಧಿಯಲ್ಲಿ ದುಪ್ಪಟ್ಟಾಗಿ 11.7% ಕ್ಕೆ ಏರಿದೆ. ಆರ್ಥಿಕ-ಮಿಲಿಟರಿ ಕ್ಷೇತ್ರದಲ್ಲಿ ಯು.ಎಸ್ ಅಧಿಪತ್ಯವನ್ನು ಪ್ರಶ್ನಿಸದೆ, ನವ-ಉದಾರವಾದಿ ನೀತಿಗಳಿಗೆ ಪರ್ಯಾಯ ಹುಡುಕದೆ ಸ್ವತಂತ್ರ ಸ್ವಾಯತ್ತ ಬೆಳವಣಿಗೆ ಸಾಧ್ಯವಿಲ್ಲ.

ರೈನ್ ಮೆಟಲ್ ಕಾರ್ಖಾನೆ
ಆಧುನಿಕ ರಕ್ಷಣಾ ಉತ್ಪನ್ನಗಳ ಉತ್ಪಾದನಾ ವಿಧಾನಗಳೂ ಆಧುನಿಕೀಕರಣಗೊಂಡಿದ್ದು ಈ ಉದ್ಯಮಗಳು ಹಿಂದಿನಷ್ಟು ಮನುಷ್ಯ ಶ್ರಮ ಕೇಂದ್ರಿತವಾಗಿಲ್ಲ. ಹಾಗಾಗಿ ಯುರೋಪಿನ್ ರಕ್ಷಣಾ ಉಪಕರಣ ಉತ್ಪಾದನೆ ಹೆಚ್ಚಳ ಸಹ ಹೆಚ್ಚಿನ ಉದ್ಯೋಗ ಸೃಷ್ಟಿಸುವುದಿಲ್ಲ. ಹಾಗಾಗಿ ಆರ್ಥಿಕಕ್ಕೆ ಕೈನೇಶಿಯನ್-ವಾದಿ ಉತ್ತೇಜನವನ್ನೂ ಕೊಡಲಾರವು. ಅದರಲ್ಲೂ ನವ-ಉದಾರವಾದಿ ಯುಗದ ಮುಖ್ಯ ಲಕ್ಷಣಗಳಾದ ಸರಕಾರದ ಮಧ್ಯಪ್ರವೇಶಕ್ಕೆ ಕಟು-ವಿರೋಧ, ವೇತನ ಕಡಿತ, ಕಲ್ಯಾಣಕ್ರಮಗಳಲ್ಲಿ ಕಡಿತ ಮುಂತಾದ ‘ಮಿತವ್ಯಯ’, ಇಂಧನ ಮತ್ತು ಎಲ್ಲಾ ಜೀವನಾವಶ್ಯಕ ವಸ್ತುಗಳ ಏರಿಕೆ, ಖಾಸಗಿ ಕಂಪನಿಗಳ ‘ಹೈರ್-ಫೈರ್’ ನೀತಿ ಇಟ್ಟುಕೊಂಡು, ಜನತೆಯ ಆದಾಯ, ಬಳಕೆ ಹೆಚ್ಚಿಸಲು ಸಾಧ್ಯವಿಲ್ಲ. ಆರ್ಥಿಕ ಉತ್ತೇಜನ ಕೊಡಲೂ ಸಾಧ್ಯವಿಲ್ಲ. ರಕ್ಷಣಾ ತಯಾರಿಕಾ ಉದ್ಯಮ ಸ್ವಲ್ಪ ಬೆಳವಣಿಗೆ ಸಾಧಿಸಬಹುದು. ಆದರೆ ಆರ್ಥಿಕ ಕುಸಿತಕ್ಕೆ ಪರಿಹಾರವಾಗಲಾರದು.
