ವಸಂತರಾಜ ಎನ್.ಕೆ
ಯುರೋ ಕೂಟದ ‘ಯುರೋಪಿನ ಮರು-ಶಸ್ತ್ರೀಕರಣ ಯೋಜನೆ’ ಮತ್ತು ಜರ್ಮನಿಯ ಮಿಲಿಟರೀಕರಣ ಮಾಡುವ ಎರಡು ಹೊಸ ಕಾನೂನುಗಳು – ಅತಂಕಕಾರಿ ಬೆಳವಣಿಗೆಗಳು. ಇದು ಜಾಗತಿಕ ಶಾಂತಿಗೆ ಗಂಭೀರ ಅಪಾಯ ಒಡ್ಡುವಂತಹ ಯುರೋಪಿನ ಮರು-ಮಿಲಿಟರೀಕರಣದತ್ತ ಸಾಗುತ್ತಿರುವಂತೆ ಕಾಣುತ್ತದೆ. ಇದಕ್ಕೆ ಕಾರಣ ಉಕ್ರೇನ್ ಯುದ್ಧ ಮತ್ತು ಅದರಲ್ಲಿ ಗೆದ್ದರೆ ಇಡೀ ಯುರೋಪಿನ ಭದ್ರತೆಗೆ ಒಡ್ಡುವ ಅಪಾಯವೆಂದು ಯುರೋಕೂಟದ ನಾಯಕರು ಹೇಳುತ್ತಾರೆ. ಉಕ್ರೇನ್ ಸೋತರೆ ಅದರ ಅರ್ಥ ಯುರೋಪಿನ ಶಸ್ತ್ರಾಸ್ತ್ರ ಮತ್ತು ಸೈನ್ಯದ ಬಲ ರಶ್ಯಾಕ್ಕಿಂತ ದುರ್ಬಲವಾಗಿದೆಯೆಂದೇ? ರಶ್ಯಾ ‘ಸಾಮ್ರಾಜ್ಯಶಾಹಿ ವಿಸ್ತರಣಾವಾದಿ’ಯೆ? ಉಕ್ರೇನ್ ಯುದ್ಧದಲ್ಲಿ ಗೆದ್ದರೆ ರಶ್ಯಾ ಯುರೋಪಿನ ಮೇಲೆ ಆಕ್ರಮಣ ಮಾಡುವುದೆ? ಈಗ ಯುರೋಪಿನ ರಕ್ಷಣಾ ವೆಚ್ಚ, ಶಸ್ತ್ರಾಸ್ತ್ರ ಉತ್ಪಾದನೆ ಮತ್ತು ಸೈನ್ಯದ ಬಲ ರಶ್ಯಾದಕ್ಕಿಂತ ಕಡಿಮೆ ಇದೆಯೆ? ಯುರೋಪಿನ ಭದ್ರತೆಗೆ ರಶ್ಯಾದಿಂದ ಅಪಾಯವಿದೆಯೆ? ಉಕ್ರೇನ್ ಯುದ್ಧ ಯುರೋಪಿನ ಆರ್ಥಿಕ ಬಿಕ್ಕಟ್ಟಿಗೆ ಕಾರಣವೇ?- ಈ ಪ್ರಶ್ನೆಗಳನ್ನು ಭಾಗ-1ರಲ್ಲಿ ಪರಿಶೀಲಿಸಲಾಗಿದೆ. ಭಾಗ-2 ರಲ್ಲಿ ಯುರೋಪಿನ ಮರು-ಮಿಲಿಟರೀಕರಣದ ನಿಜವಾದ ಕಾರಣ, ಸ್ವರೂಪಗಳನ್ನು ಬಿಚ್ಚಿಡಲಾಗುತ್ತದೆ. ಯುರೋಪಿನ
ಮರು-ಶಸ್ತ್ರೀಕರಣಕ್ಕೆ ರಶ್ಯಾದಿಂದ ಅಪಾಯ ಕಾರಣವೇ?
ಯುರೋಪಿನಲ್ಲಿ ಕಳೆದ ಸುಮಾರು ಒಂದು ವರ್ಷದಲ್ಲಿ ಮೂರು ಮಹತ್ವದ ಬೆಳವಣಿಗೆಗಳು ಆಗಿವೆ. ಇವು ಯುರೋಪಿನಲ್ಲಿ ಮಾತ್ರವಲ್ಲ ಜಾಗತಿಕವಾಗಿ ಶಾಂತಿಯ ಸಾಧ್ಯತೆಯ ಮೇಲೆ ಭಾರೀ ಪರಿಣಾಮ ಬೀರಲಿವೆ.
ಮೊದಲ ಬೆಳವಣಿಗೆಯೆಂದರೆ, ಯುರೋ ಕೂಟ (ಯುರೋಪಿಯನ್ ಯೂನಿಯನ್) ‘ಯುರೋಪಿನ ಮರು-ಶಸ್ತ್ರೀಕರಣ (ರೀ-ಆರ್ಮ್) ಯೋಜನೆ’ ಗಾಗಿ 800 ಶತಕೋಟಿ ಯುರೋ ಹೊಂಚುವುದಾಗಿ ಘೋಷಿಸಿದೆ. ಇಷ್ಟು ಹೂಡಿಕೆ ಹೊಂಚಲು ಪ್ರತಿ (ಯುರೋ ಕೂಟದ) ಸದಸ್ಯ ದೇಶ ಕನಿಷ್ಟ ತನ್ನ ಜಿಡಿಪಿಯ 1.5% ರಷ್ಟು ರಕ್ಷಣಾ ವೆಚ್ಚ ಮಾಡಬೇಕು. ಜತೆಗೆ 150 ಶತಕೋಟಿ ಯುರೋ ದಷ್ಟು ರಕ್ಷಣಾ ಹೂಡಿಕೆ ಮಾಡಲು ಬಂಡವಾಳ ಮಾರುಕಟ್ಟೆಯಿಂದ ಹಣ ಹೊಂಚಲು ಯುರೋ ಕಮಿಶನ್ (ಯುರೋಪಿಯನ್ ಕಮಿಶನ್ – ಯುರೋ ಕೂಟದ ಕೇಂದ್ರೀಯ ಆಡಳಿತ) ನಿರ್ಧರಿಸಿದೆ. ಇದಲ್ಲದೆ ಕಳೆದ ನಾಟೋ ಶೃಂಗಸಭೆಯಲ್ಲಿ ಯು.ಎಸ್ ಒತ್ತಾಯದ ಮೇರೆಗೆ ಪ್ರತಿ ಸದಸ್ಯ ದೇಶ ಜಿಡಿಪಿಯ ಶೇ 5 ರಕ್ಷಣೆಗೆ ವೆಚ್ಚ ಮಾಡಬೇಕೆಂದು ನಿರ್ಧರಿಸಲಾಗಿದೆ.
