ನಾಲ್ಕು ‌ಕಾರ್ಮಿಕ ಸಂಹಿತೆಗಳಿಗೆ ‌ನಿಯಮಾವಳಿಗಳ ಅಧಿಸೂಚನೆ- ಕಾರ್ಮಿಕರ ಆಕ್ರೋಶ

ಮೇ ೧೨ರಂದು   ನಿಯಮಾವಳಿಗಳ ಅಧಿಸೂಚನೆಯ ಪ್ರತಿಗಳನ್ನು  

ಸಾಮೂಹಿಕವಾಗಿ ಸುಡಲು ಸಿಐಟಿಯು ಕರೆ

ಮೇ ೮ರಂದು ನಾಲ್ಕು ಕಾರ್ಮಿಕ ಸಂಹಿತೆಗಳ ನಿಯಮಗಳಾಧಿಸೂಚನೆಯನ್ನು ಪ್ರಕಟಿಸುವ ಮೂಲಕ ಮೋದಿ ಸರಕಾರ ಅವನ್ನು ಕಾರ್ಯಗತಗೊಳಿಸಲು ಹೊರಟಿರುವುದು ಭಾರತದ ದುಡಿಯುವ ಜನರಿಗೆ ಈ ಸರಕಾರ ಮಾಡಿರುವ ವಂಚನೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಿಐಟಿಯು ಕರ್ನಾಟಕ ರಾಜ್ಯಸಮಿತಿ ಮೇ ೧೨ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಕೆಲಸದ ಸ್ಥಳಗಳಲ್ಲಿ ಕಾರ್ಮಿಕ ಸಂಹಿತೆಗಳಿಗೆ ಒಕ್ಕೂಟ ಸರಕಾರ ರೂಪಿಸಿರುವ ನಿಯಮಾವಳಿಗಳ ಪ್ರತಿಗಳನ್ನು ಸುಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಬೇಕು ಎಂದು ಕಾರ್ಮಿಕರಿಗೆ ಕರೆ ನೀಡಿದೆ.

ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ ನವೆಂಬರ್‌ 21, 2025ರಂದು ನಾಲ್ಕು “ಕಾರ್ಮಿಕ ಸಂಹಿತೆ”ಗಳನ್ನು ಅನುಷ್ಠಾನಕ್ಕೆ ತರುವ ಅಂತಿಮ ಪ್ರಕಟನೆಯನ್ನು ಕೇಂದ್ರದ ಎನ್‌ಡಿಎ ಸರ್ಕಾರ ಮಾಡಿತು. ಬಿಹಾರ ರಾಜ್ಯದಲ್ಲಿನ ವಿಧಾನ ಸಭಾ ಚುನಾವಣೆಗಳ ಗೆಲುವಿನ ಅಹಂಕಾರದೊಂದಿಗೆ ಈ ವಂಚನೆಯನ್ನು ಅದು ಮಾಡಿತು ಎಂದು ಸಿಐಟಿಯು ಈ ಸಂದರ್ಭದಲ್ಲಿ ನೆನಪಿಸಿದೆ.

