ಜನಗಳಿಗೆ ರಾಜಕೀಯ ಬೇಕಿಲ್ಲ ಎಂಬ ವಾದ ತೊಂಭತ್ತರ ದಶಕದಲ್ಲಿ ನವ-ಉದಾರವಾದಿ ಅರ್ಥವ್ಯವಸ್ಥೆಯಲ್ಲಿ ಗಟ್ಟಿಗೊಂಡ ಒಂದು ನಿಲುವು. ವಾಸ್ತವವಾಗಿ ಇದು ನವ-ಉದಾರವಾದಿ ಬಂಡವಾಳಶಾಹಿಯ ಒಂದು ಆಯಕಟ್ಟಿನ ಯೋಜನೆ. ಅದರಲ್ಲಿ ಅದು ಯಶಸ್ವಿಯಾಗಿದೆ. ಆದ್ದರಿಂದ ಜೆನ್ ಝೀ ಪೀಳಿಗೆಯೂ ರಾಜಕೀಯರಹಿತರಾಗಿದ್ದರೆ, ಅದು ಅವರ ಆಯ್ಕೆಯಲ್ಲ, ವಿಫಲತೆಯೂ ಅಲ್ಲ. ಅಂತಹ ಒಂದು ಸನ್ನಿವೇಶವನ್ನು ಸೃಷ್ಟಿಸುವ ಒಂದು ವ್ಯವಸ್ಥೆಯ ಪ್ರಯತ್ನದ ಗೆಲುವು. ಆದರೆ ಜಂತರ್-ಮಂತರ್ ಪ್ರತಿಭಟನೆ ಆ ಗೆಲುವಿಗೆ ಸವಾಲು ಹಾಕಿದೆ.
“ಸುಮ”
ಕಳೆದ ಜುಲೈನಲ್ಲಿ ನಡೆದ ಜಂತರ್-ಮಂತರ್ ಪ್ರತಿಭಟನೆ ಇಡೀ ಜಗತ್ತಿನ ಗಮನವನ್ನೇ ಸೆಳೆಯಿತು. ಈ ಪ್ರತಿಭಟನೆ ಇಷ್ಟು ಪರಿಣಾಮಕಾರಿಯಾಗುವ ಕಲ್ಪನೆ ಯಾರಿಗೂ ಇರಲಿಲ್ಲ. ಆದ್ದರಿಂದ ಈ ಜೆನ್-ಝೀ ಕಡೆಗೆ ಮುಖ್ಯ ವಾಹಿನಿ ಮಾಧ್ಯಮಕ್ಕೆ ಗಮನವಿರಲಿಲ್ಲ. ಆಡಳಿತದಲ್ಲಿರುವವರು ಸಹ ಈ ಸಮೂಹದ ತಾಳ್ಮೆ, ಸಾಮರ್ಥ್ಯಗಳ ಅಂದಾಜು ಮಾಡಿರಲಿಲ್ಲ. ಇವರನ್ನು ಒಡೆದು ದಾರಿ ತಪ್ಪಿಸಬಹುದು ಎಂಬ ವಿಶ್ವಾಸದಲ್ಲಿ ಅವರು ಇದ್ದಂತಿತ್ತು. ಹಾಗೆ ಒಡೆಯಲು ಮತ್ತು ಹೆದರಿಸಲು ಬೇಕಾದ ಸಾಧನಗಳ ಸಂಗ್ರಹವನ್ನು ಅವರು ಮಾಡಿಕೊಂಡಂತಿತ್ತು. ಕಲ್ಲು ತುಂಬಿದ್ದ ಲಾರಿ, ಮೊಳೆಪೂರಿತ ಲಾಠಿ, ಪೆಲ್ಲೆಟ್ ಬಂದೂಕು ಇತ್ಯಾದಿಗಳೆಲ್ಲ ಹೇಯ ಹುನ್ನಾರಗಳ ಕುರುಹುಗಳು ಎಂಬುದು ಯಾರಿಗೂ ಗೊತ್ತಾಗುವ ವಿಷಯಗಳು. ಇವೆಲ್ಲವುಗಳನ್ನು ಅಲ್ಲಗಳೆಯಲು ಬೇಕಾದ ತಯಾರಿಗಳೂ ಆಗಿದ್ದವು. ಇಂತಹ ಕರಾಳ ಯೊಜನೆಗಳ ನಡುವೆಯೂ ಈ ಚಳುವಳಿ ವ್ಯಾಪಕ ಬೆಂಬಲ ಪಡೆಯಿತು ಮತ್ತು ದೇಶದಾದ್ಯಂತ ಹರಡಿ ಆಳುವವರಲ್ಲಿ ನಡುಕ ಮತ್ತು ಕಂಗಾಲು ಹುಟ್ಟಿಸಿತು ಎಂಬುದು ಅವರ ನಡೆ ಮತ್ತು ಮಾತುಗಳಲ್ಲಿ ಸ್ಪಷ್ಟವಾಗಿ ಮೂಡಿ ಬಂತು. ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲಿನ ಎಫ್ ಐ ಆರ್ ಗಳನ್ನು ಉಚ್ಛ ನ್ಯಾಯಾಲಯ ವಜಾ ಮಾಡಿರುವದು ಎರಡನೇ ಗೆಲುವು.
ಸಂಘಟನೆಯ ಚೌಕಟ್ಟನ್ನೇ ಹೊಂದಿರದ ಒಂದು ಚಳುವಳಿ ಈ ಮಟ್ಟದಲ್ಲಿ ಯಶಸ್ವಿಯಾಗಿರುವುದು ಹಲವು ತರಹದ ವಿಶ್ಲೇಷಣೆಗಳಿಗೆ ಕಾರಣವಾಗಿದೆ ಎಂಬುದು ಸ್ಪಷ್ಟ. ಈ ಜೆನ್-ಝೀಗಳು ರಾಜಕೀಯರಹಿತರು, ಬಹುಶಃ ರಾಜಕೀಯದ ವಿರೋಧಿಗಳೆಂದೇ ಹೇಳಬಹುದು, ಅವರಿಗೆ ವರ್ತಮಾನವೇ ಮುಖ್ಯ, ಭೂತ-ಭವಿಷ್ಯತ್ತುಗಳ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ಒಂದು ಸಾಮಾನ್ಯ ವಿಶ್ಲೇಷಣೆ. ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳ, ಆಸ್ಸಾಮ್ ಮತ್ತು ಕೇಂದ್ರಾಡಳಿತ ಪುದುಚೇರಿಗಳಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಜೆನ್-ಝೀ ಗಳ ಈ ಅಂತರ್ಯಾಮಿ ಪ್ರಭಾವ ಇತ್ತೇನೋ ಎಂಬ ಶಂಕೆ ಹಲವರಿಗಿದೆ. ಕೋಕ್ರೋಚ್ ಜನತಾ ಪಕ್ಷ ಅಥವ ಸಿಜೆಪಿ ಹುಟ್ಟಿದ್ದು ಕೂಡ ಈ ದೇಶದ ಮುಖ್ಯ ನ್ಯಾಯಾಧೀಶರು ಯುವಜನರು ಜಿರಳೆಗಳಂತೆ ಎಂದು ಟಿಪ್ಪಣಿ ಮಾಡಿದರು ಎಂಬ ಸುದ್ದಿಯ ಹಿನ್ನೆಲೆಯಲ್ಲಿ. ನಂತರ ಅದು ಬೆಳೆದ ಪರಿ ಮಾತ್ರ ವಿಸ್ಮಯ ಹುಟ್ಟಿಸುವಂತಹ ರೀತಿಯಲ್ಲಿತ್ತು. ಸಾಮಾಜಿಕ ಮಾಧ್ಯಮಗಳ ಮಡಿಲಲ್ಲಿ ಹುಟ್ಟಿ ಬೆಳೆದ ಈ ಸಂಘಟನೆಗೆ ಯಾವುದೇ ರಾಜಕೀಯದ ಗುಣಲಕ್ಷಣಗಳ ಪರಿಧಿ ಇರಲಿಲ್ಲ.