ಜರ್ಮನಿಯ ಮೂಲ ಕಾನೂನಿನಲ್ಲಿ (ಅಥವಾ ಸಂವಿಧಾನದಲ್ಲಿ) ರಕ್ಷಣಾ ಹೂಡಿಕೆ/ವೆಚ್ಚಕ್ಕೆ ಸಾಲದ ಮೂಲಕ ಹಣದ ಮೂಲಕ ಒದಗಿಸುವುದಕ್ಕೆ ಇದ್ದ ನಿರ್ಬಂಧವನ್ನು ಕಿತ್ತು ಹಾಕಲಾಗಿದೆ – ಇದು ಎರಡನೆಯ ಬೆಳವಣಿಗೆ. ಇನ್ನು ರಕ್ಷಣಾ ವೆಚ್ಚ/ಹೂಡಿಕೆಗಳ ಮೇಲೆ ಯಾವುದೇ ಗರಿಷ್ಟ ಮಿತಿ ಇಲ್ಲ. ಹಿಂದೆ ಜರ್ಮನಿಯ ಸರಕಾರದ ಎಲ್ಲ ಸರಕಾರಿ ಹೂಡಿಕೆ/ವೆಚ್ಚಕ್ಕೆ ಸಾಲದ ಮೂಲಕ ಹಣ ಒದಗಿಸುವುದಕ್ಕೆ ಜಿಡಿಪಿಯ ಶೇಕಡಾ ಪಾಲಿನ ಮಿತಿ ಇತ್ತು. ಇದು ಕಳೆದ ಒಂದು ದಶಕದಲ್ಲಿ ಶಿಕ್ಷಣ, ಆರೋಗ್ಯ, ಮತ್ತಿತರ ಕಲ್ಯಾಣ ಯೋಜನೆಗಳಲ್ಲಿ ಕಡಿತ ಮಾಡುವ ‘ಮಿತವ್ಯಯ’ ನೀತಿಯ ಆಧಾರವಾಗಿತ್ತು. ರಕ್ಷಣಾ ಹೂಡಿಕೆ/ವೆಚ್ಚಕ್ಕೆ ಮಾತ್ರ ಈ ನಿರ್ಬಂಧವನ್ನು ತೆಗೆದು ಹಾಕಲಾಗಿದ್ದು, ಉಳಿದವುಗಳ ಮೇಲೆ ಅದು ಮುಂದುವರೆಯುತ್ತದೆ. ಇದರ ಜತೆಗೆ ರಕ್ಷಣಾ ಕ್ಷೇತ್ರದಲ್ಲಿ 500 ಶತಕೋಟಿ ಯುರೋ ಹೂಡಿಕೆ/ವೆಚ್ಚಕ್ಕೆ ಜರ್ಮನ್ ಪಾರ್ಲಿಮೆಂಟಿನ ಅನುಮೋದನೆ ತೆಗೆದುಕೊಳ್ಳಲಾಗಿದೆ.
ಮೂರನೇ ಬೆಳವಣಿಗೆಯೆಂದರೆ, ಜರ್ಮನ್ ಪಾರ್ಲಿಮೆಂಟ್ ವಯಸ್ಕ (18 ವರ್ಷ ಮೇಲ್ಪಟ್ಟ) ಪುರುಷರಿಗೆ ಕಡ್ಡಾಯ ಮಿಲಿಟರಿ ಸೇವೆಯ ಕಾನೂನು ಪಾಸು ಮಾಡಿದೆ. ಇದನ್ನು ಜರ್ಮನ್ ಸೈನ್ಯದ ಸಂಖ್ಯೆಯನ್ನು 2035ರ ಹೊತ್ತಿಗೆ 2.35 ಕ್ಷದಿಂದ 4.6 ಲಕ್ಷಕ್ಕೆ ಏರಿಸುವ ಯೋಜನೆಯ ಭಾಗವಾಗಿ ಮಾಡಲಾಗಿದೆ. ಈ ಕಾನೂನಿನ ಪ್ರಕಾರ ಮಿಲಿಟರಿ ಸೇವೆಗೆ ನೋಂದಣಿ ಮತ್ತು ವೈದ್ಯಕೀಯ ಪರೀಕ್ಷೆ ಕಡ್ಡಾಯವಾಗಿದ್ದು, ಸದ್ಯಕ್ಕೆ ಸಕ್ರಿಯ ಸೇವೆ ಸ್ವ-ಇಚ್ಛಾನುಸಾರ ಇದ್ದರೂ, ಸೈನ್ಯದ ಬಲ ಏರಿಕೆಯ ಗುರಿ ಈಡೇರದಿದ್ದರೆ ಅದನ್ನು ಕಡ್ಡಾಯ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಕಾನೂನಿನಲ್ಲಿ ಯುವಕರು (18-45 ವಯಸ್ಸಿನ) 3 ತಿಂಗಳಿಗಿಂತ ಹೆಚ್ಚಿನ ವಿದೇಶ ಪ್ರವಾಸ ಕೈಗೊಳ್ಳುವ ಮೊದಲು ಮಿಲಿಟರಿಯ ಅನುಮತಿ ಪಡೆಯಬೇಕು ಎಂದೂ ಇದೆ. ಆದರೆ ಭಾರೀ ಪ್ರತಿಭಟನೆಯ ನಂತರ ಇದನ್ನು ‘ಶಾಂತಿ ಕಾಲ’ದಲ್ಲಿ ಅನ್ವಯಿಸಲಾಗುವುದಿಲ್ಲ ಎಂದು ಹೇಳಲಾಯಿತು.

ಜರ್ಮನ್ ಕಡ್ಡಾಯ ಮಿಲಿಟರಿ ಸೇವೆಯ ವಿರುದ್ಧ ಭಾರೀ ಪ್ರತಿಭಟನೆ
ಯುರೋಪಿನ ಮರು-ಮಿಲಿಟರೀಕರಣಕ್ಕೆ ಉಕ್ರೇನ್ ಯುದ್ಧ ಕಾರಣವೇ?