ಯುರೋಪಿನ ಮಿಲಿಟರೀಕರಣ ನಿಜವಾದ ಉದ್ದೇಶ
ಈ ಮೇಲಿನ ವಿಶ್ಲೇಷಣೆಗಳಿಂದ ಈ ಕೆಲವು ವಿಷಯಗಳು ಸ್ಪಷ್ಟವಾಗುತ್ತವೆ – ಉಕ್ರೇನ್ ಯುದ್ಧದಲ್ಲಿ ಗೆದ್ದರೆ ರಶ್ಯಾ ಇಡೀ ಯುರೋಪಿನ ಮೇಲೆ ಆಕ್ರಮಣ ಮಾಡುವುದು ಎಂಬುದು ನಿಜವಲ್ಲ; ಯುರೋಪ್ ನ ಮಿಲಿಟರಿ ರಶ್ಯಾಕ್ಕಿಂತ ದುರ್ಬಲವಾಗಿದೆ. ಹಾಗಾಗಿ ‘ಮರು-ಮಿಲಿಟರೀಕರಣ’ ದಲ್ಲಿ ಭಾರೀ ಹೂಡಿಕೆಯ ಅಗತ್ಯವಿದೆ. ಯು.ಎಸ್ ನಿಂದ ಸ್ವತಂತ್ರವಾದ ರಕ್ಷಣಾ ವ್ಯವಸ್ಥೆ ರಚಿಸಲಾಗುತ್ತಿದೆ ಎಂಬುದೂ ನಿಜವಲ್ಲ; ಯು.ಎಸ್ ಒತ್ತಡದ ಮೇಲೆ ತನ್ನ ರಕ್ಷಣಾ ವೆಚ್ಚವನ್ನು ಏರಿಸಿದೆ. ಯು.ಎಸ್ ಮಿಲಿಟರಿ-ಕೈಗಾರಿಕಾ ಸಂಕೀರ್ಣವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದೆ; ಯುರೋಪಿನ ಆರ್ಥಿಕ ಸ್ಥಗಿತತೆಯನ್ನು ಹೋಗಲಾಡಿಸಲು ಕೈಗಾರಿಕೆಗೆ ಉತ್ತೇಜನ ನೀಡಲು ಮಿಲಿಟರಿ ಕೈನೇಶಿಯನ್ ಪರಿಹಾರಕ್ಕೆ ಪ್ರಯತ್ನಿಸುತ್ತಿದೆ. ಆದರೆ ಅದು ಕಾರ್ಯಸಾಧುವಲ್ಲ. ಹಾಗಾದರೆ ಯುರೋಪಿನ ಆಳುವ ವರ್ಗಗಳು ಏನು ಮಾಡಲು ಹೊರಟಿವೆ?
ಯುರೋಪಿನ ಆಳುವ ವರ್ಗಗಳು ಜಾಗತಿಕ ಹಣಕಾಸು ಬಂಡವಾಳದ ಭಾಗವಾಗಿದ್ದು, ಯು.ಎಸ್ ಅಧಿಪತ್ಯವನ್ನಾಗಲಿ, ನಾಟೋ ಮಿಲಿಟರಿ ಕೂಟವನ್ನಾಗಲಿ, ನವ-ಉದಾರವಾದಿ ನೀತಿಗಳನ್ನಾಗಲಿ ಪ್ರಶ್ನಿಸುತ್ತಿಲ್ಲ. ಆದರೆ ಈ ನೀತಿಗಳ ಫಲವಾಗಿ ಜನತೆಯಲ್ಲಿ ಆಕ್ರೋಶ ಮುಗಿಲು ಮುಟ್ಟಿದ್ದು ಅದರ ರಾಜಕೀಯ ಪರಿಣಾಮವಾಗಿ ಉಗ್ರ ಬಲಪಂಥೀಯ ಪಕ್ಷಗಳು ಮುನ್ನೆಲೆಗೆ ಬರುತ್ತಿವೆ. ಜನತೆಯ ಆಕ್ರೋಶವನ್ನು ಹತ್ತಿಕ್ಕಲು ಹೊರಗಿನ ವೈರಿಯ ಭೂತ ತೋರಿಸುವುದು ಯಾವುದೇ ಆಳುವ ವರ್ಗಗಳ ಮಾಮೂಲು ನೀತಿ. ಅವರೇ ಸೃಷ್ಟಿಸಿದ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ,‘ರಶ್ಯಾದ ಭೀತಿಯ ಭೂತ’ ಅವರಿಗೆ ಅನುಕೂಲ ಅಸ್ತ್ರವಾಗಿದೆ. ಆಂತರಿಕ ವೈರಿಗಳಾದ ‘ವಲಸೆಗಾರರು’, ‘ಮುಸ್ಲಿಮರು’ ಎಲ್ಲಾ ಆರ್ಥಿಕ ಸಮಸ್ಯೆಗಳಿಗೆ ಕಾರಣವೆಂಬ ಉಗ್ರ ಬಲಪಂಥೀಯ ಪಕ್ಷಗಳ ಪ್ರಚಾರವೂ ಅನುಕೂಲಕರವೇ. ಈ ಹಿನ್ನೆಲೆಯಲ್ಲಿ ಕಡ್ಡಾಯ ಮಿಲಿಟರಿ ಸೇವೆ ಮುಂತಾದ ಕ್ರಮಗಳ ಮೂಲಕ ಇಡೀ ಸಮಾಜದ ಮಿಲಿಟರೀಕರಣ ಮಾಡಲಾಗುತ್ತಿದೆ. ಇದು ನವ-ಉದಾರವಾದಿ ಮಿತವ್ಯಯದ ನೀತಿಗಳ ವಿರುದ್ಧ ಜನತೆಯ ಆಕ್ರೋಶವನ್ನು, ಪ್ರತಿರೋಧವನ್ನು ಹತ್ತಿಕ್ಕುವುದು ಸುಲಭವೆಂಬುದು ಅವರ ಲೆಕ್ಕಾಚಾರ. ಮರು-ಮಿಲಿಟರೀಕರಣ

ಯುರೋಪಿನ ಮಿಲಿಟರೀಕರಣ
ಯುರೋಪಿನಲ್ಲಿ ಅದರಲ್ಲೂ ಫ್ರಾನ್ಸ್, ಜರ್ಮನಿಯಲ್ಲಿ ನವ-ಫ್ಯಾಸಿಸ್ಸ್ ಪಕ್ಷಗಳು ಅಧಿಕಾರಕ್ಕೆ ಬರುವ ಸಾಧ್ಯತೆ ಇರುವ ಮತ್ತು ಇಟಲಿಯಲ್ಲಿ ನವ-ಫ್ಯಾಸಿಸ್ಸ್ ಪಕ್ಷ ಈಗಾಗಲೇ ಅಧಿಕಾರ ಹಿಡಿದಿರುವ ಹಿನ್ನೆಲೆಯಲ್ಲಿ, 1930ರ ದಶಕದ ಮಿಲಿಟರೀಕರಣ ಮರುಕಳಿಸುತ್ತಿರುವಂತೆ ಕಾಣುತ್ತಿದೆ. ಹಲವು ರಾಷ್ಟ್ರೀಯತೆಗಳ ತಾಣವಾದ ಯುರೋಪಿನಲ್ಲಿ ಉನ್ಮಾದಕಾರಿ ರಾಷ್ಟ್ರ ಅಭಿಮಾನಕ್ಕೆ ಉತ್ತೇಜನ, ಆಕ್ರಾಮಕ ಅನ್ಯ-ದ್ವೇಷ 1930ರ ದಶಕದ ಆಂತರಿಕ ಸಂಘರ್ಷ, ಜಾಗತಿಕ ಯುದ್ಧಕ್ಕೆ ಕುಮ್ಮಕ್ಕು ಕೊಡಬಲ್ಲವು. ಯುರೋಪಿನ ಭಾರೀ ‘ಮರು-ಶಸ್ತ್ರೀಕರಣ’ ರಾಷ್ಟ್ರವಾದ, ದ್ವೇಷಗಳ ಬೆಂಕಿಗೆ ತುಪ್ಪವಾಗಬಲ್ಲದು. ಇದರ ಜತೆಗೆ ರಶ್ಯ ಮತ್ತು ನಾಟೋ ನಡುವೆ ಅಣ್ವಸ್ತ್ರ, ಇತರ ಶಸ್ತ್ರಾಸ್ತ್ರ ಪೈಪೋಟಿ ಮತ್ತು ಸಂಘರ್ಷ ತಡೆಯಲು ಇದ್ದ ಹಲವಾರು ಒಪ್ಪಂದಗಳು ಜಾರಿಯಲ್ಲಿಲ್ಲದ ಕಾರಣ, ಈ ‘ಮರು-ಶಸ್ತ್ರೀಕರಣ’ ಯುರೇಶ್ಯಾದಲ್ಲಿ ಮಾತ್ರವಲ್ಲ, ಜಾಗತಿಕ ಶಾಂತಿಗೆ ತೀವ್ರ ಅಪಾಯವೊಡ್ಡುವುದು ಖಚಿತ. ಇದರ ವಿರುದ್ಧ ಯುರೋಪಿನ ಶಾಂತಿ ಚಳುವಳಿ ಆಗಲೇ ದನಿಯೆತ್ತಿದೆ. ಮರು-ಮಿಲಿಟರೀಕರಣ
****************
ಇದನ್ನೂ ನೋಡಿ : ಯುದ್ಧದಲ್ಲಿ ಸೋತ ಯು.ಎಸ್ ನ್ನು ಮಾತುಕತೆಯಲ್ಲಿ ಗೆಲ್ಲಲು ಬಿಡದ ಇರಾನ್ Janashakthi Media
