ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಅಮಾಯಕ ಜೀವವೊಂದು ಬಲಿಯಾಗಿದೆ. ಮರ್ಮಾಂಗದ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬಂದ ರೋಗಿಯನ್ನೇ ಅಮಾನವೀಯವಾಗಿ ನಡೆಸಿ, ಸಾವಿಗೆ ತಳ್ಳಿರುವ ಗಂಭೀರ ಆರೋಪ ಬೆಂಗಳೂರಿನ ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೇಳಿಬಂದಿದೆ. ವಿಕ್ಟೋರಿಯಾ
ಖಾಸಗಿ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಶಾ ನವಾಜ್ (45) ಎಂಬವರು ಮರ್ಮಾಂಗದಲ್ಲಿ ಗಡ್ಡೆ ಬೆಳೆದಿದ್ದರಿಂದ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್ ಮಾಡಿದ ವೈದ್ಯರು ಮರ್ಮಾಂಗವನ್ನು ಕೊಯ್ದು ಗಡ್ಡೆ ತೆಗೆದಿದ್ದಾರೆ.
ಇದನ್ನೂ ಓದಿ: “ಮರೆಯಲು ಸಾಧ್ಯವಿಲ್ಲ”: ಪಹಲ್ಗಾಮ್ ದಾಳಿಯ ನೋವು ಹಂಚಿಕೊಂಡ ಕುಟುಂಬಗಳು
ಆದರೆ, ಆಪರೇಷನ್ ಮುಗಿದ ಬಳಿಕ ಗಾಯಕ್ಕೆ ಹೊಲಿಗೆ (Stitch) ಹಾಕದೆ, ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ಹೇಳಿ ಕೈತೊಳೆದುಕೊಂಡಿದ್ದಾರೆ ಎನ್ನಲಾಗಿದೆ.
ಫುಟ್‌ಪಾತ್‌ನಲ್ಲೇ 3 ದಿನ ನರಳಾಟ
ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಿಬ್ಬಂದಿ ಗಾಯ ಆರಿಲ್ಲ ಎಂದು ನಿರ್ಲಕ್ಷ್ಯ ತೋರಿದರೆ, ಅತ್ತ ವಾರ್ಡ್ ಸಿಬ್ಬಂದಿ ಡಿಸ್ಚಾರ್ಜ್ ಆಗುವಂತೆ ಒತ್ತಡ ಹೇರಿದ್ದಾರೆ. ಕೊನೆಗೆ ಸ್ಟಿಚ್ ಕೂಡ ಹಾಕದೆ ರೋಗಿಯನ್ನು ಹೊರಕ್ಕೆ ಕಳುಹಿಸಲಾಗಿದೆ. ಗತಿ ಇಲ್ಲದ ನವಾಜ್ ಅವರ ಪತ್ನಿ, ರಕ್ತ ಸುರಿಯುತ್ತಿದ್ದ ಪತಿಯನ್ನು ಆಸ್ಪತ್ರೆಯ ಎದುರಿನ ಫುಟ್‌ಪಾತ್‌ನಲ್ಲೇ 3 ದಿನ ಇಟ್ಟುಕೊಂಡು ಚಿಕಿತ್ಸೆಗಾಗಿ ಅಂಗಲಾಚಿದ್ದಾರೆ. ಆದರೂ ಕಲ್ಲುಹೃದಯದ ಸಿಬ್ಬಂದಿ ಮಾತ್ರ ಕರಗಿಲ್ಲ
ನಾಲ್ವರು ಮಕ್ಕಳ ಬದುಕು ಬೀದಿಗೆ:
ಮರ್ಮಾಂಗದ ವಿಪರೀತ ನೋವು ಮತ್ತು ರಕ್ತಸ್ರಾವ ತಾಳಲಾರದೆ ನವಾಜ್ ಅವರು 10 ದಿನಗಳ ಹಿಂದೆ ನರಳಿ ನರಳಿ ಪ್ರಾಣಬಿಟ್ಟಿದ್ದಾರೆ. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ನವಾಜ್ ಸಾವಿನಿಂದ ಆತನ ಪತ್ನಿ ಮತ್ತು 4 ಪುಟ್ಟ ಮಕ್ಕಳು (4 ತಿಂಗಳ ಮಗುವಿನಿಂದ 6 ವರ್ಷದವರೆಗೆ) ಇಂದು ಬೀದಿಗೆ ಬಿದ್ದಿದ್ದಾರೆ.
ತಜ್ಞರ ಸಮಿತಿ ನೇಮಕ:
ಪ್ರಕರಣ ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತಿರುವ ಆಸ್ಪತ್ರೆ ಆಡಳಿತ ಮಂಡಳಿ, ತನಿಖೆಗಾಗಿ ತಜ್ಞರ ಸಮಿತಿಯನ್ನು ನೇಮಿಸಿದೆ. “ಸಮಿತಿಯ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ತಿಳಿಸಿದ್ದಾರೆ.
ಇದನ್ನೂ ನೋಡಿ: ಕಮ್ಯೂನಿಸ್ಟ್‌ರೇ ನನ್ನ ದೊಡ್ಡ ಮಿತ್ರ ಶಕ್ತಿ – ಬಿ.ಆರ್. ಅಂಬೇಡ್ಕರ್ | ಬಿ.ಆರ್. ಮಂಜುನಾಥ್ Janashakthi Media