ಯುರೋಪಿನ ಮರು-ಮಿಲಿಟರೀಕರಣದ ಈ ಮೂರು ಬೆಳವಣಿಗೆಗಳು ರಶ್ಯ ಉಕ್ರೇನಿನ ಮೇಲೆ ದಾಳಿಗೆ ಪ್ರತಿಕ್ರಿಯೆಯಾಗಿ ಬಂದಿವೆ ಎಂದು ಜರ್ಮನಿಯ ಮತ್ತು ಯುರೋ ಕೂಟದ ನಾಯಕರು ಹೇಳುತ್ತಾರೆ. ಉಕ್ರೇನಿನಲ್ಲಿ ಗೆದ್ದರೆ ಇಡೀ ಯುರೋಪನ್ನು ಆಕ್ರಮಿಸುವುದು ರಶ್ಯಾದ ‘ವಿಸ್ತರಣಾವಾದಿ’ ಅಧ್ಯಕ್ಷ ಪುಟಿನ್ ಅವರ ಯೋಜನೆ. ಹಾಗಾಗಿ ಉಕ್ರೇನ್ ಸೋಲದಂತೆ ಅದಕ್ಕೆ ಎಲ್ಲಾ ಹಣ ಮತ್ತು ಶಸ್ತ್ರಾಸ್ತ್ರ ಪೂರೈಕೆಗಳ ಸಹಾಯ ಮಾಡಬೇಕು. ಹಾಗೂ ಗೆದ್ದರೆ 2030 ರ ಹೊತ್ತಿಗೆ ರಶ್ಯಾ ಯುರೋಪಿನ ಮೇಲೆ ಆಕ್ರಮಣ ಮಾಡುತ್ತದೆ. ಹಾಗಾಗಿ ಯುರೋ ಕೂಟ ಈ ಯುದ್ಧಕ್ಕೆ ಈಗಿನಿಂದಲೇ ತಯಾರಾಗಬೇಕು. ಈ ತಯಾರಿಯ ಭಾಗ ಈ ಮೂರು ಕ್ರಮಗಳು. ಯು.ಎಸ್ ಯುರೋಪಿನ ಭದ್ರತೆಗೆ ಖರ್ಚು ಮಾಡುತ್ತಾ ಹೋಗುವುದು ಸಾಧ್ಯವಿಲ್ಲ, ಅದನ್ನು ಯುರೋ ಕೂಟ ಹೊತ್ತುಕೊಳ್ಳಬೇಕು ಎಂಬ ಯು.ಎಸ್ ಅಧ್ಯಕ್ಷ ಟ್ರಂಪ್ ಅವರ ಒತ್ತಡ ಈ ತುರ್ತನ್ನು ಹೆಚ್ಚಿಸಿದೆ – ಎಂಬುದು ಅವರ ವಾದ.
ಉಕ್ರೇನ್ ಸೋತರೆ ಅದರ ಅರ್ಥ ಯುರೋಪಿನ ಶಸ್ತ್ರಾಸ್ತ್ರ ಮತ್ತು ಸೈನ್ಯದ ಬಲ ರಶ್ಯಾಕ್ಕಿಂತ ದುರ್ಬಲವಾಗಿದೆಯೆಂದೇ? ರಶ್ಯಾ ‘ಸಾಮ್ರಾಜ್ಯಶಾಹಿ ವಿಸ್ತರಣಾವಾದಿ’ಯೆ? ಉಕ್ರೇನ್ ಯುದ್ಧದಲ್ಲಿ ಗೆದ್ದರೆ ರಶ್ಯಾ ಯುರೋಪಿನ ಮೇಲೆ ಆಕ್ರಮಣ ಮಾಡುವುದೆ? ಈಗ ಯುರೋಪಿನ ರಕ್ಷಣಾ ವೆಚ್ಚ, ಶಸ್ತ್ರಾಸ್ತ್ರ ಉತ್ಪಾದನೆ ಮತ್ತು ಸೈನ್ಯದ ಬಲ ರಶ್ಯಾದಕ್ಕಿಂತ ಕಡಿಮೆ ಇದೆಯೆ? ರಕ್ಷಣಾ ಉದ್ಯಮದಲ್ಲಿ ಹೆಚ್ಚಿನ ಹಣ ಹೂಡಿದರೆ ಮತ್ತು/ಅಥವಾ ಶಸ್ತ್ರಾಸ್ತ್ರ ಉತ್ಪಾದನೆ ಮತ್ತು ಸೈನ್ಯದ ಬಲ ಹೆಚ್ಚಿಸಿದರೆ ರಶ್ಯಾವನ್ನು ಸೋಲಿಸಬಹುದೆ? ಯುರೋಪಿನ ಭದ್ರತೆಗೆ ರಶ್ಯಾದಿಂದ ಅಪಾಯವಿದೆಯೆ? – ಈ ಪ್ರಶ್ನೆಗಳನ್ನು ವಿವರವಾಗಿ ಪರಿಶೀಲಿಸಬೇಕು.

ಉಕ್ರೇನ್ ಯುದ್ಧದ ಅಂತಿಮ ಪರಿಣಾಮವೇನು?
ಉಕ್ರೇನ್ ಯುದ್ಧ ಒಂದು ಪ್ರಾಕ್ಸಿ ಯುದ್ಧ. ಯುದ್ಧ ಉಕ್ರೇನ್ ಮತ್ತು ರಶ್ಯಾದ ನಡುವೆಯಾದರೂ, ಅದರಲ್ಲಿ ಯು.ಎಸ್ ಪ್ರಧಾನವಾಗಿ ಮತ್ತು ನಾಟೋ ಸಹ ಶಸ್ತ್ರಾಸ್ತ್ರ, ಮದ್ದುಗುಂಡು ಪೂರೈಕೆ, ವಿಮಾನ-ಕ್ಷಿಪಣಿ ಇತ್ಯಾದಿ ಬಳಕೆಯಲ್ಲಿ ತರಬೇತಿ, ಗೂಢಚಾರ ಮಾಹಿತಿ, ನಿರ್ವಹಣೆಯಲ್ಲಿ ಪಾಲುಗೊಂಡಿವೆ. ಸ್ವಲ್ಪ ಮಟ್ಟಿಗೆ ಯು.ಎಸ್ ನಾಟೋ ಮತ್ತು ಅವರ ಬಾಡಿಗೆ ಸೈನಿಕರೂ ನೇರ ಯುದ್ಧದಲ್ಲಿ ಸಹ ಪಾಲಗೊಂಡಿದ್ದಾರೆ. ಆದರೂ ರಶ್ಯಾವನ್ನು ನೇರವಾಗಿ ಎದುರಿಸುತ್ತಿರುವುದು ಪ್ರಧಾನವಾಗಿ ಉಕ್ರೇನ್ ಸೈನ್ಯ. ಯು.ಎಸ್-ನಾಟೋದ ಭಾಗವಹಿಸುವಿಕೆ ಇದ್ದರೂ ಸೀಮಿತವೇ. ಎರಡೂ ಕಡೆಯಿಂದ ಅವರ ಪೂರ್ಣ ಮಿಲಿಟರಿ ಬಲದ ಪ್ರಯೋಗ ಆಗಿಲ್ಲ. ಹಾಗಾಗಿ ಉಕ್ರೇನ್ ಯುದ್ಧದ ಸೋಲು-ಗೆಲುವಿನ ಮೇಲೆ ಯುರೋಪ್ ಮತ್ತು ರಶ್ಯಾದ ಮಿಲಿಟರಿ ಬಲಾಬಲಗಳನ್ನು ನಿರ್ಧರಿಸುವುದು ಸರಿಯಲ್ಲ. ಅಂದರೆ ಉಕ್ರೇನ್ ಯುದ್ಧದಲ್ಲಿ ಸೋತರೆ ರಶ್ಯಾಕ್ಕೆ ಹೋಲಿಸಿದರೆ ಉಕ್ರೇನಿನ ಮಿಲಿಟರಿ ದುರ್ಬಲವಾಗಿದೆ ಅಂತ ಹೇಳಬಹುದೇ ವಿನಃ ಯುರೋಪಿನ ಮಿಲಿಟರಿ ದುರ್ಬಲವಾಗಿದೆ ಎಂದು ಹೇಳುವುದು ತಪ್ಪು.
