ಇರಾನ್ ಮೇಲೆ ಯುಎಸ್-ಇಸ್ರೇಲ್ ದಾಳಿಯ 39ನೇದಿನ, ತಮ್ಮ ಪ್ರಸ್ತಾವಗಳಿಗೆ ಒಪ್ಪಿ ಹೊರ್ಮುಜ್ ಜಲಸಂಧಿಯನ್ನು ರಾತ್ರಿ 8 ಗಂಟೆ ಒಳಗೆ ತೆರೆಯದಿದ್ದರೆ “ಇಡೀ ನಾಗರಿಕತೆಯೇ ಇಂದು ರಾತ್ರಿ ಸತ್ತು ಹೋಗುತ್ತದೆ, ಮತ್ತೆಂದೂ ಅದನ್ನು ತರಲಾಗುವುದಿಲ್ಲ” ಎಂಧು ಧಮಕಿ ಹಾಕಿದ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲವೇ ಗಂಟೆಗಳ ನಂತರ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಗೆಯಾಗಿದೆ ಎಂದು ಪ್ರಕಟಿಸಿದ್ದಾರೆ. ಟ್ರಂಪ್
– ವೇದರಾಜ್ ಎನ್. ಕೆ
ಈ ಎರಡು ವಾರಗಳಲ್ಲಿ ಯುಎಸ್ ಮತ್ತು ಇರಾನ್ ನಡುವಿನ ಉಳಿದ ಭಿನ್ನಾಭಿಪ್ರಾಯಗಳನ್ನೂ ನಿವಾರಿಸಲಾಗುವುದು ಎಂದೂ ಹೇಳಲಾಗಿದೆ. ಇದು ತಮ್ಮ ಗೆಲುವು ಎಂದು ಅವರು ಹೇಳಿಕೊಂಡರೂ, ನಿಜವಾಗಿ ನಡೆದ ಸಂಗತಿಯೆಂದರೆ , ಪಾಕಿಸ್ತಾನದ ಮಧ್ಯಸ್ಥಿಕೆದಾರರು ಯುಎಸ್ ಗೆ ತಿಳಿಸಿದ ಇರಾನ್ ನ 10 ಅಂಶಗಳ ಪ್ರಸ್ತಾವಕ್ಕೆ ಯುಎಸ್ ಒಪ್ಪಿದ್ದರಿಂದ ಸದ್ಯಕ್ಕೆ ಕಾದಾಟ ನಿಲ್ಲುವಂತಾಗಿದೆ ಎಂದು ತಿಳಿದು ಬಂದಿದೆ. ಟ್ರಂಪ್
ಈ 10 ಅಂಶಗಳು ಬಹಳ ಮಹತ್ವದ್ದು, ಇದು ತಾತ್ಕಾಲಿಕ ಕದನ ವಿರಾಮವಲ್ಲ , ಇರಾನಿಗೆ ಬೇಕಿರುವುದು ಒಂದು ತಾತ್ಕಾಲಿಕ ಕದನ ವಿರಾಮವಲ್ಲ, ಯುಎಸ್ ಮತ್ತು ಇರಾನ್ ನಡುವೆ ಒಂದು ಶಾಶ್ವತ, ದೀರ್ಘಕಾಲದ ವೈಷಮ್ಯಗಳನ್ನು ಅಂತ್ಯಗೊಳಿಸುವ ಮಾತುಕತೆಗಳು ಎಂಬುದನ್ನು ಈ 10 ಅಂಶಗಳು ತೋರಿಸುತ್ತವೆ.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆ ಖಾಸಗೀಕರಣ ‘ಕರಾಳ ನಿರ್ಧಾರ’: ಮುನೀರ್ ಕಾಟಿಪಳ್ಳ