ಈ ಯುವಜನರು ರಾಜಕೀಯ ಎಂಬುದು ಬೇಕಿಲ್ಲ ಎಂದು ಭಾವಿಸಿರುವವರೇ ಎಂಬುದು ಇಲ್ಲಿನ ಪ್ರಶ್ನೆಯಲ್ಲ. ತಾವು ರಾಜಕೀಯದಿಂದ ದೂರ ಇರುವವರು ಎಂದು ಹೇಳಿಕೊಳ್ಳುವುದೇ ಪ್ರಸಕ್ತ ಪ್ರಬಲ ರಾಜಕೀಯ ಕಥನಕ್ಕೆ ಬಲಿಬೀಳುವ ಒಂದು ದಾರಿ. ಆದ್ದರಿಂದ ಇಲ್ಲಿರುವ ನಿಜವಾದ ಪ್ರಶ್ನೆ ಇವರನ್ನು ರಾಜಕೀಯಕರಣಗೊಳಿಸದೆ ನಮ್ಮ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಸಿಗಬೇಕಾದ ಹಕ್ಕುಗಳನ್ನು ಪಡೆಯುವುದಂತೂ ದೂರ, ಸಾಮಾನ್ಯ ಪ್ರಜಾಪ್ರಭುತ್ವೀಕರಣವಾದರೂ ಸಾಧ್ಯವೇ ಎಂಬುದು. ಪ್ರಗತಿಪರ ಮತ್ತು ಎಡಶಕ್ತಿಗಳು ತಮ್ಮ ಸಂಘಟನೆಗಳ ಚೌಕಟ್ಟಿನ ಬಲ ನೀಡಿ ಜೆನ್-ಝೀ ಗಳೊಂದಿಗೆ ಹಿನ್ನೆಲೆ ಮತು ಮುನ್ನೆಲೆ ಎರಡರಲ್ಲೂ ನಿಂತು ಹೋರಾಟದ ಹರವಿಗೆ ತ್ರಾಣನೀಡಿದವು, ಅವರ ಹೋರಾಟ ಯಶಸ್ಸಿನತ್ತ ಸಾಗಲು ಅನುವು ಮಾಡಿಕೊಟ್ಟವು ಎಂಬುದು ಗಮನಿಸಬೇಕಾದ ಅಂಶ. ನಿರುದ್ಯೋಗ ಮತ್ತು ಬೆಲೆ ಏರಿಕೆಗಳಂತಹ ಜೀವನದ ಬವಣೆಗೆ ಒಳಗಾದವರು ಒಗ್ಗಟ್ಟಾಗಿ ನಿಂತು ಮುಂಚೂಣಿಯಲ್ಲಿನ ಹೊರಾಟಗಾರರಿಗೆ ಬೆಂಬಲ ನೀಡಿದರು ಎಂಬದೂ ಹೋರಾಟದ ಯಶಸ್ಸಿಗೆ ಕಾರಣವಾಯಿತು. ಇಂತಹ ಬೆಂಬಲ ಬಹುತೇಕ ಸ್ತರಗಳಲ್ಲಿ ಪಕ್ಷಾತೀತವಾಗಿತ್ತು ಎಂಬುದು ಕೂಡ ಗಮನಿಸಬೇಕಾದ ಮುಖ್ಯ ಅಂಶ. ರಾಜಕೀಯ ಎಂದರೆ ಪಕ್ಷ ರಾಜಕೀಯ ಎಂದೇನೂ ಭಾವಿಸಬೇಕಿಲ್ಲ ತಾನೇ.
ಇದನ್ನೂ ಓದಿ : ‘ಜನರು ಸರ್ಕಾರಕ್ಕೆ ಹೆದರಿದರೆ ಪ್ರಜಾಪ್ರಭುತ್ವ ಸರ್ವಾಧಿಕಾರವಾಗುತ್ತದೆ’: ಸಿಎಂ ಡಿ.ಕೆ. ಶಿವಕುಮಾರ್
ಜನರನ್ನು ಬರೀ ಗ್ರಾಹಕರಾಗಿ ಕಾಣುವ ನೋಟ
ನಮಗೆ ಅಂದರೆ ಜನಗಳಿಗೆ ರಾಜಕೀಯ ಬೇಕಿಲ್ಲ ಎಂಬ ವಾದ ತೊಂಭತ್ತರ ದಶಕದಲ್ಲಿ ನವ-ಉದಾರವಾದಿ ಅರ್ಥವ್ಯವಸ್ಥೆಯಲ್ಲಿ ಗಟ್ಟಿಗೊಂಡ ಒಂದು ನಿಲುವು. ವಾಸ್ತವವಾಗಿ ಇದು ನವ-ಉದಾರವಾದಿ ಬಂಡವಾಳಶಾಹಿಯ ಒಂದು ಆಯಕಟ್ಟಿನ ಯೋಜನೆ ಎನ್ನುತ್ತಾರೆ ನಗರ ತಜ್ಞ ಟಿಕೆಂದರ್ಸಿಂಗ್ ಪನ್ವರ್ (ಇವರು ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಶಿಮ್ಲಾದ ಒಬ್ಬ ಪ್ರಮುಖ ಎಸ್ಎಫ್ಐ ಮುಖಂಡರೂ ಆಗಿದ್ದವರು).