ಯುರೋಪಿನ ಹೆಚ್ಚು ಕಡಿಮೆ ಎಲ್ಲ ದೇಶಗಳು ನಾಟೋ ಮಿಲಿಟರಿ ಕೂಟದ ಭಾಗ. ನಾಟೋದ ಪ್ರಮುಖ ಉದ್ದೇಶವೇ ಹಿಂದೆ ಸೋವಿಯೆಟ್ ಒಕ್ಕೂಟ ಮತ್ತು ಇಂದು ರಶ್ಯಾದ ‘ಬೆದರಿಕೆ’ಗೆ ಸಿದ್ಧವಿರುವುದು. ಪ್ರತಿ ಯುರೋ ಕೂಟದ ಸದಸ್ಯ ದೇಶ ತನ್ನದೇ ಸೈನ್ಯ, ಶಸ್ತ್ತಾಸ್ತ್ರಗಳನ್ನು ಹೊಂದಿರುವುದಲ್ಲದೆ, ನಾಟೋ ಭಾಗವಾಗಿ ಯು.ಎಸ್ ಸೈನ್ಯ, ಅಣ್ವಸ್ತ್ರ ಸೇರಿದಂತೆ ಶಸ್ತ್ತಾಸ್ತ್ರದ ಬಹುಪಾಲು ಯುರೋಪಿನ ಬೆಂಬಲಕ್ಕಿದೆ.
ಇದನ್ನೂ ಓದಿ : ಪಾಶ್ಚಿಮಾತ್ಯ ದೇಶಗಳ ಹೆಚ್ಚುತ್ತಿರುವ ಮಿಲಿಟರಿ ವೆಚ್ಚಗಳು ಮತ್ತು ಸಾಮ್ರಾಜ್ಯಶಾಹಿಯ ಪ್ರಸಕ್ತ ರಾಜಕೀಯ ಅರ್ಥಶಾಸ್ತ್ರ
ಯುರೋಪಿನ ಮಿಲಿಟರಿ ದುರ್ಬಲವೇ?
ಯುರೋಪಿನ ಮಿಲಿಟರಿ ಬಲ ರಶ್ಯಾಕ್ಕಿಂತ ಕಡಿಮೆಯಲ್ಲ. ಒಟ್ಟು ಮಿಲಿಟರಿ ಬಲ ಯುರೋಪಿಯನದ್ದು 20 ಲಕ್ಷವಾದರೆ, ರಶ್ಯಾದ್ದು ಸುಮಾರು 13 ಲಕ್ಷ. ಫೈಟರ್/ಸಾಗಾಣಿಕೆ ವಿಮಾನಗಳು, ಯುದ್ಧನೌಕೆಗಳು, ಟ್ಯಾಂಕುಗಳು, ಸಶಸ್ತ್ರ ಮಿಲಿಟರಿ ವಾಹನಗಳು – ಇವುಗಳ ಸಂಖ್ಯೆಯಲ್ಲಿ ಯುರೋಪಿನದ್ದು ರಶ್ಯಾಕ್ಕಿಂತ ಗಮನಾರ್ಹವಾಗಿ ಹೆಚ್ಚಿದೆ. ತೋಪುಗಳು ಮತ್ತು ದೂರಗಾಮಿ ಕ್ಷಿಪಣಿಗಳ ಸಂಖ್ಯೆಯಲ್ಲಿ ಮಾತ್ರ ರಶ್ಯದ್ದು ಯುರೋಪಿಗಿಂತ ಹೆಚ್ಚಿದೆ. ರಶ್ಯಾದ ರಕ್ಷಿಸಬೇಕಾದ ಭೂವಿಸ್ತಾರ (1.7 ಕೋಟಿ ಚದರ ಕಿಮಿ) ಯುರೋಪಿನ ಭೂವಿಸ್ತಾರದ (1.2 ಕೋಟಿ ಚದರ ಕಿಮಿ) ಸುಮಾರು ಒಂದುವರೆ ಪಟ್ಟಿದ್ದರೂ ಯುರೋಪಿನ ಮಿಲಿಟರಿ ಬಲ ರಶ್ಯಕ್ಕಿಂತ ಹೆಚ್ಚಿದೆ. ಮಾತ್ರವಲ್ಲದೆ ರಶ್ಯಾ ಮುಖ್ಯ ಎದುರಾಳಿಯಾದ ಯ.ಎಸ್ ನ ವಿರುದ್ಧ ಸಹ ರಕ್ಷಣೆಗೆ ಸಿದ್ಧವಿರಬೇಕು.
ಯುರೋಪಿನ ಮಿಲಿಟರಿ ವೆಚ್ಚ ಯು.ಎಸ್ ನಂತರ ಎರಡನೇ ಅತಿ ದೊಡ್ಡ ವೆಚ್ಚ. ಅದು ರಶ್ಯಾದ ಮೂರು ಪಟ್ಟು ಮತ್ತು ಚೀನಾಕ್ಕೆ ಹೆಚ್ಚು ಕಡಿಮೆ ಸಮನಾದ್ದು. 2022ರ ಜಾಗತಿಕ ಮಿಲಿಟರಿ ವೆಚ್ಚದಲ್ಲಿ ಯು.ಎಸ್ 53.6% ಪಾಲು ಮತ್ತು ಯುರೋಪ್ 12.6% ವೆಚ್ಚ ಮಾಡಿ ಅನುಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಚೀನಾದ್ದು ಪಾಲು 10.2% ಮತ್ತು ರಶ್ಯಾದ್ದು ಕೇವಲ 3%. ಅಂದರೆ ಯುರೋಪ್ ನ ಮಿಲಿಟರಿ ವೆಚ್ಚ ರಶ್ಯಾದ ನಾಲ್ಕು ಪಟ್ಟು. 2025ರಲ್ಲಿ ಯುರೋಪ್ ನ ಮಿಲಿಟರಿ ವೆಚ್ಚ 559 ಶತಕೋಟಿ ಡಾಲರ್ ಆದರೆ ರಶ್ಯದ್ದು 190 ಶತಕೋಟಿ ಡಾಲರ್. ಯುರೋಪಿನ ಮಿಲಿಟರಿ ಬಜೆಟ್ 2024ರಿಂದ 2025ಕ್ಕೆ 20% ಏರಿದರೆ, ರಶ್ಯಾದ ಏರಿಕೆ 5.9% ಆಗಿತ್ತು. ಹೀಗೆ ಯಾವ ರೀತಿ ನೋಡಿದರೂ ಯುರೋಪಿನ ಮಿಲಿಟರಿಯಾಗಿ ದುರ್ಬಲವೂ ಅಲ್ಲ, ಬಜೆಟ್ ಹೆಚ್ಚಿಸಲು ಕಾರಣವೂ ಇಲ್ಲ.

2022ರ ಜಾಗತಿಕ ಮಿಲಿಟರಿ ವೆಚ್ಚದಲ್ಲಿ ಯು.ಎಸ್ 53.6% ಪಾಲು
ಉಕ್ರೇನ್ ನಂತರ ರಶ್ಯಾ ಯುರೋಪಿನ ಮೇಲೆ ಯುದ್ಧ ಹೂಡುವುದೇ?
ಉಕ್ರೇನ್ ಯುದ್ಧ ಹೂಡಲು ರಶ್ಯಾಕ್ಕೆ ನಿರ್ದಿಷ್ಟ ಸೀಮಿತ ಉದ್ದೇಶವಿತ್ತು. ಪೂರ್ವ ಉಕ್ರೇನಿನ ‘ಸಂತ್ರಸ್ತ’ ರಶ್ಯಾ ಬಹುಸಂಖ್ಯಾತ ಪ್ರದೇಶಗಳ ‘ವಿಮೋಚನೆ’ ಮತ್ತು ನಾಟೋ ಅಥವಾ ಯುರೋ ಕೂಟ ಸೇರದೆ ಉಕ್ರೇನ್ ತಟಸ್ಥ ದೇಶವಾಗಿ ಉಳಿಯುವಂತೆ ಒತ್ತಡ ಹಾಕುವುದು ರಶ್ಯಾದ ಉದ್ದೇಶ. ಇದು ರಶ್ಯದ ಭದ್ರತೆ ಹೆಚ್ಚಿಸುತ್ತದೆ ಮತ್ತು ನಾಟೋದ ವಿಸ್ತರಣೆಗೆ ತಡೆ ಒಡ್ಡುತ್ತದೆ ಎಂದು ರಶ್ಯಾದ ನಂಬಿಕೆ. ಈ ಉದ್ದೇಶ ಈಡೇರಿದರೆ ರಶ್ಯಾಕ್ಕೆ ಇಡೀ ಉಕ್ರೇನ್ ವಶ ಪಡಿಸಿಕೊಳ್ಳುವ ಅಥವಾ ಯುರೋಪಿನ ಮೇಲೆ ಆಕ್ರಮಣ ಮಾಡುವ ಇರಾದೆ ಇದ್ದಂತಿಲ್ಲ. ರಶ್ಯಾದ ಆರ್ಥಿಕದ ಮೇಲೆ ಈ ಯುದ್ಧ ಮತ್ತು ಅದರಿಂದಾಗಿ ಹೊರಿಸಲಾದ ಆರ್ಥಿಕ ದಿಗ್ಬಂಧನಗಳು ತೀವ್ರ ಪರಿಣಾಮ ಬೀರಿದೆ. ಹಾಗಾಗಿ ಅದರ ಸೀಮಿತ ಉದ್ದೇಶ ಈಡೇರಿದರೆ ಯುರೋಪಿನ ಮೇಲೆ ರಶ್ಯ ಯುದ್ಧಕ್ಕೆ ಹೋಗುವ ಸಾಧ್ಯತೆ ಕಡಿಮೆ.
ಉಕ್ರೇನ್ ಯುದ್ಧ ಶುರು ಮಾಡಿದ್ದು ತಾಂತ್ರಿಕವಾಗಿ ರಶ್ಯಾ ಎಂಬುದು ನಿಜ. ಆದರೂ ರಶ್ಯದ ವಿರುದ್ಧವಿರುವ ನಾಟೋ ಕೂಟವನ್ನು ವಿಸ್ತರಿಸುತ್ತಾ ಹೋಗಿ, ಉಕ್ರೇನಿನಲ್ಲಿ ಕ್ಷಿಪ್ರದಂಗೆ ನಡೆಸಿ ಅದನ್ನು ಸೇರಿಸಿಕೊಳ್ಳುವ ಹುನ್ನಾರ ನಡೆಸಿದ್ದು ರಶ್ಯಾವನ್ನು ಮಿಲಿಟರಿ ಕಾರ್ಯಾಚರಣೆಗೆ ಪ್ರಚೋದಿಸಲೆಂದೇ. ಉಕ್ರೇನಿನಲ್ಲಿ ಯು.ಎಸ್ ನಿರ್ದೇಶಿತ ಸರಕಾರ ಮತ್ತು ನಾಟೋ ನೆಲೆ ಸ್ಥಾಪಿಸಿ ಭದ್ರತಾ ಬೆದರಿಕೆ ಹಾಕಿ ರಶ್ಯಾವನ್ನು ಯುದ್ಧಕ್ಕೆ ಪ್ರಚೋದಿಸುವುದು ಮತ್ತು ಆ ಮೂಲಕ ದೀರ್ಘ ಯುದ್ಧದಲ್ಲಿ ಮತ್ತು ಆರ್ಥಿಕ ದಿಗ್ಬಂಧನದಲ್ಲಿ ರಶ್ಯಾವನ್ನು ಸಿಲುಕಿಸಿ ಅದು ಕುಸಿಯುವಂತೆ ಮಾಡುವುದು ಯು.ಎಸ್ ಮೂಲ ಉದ್ದೇಶವಾಗಿತ್ತು. ಯುದ್ಧದ ಮೊದಲ ಹಂತದಲ್ಲಿ (2022-24) ಯುರೋಪಿಯನ್ ನಾಯಕರು ಸಮಜಾಯಿಷಿ ಮೂಲಕ ಯುದ್ಧ ನಿಲ್ಲಿಸಬೇಕು ಎಂದು ಬಯಸಿದ್ದರು. ರಶ್ಯಧ ಮೇಲೆ ಆರ್ಥಿಕ ದಿಗ್ಬಂಧನಕ್ಕೆ ವಿರುದ್ಧವಾಗಿದ್ದರು. ಆದರೆ ಆಗಿನ ಯು.ಎಸ್ ಅಧ್ಯಕ್ಷ ಬಿಡೆನ್ ತನ್ನ ನೀತಿಯನ್ನು ಅವರ ಮೇಲೆ ಹೊರಿಸಿದ್ದರು.
ಆದರೆ ಟ್ರಂಪ್ ಅಧ್ಯಕ್ಷರಾದ ಮೇಲೆ ಅವರಿಗೆ ಅದು ಆದ್ಯತೆಯಲ್ಲದಿದ್ದರೂ, ಅವರು ಯುದ್ಧ ನಿಲ್ಲಿಸಲು ಪ್ರಯತ್ನಿಸುತ್ತಿದ್ದರೂ ಯುರೋಪಿಯನ್ ನಾಯಕರು ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಯುದ್ಧವನ್ನು ನಿರಂತರವಾಗಿ ಮುಂದುವರೆಸಲು ವಿಸ್ತರಿಸಲು ಪ್ರಯತ್ನ ನಡೆಸಿದ್ದಾರೆ. ಉಕ್ರೇನ್ ಪೂರ್ಣ ನಾಶದತ್ತ ಹೋಗುತ್ತಿದ್ದರೂ ಲೆಕ್ಕಿಸದೆ, ಝೆಲೆನ್ಸ್ಕಿ ಅವರಂತೂ ತಮ್ಮ ಅಧಿಕಾರ ಉಳಿಸಿಕೊಳ್ಳಲು ನಿರಂತರ ಯುದ್ಧಾಸಕ್ತರಾಗಿದ್ದಾರೆ. ಅವರಿಗೆ ಯುರೋಪಿನ ನಾಟೋ ಪೂರ್ಣ ಬೆಂಬಲ ಕೊಡುತ್ತಿದೆ. ಹಾಗಾಗಿ ಮಿಲಿಟರಿಯಾಗಿ ಉಕ್ರೆನ್ ಸೋತಿದ್ದರೂ, ಯುದ್ಧವನ್ನು ಅನಿರ್ದಿಷ್ಟವಾಗಿ ಮುಂದುವರೆಸುತ್ತಿರುವುದು ಯುರೋಪಿಯನ್ ನಾಟೋ ಮತ್ತು ಉಕ್ರೇನ್. ರಶ್ಯಾ ಇಡೀ ಯುರೋಪಿನ ಮೇಲೆ ಆಕ್ರಮಣ ಮಾಡಲು ಪ್ರಚೋದಿಸಿ ಇಡೀ ಯುರೋಪು ರಶ್ಯಾದ ಮೇಲೆ ಬಿದ್ದು ನಾಶ ಮಾಡಲು ಅವಕಾಶಕ್ಕೆ ಕಾಯುತ್ತಿರುವಂತೆ ಕಾಣುತ್ತದೆ.
ಹಾಗಾಗಿ ಯುರೋಪಿನ ಮರು-ಶಸ್ರ್ರೀಕರಣಕ್ಕೆ ರಶ್ಯಾ ಯುರೋಪಿನ ಮೇಲೆ ಯುದ್ಧ ಹೂಡಬಹುದು ಎಂಬ ಭೀತಿ ಕಾರಣವಲ್ಲ. ಬೇರೆನೋ ಕಾರಣವಿದೆ. ಏನದು?

ಉಕ್ರೇನ್ ಯುದ್ಧ ಯುರೋಪಿನ ಆರ್ಥಿಕ ಬಿಕ್ಕಟ್ಟಿಗೆ ಕಾರಣವೇ?
ಉಕ್ರೇನ್ ಯುದ್ಧದ ಮೊದಲೇ ಯುರೋಪಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. 1991ರಿಂದ ಯು.ಎಸ್ ಮತ್ತು ಜಾಗತಿಕ ಹಣಕಾಸು ಬಂಡವಾಳದ ಅಧಿಪತ್ಯ ಸಾರ್ವತ್ರಿಕವಾಗುತ್ತಿದ್ದಂತೆ ಯುರೋಪಿನ ಆರ್ಥಿಕ ಸಹ ಯು.ಎಸ್ ನಂತೆ ಕ್ರಮೇಣ ಕೈಗಾರಿಕಾ ಉತ್ಪಾದನೆಯಿಂದ ದೂರ ಸರಿಯುತ್ತಾ, (ಅಪ-ಕೈಗಾರಿಕೀಕರಣ ಮತ್ತು) ಹಣಕಾಸೀಕರಣಕ್ಕೆ ಒಳಗಾಯಿತು. 1991ರಲ್ಲಿ ಜಾಗತಿಕ ಜಿಡಿಪಿಯ ಪಾಲಿನಲ್ಲಿ (28.5%) ಮೊದಲ ಸ್ಥಾನದಲ್ಲಿದ್ದ ಯುರೋಪಿನ (ಈಗಿನ ಯುರೋಕೂಟದ 27 ದೇಶಗಳ) ಆರ್ಥಿಕ ಬಲ ಕುಗ್ಗುತ್ತಾ ಬಂದಿದೆ. ಅದರ ಜಿಡಿಪಿ 2021ರ ಹೊತ್ತಿಗೆ 17.2 % ಕ್ಕೆ ಇಳಿದು ಅದು ಬ್ರಿಕ್ಸ್ (ಚೀನಾ, ಭಾರತ, ರಶ್ಯಾ, ಬ್ರೆಜಿಲ್, ದ.ಆಫ್ರಿಕಾ) ಕೂಟ (26%) ಮತ್ತು ಯು.ಎಸ್ (24.1%) ನಂತರ ಮೂರನೇ ಸ್ಥಾನದಲ್ಲಿದೆ. 2016-2021 ಅವಧಿಯಲ್ಲಿ ಯುರೋಪಿನ ಜಿಡಿಪಿ ಬೆಳವಣಿಗೆ ದರ ಕೇವಲ 1.3 ಇದ್ದು, ಬ್ರಿಕ್ಸ್ ದೇಶಗಳು 3.7% ದರದೊಂದಿಗೆ ಬಹಳ ಮುಂದಿವೆ. 