1. ತಾತ್ಕಾಲಿಕ ಕದನ ವಿರಾಮವಲ್ಲ, ಯುದ್ಧಕ್ಕೆ ಶಾಶ್ವತ ಅಂತ್ಯ
2. ಇರಾನ್ ಮೇಲೆ ಮತ್ತೆ ದಾಳಿ ನಡೆಯುವುದಿಲ್ಲ ಎಂಬ ಖಾತರಿ
3. ಲೆಬನಾನ್‌ನಲ್ಲಿ ಹಿಜ್ಬೊಲ್ಲಾ ವಿರುದ್ಧ ಇಸ್ರೇಲಿ ದಾಳಿಗಳನ್ನು ಕೊನೆಗೊಳಿಸುವುದು
4. ಇರಾನ್ ವಿರುದ್ಧ ಮಾತ್ರವಲ್ಲದೆ ಇರಾನ್‌ನಿಂದಲೂ ಎಲ್ಲಾ ಪ್ರಾದೇಶಿಕ ದಾಳಿಗಳ ನಿಲುಗಡೆ
5. ಇರಾನ್ ಮೇಲಿನ ಎಲ್ಲಾ ಯುಎಸ್ ಮತ್ತು ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದು
6. ಪ್ರತಿಯಾಗಿ, ಇರಾನ್ ತನ್ನ ದಿಗ್ಬಂಧನವನ್ನು ತೆಗೆದುಹಾಕುತ್ತದೆ ಮತ್ತು ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುತ್ತದೆ
7. ಹೊರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಸಾಗಣೆಗೆ ಶಿಷ್ಟಾಚಾರ ಸಂಹಿತೆ
8. ಇರಾನ್ ಪ್ರತಿ ಹಡಗಿಗೆ $2 ಮಿಲಿಯನ್ ಸಾಗಣೆ ಶುಲ್ಕವನ್ನು ವಿಧಿಸುತ್ತದೆ.
9. ಈ ಶುಲ್ಕವನ್ನು ಒಮಾನ್‌ನೊಂದಿಗೆ ಹಂಚಿಕೊಳ್ಳಲಾಗುವುದು
10. ಯುಎಸ್ ಮತ್ತು ಇಸ್ರೇಲ್ ನಾಶಪಡಿಸಿದ ಮೂಲರಚನೆಗಳ ಪುನರ್ನಿರ್ಮಾಣ
ಇರಾನ್ ಕೂಡ ಕದನ ವಿರಾಮಕ್ಕೆ ಒಪ್ಪಿರುವುದಾಗಿ ಅಲ್ಲಿನ ವಿದೇಶಾಂಗ ಮಂತ್ರಿ ಅಬ್ಬಾಸ್ ಅರ್ಗಾಚಿ ಹೇಳಿದ್ದಾರೆ, ಹೊರ್ಮುಜ್ ಜಲಸಂಧಿ ಮೂಲಕ ಹಡಗು ಸಾಗಣೆ ಇರಾನೀ ಸಶಸ್ತ್ರ ಪಡೆಗಳೊಂದಿಗೆ ಸಂಯೋಜನೆಯೊಂದಿಗೆ ಸಾಧ್ಯವಾಗುತ್ತದೆ ಎಂದೂ ಅವರು ಹೇಳಿರುವುದಾಗಿ ವರದಿಯಾಗಿದೆ.
