ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಇದು ಕರಾಳ ಆದೇಶ. ಕೆಟ್ಟ ಬೆಳವಣಿಗೆ. ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿ ಎಂಬ ಬೇಡಿಕೆ ಬಲಗೊಳ್ಳುತ್ತಿರುವಾಗಲೆ ಸರಕಾರ ಇಂತಹ ತೀರ್ಮಾನ ಕೈಗೊಂಡಿರುವುದು ಆಘಾತಕಾರಿ ಎಂದು ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಕಳವಳ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳನ್ನು ರಾಜ್ಯ ಸರಕಾರವು ಖಾಸಗಿ ಆರೋಗ್ಯ ವ್ಯಾಪಾರಿಗಳ ಮಡಿಲಿಗೆ ಹಾಕಲು ಹೊರಟಿದೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆ ಹಾಗು ಮೂಡಬಿದ್ರೆ ಸಮುದಾಯ ಆಸ್ಪತ್ರೆಯನ್ನು ಆಳ್ವಾಸ್ ಕಂಪೆನಿಗೆ, ವಿಟ್ಲ ಸಮುದಾಯ ಆಸ್ಪತ್ರೆಯನ್ನು ಯೆನಪೋಯ ವೈದ್ಯಕೀಯ ಕಾಲೇಜು, ಬಂಟ್ವಾಳ ತಾಲೂಕು ಆಸ್ಪತ್ರೆಯನ್ನು ಎ ಜೆ ವೈದ್ಯಕೀಯ ಕಾಲೇಜಿಗೆ ಒಪ್ಪಿಸುವ ಕರಾರು ಒಪ್ಪಂದ ಮಾಡಿಕೊಳ್ಳಲು ಆದೇಶ ಹೊರಡಿಸಿದೆ ಎಂದು ಹೇಳಿದರು.
ಈಗಾಗಲೆ ವೆನ್ಲಾಕ್ ಜಿಲ್ಲಾಸ್ಪತ್ರೆ ಮಣಿಪಾಲ್ ಗುಂಪಿಗೂ, ಉಳ್ಳಾಲ ಸಮುದಾಯ ಆಸ್ಪತ್ರೆ ಯೆನಪೋಯ ಗುಂಪಿಗೂ ಹಸ್ತಾಂತರಗೊಂಡಿದೆ. ರಾಜ್ಶ ಸರಕಾರದ ಈ ತೀರ್ಮಾನ ಖಾಸಗಿ ಆಸ್ಪತ್ರೆಗಳ ಸುಲಿಗೆ ನೀತಿಯಿಂದ ಕಂಗೆಟ್ಟಿರುವ ಜನಸಾಮಾನ್ಯರ ಸಂಕಟಗಳನ್ನು ಮತ್ತಷ್ಟು ತೀವ್ರಗೊಳಿಸಿದೆ. ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ತೆರಳುವವರು ಇನ್ನು ಮುಂದೆ ಗುಣಮಟ್ಟದ ಚಿಕಿತ್ಸೆ ನಿರೀಕ್ಷಿಸುವಂತಿಲ್ಲ, ಖಾಸಗಿ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳ ಕಲಿಕೆಯ ಸಾಧನವಾಗಿ ಬಳಕೆಯಾಗಬೇಕು ಅಷ್ಟೆ ಎಂದರು.
ಇದನ್ನೂ ಓದಿ: ಮತದಾನಕ್ಕೆ ಬೇಕಾಗುವ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ: ಚುನಾವಣಾಧಿಕಾರಿ ಸಂಗಪ್ಪ
ಇನ್ನು ಕಡು ಬಡವರಿಗೂ ಸರಕಾರಿ ಅಸ್ಪತ್ರೆಗಳು ಲಭ್ಯ ಇಲ್ಲ ಎನ್ನುವಲ್ಲಿಗೆ ಇದು ತಲುಪಲಿದೆ. ರಾಜ್ಯ ಸರಕಾರದ ಈ ತೀರ್ಮಾನದ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಒಕ್ಕೊರಲಿನ ವಿರೋಧ ವ್ಯಕ್ತಪಡಿಸಬೇಕು, ಬೃಹತ್ ಹೋರಾಟಗಳನ್ನು ಸಂಘಟಿಸಬೇಕು. ಜನಸಾಮಾನ್ಯರ ಆರೋಗ್ಯ ಪೂರ್ಣಪ್ರಮಾಣದಲ್ಲಿ ವ್ಯಾಪಾರದ ಸರಕಾಗಲು ಬಿಡಬಾರದು.

ರಾಜ್ಯ ಸರಕಾರದ ಈ ಜನವಿರೋಧಿ ತೀರ್ಮಾನದ ವಿರುದ್ಧ ಪ್ರತಿಪಕ್ಷ ಬಿಜೆಪಿಯೂ ಸೊಲ್ಲೆತ್ತುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರುಗಳು ಆರೋಗ್ಯದ ವ್ಯಾಪಾರಿಗಳು, ಖಾಸಗಿ ಮೆಡಿಕಲ್ ಕಾಲೇಜು ಲಾಭಿಗಳ ಪರವೆ ಹೊರತು ಜನತೆಯ ಜೊತೆಗಿಲ್ಲ ಎಂದು ಹೇಳಿದರು.
ರಾಜ್ಯ ಸರಕಾರ ತಕ್ಷಣವೆ ತನ್ನ ನಿರ್ಧಾರವನ್ನು ವಾಪಾಸು ಪಡೆಯಬೇಕು. ಸಾರ್ವಜನಿಕ ಆರೋಗ್ಯ ರಂಗವನ್ನು ಪೂರ್ತಿಯಾಗಿ ನಾಶ ಪಡಿಸುವುದನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ನೋಡಿ: ʼಮಿಥಿಲೆಯ ಮಾವಿನ ಮರʼದಿಂದ ಎರಡು ಕವಿತೆಗಳು Janashakthi Media
