ನೀಟ್‌, ಯುಜಿಸಿ-ನೆಟ್‌ ಅಕ್ರಮ ಖಂಡನೆ: ಎನ್‌ಟಿಎ ರದ್ದು, ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಎಸ್‌ಎಫ್‌ಐ ಆಗ್ರಹ

ಗಂಗಾವತಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ತಕ್ಷಣ ರದ್ದುಪಡಿಸಬೇಕು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌ಎಫ್‌ಐ) ಗಂಗಾವತಿ ತಾಲೂಕು ಸಮಿತಿ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು. ನೀಟ್‌

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಶಿವಕುಮಾರ್‌, ದೇಶದಲ್ಲಿ ವೈದ್ಯಕೀಯ ಸೇರಿದಂತೆ ವಿವಿಧ ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನಡೆಸುವ ನೀಟ್‌ ಪರೀಕ್ಷೆಯಲ್ಲಿ ಪದೇ ಪದೇ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ಬೆಳಕಿಗೆ ಬರುತ್ತಿವೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಆರೋಪಿಸಿದರು.

ವರ್ಷದಿಂದ ವರ್ಷಕ್ಕೆ ಪರೀಕ್ಷಾ ನಿರ್ವಹಣೆಯಲ್ಲಿ ಎನ್‌ಟಿಎ ವೈಫಲ್ಯಗಳು ಹೆಚ್ಚುತ್ತಿದ್ದು, ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಮಾನಸಿಕ ಒತ್ತಡ, ಆತಂಕ ಮತ್ತು ಅನಿಶ್ಚಿತತೆಯನ್ನು ಎದುರಿಸುವಂತಾಗಿದೆ. ಈ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ನೇರ ಹೊಣೆಗಾರ ಎಂದು ಅವರು ಹೇಳಿದರು.

ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆ, ಭ್ರಷ್ಟಾಚಾರ ಮತ್ತು ಪರೀಕ್ಷಾ ಅಕ್ರಮಗಳಿಂದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ನಡೆಯುತ್ತಿದೆ. ಇಂತಹ ಅವ್ಯವಸ್ಥೆಯಿಂದ ಬೇಸತ್ತು ಹಲವಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದುರಂತ. ಈ ಹಿನ್ನೆಲೆಯಲ್ಲಿ ಎನ್‌ಟಿಎಯನ್ನು ರದ್ದುಗೊಳಿಸಿ, ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ : ತೋರಣಗಲ್ಲು| “ಉದ್ಯೋಗ ಖಾತ್ರಿ ಕಾರ್ಮಿಕರಿಗೆ ತಕ್ಷಣ ಕೆಲಸ ನೀಡಿ: ಡಿವೈಎಫ್‌ಐ ಪ್ರತಿಭಟನೆ

ತಾಲೂಕು ಅಧ್ಯಕ್ಷ ನಾಗರಾಜ್‌ ಮಾತನಾಡಿ, ಒಂದು ಸಂಸ್ಥೆಯ ನಿರಂತರ ವೈಫಲ್ಯದ ಬಲಿಪೀಠದಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ಬಲಿ ಕೊಡಲು ಸಾಧ್ಯವಿಲ್ಲ. ಪರೀಕ್ಷಾ ವ್ಯವಸ್ಥೆಯಲ್ಲಿನ ಗಂಭೀರ ಬಿಕ್ಕಟ್ಟಿಗೆ ಅಂತ್ಯ ಹಾಡಲು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶೈಕ್ಷಣಿಕ ಸಮುದಾಯ ಒಗ್ಗೂಡಿ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

ನೀಟ್‌ ಪರೀಕ್ಷೆ ರದ್ದಾದ ಬಳಿಕ ನಿರಾಶೆಯಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ₹5 ಕೋಟಿ ಪರಿಹಾರ ನೀಡಬೇಕು ಎಂದು ಎಸ್‌ಎಫ್‌ಐ ಆಗ್ರಹಿಸಿದೆ. ಹಿಸಾರ್‌ನ ಸಿಮ್ರಾನ್‌, ಧರ್ಮಪುರಿಯ ರೋಶ್ನಿ ಹಾಗೂ ಕೇರಳದ ಇಜಾ ಮಹೇಶ್‌ ಅವರ ಕುಟುಂಬಗಳನ್ನು ಎಸ್‌ಎಫ್‌ಐ ನಿಯೋಗ ಭೇಟಿ ಮಾಡಿ ಸಾಂತ್ವನ ಹೇಳಿದ್ದು, ದೇಶದಾದ್ಯಂತ ಇಂತಹ ಕುಟುಂಬಗಳಿಗೆ ಕಾನೂನು ನೆರವು ನೀಡಲಾಗುವುದು ಎಂದು ತಿಳಿಸಿದೆ.

ಗ್ರಾಮೀಣ ಪ್ರದೇಶದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳು ದುಬಾರಿ ಕೋಚಿಂಗ್‌ ವ್ಯವಸ್ಥೆಯ ಕಾರಣ ನೀಟ್‌ ಪರೀಕ್ಷೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಕೋಚಿಂಗ್‌ಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಭರಿಸಲು ಸಾಧ್ಯವಾಗದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಶಿಕ್ಷಣದ ಹಕ್ಕು ಕಸಿಯಲ್ಪಡುತ್ತಿದೆ ಎಂದು ಎಸ್‌ಎಫ್‌ಐ ಆರೋಪಿಸಿದೆ.

ಜೂನ್‌ 2026ರ ಯುಜಿಸಿ-ನೆಟ್‌ ಪರೀಕ್ಷೆಯಲ್ಲೂ ಗಂಭೀರ ಅಕ್ರಮಗಳು ನಡೆದಿರುವುದನ್ನು ಖಂಡಿಸಿದ ಸಂಘಟನೆ, ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣ ಪಾರದರ್ಶಕ ಮತ್ತು ವಿಶ್ವಾಸಾರ್ಹವಾಗಿಸುವ ನಿಟ್ಟಿನಲ್ಲಿ ಎನ್‌ಟಿಎಯನ್ನು ರದ್ದುಪಡಿಸಿ ಪರ್ಯಾಯ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿತು.

ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಸೇರಿದಂತೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ ಎಸ್‌ಎಫ್‌ಐ, ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ತಾಲೂಕು ಅಧ್ಯಕ್ಷ ನಾಗರಾಜ್‌ ಯು., ಉಪಾಧ್ಯಕ್ಷ ಶರೀಫ್‌ ಎಂ., ಜಂಟಿ ಕಾರ್ಯದರ್ಶಿಗಳಾದ ದರ್ಶನ್‌, ಬಸಯ್ಯ ಹಾಗೂ ಸಂಘಟನೆಯ ಮುಖಂಡರು, ವಿದ್ಯಾರ್ಥಿಗಳಾದ ಎಸ್‌.ಎಂ. ಕಾವ್ಯ, ಕಾರ್ತಿಕ್‌, ಮಣಿಕಂಠ ಡಿ., ನಾಗರಾಜ್‌, ಅಕ್ಷತಾ, ಕೀರ್ತಿ, ದೇವ್ವಮ್ಮ, ಸಂಜನಾ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದನ್ನೂ ನೋಡಿ :ಉಸಿರಾಡುವ ಗಾಳಿಯೇ ವಿಷ! ಆಯುಷ್ಯ ಕಸಿಯುತ್ತಿರುವ ‘ಸೈಲೆಂಟ್ ಕಿಲ್ಲರ್’ | ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *