ನೈಸ್‌ ಹೋರಾಟ | ರೈತ–ಕಾರ್ಮಿಕ ಮುಖಂಡರ ಬಂಧನ ಖಂಡಿಸಿ ರಾಜ್ಯವ್ಯಾಪಿ ಹೋರಾಟಕ್ಕೆ ಸಿಪಿಐ(ಎಂ) ಕರೆ

ಬೆಂಗಳೂರು: ನೈಸ್‌ (NICE) ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ನೀಡಿರುವ ತೀರ್ಪನ್ನು ಜಾರಿಗೊಳಿಸಬೇಕು ಹಾಗೂ ಅಕ್ರಮವಾಗಿ ಸಂಗ್ರಹಿಸಲಾಗುತ್ತಿರುವ ಟೋಲ್‌ ವಸೂಲಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತ–ಕಾರ್ಮಿಕ ಮುಖಂಡರನ್ನು ಬಂಧಿಸಿರುವುದನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)  ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.

ಜುಲೈ 29, 2026ರಂದು ಕರ್ನಾಟಕ ಹೈಕೋರ್ಟ್‌ ನೈಸ್‌ ಭೂಮಿಯನ್ನು ರೈತರಿಗೆ ವಾಪಸ್‌ ನೀಡಬೇಕು ಮತ್ತು ಅಕ್ರಮ ಟೋಲ್‌ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಆದೇಶ ನೀಡಿತ್ತು. ಆದರೆ, ಸುಮಾರು 50 ದಿನಗಳು ಕಳೆದರೂ ರಾಜ್ಯ ಸರ್ಕಾರ ಈ ಆದೇಶವನ್ನು ಜಾರಿಗೊಳಿಸಿಲ್ಲ ಎಂದು ಸಿಪಿಐ(ಎಂ)  ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್‌ ಆರೋಪಿಸಿದ್ದಾರೆ.

ಹೈಕೋರ್ಟ್‌ ತೀರ್ಪಿನ ಜಾರಿಗೆ ಒತ್ತಾಯಿಸಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ ರಾಜ್ಯ ಸರ್ಕಾರ ಮುಖಂಡರನ್ನು ಬಂಧಿಸಲು ಮುಂದಾಗಿದೆ ಎಂದು ಪಕ್ಷ ಆರೋಪಿಸಿದೆ. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷ ಯು. ಬಸವರಾಜ, ಮುಖಂಡರಾದ ಎನ್. ವೆಂಕಟಾಚಲಯ್ಯ, ಶಿವಣ್ಣ, ಚಂದ್ರಣ್ಣ ಹಾಗೂ ಕಾರ್ಮಿಕ ಮುಖಂಡ ಮಹಾಂತೇಶ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಇನ್ನೂ ಕೆಲವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.

ಇದನ್ನೂ ಓದಿ : ನೈಸ್‌ ಹೋರಾಟ ಹತ್ತಿಕ್ಕುವ ಯತ್ನ? -ಹೋರಾಟಗಾರರನ್ನು ವಶಕ್ಕೆ ಪಡೆದ ಡಿಕೆಶಿ ಸರ್ಕಾರ

ಫ್ರೀಡಂ ಪಾರ್ಕ್‌ ಹೊರತುಪಡಿಸಿ ಬೇರೆಡೆ ಪ್ರತಿಭಟನೆ ನಡೆಸಲು ಅವಕಾಶ ನೀಡದಿರುವ ಸರ್ಕಾರದ ಕ್ರಮವನ್ನೂ ಸಿಪಿಐ(ಎಂ) ಪ್ರಶ್ನಿಸಿದೆ. ನೈಸ್‌ ವಿರುದ್ಧದ ಹೈಕೋರ್ಟ್‌ ತೀರ್ಪನ್ನು 50 ದಿನ ಕಳೆದರೂ ಜಾರಿಗೊಳಿಸದ ಸರ್ಕಾರ, ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸುವ ಹಕ್ಕನ್ನೂ ನಿರಾಕರಿಸುತ್ತಿದೆ ಎಂದು ಪಕ್ಷ ಟೀಕಿಸಿದೆ.

ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕು, ಪ್ರತಿಭಟನೆಗೆ ಅವಕಾಶ ನೀಡಬೇಕು ಹಾಗೂ ಹೈಕೋರ್ಟ್‌ ತೀರ್ಪಿನ ಅನ್ವಯ ನೈಸ್‌ ಕಂಪನಿಯ ವಶದಲ್ಲಿರುವ ಭೂಮಿಯನ್ನು ರೈತರಿಗೆ ವಾಪಸ್‌ ನೀಡಬೇಕು. ಅಕ್ರಮ ಟೋಲ್‌ ಸಂಗ್ರಹವನ್ನು ತಕ್ಷಣ ನಿಲ್ಲಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

ಈ ಕ್ರಮವನ್ನು ಖಂಡಿಸಿ ಪಕ್ಷದ ಸಮಿತಿಗಳು, ಸಾಮೂಹಿಕ ಸಂಘಟನೆಗಳು ಹಾಗೂ ಹಿತೈಷಿ ಸಂಘಟನೆಗಳನ್ನು ಒಳಗೊಂಡು ರಾಜ್ಯದಾದ್ಯಂತ ಪ್ರತಿಭಟನೆಗಳನ್ನು ನಡೆಸುವಂತೆ ಸಿಪಿಐ(ಎಂ) ಕರೆ ನೀಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ನೋಡಿ : SIR | 14 ಕೋಟಿ ಮತದಾರರ ಹೆಸರು ಡಿಲೀಟ್‌? ಮತದಾನದ ಹಕ್ಕಿಗೇ ಕತ್ತರಿ! | Janashakthi Media

Donate Janashakthi Media

Leave a Reply

Your email address will not be published. Required fields are marked *