ಇಸ್ರೇಲಿ ಪ್ರಧಾನ ಮಂತ್ರಿ ನೆತನ್ಯಾಹು ಈ ಒಪ್ಪಂದಕ್ಕೆ ಬೆಂಬಲವಿದೆ ಎಂದು ಹೇಳುತ್ತಲೇ, ಇದು ಲೆಬನಾನಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದರೂ, ಯುಎಸ್ ಮತ್ತು ಇರಾನ್ ನಡುವಿನ ಈ ಕದನ ವಿರಾಮ ವ್ಯವಹಾರ ಎರಡೂ ದೇಶಗಳ ಮಿತ್ರ ರಾಷ್ಟ್ರಗಳಿಗೂ ಅನ್ವಯಿಸುತ್ತದೆ, ಲೆಬನಾನ್ ಗೆ ಕೂಡ ಎಂದು ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ ಪ್ರಧಾನಿ ದೃಢಪಡಿಸಿರುವುದಾಗಿ ವರದಿಯಾಗಿದೆ. ಈ ಷರತ್ತಿನ ಮೇಲೆ ಇರಾನ್ ಒತ್ತು ನೀಡಿತ್ತು ಎಂದೂ ಹೇಳಲಾಗಿದೆ. ಇರಾನ್ ಮತ್ತು ಯುಎಸ್ ನಡುವೆ ಮಾತುಕತೆಗಳು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದಿನಲ್ಲಿ ಶುಕ್ರವಾರ ಆರಂಭವಾಗಲಿದೆ
ಇರಾನೀ ಮುಖಂಡರು ತಮ್ಮ ಷರತ್ತುಗಳ ಮೇಲೆ ಯುದ್ಧ ಕೊನೆಗೊಳ್ಳುತ್ತಿದೆ ಎಂದು ಹೇಳಿದ್ದಾರೆ. ಇರಾನಿನ ಬೀದಿಗಳಲ್ಲಿ,. ಕಳೆದೆರಡು ದಿನಗಳಲ್ಲಿ ಅಧ್ಯಕ್ಷ ಟ್ರಂಪ್ ಅತ್ಯಂತ ಕೆಟ್ಟ ಪದಗಳನ್ನು ಬಳಸಿ ಅಬ್ಬರಿಸುತ್ತಿದ್ದಾಗಲೂ, ತಮ್ಮ ಪ್ರಮುಖ ಸೇತುವೆಗಳು ಮತ್ತು ಹೆದ್ದಾರಿಗಳಲ್ಲಿ ಮಾನವ ಸರಪಳಿ ನಡೆಸಿ ಪ್ರತಿರೋಧ ವ್ಯಕ್ತಪಡಿಸಿದ್ದ ಇರಾನೀ ಜನತೆ ಈಗ ಈ ಕದನ ವಿರಾಮದ ಸಂಭ್ರಮಾಚರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಒಂದೆಡೆ ಇಸ್ರೇಲಿ ಮುಖಂಡರು ಲೆಬನಾನಿನಲ್ಲಿ ದಾಳಿಗಳನ್ನು ಮುಂದುವರೆಸುತ್ತಿದ್ದು, ಇಸ್ರೇಲ್ ಮತ್ತು ಯುಎಸ್‌ನ ನಿಲುವಿನ ಬಗ್ಗೆ ಸಿನಿಕತನ ವ್ಯಕ್ತವಾಗುತ್ತಿದ್ದರೂ, ಒಟ್ಟಾರೆಯಾಗಿ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳೂ ಸೇರಿದಂತೆ ವಿಶ್ವಾದ್ಯಂತ ಇದಕ್ಕೆ ವ್ಯಾಪಕ ರಾಜಕೀಯ ಸ್ವಾಗತ ವ್ಯಕ್ತವಾಗಿದೆ. ತೈಲ ಬೆಲೆಗಳೂ ಕದನ ವಿರಾಮ ಪ್ರಕಟಣೆಯ ನಂತರ ಇಳಿಕೆ ಕಂಡಿವೆ ಎಂದೂ ವರದಿಯಾಗಿದೆ.
ಇದನ್ನೂ ನೋಡಿ: ಇರಾನ್ ಪ್ರತಿರೋಧ – ಯು.ಎಸ್ (ಅಮೆರಿಕ) ಪತನದ ಆರಂಭವೆ? ಡಾ. ಬಿ.ಆರ್. ಮಂಜುನಾಥ್ , ಗುರುರಾಜ ದೇಸಾಯಿ ಮಾತುಕತೆ