2021ರ ಜಾಗತಿಕ ರಫ್ತಿನ ಪಾಲಿನಲ್ಲಿ ಸಹ (17.3%) ಯುರೋಪ್, ಬ್ರಿಕ್ಸ್ ದೇಶಗಳ (22%) ನಂತರ ಎರಡನೇ ಸ್ಥಾನಕ್ಕೆ ಇಳಿದಿದೆ. ಜಾಗತಿಕ ಕೈಗಾರಿಕಾ ಮೌಲ್ಯವರ್ಧನೆಯ ಪಾಲಿನಲ್ಲಿ 1991ರಲ್ಲಿ ಯುರೋಪ್ 28% ಹೊಂದಿದ್ದು, ಅದು 2021ರಲ್ಲಿ 16% ಗೆ ಇಳಿದಿದೆ. ಇದು ಅಪ-ಕೈಗಾರಿಕೀಕರಣದ ಸ್ಪಷ್ಟ ಸೂಚಕ. ಇದರಲ್ಲಿ 1991ರಲ್ಲಿ ಬ್ರಿಕ್ಸ್ ಪಾಲು ಕೇವಲ 8% ಇದ್ದಿದ್ದು, 2021ರಲ್ಲಿ 33% ಕ್ಕೆ ಜಿಗಿದಿದೆ. ಇದಕ್ಕೆ ಕಾರಣ ಯುರೋಪ್ ತಂತ್ರಜ್ಞಾನ ಬೆಳವಣಿಗೆ ಮತ್ತು ಉತ್ಪಾದನೆ-ಉತ್ಪಾದಕತೆಗಳಲ್ಲಿ ಹಿಂದೆ ಬಿದ್ದಿದ್ದು. ಯುರೋಪಿನ ಸ್ಥಳೀಯ ಬಂಡವಾಳ ಜಾಗತಿಕ ಹಣಕಾಸು ಬಂಡವಾಳದ ಹೆಚ್ಚು ಕಡಿಮೆ ಪೂರ್ಣ ಅಧಿಪತ್ಯಕ್ಕೆ ಒಳಪಟ್ಟಿದ್ದು. ಯುರೋ ಕೂಟ ಆರ್ಥಿಕ ಒಕ್ಕೂಟದ ಭಾಗವಾದ ದೇಶಗಳ ಸಂಖ್ಯೆ 1991ರಲ್ಲಿ 12 ದೇಶಗಳಿಂದ 2009ರಲ್ಲಿ 27ಕ್ಕೆ ಏರಿ ದೊಡ್ಡ ಮಾರುಕಟ್ಟೆಯಿದ್ದರೂ ಸಹ ಅದರ ಆರ್ಥಿಕ ಬಲ ಜಾಗತಿಕವಾಗಿ ಕುಗ್ಗಿದೆ.
ಯುರೋಪಿನ ಅತ್ಯಂತ ಪ್ರಬಲ ಆರ್ಥಿಕಗಳಾದ ಫ್ರಾನ್ಸ್, ಜರ್ಮನಿ ಯು.ಎಸ್ ಅಧಿಪತ್ಯದಿಂದ ಸ್ವತಂತ್ರವಾದ ಆರ್ಥಿಕ ಬೆಳವಣಿಗೆಗೆ ಪ್ರಯತ್ನಿಸಿದವು. ಚೀನಾ ಮತ್ತು ರಶ್ಯಾಗಳ ‘ಯುರೇಶಿಯನ್ ಕಾರಿಡಾರ್’ ಬೆಳವಣಿಗೆಯ ಸಂಯೋಜಿತ ಯೋಜನೆ ಹಲವು ಯುರೋಪಿನ್ ದೇಶಗಳಿಗೆ ಆಕರ್ಷಕ ಎನಿಸಿದವು. ಚೀನಾದ ‘ಬೆಲ್ಟ್ ಅಂಡ್ ರೋಡ್ ಇನಿಶಿಯೆಟಿವ್’ ನಲ್ಲಿ ಇಟಲಿ ಸೇರಿದಂತೆ ಯುರೋಕೂಟದ 27 ದೇಶಗಳಲ್ಲಿ 17 ದೇಶಗಳು ಭಾಗವಹಿಸಿದ್ದವು. ಇಟಲಿ ಮಾತ್ರ 2023ರಲ್ಲಿ ಉಕ್ರೇನ್ ಯುದ್ಧಾನಂತರ ಅದರಿಂದ ಹಿಂಜರಿಯಿತು. ಜರ್ಮನಿ ಸಹ ರಶ್ಯಾದ ಜತೆ ಆರ್ಥಿಕ ಬಾಂಧವ್ಯ ಹೆಚ್ಚಿಸಲು ಪ್ರಯತ್ನಿಸಿತು. ಜರ್ಮನಿಯ ಕೈಗಾರಿಕಾ ತಯಾರಿಕೆ ಉದ್ಯಮ 2021ರ ಮೊದಲೇ ಹಲವು ತಪ್ಪು ನೀತಿಗಳಿಂದಾಗಿ ಸ್ಥಗಿತತೆ ಕಾಣಲಾರಂಭಿಸಿತ್ತು. ಜರ್ಮನಿ ಹಸಿರು ಶಕ್ತಿ ಯೋಜನೆಯನ್ನು ತರಾತುರಿಯಲ್ಲಿ ಜಾರಿ ಮಾಡಿ, ತನ್ನ ಎಲ್ಲ ಕಲ್ಲಿದ್ದಲು, ಅಣು ಶಕ್ತಿ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಹೆಚ್ಚು ಕಡಿಮೆ ಒಟ್ಟಿಗೆ ಮುಚ್ಚಿತು. ಸೌರ ಮತ್ತು ಗಾಳಿಯಂತ್ರಗಳ ಶಕ್ತಿ ಸಾಲದಾಯಿತು. ಇದರ ಫಲವಾಗಿ ಶಕ್ತಿ ಕೊರತೆ ವಿಪರೀತವಾಗಿ ಕೈಗಾರಿಕೆಗಳು ಬಿಕ್ಕಟ್ಟಿಗೆ ಸಿಕ್ಕವು. ಆಗಲೇ ಫೋಕ್ಸ್ ವ್ಯಾಗನ್ ಸೇರಿದಂತೆ ಯುರೋಪಿನ ಪ್ರಧಾನ ಕಂಪನಿಗಳು ಜಾಗತಿಕ ಪೈಪೋಟಿ ಎದುರಿಸಲು ಉತ್ಪಾದನೆಯನ್ನು ಕಡಿಮೆ ವೇತನದ ದೇಶಗಳಿಗೆ ವರ್ಗಾಯಿಸಿದವು. ಕೈಗಾರಿಕೆ ಕುಂಠಿತವಾಧಂತೆ ನಿರುದ್ಯೋಗ ಹೆಚ್ಚಿತು. ಇದಲ್ಲದೆ 1990ರ ದಶಕದ ನಂತರದ ಜಾಗತಿಕ ಹಣಕಾಸು ಬಂಡವಾಳ ಪ್ರೇರಿತ ನೀತಿಗಳ ಭಾಗವಾಗಿ ಕಲ್ಯಾಣ ಕ್ರಮಗಳ ಕಡಿತ ಮಾಡುವ ‘ಮಿತವ್ಯಯ’ ಜನತೆಯ ಆದಾಯ ಮತ್ತು ಸರಕು-ಸೇವೆಗಳಿಗೆ ಬೇಡಿಕೆ ಕುಗ್ಗಿತು. ಇದು ಆರ್ಥಿಕವನ್ನು ಇನ್ನಷ್ಟು ಜರ್ಝರಿತವಾಗಿಸಿತು.

