ಹಾಸನ: ತಿಂಡಿ ಖರೀದಿಸಲು ಬಂದಿದ್ದ ಮುಸ್ಲಿಂ ಮಹಿಳೆಯೊಬ್ಬರಿಗೆ ಅಲ್ಲಿನ ಸಿಬ್ಬಂದಿ ಅವಮಾನಿಸಿರುವ ಘಟನೆ ಹಾಸನದ ಕೆ.ಆರ್. ಪುರಂನಲ್ಲಿರುವ ‘ಗೊಮ್ಮಟಾದ್ರಿ’ ಹೋಟೆಲ್‌ನಲ್ಲಿ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದೂ, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಂತ್ರಸ್ತ ಮಹಿಳೆಯು ಹೋಟೆಲ್‌ಗೆ ಬಂದು ತಿಂಡಿ ಪಾರ್ಸಲ್ ಕೇಳಿದ ಸಂದರ್ಭದಲ್ಲಿ ಕ್ಯಾಶ್ ಕೌಂಟರ್‌ನಲ್ಲಿ ಕುಳಿತಿದ್ದ ವ್ಯಕ್ತಿಯು ಅವರನ್ನು ಗೇಲಿ ಮಾಡಿ ನಿಂದಿಸಿದ್ದಾರೆ ಎಂದು ಹೇಳಲಾಗಿದೆ.
“ನೀವು ಇಪ್ಪತ್ತು ಮದುವೆ ಆಗುತ್ತೀರಿ, ನಲವತ್ತು ಮಕ್ಕಳನ್ನು ಹೆರುತ್ತೀರಿ, ನಿಮ್ಮಿಂದಲೇ ಯುದ್ಧಗಳು ನಡೆಯುತ್ತಿವೆ” ಎಂದು ಆ ವ್ಯಕ್ತಿ ಮಹಿಳೆಯನ್ನು ಉದ್ದೇಶಿಸಿ ಅವಮಾನಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣವಿಲ್ಲದೆ ಹೋಟೆಲ್ ಸಿಬ್ಬಂದಿ ತನ್ನನ್ನು ನಿಂದಿಸಿದ್ದಲ್ಲದೆ, ತಿಂಡಿ ನೀಡಲು ನಿರಾಕರಿಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಈ ಆರೋಪವನ್ನು ಹೋಟೆಲ್ ಸಿಬ್ಬಂದಿ ನಿರಾಕರಿಸಿದ್ದು, ತಾವು ಅಂತಹ ಯಾವುದೇ ಮಾತುಗಳನ್ನು ಆಡಿಲ್ಲ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದ್ದಾರೆ.
ಈ ಘಟನೆಯು ಹಾಸನ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಿಡಿಯೋ ವೈರಲ್ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಹೋಟೆಲ್‌ನಂತಹ ಸಾರ್ವಜನಿಕ ಸ್ಥಳದಲ್ಲಿ ಇಂತಹ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ನೋಡಿ: ಇರಾನ್ ಮೇಲೆ ಯು.ಎಸ್.-ಇಸ್ರೇಲ್ ದಾಳಿ: ಜಾಗತಿಕ ಪರಿಣಾಮಗಳು – ಎನ್.ಕೆ. ವಸಂತರಾಜ್ Janashakthi Media
