56,432 ಹುದ್ದೆಗಳ ನೇಮಕಾತಿಗೆ ತಕ್ಷಣ ಅಧಿಸೂಚನೆ ಹೊರಡಿಸಲು ಆಗ್ರಹ | ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಮನವಿ

ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ 56,432 ಖಾಲಿ ಹುದ್ದೆಗಳ ನೇಮಕಾತಿಗೆ ಕೂಡಲೇ ಅಧಿಸೂಚನೆ ಹೊರಡಿಸಬೇಕು ಹಾಗೂ ಕರ್ನಾಟಕ ಲೋಕಸೇವಾ ಆಯೋಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಪಿ.ಸಿ. ಹೋಟಾ ಸಮಿತಿ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಮನವಿ ಸಲ್ಲಿಸಿತು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 7 ಮತ್ತು 8 ಮೇರಂದು ಹೋರಾಟ ನಡೆಸುತ್ತಿರುವ ಸಮಿತಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಎಲ್ಲಾ ಇಲಾಖೆಗಳ ಖಾಲಿ ಹುದ್ದೆಗಳನ್ನು ಕಾಯಂ ಮತ್ತು ಪಾರದರ್ಶಕ ರೀತಿಯಲ್ಲಿ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದೆ.

ಸಮಿತಿಯ ಮುಖಂಡರು ಹೇಳುವಂತೆ, ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ 56,432 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿತ್ತು. ಬಳಿಕ ಹಲವು ಸಚಿವರು ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿಕೆ ನೀಡಿದ್ದರೂ, ಐದು ತಿಂಗಳು ಕಳೆದರೂ ಯಾವುದೇ ಇಲಾಖೆಯಿಂದ ಅಧಿಸೂಚನೆ ಹೊರಬಂದಿಲ್ಲ. ಇದರಿಂದ ಉದ್ಯೋಗಾಕಾಂಕ್ಷಿಗಳಲ್ಲಿ ನಿರಾಸೆ ಮತ್ತು ಅಸಮಾಧಾನ ಹೆಚ್ಚಾಗಿದೆ ಎಂದು ಅವರು ಆರೋಪಿಸಿದರು.

ಈ ನಡುವೆ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಮಿತಿ ಆಗ್ರಹಿಸಿದೆ. “ಹಿಂದೆಯೂ ಹಲವು ನೇಮಕಾತಿ ಪ್ರಕ್ರಿಯೆಗಳಲ್ಲಿ ಅಕ್ರಮಗಳ ಆರೋಪಗಳು ಕೇಳಿಬಂದಿವೆ. ಆದ್ದರಿಂದ ಕೆಪಿಎಸ್‌ಸಿಯನ್ನು ಸಂಪೂರ್ಣವಾಗಿ ಸುಧಾರಿಸಿ, ಮುಂದಿನ ಎಲ್ಲ ನೇಮಕಾತಿಗಳು ಪಾರದರ್ಶಕವಾಗಿ ನಡೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಇದನ್ನೂ ಓದಿ : ಧಾರವಾಡ| ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ವಿದ್ಯಾರ್ಥಿ ಮುಖಂಡರು ಪೊಲೀಸ್ ವಶಕ್ಕೆ

ಸಮಿತಿ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಮಂಡಿಸಿದೆ. 56,432 ಹುದ್ದೆಗಳ ನೇಮಕಾತಿಗೆ ತಕ್ಷಣ ಅಧಿಸೂಚನೆ ಹೊರಡಿಸುವುದು, ಪಿ.ಸಿ. ಹೋಟಾ ಸಮಿತಿ ವರದಿ ಜಾರಿಗೊಳಿಸುವುದು, ಪರೀಕ್ಷೆಗಳ ಅರ್ಜಿ ಶುಲ್ಕ ರದ್ದುಪಡಿಸುವುದು, ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವುದು, ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಂದ ವಾರ್ಷಿಕ ನೇಮಕಾತಿ ಕ್ಯಾಲೆಂಡರ್ ಪ್ರಕಟಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ.

ಇದಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು, ಸರ್ಕಾರಿ ಉದ್ಯೋಗ ಕಡಿತಕ್ಕೆ ಕಾರಣವಾಗುತ್ತಿದೆ ಎನ್ನಲಾಗುತ್ತಿರುವ ಎಫ್‌ಆರ್‌ಬಿಎಂ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಲಾಗಿದೆ.

ಧಾರವಾಡದ ಜಯನಗರ, ಸಪ್ತಾಪುರ, ಶ್ರೀನಗರ ಮತ್ತು ಕಲ್ಯಾಣನಗರ ಭಾಗಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು. ಉದ್ಯೋಗಾಕಾಂಕ್ಷಿಗಳು ಹೆಚ್ಚಿರುವ ಪ್ರದೇಶಗಳ ಹೋಟೆಲ್‌, ಖಾನಾವಳಿ ಮತ್ತು ಉಪಹಾರ ಮಂದಿರಗಳಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರ ಒದಗಿಸುವುದನ್ನು ಸಂಬಂಧಪಟ್ಟ ಇಲಾಖೆ ಖಚಿತಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸಲ್ಲಿಕೆ ವೇಳೆ ಸಮಿತಿಯ ರಾಜ್ಯ ಸಹಸಂಚಾಲಕ ಕೃಷ್ಣ, ಜಿಲ್ಲಾ ಸಂಚಾಲಕಿ ಕಲಾವತಿ, ಉದ್ಯೋಗಾಕಾಂಕ್ಷಿಗಳಾದ ಸಿದ್ದೇಶ, ಪ್ರಜ್ವಲ್, ಮನೋಹರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ನೋಡಿ : ಎರಡು ಕೋಟಿ ಉದ್ಯೋಗ : ಎಲ್ಲಿ ಹೋದವು? ಮೋದಿ ಸರ್ಕಾರದ ಉತ್ತರವೇನು? Janashakthi Media

Donate Janashakthi Media

Leave a Reply

Your email address will not be published. Required fields are marked *