ಈ ನಾಲ್ಕು ಸಂಹಿತೆಗಳಿಗೆ ನಿಯಮಾವಳಿಗಳನ್ನು ರೂಪಿಸಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು. ಈ ಸಂಹಿತೆಗಳಿಗೆ ಕೇಂದ್ರ ಸರ್ಕಾರವು ನಿಯಮಾವಳಿಗಳನ್ನು ಅಂತಿಮ ಪ್ರಕಟನೆ ಮಾಡದಿದ್ದ ಕಾರಣ ಈ ಸಂಹಿತೆಗಳು ಜಾರಿಗೆ ಬಂದಿರಲಿಲ್ಲ. ಕೇಂದ್ರ ಸರ್ಕಾರ ಪ್ರಕಟಿಸಿದ ಕರಡು ನಿಯಮಾವಳಿಗಳಿಗೆ ಕಾರ್ಮಿಕ ಸಂಘಟನೆಗಳು ಹಾಗು ಸಿಐಟಿಯು ಸಂಘಟನೆ ಸಲ್ಲಿಸಿದ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸದೆ, ಈಗ ದಿನಾಂಕ 08.05.2026ರಂದು ಅಂತಿಮ ನಿಯಮಾವಳಿಗಳನ್ನು ಪ್ರಕಟಿಸಿ ನಾಲ್ಕು ಸಂಹಿತೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಐದು ರಾಜ್ಯಗಳ ಚುನಾವಣೆಗಳ ಪಲಿತಾಂಶ ಪ್ರಕಟವಾಗಿದೆ. ಅಸ್ಸಾಂ ಹಾಗು ಪಕ್ಷಿಮ ಬಂಗಾಳದಲ್ಲಿನ ಗೆಲುವು ನೀಡಿರುವ ಅಹಂಕಾರದೊಂದಿಗೆ ಈ ಕಪಟ ಹಾಗು ವಂಚನೆಯನ್ನು ಕೇಂದ್ರಸರ್ಕಾರ ದೇಶದ ಕಾರ್ಮಿಕ ವರ್ಗದ ವಿರುದ್ಧ ಮಾಡಿದೆ ಎಂದು ಸಿಐಟಿಯು ಆಕ್ರೋಶ ವ್ಯಕ್ತಪಡಿಸಿದೆ.

2019ರಲ್ಲಿ ವೇತನ ಸಂಹಿತೆ ಜಾರಿಗೊಂಡ ನಂತರ, ತಕ್ಷಣದ ಪ್ರತಿಭಟನೆಗಳು ನಡೆದವು. ಜನವರಿ 2020ರಲ್ಲಿ ಯಶಸ್ವಿ ಅಖಿಲ ಭಾರತ ಮುಷ್ಕರದ ಮೂಲಕ ಪ್ರತಿಭಟನೆ ಮಾಡಲಾಗಿತ್ತು. 2020ರ ಸೆಪ್ಟೆಂಬರ್‌ನಲ್ಲಿ ಉಳಿದ ಮೂರು ಕಾರ್ಮಿಕ ಸಂಹಿತೆಗಳು (ಕೈಗಾರಿಕಾ ಸಂಬಂಧ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ಮತ್ತು ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯ ಸ್ಥಿತಿಗತಿ ಸಂಹಿತೆ) ಜಾರಿಗೊಂಡ ತಕ್ಷಣ ಪ್ರತಿಭಟನೆಗಳು ನಡೆದವು. ನವೆಂಬರ್ 26, 2020ರಂದು ಐತಿಹಾಸಿಕ ಸಾರ್ವತ್ರಿಕ ಮುಷ್ಕರವು ನಡೆದಿತ್ತು. ಇದಲ್ಲದೆ, ಹಲವಾರು ಜಂಟಿ ಕಾರ್ಯಕ್ರಮಗಳು ನಡೆದವು. ಈ ಸಂಹಿತೆಗಳ ಜಾರಿಯ ವಿರುದ್ಧ ಜುಲೈ 6, 2025ರಂದು ನಡೆದ ಸಾರ್ವತ್ರಿಕ ಮುಷ್ಕರದಲ್ಲಿ 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರು. ನವೆಂಬರ್‌ 2025ರಲ್ಲಿ ನಾಲ್ಕು ಸಂಹಿತೆಗಳ ಜಾರಿಯ ಪ್ರಕಟಣೆಯ ನಂತರವೂ ಪ್ರತಿಭಟನೆಗಳು ವ್ಯಾಪಕವಾಗಿ ನಡೆದೆವು. ಫೆಬ್ರವರಿ 12,2026ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವು ಯಶಸ್ವಿಯಾಗಿ ನಡದಿದೆ. ಈ ರೀತಿಯಲ್ಲಿ ದೇಶದ ಕಾರ್ಮಿಕ ವರ್ಗವು ನಿರಂತರವಾಗಿ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದರೂ, ದೇಶದ ದುಡಿಯುವ ಜನರ ಅಭಿಪ್ರಾಯಗಳನ್ನು ತಿರಸ್ಕರಿಸಿ, ವಿದೇಶಿ ಹಾಗು ದೇಶಿ ಕಾರ್ಪೊರೇಟ್‌ ಬಂಡವಾಳಿಗರ ಅನುಕೂಲಕ್ಕಾಗಿ ಈ ನಾಲ್ಕು ಸಂಹಿತೆಗಳನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ :ಜುಲೈ 1 ರಿಂದ MGNREGA ರದ್ದು: ಮೋದಿ ಸರ್ಕಾರ ಘೋಷಣೆ

