ಜನರ ಹಕ್ಕನ್ನು ಭತ್ಯೆಯಾಗಿ ಪರಿವರ್ತಿಸುವ ಹುನ್ನಾರ
ನವದೆಹಲಿ: “ಗಾಂಧೀಜಿ”ಯನ್ನು ಮತ್ತೆ ಹತ್ಯೆ ಮಾಡಲು ‘ರಾಮ’ನನ್ನು ಬಳಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ರಾಷ್ಟ್ರೀಯ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ‘(ಮನರೇಗ- MGNREGA)ಯ ಬದಲು ಜಿ ರಾಮ್ ಜಿ (VB- G RAM G) ಎಂಬುದರ ಮಸೂದೆಯನ್ನು ಮಂಡಿಸಿರುವುದನ್ನು ಖಂಡಿಸುತ್ತ ಸಿಪಿಐ(ಎಂ) ರಾಜ್ಯ ಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಟಿಪ್ಪಣಿ ಮಾಡಿದ್ದಾರೆ.
“ಈ ಕಾರ್ಯಕ್ರಮವನ್ನು ವಿಫಲಗೊಳಿಸುವುದು ಮತ್ತು ಮುಗಿಸಿ ಬಿಡುವುದೇ ಸರ್ಕಾರದ ಯೋಜನೆಯಾಗಿದೆ. ಇದು ಕೋಟ್ಯಂತರ ಜನರ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೆ, ಒಂದು ಹಕ್ಕು ಆಗಿರುವ ಅದನ್ನು ಸರ್ಕಾರದ ಭತ್ಯೆಯಾಗಿ ಪರಿವರ್ತಿಸಲಾಗಿದೆ. ಜತೆಗೆ, ಈಗಾಗಲೇ ಹಣಕಾಸಿನ ಕೊರತೆಯಿಂದ ಬಳಲುತ್ತಿರುವ ರಾಜ್ಯ ಸರಕಾರಗಳ ಮೇಲೆ 50,000 ಕೋಟಿ ರೂ.ಗಳ ಹೊರೆಯನ್ನು ಹೇರಲಾಗುತ್ತಿದೆ. ನಾವು ಈ ಮಸೂದೆಯನ್ನು ಖಡಾಖಂಡಿತವಾಗಿ ವಿರೋಧಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
MGNREGA ವನ್ನು ರದ್ದುಗೊಳಿಸಲು VB-G RAM G ಮಸೂದೆಯನ್ನು ತಂದಿರುವ ನರೇಂದ್ರ ಮೋದಿ ಸರ್ಕಾರಕ್ಕೆ, ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವುದು ಕೇವಲ ಟ್ರೇಲರ್ ಮಾತ್ರ. ಇದರಿಂದಾಗುವ ಅಪಾಯ ಇನ್ನೂ ಆಳವಾಗಿದೆ.. ಈ ಮಸೂದೆಯು ಹಕ್ಕು-ಆಧಾರಿತ ಖಾತರಿ ನೀಡುವ ಕಾನೂನಿನ ಆತ್ಮವನ್ನು ಅಳಿಸಿಹಾಕುತ್ತದೆ ಮತ್ತು ರಾಜ್ಯಗಳು ಮತ್ತು ಕಾರ್ಮಿಕ ವರ್ಗದ ಹಿತಾಸಕ್ತಿಗಳಿಗೆ ವಿರುದ್ಧವಾದ ಒಂದು ಷರತ್ತುಬದ್ಧ, ಕೇಂದ್ರೀಯವಾಗಿ ನಿಯಂತ್ರಿತವಾಗುವ ಯೋಜನೆಯಾಗಿ ಅದನ್ನು ಬದಲಾಯಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.
ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಹಾಗೂ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆಸಲು ರಾಜ್ಯ ಸರ್ಕಾರದ ದೃಢ ನಿಲುವು
MGNREGA ಅಡಿಯಲ್ಲಿ, ಅಕುಶಲ ದೈಹಿಕ ಕೆಲಸಕ್ಕೆ ಕೂಲಿಯ ಸಂಪೂರ್ಣ ವೆಚ್ಚವನ್ನು ಮತ್ತು ಯೋಜನೆಯ ಸಾಮಗ್ರಿ ವೆಚ್ಚದ ಮುಕ್ಕಾಲು ಭಾಗದವರೆಗೆ ಮತ್ತು ಕುಶಲ ಮತ್ತು ಅರೆ-ಕುಶಲ ಕೆಲಸಗಾರರಿಗೆ ವೇತನದ ಮುಕ್ಕಾಲು ಭಾಗದಷ್ಟು ಹಣವನ್ನು ಕೇಂದ್ರವು ಭರಿಸಬೇಕಾಗಿತ್ತು. RAM G ಅಡಿಯಲ್ಲಿ, ಇದನ್ನು ಬಹುಪಾಲು ರಾಜ್ಯಗಳು ಮತ್ತು ಶಾಸಕಾಂಗಗಳನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಿಗೆ 60:40 ಪ್ರಮಾಣಕ್ಕೆ ಬದಲಿಸಲಾಗುತ್ತದೆ; ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ) 90:10 ಪ್ರಮಾಣವನ್ನು ನಿಗದಿಪಡಿಸಲಾಗುತ್ತದೆ. ಇದರಿಂದಾಗಿ ರಾಜ್ಯಗಳು ಈಗ ಸುಮಾರು 50,000 ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ, 2005 ರ ಸೆಕ್ಷನ್ 10 ರ ಅಡಿಯಲ್ಲಿ, ‘ಕೇಂದ್ರ ಉದ್ಯೋಗ ಖಾತರಿ ಮಂಡಳಿ’ ಸಾಮಾಜಿಕ ಪ್ರಾತಿನಿಧ್ಯವನ್ನು ಎತ್ತಿಹಿಡಿಯಲು ಬದ್ಧವಾಗಿದೆ, ಅದರ ಅಧಿಕೃತರಲ್ಲದ ಸದಸ್ಯರಲ್ಲಿ ಮೂರನೇ ಒಂದು ಭಾಗಕ್ಕಿಂತ ಕಡಿಮೆಯಿಲ್ಲದಷ್ಟು ಮಹಿಳೆಯರು ಇರಬೇಕು ಮತ್ತು ಮೂರನೇ ಒಂದು ಭಾಗಕ್ಕಿಂತ ಕಡಿಮೆಯಿಲ್ಲದಷ್ಟು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಬುಡಕಟ್ಟುಗಳು, ಇತರ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ವಿಭಾಗಕ್ಕೆ ಸೇರಿದವರು ಇರಬೇಕು ಎಂದು ವಿಧಿಸುತ್ತದೆ. ಆದರೆ ಈ ಮೀಸಲಾತಿ ನಿಬಂಧನೆಗಳನ್ನು G RAM G ಮಸೂದೆಯ ಅನುಚ್ಛೇದ 12 ರ ಅಡಿಯಲ್ಲಿ ‘ಕೇಂದ್ರ ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕೌನ್ಸಿಲ್’ ಎಂದು ಮರುನಾಮಕರಣ ಮಾಡಿರುವ ಮಂಡಳಿಯಲ್ಲಿ ಈ ಮೀಸಲಾತಿ ಕಾಣಬರುತ್ತಿಲ್ಲ, ಅದನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂಬ ಸಂಗತಿಯತ್ತವೂ ಜಾನ್ ಬ್ರಿಟ್ಟಾಸ್ ಗಮನ ಸೆಳೆದಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ, ‘ರಾಜ್ಯ ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕೌನ್ಸಿಲ್ಗಳನ್ನು’ ನಿಯಂತ್ರಿಸುವ G RAM G ಮಸೂದೆಯ ಅನುಚ್ಛೇದ 13, ಮಹಿಳೆಯರಿಗೆ ಮತ್ತು SC, ST, OBC ಮತ್ತು ಅಲ್ಪಸಂಖ್ಯಾತರಿಗೆ ಅದೇ ಪ್ರಾತಿನಿಧ್ಯದ ಮಾನದಂಡಗಳನ್ನು, ಮನರೇಗದ ಸೆಕ್ಷನ್ 12 ರಲ್ಲಿ ‘ರಾಜ್ಯ ಉದ್ಯೋಗ ಖಾತರಿ ಮಂಡಳಿಗಳಿಗೆ’ ಒದಗಿಸಿದಂತೆಯೇ ಒದಗಿಸಲಾಗಿದೆ!.