ನವ ಉದಾರಿಕರಣದ ರಾಜಕೀಯದಲ್ಲಿ ಜನರು ಬರೀ ಗ್ರಾಹಕರು. ಇಲ್ಲಿ ತಾನು, ತನ್ನದು ಎಂಬ ವ್ಯಕ್ತಿವಾದವೇ ಜೀವನ ತತ್ವವಾಗಿ ಬಿಡುತ್ತದೆ. ಇಂತಹ ಸನ್ನಿವೇಶದಲ್ಲಿ ನಿರುದ್ಯೋಗ, ಸಾಲ-ಸೋಲ, ಮನೆಮಾರು ಇತ್ಯಾದಿಗಳೆಲ್ಲ ವ್ಯಕ್ತಿಯ ಸೋಲು ಗೆಲುವುಗಳ ಭಾಗವಾಗುತ್ತವೆಯೇ ಹೊರತು ಆರ್ಥಿಕದ ರಚನೆಯ ಮತ್ತು ಅದರ ಹರಿವಿನ ಭಾಗದಂತೆ ಕಾಣಿಸುವುದಿಲ್ಲ. ಸೋಲು ಗೆಲುವುಗಳು ಜೀವನದ ಭಾಗ ಎಂದುಕೊಂಡರೆ ವ್ಯಕ್ತಿಗಳು ತಮ್ಮೊಳಗೆ ಬದಲಾವಣೆ ಮಾಡಿಕೊಳ್ಳಬೇಕೇ ಹೊರತು ತಮ್ಮ ಹೊರಗಿನ ಜಗತ್ತನ್ನಲ್ಲ. ಜೀವನದಲ್ಲಿ ತೀವ್ರ ಬಿಕ್ಕಟ್ಟುಗಳು ಬಂದಾಗ ಅದನ್ನು ಆವೇಗ ಮತ್ತು ಸ್ವಯಂ ಪ್ರೇರಣೆಯಿಂದ ಎದುರಿಸಲಾಗುತ್ತದೆಯೇ ಹೊರತು ಸಾಮೂಹಿಕ ಹೋರಾಟಗಳ ಮೂಲಕ ಅಲ್ಲ.
“ಪ್ರತಿಯೊಂದು ಪೀಳಿಗೆ ಅದರ ಹಿಂದಿನ ಪೀಳಿಗೆಗೆ ಹೋಲಿಸಿದರೆ ಹೊಸದಾಗಿರುತ್ತದೆ. ಆದರೆ ಈ ಹೊಸದು ಏನು ಎಂಬುದು ಚರ್ಚಾಸ್ಪದ. ನವ-ಉದಾರವಾದ ಸಮಯ-ದಿಗಂತವನ್ನು ಚಿಕ್ಕದು ಮಾಡುತ್ತದೆ. ಇದು ಒಂದು ಸ್ವಯಂಪ್ರೇರಣೆಯ ಮತ್ತು ಆವೇಗದ ರಾಜಕೀಯವನ್ನು ಹುಟ್ಟು ಹಾಕುತ್ತದೆ” ಎನ್ನುತ್ತಾರೆ ಟಿಕೆಂದರ್ಸಿಂಗ್ ಪನ್ವರ್.( The seemingly apolitical Gen Z youth, ದಿ ಹಿಂದು, ಸಪ್ಟಂಬರ್ ೨)
ತಾವು ರಾಜಕೀಯದಿಂದ ದೂರವಿದ್ದೇವೆ ಎಂದುಕೊಳ್ಳುವ ಹದಿಹರೆಯದವರಲ್ಲಿ ಅಥವ ಜೆನ್-ಝೀ ಯಲ್ಲಿ ಇದು ವ್ಯಕ್ತಿಪೂಜೆ ಮತ್ತು ಸಾಮಾಜಿಕ ಮಾಧ್ಯಮಗಳ ಕರೆಗಳಿಗೆ ಹಠಾತ್ ಓಗೊಟ್ಟು ಸ್ಪಂದಿಸುವ ವರ್ತನೆಗಳಿಗೆ ಎಡೆಮಾಡಿಕೊಡುತ್ತದೆ. ಇದನ್ನು ಒಂದು ವಿದ್ಯಾರ್ಥಿ ಸಂಘ ಅಥವ ಕಾರ್ಮಿಕ ಸಂಘದಂತಹ ಸಾಂಸ್ಥಿಕ ಅವಕಾಶವಿಲ್ಲದ ಸಂದರ್ಭದಲ್ಲಿ ಭಾವಾವೇಶದ ಸಂದೇಶಗಳ ಮೂಲಕ ದುರುಪಯೋಗಪಡಿಸಿಕೊಳ್ಳುವುದು ಸುಲಭ. ಇದಕ್ಕೆ ಬಲಿಯಾದವರು ಒಂದು ಕಾರ್ಯಕ್ರಮಕ್ಕೆ ಮತ ನೀಡುವ ಬದಲು ಒಂದು ಮುಖ ಅಥವ ಒಂದು ಕ್ಷಣಕ್ಕೆ ಮತ ನೀಡುವಂತಾಗುತ್ತದೆ ಎಂದು ಮುಂದುವರೆದು ಪನ್ವರ್ ಹೇಳುತ್ತಾರೆ.

ಆದರೆ ೨೦೨೬ ರ ಜೂನ್-ಜುಲೈನ ಜಂತರ್ ಮಂತರ್ ಘಟನೆ ಈ ಹದಿಹರೆಯದವರು ಸ್ವಭಾವತಃ ರಾಜಕೀಯರಹಿತರು ಎಂಬ ವಿಶ್ಲೇಷಣೆಯನ್ನು ತೀವ್ರವಾಗಿ ಪ್ರಶ್ನಿಸಿರುವಂತೆ ಕಾಣುತ್ತದೆ. ಜೆನ್-ಝೀ ರಾಜಕೀಯ-ರಹಿತರಾಗಿ ಎಂದೂ ಇರಲಿಲ್ಲ. ಬದಲಿಗೆ, ಪನ್ವರ್ ರವರು ಹೇಳುವಂತೆ, ಅವರು ತಮ್ಮದು ಎಂದುಕೊಳ್ಳುವ ವಿಷಯಗಳ ಮೇಲೆ ತಮ್ಮದೇ ರೀತಿಯಲ್ಲಿ ಹೋರಾಟ ಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದರೇನೋ. ಪರೀಕ್ಷೆಗಳಲ್ಲಿನ ಭ್ರಷ್ಟಾಚಾರ ಜೀವನ್ಮರಣದ ಪ್ರಶ್ನೆಯಾಗಿ ಭೂತಾಕಾರ ತಳೆದು ಎದುರಿಗೆ ಬಂದು ನಿಂತಾಗ ಅಂತಹ ಅವಕಾಶ ಬಂದಿತು, ಹೋರಾಟವಾಗಿ ಹೊರಹೊಮ್ಮಿತು.
ಈ ಹದಿಹರೆಯದವರು ರಾಜಕೀಯರಹಿತರಾಗಿದ್ದರೆ, ಅದು ಅವರ ಆಯ್ಕೆಯಲ್ಲ, ವಿಫಲತೆಯೂ ಅಲ್ಲ. ಅಂತಹ ಒಂದು ಸನ್ನಿವೇಶವನ್ನು ಸೃಷ್ಟಿಸುವ ಒಂದು ವ್ಯವಸ್ಥೆಯ ಪ್ರಯತ್ನದ ಗೆಲುವು ಆಗಿತ್ತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.. ಆದರೆ ಜಂತರ್-ಮಂತರ್ ಪ್ರತಿಭಟನೆ ಆ ಗೆಲುವಿಗೆ ಸವಾಲು ಹಾಕಿದೆ.