ಸರ್ಕಾರವು ಹಠಮಾರಿ  ದೋರಣೆಯೊಂದಿಗೆ,  ಕೇಂದ್ರ ಕಾರ್ಮಿಕ ಸಂಘಗಳ ಯಾವುದೇ ಮನವಿಗಳು, ಪ್ರತಿಭಟನೆಗಳು ಮತ್ತು ಮುಷ್ಕರಗಳನ್ನು ಲಕ್ಷಿಸದೆ, ಬಂಡವಾಳಶಾಹಿಗಳ ಬೇಡಿಕೆಗಳನ್ನು ಪೂರೈಸಲು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ.  ಇದು ಅತ್ಯಂತ ದೇಶದ್ರೋಹಿ ಕ್ರಮವಾಗಿದೆ ಎಂದು ಕಾರ್ಮಿಕ ಸಂಘಟನೆಗಳು ಟೀಕಿಸಿವೆ.

ಹಲವಾರು ದಶಕಗಳಿಂದ ಸಮರಧೀರ ಹೋರಾಟಗಳ ಮೂಲಕ ಗಳಿಸಲಾದ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಹಾಗು ಸವಲತ್ತುಗಳನ್ನು ನಾಶಮಾಡುವ ಕ್ರಮ ಇದಾಗಿದೆ. ಬಂಡವಾಳಿಗರು ಮಾಡುತ್ತಿದ್ದ ಎಲ್ಲಾ ಕಾನೂನು ಉಲ್ಲಂಘನೆಗಳನ್ನು ಕಾನೂನು ಬದ್ಧಗೊಳಿಸುವುದಲ್ಲದೆ, ಖಾಯಂ ಉದ್ಯೋಗದ ಅವಕಾಶಗಳೇ  ಭಾರತೀಯ ಯುವ ಪೀಳಿಗೆಗಳಿಗೆ ಇಲ್ಲದಂತೆ ಮಾಡುವ ಕ್ರಮವಾಗಿದೆ. ನವ ಗುಲಾಮಗಿರಿಗೆ ಹಾಲಿ ಹಾಗು ಭಾವಿ ಕಾರ್ಮಿರನ್ನು ಒಳಪಡಿಸುವ ಕುತಂತ್ರವಾಗಿದೆ ಎಂದಿರುವ ಸಿಐಟಿಯು,ಈ ಸಂಹಿತೆಗಳನ್ನು ಕಾರ್ಮಿಕರ ಜೀವನ ಮತ್ತು ಜೀವನೋಪಾಯಗಳ ಮೇಲಿನ ನರಮೇಧದ ದಾಳಿಗಳೆಂದು ಪರಿಗಣಿಸಬೇಕಾಗಿದೆ,. ಈ ಸಂಹಿತೆಗಳು ಕಾರ್ಮಿಕರ ಮೇಲೆ ಗುಲಾಮಗಿರಿಯನ್ನು ಹೇರುವುದು ಮಾತ್ರವಲ್ಲದೇ, ಕಾರ್ಮಿಕರ ಪ್ರತಿಯೊಂದು ಹಕ್ಕು ಹಾಗು ಪ್ರತಿಭಟಿಸುವ ಅವಕಾಶಗಳನ್ನು ಕಸಿದುಕೊಳ್ಳುತ್ತವೆ ಮತ್ತು   ನಮ್ಮ ದೇಶದ ಮುಂದಿನ ತಲೆಮಾರುಗಳ ಸಮಸ್ತ ಭರವಸೆ, ನಂಬಿಕೆ ಮತ್ತು ಆಕಾಂಕ್ಷೆಗಳನ್ನು ನಂದಿಸಿಬಿಡುತ್ತವೆ ಎಂದು ಕಟುವಾಗಿ ಟೀಕಿಸಿದೆ.