‘ಮಿತವ್ಯಯ’ದ ವಿರುದ್ಧ ಭಾರೀ ಪ್ರತಿಭಟನೆ
ಯುರೋಪಿನ ದೇಶಗಳು ಚೀನಾ-ರಶ್ಯಗಳ ಜತೆ ಸಹಜ ಆರ್ಥಿಕ ಬಾಂಧವ್ಯ ಹೊಂದುವುದಕ್ಕೆ ಜಾಗತಿಕ ಹಣಕಾಸು ಬಂಡವಾಳ ಅದರ ಪ್ರತಿನಿಧಿ ಯುರೋಪಿಯನ್ ಕಮಿಶನ್ ಮತ್ತು ಯು.ಎಸ್ ಸರಕಾರದ ಮೂಲಕ ಒತ್ತಡ ಹೇರಿತು. ಇವೆಲ್ಲದರ ಫಲವಾಗಿ ಮತ್ತು ಜತೆಗೆ ಕೊವಿಡ್ ಪರಿಣಾಮವೂ ಸೇರಿ, 2021ರ ಹೊತ್ತಿಗೆ ಯುರೋ ಕೂಟ ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ನವೆಂಬರ್ 2021ರ ಹೊತ್ತಿಗೆ 5.2% ಹಣದುಬ್ಬರ ಎದುರಿಸುತ್ತಿತ್ತು. ಉಕ್ರೇನ್ ಯುದ್ಧ ಈ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿರಲಿಲ್ಲ. ಆದರೆ ಉಕ್ರೇನ್ ಯುದ್ಧ ಮತ್ತು ಅದನ್ನು ಯುರೋ ಕೂಟ ಸರಕಾರಗಳು ಮತ್ತು ಯುರೋ ಕಮಿಶನ್ ನಿರ್ವಹಿಸಿದ ರೀತಿ ಆರ್ಥಿಕ ಬಿಕ್ಕಟ್ಟನ್ನು ಖಂಡಿತವಾಗಿ ಇನ್ನಷ್ಟು ಬಿಗಡಾಯಿಸಿತು.
ರಶ್ಯಾದಿಂದ ಅಗ್ಗದ ತೈಲ/ಗ್ಯಾಸ್ ಆಮದಿನಲ್ಲಿ ಹಂತಹಂತವಾಗಿ ತೀವ್ರ ಕಡಿತ ಮತ್ತು ಯು.ಎಸ್ ನಿಂದ ದುಬಾರಿ ಎಲ್.ಎನ್.ಜಿ ಆಮದು ತೀವ್ರ ಇಂಧನ ಕೊರತೆ, ಬೆಲೆಏರಿಕೆ, ಹಣದುಬ್ಬರಕ್ಕೆ ಕಾರಣವಾಯಿತು. ರಶ್ಯಾ ಮತ್ತು ಅದರ ಜತೆ ಆರ್ಥಿಕ ಸಂಬಂಧ ಕಡಿದುಕೊಳ್ಳಲು ನಿರಾಕರಿಸಿದ ದೇಶಗಳು, ಸಂಸ್ಥೆಗಳ ಮೇಲೆ ಹೊರಿಸಿದ ಅಭೂತಪೂರ್ವ ಆರ್ಥಿಕ ದಿಗ್ಬಂಧನ ಯುರೋ ಕೂಟದ ಆರ್ಥಿಕದ ಮೇಲೆ ತೀವ್ರ ದುಷ್ಪರಿಣಾಮ ಬೀರಿತು. ಇತ್ತೀಚಿನ ದಶಕಗಳಲ್ಲೇ ಹೆಚ್ಚಿನ ಹಣದುಬ್ಬರ (2021ರಲ್ಲಿ 2.9% ಇದ್ದಿದ್ದು 2022ರಲ್ಲಿ 9.2% ಗೆ ಏರಿ 2023, 2024 ರಲ್ಲಿ 6.4 ಮತ್ತು 2.6% ಗೆ ಇಳಿಯಿತು) ಮತ್ತು ನಿರುದ್ಯೋಗಗಳಲ್ಲಿ ಏರಿಕೆ ಎದುರಿಸುತ್ತಿವೆ. ಈಗ ನಿರುದ್ಯೋಗ ದರ 6.0 ಇದೆ. ಯುವಜನರಲ್ಲಿ 15% ನಿರುದ್ಯೋಗ ಇದೆ. ಯುರೋಪಿನ ‘ವರ್ಕ ಶಾಪ್’ಎನಿಸಿದ್ದ ಜರ್ಮನಿ ರಶ್ಯದ ಅಗ್ಗದ ಇಂಧನ, ಚೀನಾದ ದೊಡ್ಡ ಮಾರುಕಟ್ಟೆಯ ಮೇಲೆ ಅವಲಂಬಿಸಿತ್ತು. ಎರಡರ ಮೇಲೂ ಯುದ್ಧ ದುಷ್ಟಪರಿಣಾಮ ಬೀರಿದ್ದು, ಅದು 2024 ಮತ್ತು 2025 ಎರಡು ವರ್ಷಗಳ ಕಾಲ ಆರ್ಥಿಕ ಕುಸಿತ ಕಂಡಿದೆ.
ಇದನ್ನೂ ನೋಡಿ : ಸರಕಾರಕ್ಕೆ ತೈಲದ ಆಟ, ಜನರಿಗೆ ಜೇಬಿನ ದರೋಡೆ! | ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media