ಕೇಂದ್ರದ ಮಂಡಳಿಯಲ್ಲಿ ಮೀಸಲಾತಿ ಕೊಡದೆ, ರಾಜ್ಯ ಮಂಡಳಿಗಳಿಗೆ ಮಾತ್ರ ಅದನ್ನು ವಿಧಿಸಿರುವುದು ಕರಡಿನಲ್ಲಿ ಆಗಿರುವ ಕಣ್ತಪ್ಪಿನಿಂದ ಎಂದು ಖಂಡಿತಾ ಹೇಳಲಾಗದು, ಬದಲಾಗಿ ಉನ್ನತ ಮಟ್ಟದಲ್ಲಿ ಕಾಯ್ದೆ ಪ್ರಕಾರ ನೀಡಬೇಕಾದ ಪ್ರಾತಿನಿಧ್ಯಗಳನ್ನು ಪ್ರಜ್ಞಾಪೂರ್ವಕವಾಗಿಯೇ ದುರ್ಬಲಗೊಳಿಸಲಾಗುತ್ತಿದೆ ಎಂದೇ ಹೇಳಬೇಕಾಗುತ್ತದೆ ದು ಮುಂದುವರೆದು ಜಾನ್ ಬ್ರಿಟ್ಟಾಸ್ ಹೇಳುತ್ತಾರೆ. ಈ ಹಿಂದೆಯೂ , 2023 ರಲ್ಲಿ ಪರಿಷ್ಕೃತ MPLADS ಮಾರ್ಗಸೂಚಿಗಳ ಅಡಿಯಲ್ಲಿ ಕಡ್ಡಾಯ
SC/ST ಹಂಚಿಕೆಗಳನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನ ಮಾಡಿತ್ತು ಎಂದು ನೆನಪಿಸಿರುವ ಅವರು “ನಾನು ಸಚಿವರೊಂದಿಗೆ ಇದಕ್ಕೆ ಆಕ್ಷೇಪಣೆಗಳನ್ನು ಎತ್ತಿದಾಗ ಅದನ್ನು ಹಿಂದಕ್ಕೆ ಪಡೆಯಬೇಕಾಗಿ ಬಂದಿತ್ತು. ಈ ರೀತಿ ಬಾಧ್ಯತೆಗಳನ್ನು ಹೊರತುಪಡಿಸುವುದು ಆಕಸ್ಮಿಕವೂ ಅಲ್ಲ, ಹೊಸದೂ ಅಲ್ಲ, ಸವಾಲು ಮಾಡುವ ವರೆಗೆ ಉದ್ದೇಶಪೂರ್ವಕವಾಗಿ ಅನುಸರಿಸುವ ನೀತಿಯೇ ಆಗಿ ಬಿಟ್ಟಿದೆ” ಮುಂದುವರೆದು ಟಿಪ್ಪಣಿ ಮಾಡಿದ್ದಾರೆ.
ಇದನ್ನೂ ನೋಡಿ: ಧರ್ಮಸ್ಥಳ, ಮರಘಾ ಪ್ರಕರಣ | ಮಹಿಳೆಯರ ವಿರುದ್ಧ ಷಡ್ಯಂತ್ರಗಳು…! ಅಲ್ಲಿ ಇಲ್ಲಿ ಎಲ್ಲೆಲ್ಲೂ Janashakthi Media