ಗಾಢವಾಗುತ್ತಿರುವ ನಿರುದ್ಯೋಗದ ಬಿಕ್ಕಟ್ಟು, ಏರುತ್ತಿರುವ ಹಣದುಬ್ಬರ, ಬೆಲೆ ಏರಿಕೆ ಹಾಗು ಜೀವನದ ಕಷ್ಟಗಳನ್ನು ದೇಶದ ಜನರು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಉತ್ತರ ಭಾರತದಲ್ಲಿ ಭುಗಿಲೆದ್ದ ಕಾರ್ಮಿಕರ ಸ್ವಯಂಪ್ರೇರಿತ ಹೋರಾಟದ ಅಲೆಗಳು ಶ್ರಮಜೀವಿಗಳ ಹೊರಹೊಮ್ಮಿದ ಭಾವನೆಗಳಾಗಿವೆ. ಇಂತಹ ಸನ್ನಿವೇಶದಲ್ಲಿ ಈ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ನಿಯಮಾವಳಿಗಳ ಅಂತಿಮ ಪ್ರಕಟನೆ ಮಾಡಿರುವುದು, ದೇಶದ ಸರ್ಕಾರವು ತನ್ನ ಸ್ವಂತ ಪ್ರಜೆಗಳ ಮೇಲೆ ಸಾರಿರುವ ಅಮಾನವೀಯ ಯುದ್ಧ ಘೋಷಣೆಗೆ ಸಮನಾದ ಕ್ರಮವಾಗಿದೆ ಎಂದು ಸಿಐಟಿಯು ಟೀಕಿಸಿದೆ.

ಕೇಂದ್ರ ಸರ್ಕಾರದ ಈ ಪ್ರಜಾವಿರೋಧಿ ನಿರ್ಧಾರದ ವಿರುದ್ಧ, ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಒತ್ತಾಯಿಸಿ ಈ ಕೂಡಲೇ ವ್ಯಾಪಕ ಪ್ರತಿಭಟನೆಗಳನ್ನು ಮಾಡಲು ಸಿಐಟಿಯು ರಾಜ್ಯ ಸಮಿತಿಯು ಕರೆ ನೀಡಿದೆ.

ರಾಜ್ಯ ಸರ್ಕಾರಕ್ಕೆ ಆಗ್ರಹ: ಕರ್ನಾಟಕ ರಾಜ್ಯ ಸರ್ಕಾರವು ಈ ಸಂಹಿತೆಗಳನ್ನು ರಾಜ್ಯದಲ್ಲಿ ಅನುಷ್ಟಾನಕ್ಕೆ ತರಬಾರದೆಂದು ಒತ್ತಾಯಿಸುತ್ತ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ,  ದೇಶದ ಸಂವಿಧಾನವು ಖಾತರಿ ಪಡಿಸುವ ಒಕ್ಕೂಟ ತತ್ವಗಳನ್ನು ಆದರಿಸಿ ರಾಜ್ಯ ಸರ್ಕಾರವು ರಾಜ್ಯದ ಶ್ರಮ ಜೀವಿಗಳ ಹಿತವನ್ನು ರಕ್ಷಿಸಲು ಮುಂದಾಗಬೇಕೆಂದು ಆಗ್ರಹಪಡಿಸಿದೆ..

ಇದನ್ನೂ ನೋಡಿ : ಬಿಡದಿ ಉಪನಗರ ಯೋಜನೆಗೆ ವಿರೋಧ – ದಿನವಿಡೀ ರಸ್ತೆ ಬಂದ್‌ ಮಾಡಿದ ರೈತರು Janashakthi Media

Donate Janashakthi Media

Leave a Reply

Your email address will not be published. Required fields are marked *