ವಿದ್ಯಾರ್ಥಿ ಜೀವನ ಪ್ರಜಾಪ್ರಭುತ್ವದ ಪಾಠಶಾಲೆಯಾಗಬೇಕು
ಸಮಾಜಶಾಸ್ತ್ರಜ್ಞರು ಹೇಳುವಂತೆ, ಹದಿಹರೆಯದಲ್ಲೇ ಜೀವನ ದೃಷ್ಟಿಕೋನ ಬೆಳೆದು ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳು ಕ್ರಿಯಾಶೀಲವಾಗಿದ್ದರೆ ಅದು ಅವರಿಗೆ ಪ್ರಜಾಸತ್ತಾತ್ಮಕ ಸಾಮಾಜಿಕ ಜೀವನದ ಪಾಠವಾಗಿ ಪರಿಣಮಿಸಿ ಜೀವನದ ನೈಜ ತರಬೇತಿ ನೀಡುತ್ತದೆ. ೧೯೭೦-೮೦ರ ದಶಕದ ವರೆಗೆ ಇಂತಹ ಸನ್ನಿವೇಶ ದೇಶದಲ್ಲಿ ಇತ್ತು. ಆದರೆ ನಂತರ, ವಿಶೇಷವಾಗಿ ನಮ್ಮ ಆಳುವ ಮಂದಿ ನವ-ಉದಾರವಾದಿ ಬಂಡವಾಳದ ಹಾದಿಯನ್ನು ತುಳಿಯಲಾರಂಭಿಸಿದಾಗ ರಾಜಕೀಯವೇ ಅಭಿವೃದ್ಧಿಗೆ ಮಾರಕ ಎಂಬ ಭಾವನೆ ಗಟ್ಟಿಗೊಳ್ಳಲಾರಂಬಿಸಿತು. ಕೇರಳಂ ನಂತಹ ರಾಜ್ಯ ಬಿಟ್ಟರೆ ಉಳಿದ ಬಹುತೇಕ ರಾಜ್ಯಗಳಲ್ಲಿ ವಿದ್ಯಾರ್ಥಿ ಸಂಘಟನೆಗಳನ್ನು ನಿರ್ಜೀವಗೊಳಿಸಲಾಯಿತು.
ಜೆನ್-ಝೀಗಳಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ಅದರಿಂದಾಗಿ ಈ ಚಳುವಳಿ ಬಹಳ ಮುಂದಕ್ಕೇನೂ ಹೋಗಲಾರದು ಎಂದು ಕೊರಗುವುದಕ್ಕಿಂತ, ರಾಜಕೀಯ ಪ್ರಜ್ಞೆ ಮೂಡುವಂತಹ ಸಾಂಸ್ಥಿಕ ಪರಿಸರ ಮತ್ತು ಚೌಕಟ್ಟು ಮತ್ತೆ ಒದಗುವಂತಹ ಕೆಲಸ ಆಗಬೇಕಾಗಿದೆ. ಅಂದರೆ ಮತ್ತೆ ಕ್ಯಾಂಪಸ್ ಪ್ರಜಾಪ್ರಭುತ್ವ, ವಿದ್ಯಾರ್ಥಿ ಸಂಘಟನೆಗಳು ಮತ್ತು ಸಾಮೂಹಿಕವಾಗಿ ಚರ್ಚಿಸುವ ವಾತಾವರಣ ಮೂಡಬೇಕಾಗಿದೆ. ಅದು ಉತ್ತಮ ಪ್ರಜಾಪ್ರಭುತ್ವ ರೂಪುಗೊಳ್ಳಲು ಮತ್ತು ಆ ಮೂಲಕ ಜನರ ಒಟ್ಟು ಅಭ್ಯುದಯದ ದಾರಿ ತೆರೆಯಲು ಅನುವು ಮಾಡಿಕೊಡುತ್ತದೆ.
ಇದನ್ನೂ ನೋಡಿ : ಕಸ್ತೂರಿ ರಂಗನ್ ವರದಿಯಿಂದ ಜನರ ಬದುಕಿಗೆ ಕುತ್ತೇ? | ಸಿಪಿಐ(ಎಂ) ಕೊಟ್ಟ ಎಚ್ಚರಿಕೆಗಳೇನು? Janashakthi Media
